ನಾಗರ ಪಂಚಮಿ: ಶಾಪಗ್ರಸ್ಥ ಪರೀಕ್ಷಿತನಿಗೆ ಕಚ್ಚಿದ ತಕ್ಷಕ

ಚಕ್ರೇಶ್ವರ ಪರೀಕ್ಷಿತ

ಪುರಾಣ ತಿಳಿಯೋಣ ಸರಣಿ: ಕಲಿಪುರುಷನ ಪ್ರೇರಣೆಯಿಂದ ತಪ್ಪೆಸಗಿದ ಪರೀಕ್ಷಿತನಿಗೆ ಮುನಿಯ ಶಾಪ. ಸಾವಿನ ನಿರೀಕ್ಷೆಯಲ್ಲೇ ಕಾಲ ಕಳೆದ ಪರೀಕ್ಷಿತ ಕೊನೆಗೂ ತಕ್ಷಕನಿಗೆ ಬಲಿಯಾದ ಯಕ್ಷಗಾನದ ಕಥೆ ವಿವರಿಸಿದ್ದಾರೆ ಹರಿಕೃಷ್ಣ ಜಿ. ಹೊಳ್ಳ, ಬ್ರಹ್ಮಾವರ.
ಅರ್ಜುನನ ಮಗ ಅಭಿಮನ್ಯು. ಅಭಿಮನ್ಯುವಿನ ಮಗ ಪರೀಕ್ಷಿತ. ಧರ್ಮರಾಯನ ಕಾಲಾನಂತರ ಭರತಖಂಡವನ್ನು ಆಳಿದವನು ಅವನೇ. ದ್ವಾಪರಾ ಯುಗದ ಅಂತ್ಯದಲ್ಲಿ ಪ್ರವೇಶಿಸಿದ ಕಲಿಪುರುಷನು ಪರೀಕ್ಷಿತನನ್ನು ಶನಿಯಂತೆ ಕಾಡುತ್ತಾನೆ. ಪರೀಕ್ಷಿತನನ್ನು ಮೃಗಬೇಟೆಗೆ ಪ್ರೇರೇಪಿಸುತ್ತಾನೆ. ಮೃಗಬೇಟೆಗೆಂದು ಕಾಡಿಗೆ ಹೋದ ಪರೀಕ್ಷಿತನಿಗೆ ಆಯಾಸವಾಗುತ್ತದೆ. ಸಮೀಪದಲ್ಲೇ ಇದ್ದ ಋಷಿಯ ಆಶ್ರಮವೊಂದನ್ನು ಪ್ರವೇಶಿಸುತ್ತಾನೆ. ಆಗ ಅಲ್ಲಿ ಧ್ಯಾನಸ್ಥನಾಗಿರುವ ಶಮೀಕ ಮುನಿಗಳ ಹೊರತಾಗಿ ಬೇರಾರೂ ಇದ್ದಿರುವುದಿಲ್ಲ.

ಧ್ಯಾನಸ್ಥನಾದ ಮುನಿಗಳಲ್ಲಿ ಪರೀಕ್ಷಿತನು ನೀರು ಕೇಳುತ್ತಾನೆ. ತನ್ನಷ್ಟಕ್ಕೇ ತಾನು ಧ್ಯಾನದಲ್ಲಿ ಮಗ್ನನಾಗಿರುವ ಮುನಿಯು ಕುಳಿತಲ್ಲಿಂದ ಏಳದೇ ಇದ್ದಾಗ, ಕಲಿಯ ಪ್ರೇರಣೆಯಿಂದಾಗಿ ಅರಸನಿಗೆ ಮುನಿಯ ಮೇಲೆ ಕ್ರೋಧ ಉಕ್ಕೇರುತ್ತದೆ. ಕುಪಿತನಾದ ಪರೀಕ್ಷಿತನು ಸಮೀಪದಲ್ಲೇ ಇದ್ದ ಸತ್ತ ನಾಗರ ಹಾವೊಂದನ್ನು ಮುನಿಯ ಕೊರಳಿಗೆ ಸುತ್ತಿ ಅರಮನೆಗೆ ತೆರಳುತ್ತಾನೆ.

ಕುಶ ಸಮಿಧೆಗಳನ್ನು ತರಲೆಂದು ಹೊರಗಡೆ ಹೋಗಿದ್ದ ಶಮೀಕ ಮುನಿಯ ಪುತ್ರ ಶೃಂಗಿ ಮುನಿಯು ಸ್ವಲ್ಪ ಸಮಯದ ನಂತರ ಆಶ್ರಮಕ್ಕೆ ಮರಳುತ್ತಾನೆ. ತಂದೆಯ ಕೊರಳಲ್ಲಿದ್ದ ಸತ್ತ ನಾಗರ ಹಾವನ್ನು ನೋಡಿ ಆತನಿಗೆ ವಿಪರೀತ ಕೋಪ ಬರುತ್ತದೆ. ಕುಪಿತನಾದ ಶೃಂಗಿಯು "ಯಾರು ಈ ಕೃತ್ಯವನ್ನು ಮಾಡಿದ್ದಾರೋ ಅವರು ಇನ್ನು ಏಳು ದಿನಗಳಲ್ಲಿ ತಕ್ಷಕನಿಂದ ಕಚ್ಚಲ್ಪಟ್ಟು ಮರಣ ಹೊಂದಲಿ" ಎಂದು ಶಪಿಸುತ್ತಾನೆ.


ಸ್ವಲ್ಪ ಸಮಯದ ಬಳಿಕ ಧ್ಯಾನವನ್ನು ಮುಗಿಸಿ ಎಚ್ಚೆತ್ತ ಶಮೀಕ ಮುನಿಯು ತನ್ನ ಮಗನು ಧರ್ಮಿಷ್ಠನಾದ ಭರತಖಂಡದ ಚಕ್ರವರ್ತಿಯನ್ನು ಶಪಿಸಿದ್ದನ್ನು ತಿಳಿದು ಪಶ್ಚಾತ್ತಾಪ ಪಡುತ್ತಾನೆ. ತನ್ನ ಶಿಷ್ಯಂದಿರಲ್ಲಿಯೇ ಓರ್ವನನ್ನು ಪರೀಕ್ಷಿತನಲ್ಲಿಗೆ ಕಳುಹಿಸುತ್ತಾನೆ. ಮತ್ತು ಆತನ ಮೂಲಕ ತನ್ನ ಮಗನ ಶಾಪದ ವೃತ್ತಾಂತವನ್ನು ಪರೀಕ್ಷಿತನಿಗೆ ತಲುಪಿಸಿ, ಅದಕ್ಕೆ ಸೂಕ್ತ ಪರಿಹಾರಗಳನ್ನು ಮಾಡಿಕೊಳ್ಳುವಂತೆ ಸಲಹೆಗಳನ್ನು ಕೂಡಾ ನೀಡುತ್ತಾನೆ.

ಮುನಿಯ ಶಾಪದ ವಿಚಾರವನ್ನು ತಿಳಿದು ಪರೀಕ್ಷಿತನಿಗೆ ಅಪಾರ ದುಃಖವಾಗುತ್ತದೆ. ಸಿಟ್ಟಿನ ಭರದಲ್ಲಿ ತಾನು ಶಮೀಕ ಮುನಿಗಳಿಗೆ ಮಾಡಿದ ಅಪಚಾರದ ವಿಷಯವನ್ನು ನೆನಪಿಸಿಕೊಂಡು ವ್ಯಥೆ ಪಡುತ್ತಾನೆ. ತಾನು ಮಾಡಿದ ಅಂತಹ ಘೋರವಾದ ತಪ್ಪಿಗೆ ಶೃಂಗಿ ಮುನಿಯು ಶಪಿಸಿದ್ದು ಸರಿಯಾಗಿಯೇ ಇದೆ. ತಪ್ಪು ಮಾಡಿದ ತಾನು ಶಿಕ್ಷೆಯನ್ನು ಅನುಭವಿಸುತ್ತೇನೆ, ತಕ್ಷಕ ಬರಲಿ, ತನ್ನನ್ನು ಕಚ್ಚಿ ಸಾಯಿಸಲಿ ಎಂದುಕೊಂಡು ಸಾಯಲು ಸಿದ್ಧನಾಗುತ್ತಾನೆ.

ಆದರೆ ಅರಸನ ಮಂತ್ರಿಗಳು, ಕುಲಪುರೋಹಿತರು, ಪರಿವಾರದವರೆಲ್ಲ ಸೇರಿ ಪರೀಕ್ಷಿತನನ್ನು ತಕ್ಷಕನಿಂದ ರಕ್ಷಿಸಿ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅರಸನನ್ನು ಒಂದು ರಕ್ಷಿತ ಗೃಹದಲ್ಲಿ ಇರಿಸಿ ಒಂದು ಹುಳವೂ ಕೂಡಾ ಒಳಗೆ ಪ್ರವೇಶಿಸದಂತೆ ಭದ್ರವಾದ ಕಾವಲನ್ನು ಇರಿಸುತ್ತಾರೆ.

ಆದರೆ ಇಂತಹ ಯಾವುದೇ ಭದ್ರತೆಯು ಮುನಿಯ ಶಾಪದಿಂದ ಉಂಟಾಗಬಹುದಾದ ತನ್ನ ಮರಣವನ್ನು ತಪ್ಪಿಸಲಾರದು, ತನ್ನ ಮರಣವು ನಿಶ್ಚಿತ ಎಂಬುದನ್ನು ಅರಿತಿದ್ದ ಪ್ರಾಜ್ಞನಾದ ಪರೀಕ್ಷಿತನು ತನ್ನ ಜೀವನದ ಕೊನೆಯ ಆ ಏಳು ದಿನಗಳನ್ನು ಪುಣ್ಯ ಕಥಾಶ್ರವಣ ಮಾಡುತ್ತಾ ಸಂತೋಷದಿಂದ ಕಳೆಯಲು ಬಯಸುತ್ತಾನೆ. ಹೀಗಾಗಿ ಆ ಏಳು ದಿನಗಳ ಸಮಯದಲ್ಲಿ ಅವನ ಇಚ್ಛೆಯಂತೆ ಶುಕ ಮುನಿಗಳು ಆತನಿಗೆ ಭಾಗವತ ಪುರಾಣಗಳ ಕಥೆಗಳನ್ನು ಹೇಳುತ್ತಾರೆ. ಅರಸನು ಪುಣ್ಯ ಕಥಾ ಶ್ರವಣ ಮಾಡುತ್ತಾ ತನ್ನ ರಾಣಿ ಇರಾವತಿಯೊಡಗೂಡಿ ದೇವರ ಭಜನೆಯಲ್ಲಿಯೇ ಆ ಏಳು ದಿನಗಳನ್ನು ಕಳೆಯುತ್ತಾನೆ.

ಶೃಂಗಿ ಮುನಿಯ ಶಾಪದಿಂದ ತಕ್ಷಕನು ಪೇಚಿಗೆ ಸಿಲುಕುತ್ತಾನೆ. ತನಗೂ ಪರೀಕ್ಷಿತನಿಗೂ ನೇರವಾಗಿ ಯಾವುದೇ ದ್ವೇಷ ಇಲ್ಲದಿದ್ದರೂ ವಿನಾಕಾರಣ ಧರ್ಮಿಷ್ಠನಾದ ಆ ಚಕ್ರವರ್ತಿ ಪರೀಕ್ಷಿತನನ್ನು ಕಚ್ಚಿ ಕೊಲ್ಲಬೇಕು. ಇಲ್ಲದಿದ್ದಲ್ಲಿ ಶೃಂಗಿ ಮುನಿಯ ಶಾಪ ಹುಸಿಯಾಗಿ ಆತನ ಕೋಪಕ್ಕೆ ತಾನು ಕಾರಣನಾಗಬೇಕಾಗುತ್ತದೆ, ಏನು ಮಾಡಲಿ? ಎಂಬುದಾಗಿ ಆತ ಚಿಂತಿಸುತ್ತಾನೆ.

ಆಗ ಅವನಿಗೆ ಈ ಹಿಂದೆ ಅರ್ಜುನನು ಖಾಂಡವ ವನವನ್ನು ದಹಿಸುವ ಸಂದರ್ಭದಲ್ಲಿ ಅನೇಕ ನಾಗಗಳ ಜೊತೆಯಲ್ಲಿ ತನ್ನ ಹೆಂಡತಿಯನ್ನು ಕೂಡಾ ಕೊಂದು ತನ್ನ ಮಗ ಅಶ್ವಸೇನನನ್ನು ಅರೆಗಡಿದುದು ನೆನಪಾಗುತ್ತದೆ. ಆ ದ್ವೇಷವನ್ನೇ ನೆಪವಾಗಿ ಇಟ್ಟುಕೊಂಡು ತಾನು ಇಂದು ಆ ಅರ್ಜುನನ ಮೊಮ್ಮಗನಾದ ಈ ಪರೀಕ್ಷಿತನನ್ನು ಕಚ್ಚಿ ಕೊಲ್ಲುತ್ತೇನೆ ಎಂಬುದಾಗಿ ಹೊರಡುತ್ತಾನೆ.

ಆದರೆ ಪರೀಕ್ಷಿತನು ಇರುವ ಆ ರಕ್ಷಿತ ಗೃಹಕ್ಕೆ ಬಿಗಿಯಾದ ಭದ್ರತೆ ಇದೆ. ತನಗೆ ಒಳಗಡೆ ಪ್ರವೇಶಿಸಲು ಸಾಧ್ಯವೇ ಇಲ್ಲ ಎಂಬುದು ತಕ್ಷಕನಿಗೆ ಅರಿವಾಗುತ್ತದೆ. ಅಷ್ಟರಲ್ಲಿ ಪರಿಚಾರಕರು ಅರಸನಿಗೆ ಹಣ್ಣುಗಳನ್ನು ಕೊಂಡೊಯ್ದು ಕೊಡುತ್ತಿರುವುದು ಆತನ ಗಮನಕ್ಕೆ ಬರುತ್ತದೆ. ತಕ್ಷಣ ಆತನು ಒಂದು ಉಪಾಯವನ್ನು ಮಾಡುತ್ತಾನೆ. ತಾನು ಒಂದು ಚಿಕ್ಕ ಹುಳುವಿನ ರೂಪ ಧರಿಸಿ ಆ ಹಣ್ಣಿನೊಳಗೆ ಸೇರಿಕೊಳ್ಳುತ್ತಾನೆ. ಅರಸನು ಆ ಹಣ್ಣನ್ನು ಕತ್ತರಿಸಿದಾಗ ಅದರಲ್ಲಿ ಹುಳ ಇರುವುದನ್ನು ನೋಡುತ್ತಾನೆ. ಪ್ರಾಜ್ಞನಾದ ಪರೀಕ್ಷಿತನಿಗೆ ಆ ಹುಳವೇ ತಕ್ಷಕ ಎಂಬುದು ವಿದಿತವಾಗುತ್ತದೆ.

ಅರಸನ ಇದಿರಿನಲ್ಲಿ ತಕ್ಷಕನೇ ಮುಂದುವರಿಯಲು ಅಳುಕಿದರೂ ಕೂಡಾ ಸ್ವತಹ ಪರೀಕ್ಷಿತನೇ ತನ್ನನ್ನು ಕಚ್ಚು, ಬಾ ಎಂಬುದಾಗಿ ಅವನನ್ನು ಆಹ್ವಾನಿಸುತ್ತಾನೆ. ಆಗ ಹುಳದ ರೂಪದಲ್ಲಿದ್ದ ತಕ್ಷಕನು ಬೆಳೆ ಬೆಳೆದು ದೊಡ್ಡದಾಗಿ ನಿಜರೂಪ ಧರಿಸಿ ಪರೀಕ್ಷಿತನನ್ನು ಕಚ್ಚಿ ಕೊಲ್ಲುತ್ತಾನೆ.

ಸಾಯುವ ಸಂದರ್ಭದಲ್ಲಿ ಅರಸನು ದುಃಖಿಸುತ್ತಿರುವ ತನ್ನ ರಾಣಿಯಾದ ಇರಾವತಿಯನ್ನು ಕರೆದು "ನನ್ನೊಡನೆ ನೀನೂ ಕೂಡಾ ಸಹಗಮನ ಮಾಡಿಕೊಳ್ಳಬೇಡ, ನೀನು ಕ್ಷತ್ರಿಯಾಣಿಯಾಗಿ ನಿನ್ನ ಕರ್ತವ್ಯವನ್ನು ಮಾಡಬೇಕಾಗಿದೆ, ಮಗನಾದ ಜನಮೇಜಯನು ಇನ್ನೂ ತುಂಬಾ ಚಿಕ್ಕವನು, ಏನೂ ಅರಿಯದವನು. ಆತನನ್ನು ಬೆಳೆಸಿ ದೊಡ್ಡವನನ್ನಾಗಿ ಮಾಡು. ನಂತರ ಅವನಿಗೆ ಪಟ್ಟವನ್ನು ಕಟ್ಟು. ಎಂದಿಗೂ ನನ್ನ ಮರಣದ ಗುಟ್ಟನ್ನು ಅವನಿಗೆ ತಿಳಿಸಬೇಡ. ಸರ್ಪ ದಂಶನದಿಂದ ನಾನು ತೀರಿಕೊಂಡೆ ಎಂಬ ಸತ್ಯವನ್ನು ಯಾವುದೇ ಕಾರಣಕ್ಕೂ ಆತನಿಗೆ ತಿಳಿಸಬೇಡ. ತಿಳಿಸಿದರೆ ಸಹಜವಾಗಿಯೇ ಅವನಲ್ಲಿಯೂ ನಾಗಕುಲದ ಮೇಲೆ ವೈರತ್ವ ಬೆಳೆಯುತ್ತದೆ. ನಾಗದ್ವೇಷ ಒಳ್ಳೆಯದಲ್ಲ" ಎಂದು ಹೇಳಿ ಆತ ಪ್ರಾಣ ಬಿಡುತ್ತಾನೆ. (ಸಶೇಷ)

-ಹರಿಕೃಷ್ಣ ಹೊಳ್ಳ, ಬ್ರಹ್ಮಾವರ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು