![]() |
ಅರ್ಜುನನಾಗಿ ಪವನ್ ಕೆರ್ವಾಶೆ, ಧೀಂಗಿಣ ಯಕ್ಷಗಾನ ಕೇಂದ್ರ, ಬೆಂಗಳೂರು ಇದರ ಸುಧನ್ವಾರ್ಜುನ ಪ್ರಸಂಗ. |
ಗಂಡನಿಗೆ ವಿರುದ್ಧವಾದುದನ್ನೇ ಮಾಡುತ್ತಿದ್ದ ಚಂಡಿ ಎಂಬಾಕೆಗೆ ಅಶ್ವಮೇಧ ಕುದುರೆಯೊಂದಿಗೆ ಬಂದ ಅರ್ಜುನನಿಂದ ಶಾಪವಿಮೋಚನೆಯಾದ ಕಥೆಯಿದು. ಪುರಾಣ ತಿಳಿಯೋಣ ಸರಣಿಯಲ್ಲಿ ದಾಮೋದರ ಶೆಟ್ಟಿ, ಇರುವೈಲು ಅವರಿಂದ ಮಾಹಿತಿ.
ಪೂರ್ವದಲ್ಲಿ ಉದ್ಧಾಲಕ ಎಂಬ ಬ್ರಾಹ್ಮಣನು ಚಂಡಿ ಎಂಬ ಕನ್ಯೆಯನ್ನು ಮದುವೆಯಾಗಿ ಗೃಹಸ್ಥಾಶ್ರಮವನ್ನು ಸ್ವೀಕರಿಸಿದನು. ಅವನು ಸಕಲ ಶಾಸ್ತ್ರಗಳಲ್ಲೂ ಪಾರಂಗತನಾಗಿದ್ದನು. ಆದರೆ ಅವನ ದುರದೃಷ್ಟಕ್ಕೆ ಚಂಡಿಯು ಹೆಸರಿಗೆ ತಕ್ಕಂತೆ ಚಂಡಿಯಾಗಿದ್ದಳು. ಉದ್ಧಾಲಕನು ಏತಿ ಎಂದರೆ ಅವಳು ಪ್ರೇತಿ ಎನ್ನುತ್ತಿದ್ದಳು. ಅಂದರೆ ಉದ್ಧಾಲಕನು ಏನು ಹೇಳಿದರೂ ಅವಳು ಅದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದ್ದಳು.
ಅವಳೊಡನೆ ಹೆಣಗಿ ಉದ್ಧಾಲಕನಿಗೆ ಜೀವನ ಅಸಹನೀಯವಾಯಿತು. ಸುಖವಾಗಿರಬೇಕಾದ ಪತಿ-ಪತ್ನಿಯರ ಸಂಬಂಧ ದುಃಖಕ್ಕೆ ಕಾರಣವಾಯಿತು. ಅವನು ವೈರಾಗ್ಯ ತಳೆದು ಕಾಡಿಗೆ ಹೋದಾಗ ಕೌಂಡಿನ್ಯ ಎಂಬ ಋಷಿಯನ್ನು ನೋಡಿ ತನ್ನ ಕಥೆಯನ್ನೆಲ್ಲಾ ಹೇಳಿದನು.
ಉದ್ಧಾಲಕನ ದುರವಸ್ಥೆಗೆ ಮರುಗಿದ ಕೌಂಡಿನ್ಯರು "ನೀನು ಏನು ಹೇಳಿದರೂ ಅದಕ್ಕೆ ನಿನ್ನ ಪತ್ನಿಯು ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಾಳೆ ಎಂಬುದು ತಾನೇ ನಿನ್ನ ಸಮಸ್ಯೆ? ಆದ್ದರಿಂದ ನಿನಗೆ ಏನು ಬೇಕೋ ಅದಕ್ಕೆ ವಿರುದ್ಧವಾದುದನ್ನು ನಿನ್ನ ಪತ್ನಿಗೆ ಹೇಳು" ಎಂದು ಹೇಳಿ ಕಳುಹಿಸಿದರು.
ಮನೆಗೆ ಮರಳಿದ ಉದ್ಧಾಲಕನು ಋಷಿಯ ಸಲಹೆಯಂತೆ ಮಾಡುತ್ತಿದ್ದುದರಿಂದ ಎಲ್ಲವೂ ಸ್ವಲ್ಪ ಕಾಲ ಸುಸೂತ್ರವಾಗಿ ನಡೆಯಿತು. ಕೆಲ ಕಾಲದ ನಂತರ ಉದ್ಧಾಲಕನು ತನ್ನ ತಂದೆಯ ಶ್ರಾದ್ಧವನ್ನು ಮಾಡಲು ಸಿದ್ದತೆ ಮಾಡುತ್ತಿದ್ದನು. ಪತ್ನಿಯ ಸ್ವಭಾವವನ್ನು ಈಗ ಸರಿಯಾಗಿ ಅರ್ಥ ಮಾಡಿಕೊಂಡಿದ್ದ ಉದ್ಧಾಲಕನು "ಎಲೈ ಶೋಭನಾಂಗಿ, ನಾಳೆ ನನ್ನ ತಂದೆಯ ಶ್ರಾದ್ಧವಿದೆ. ಆದರೆ ನಾನು ಶ್ರಾದ್ಧ ಮಾಡುವುದಿಲ್ಲ, ಬ್ರಾಹ್ಮಣರನ್ನು ಭೋಜನಕ್ಕೆ ಕರೆಯುವುದಿಲ್ಲ" ಎಂದನು. ಆಗ ಚಂಡಿಯು "ತಂದೆಯವರ ಶ್ರಾದ್ಧವನ್ನು ಬಿಡಲಿಕ್ಕುಂಟೇ? ನಾನೇ ನಿಂತು ಶ್ರಾದ್ಧವನ್ನು ಮಾಡುತ್ತೇನೆ" ಎಂದು ಹೇಳಿ ಎಲ್ಲ ಸಿದ್ದತೆಯನ್ನೂ ತಾನೇ ಮಾಡಿದಳು.
ಹೀಗೆ ಎಲ್ಲವೂ ಸುಸೂತ್ರವಾಗಿ ನಡೆಯಿತು. ಪಿಂಡ ಪ್ರದಾನ ಮಾಡುವ ಸಂದರ್ಭದಲ್ಲಿ ಉದ್ಧಾಲಕನು ಬಾಯಿತಪ್ಪಿ "ಈ ಪಿಂಡವನ್ನು ಹಸುಗಳಿಗೆ ತಿನ್ನಿಸು"ಎಂದು ಹೇಳಿಬಿಟ್ಟನು. ಆದರೆ ಅವಳು ಪಿಂಡವನ್ನು ತಿಪ್ಪೆಗೆ ಎಸೆದು ಬಿಟ್ಟಳು. ಇದರಿಂದ ಕುಪಿತಗೊಂಡ ಉದ್ಧಾಲಕನು "ನಾನಿನ್ನು ನಿನ್ನೊಂದಿಗೆ ಹೆಣಗಲಾರೆ. ನೀನು ಕಲ್ಲಾಗಿ ಹೋಗು" ಎಂದು ಶಪಿಸಿದನು. ನಂತರ ಕನಿಕರಗೊಂಡು "ಮುಂದೆ ಅರ್ಜುನ ಅಶ್ವಮೇಧದ ಕುದುರೆಯೊಂದಿಗೆ ಬಂದು ನಿನ್ನನ್ನು ಸ್ಪರ್ಶಿಸಿದಾಗ ನಿನಗೆ ಶಾಪ ವಿಮೋಚನೆಯಾಗುತ್ತದೆ" ಎಂದು ಹೇಳಿ ತಪಸ್ಸಿಗೆ ಹೊರಟು ಹೋದನು.
ಕೆಲ ಕಾಲದ ನಂತರ ಅರ್ಜುನನ ಅಶ್ವಮೇಧದ ಕುದುರೆ ಅರಣ್ಯದ ಮೂಲಕ ಹೋಗುತ್ತಿದ್ದಾಗ ಒಂದು ದೊಡ್ಡ ಕಲ್ಲಿನ ಮೇಲೆ ಕಾಲಿಟ್ಟ ತಕ್ಷಣ ಅದರ ಕಾಲುಗಳು ಕಲ್ಲಿನಲ್ಲಿ ಹೂತು ಹೋಗಿ ಅದು ಮುಂದುವರಿಯಲಾಗದೆ ನಿಂತಿತು. ಅರ್ಜುನನು ದಿಗ್ಭ್ರಾಂತನಾದನು. ಯಾರದೋ ಋಷಿಯ ಶಾಪದಿಂದ ಹೀಗಾಗಿರಬಹುದು ಎಂದು ಶಂಕಿಸಿದ ಅರ್ಜುನನು ಸುತ್ತಲೂ ನೋಡಿದಾಗ ಸೌಭರಿ ಮಹರ್ಷಿಯ ಆಶ್ರಮವು ಕಾಣಿಸಿತು.
ಅರ್ಜುನನು ಅಲ್ಲಿಗೆ ಹೋಗಿ ಮಹರ್ಷಿಗೆ ವಂದಿಸಿ ವಿಷಯವನ್ನು ತಿಳಿಸಿದನು. ಆಗ ಮಹರ್ಷಿಯು "ಅರ್ಜುನ, ನೀನು ಹೋಗಿ ಕೃಷ್ಣನನ್ನು ಧ್ಯಾನಿಸಿ ಕುದುರೆಯನ್ನು ಮುಟ್ಟು. ಅದು ಮೊದಲಿನಂತಾಗುತ್ತದೆ" ಎಂದನು. ಮಹರ್ಷಿಯ ಸೂಚನೆಯಂತೆ ಅರ್ಜುನನು ಕೃಷ್ಣನನ್ನು ನೆನೆಯುತ್ತಾ ಅಶ್ವವನ್ನು ಮುಟ್ಟಿದ ತಕ್ಷಣ ಅದು ಚಲಿಸಲು ಪ್ರಾರಂಭಿಸಿತು. ಕಲ್ಲಾಗಿದ್ದ ಚಂಡಿಯು ಮತ್ತೆ ಹೆಣ್ಣಾಗಿ ಅರ್ಜುನನಿಗೆ ವಂದಿಸಿ ತಪಸ್ಸನ್ನಾಚರಿಸಲು ಹೊರಟುಹೋದಳು.
ಈ ಕಥಾನಕವನ್ನು ಜೈಮಿನಿ ಭಾರತದಿಂದ ತೆಗೆದುಕೊಂಡಿದ್ದೇನೆ. ಇದು ಸ್ವಲ್ಪ ಮಟ್ಟಿಗೆ ರಾಮಾಯಣ ಬಾಲ ಕಾಂಡದ ಅಹಲ್ಯೋದ್ದರಣದ ಕಥೆಯನ್ನು ಹೋಲುತ್ತದೆ.
ಸಂ.: ದಾಮೋದರ ಶೆಟ್ಟ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ