ಉಗ್ರಕೋಪಿ ದೂರ್ವಾಸರ ಗರ್ವಭಂಗ

ಸಮುದ್ರಮಥನ ಪ್ರಸಂಗದಲ್ಲಿ ದೂರ್ವಾಸ ಶಾಪ
ಸಮುದ್ರ ಮಥನ ಯಕ್ಷಗಾನದಲ್ಲಿ ದೇವೇಂದ್ರನಿಗೆ ದೂರ್ವಾಸ ಶಾಪದ ದೃಶ್ಯ
ಪುರಾಣ ತಿಳಿಯೋಣ ಸರಣಿ: ಕೋಪಕ್ಕೆ ಹೆಸರಾದವರು ದೂರ್ವಾಸ ಮುನಿಗಳು. ಮಹಾವಿಷ್ಣುವಿನ ಭಕ್ತ ಅಂಬರೀಷನೆದುರು ಅವರ ಗರ್ವ ಭಂಗವಾದ ಕಥೆಯಿದು.
ಇಕ್ಷ್ವಾಕು ವಂಶದ ಮಾಂಧಾತ ರಾಜನ ಮಗನಾಗಿ ಜನಿಸಿದ ಅಂಬರೀಷ, ಬಾಲ್ಯದಿಂದಲೇ ಧರ್ಮನಿಷ್ಠನಾಗಿದ್ದ. ಭಾಗವತದ ಪ್ರಕಾರ ವಿಷ್ಣು ಭಕ್ತನಾದ ಅಂಬರೀಷ, ಸದಾ ಸತ್ಯವನ್ನು ನುಡಿಯುವ ಗುಣ ಹೊಂದಿರುತ್ತಾನೆ. ಒಮ್ಮೆ ಮಹಾವಿಷ್ಣುವನ್ನು ಸಂಪ್ರೀತಗೊಳಿಸಲು ದೊಡ್ಡ ಯಾಗವನ್ನು ನಡೆಸುತ್ತಾನೆ. ಮಹಾವಿಷ್ಣು ಈ ಯಾಗದಿಂದ ಆನಂದಹೊಂದಿ, ಸುದರ್ಶನ ಚಕ್ರವನ್ನು ಅಂಬರೀಷನಿಗೆ ದಯಪಾಲಿಸುತ್ತಾನೆ. ಆ ಚಕ್ರವು ಅಂಬರೀಷನ ರಾಜ್ಯಕ್ಕೆ ಸುಭಿಕ್ಷೆ ನೀಡುತ್ತದೆ.

ಏಕಾದಶಿಯ ದಿನ ಅಂಬರೀಷ ಉಪವಾಸ ಮಾಡಿ, ದ್ವಾದಶಿಯ ದಿನ ಅನ್ನದಾನ ಮಾಡುವ ವ್ರತ ನಡೆಸಿಕೊಂಡಿರುತ್ತಾನೆ. ಇಂಥ ಒಂದು ಏಕಾದಶಿಯ ದಿನ, ಉಪವಾಸ ಮುಗಿಯುವ ಸಮಯದಲ್ಲಿ ಮಹಾಕೋಪಿಷ್ಠ ಮುನಿಯೆಂದೇ ಹೆಸರಾಗಿರುವ ದೂರ್ವಾಸ ಮುನಿಯು ಅಂಬರೀಷನ ಬಳಿ ಆಗಮಿಸುತ್ತಾನೆ. ಮುನಿಯನ್ನು ಬರಮಾಡಿಕೊಂಡು, ಊಟಕ್ಕೆ ಮುನ್ನ ಸ್ನಾನ ಮುಗಿಸಿ ಬರಲು ಹೇಳುತ್ತಾನೆ. 


ಬಹಳ ಹೊತ್ತಾದರೂ ದೂರ್ವಾಸ ಮುನಿಗಳು ಬಾರದಿರಲು ಕುಲಗುರು ವಸಿಷ್ಠರ ಬಳಿ ಸಲಹೆ ಕೇಳಿದಾಗ, ವಸಿಷ್ಠರು ಒಂದು ಹನಿ ನೀರು ಮತ್ತು ತುಳಸಿ ದಳವನ್ನು ಭುಂಜಿಸಿ ಉಪವಾಸ ಮುರಿದು, ನಂತರ ದೂರ್ವಾಸ ಮುನಿಯ ದಾರಿ ಕಾಯುವಂತೆ ಸಲಹೆ ನೀಡುತ್ತಾರೆ. ತಾನು ಬರುವವರೆಗೆ ಕಾಯದೆ, ಅಂಬರೀಷನು ಉಪವಾಸ ಮುರಿದದ್ದನ್ನು ತಿಳಿದು ಕೋಪಗೊಂಡ ದೂರ್ವಾಸ ಮುನಿಯು ತನ್ನ ಕೂದಲಿನಿಂದ ರಾಕ್ಷಸನೊಬ್ಬನನ್ನು ಸೃಷ್ಟಿಸಿ ಅಂಬರೀಷನ ಮೇಲೆ ಛೂ ಬಿಡುತ್ತಾರೆ.

ಮಹಾವಿಷ್ಣು ನೀಡಿದ ಸುದರ್ಶನ ಚಕ್ರವು ಆ ರಾಕ್ಷಸನನ್ನು ಕೊಂದು ದೂರ್ವಾಸ ಮುನಿಯನ್ನು ಬೆನ್ನತ್ತುತ್ತದೆ. ದಾರಿಗಾಣದ ದೂರ್ವಾಸ ಮುನಿಯು ಬ್ರಹ್ಮನ ಬಳಿ ಮತ್ತು ನಂತರ ಶಿವನ ಬಳಿ ಕಾಪಾಡಲು ಮೊರೆ ಹೋಗುತ್ತಾನೆ. ಮಹಾವಿಷ್ಣುವಿನ ಸುದರ್ಶನ ಚಕ್ರವನ್ನು ತಾವು ಎದುರಿಸಲಾರೆವೆಂದೂ, ದೂರ್ವಾಸನು ಮಹಾವಿಷ್ಣುವಿನ ಬಳಿಯೇ ತೆರಳಬೇಕೆಂದೂ ಅವರಿಬ್ಬರೂ ತಿಳಿಹೇಳುತ್ತಾರೆ.

ಅಂತೆಯೇ ಮಹಾವಿಷ್ಣುವಿನ ಬಳಿಗೆ ತೆರಳಿದಾಗ, ತನ್ನ ಭಕ್ತ ಅಂಬರೀಷನ ಬಳಿ ಕ್ಷಮೆ ಕೋರಿದರೆ, ಸುದರ್ಶನ ಚಕ್ರವು ಹಾನಿ ಮಾಡುವುದಿಲ್ಲವೆಂದು ಮಹಾವಿಷ್ಣುವು ದೂರ್ವಾಸನಿಗೆ ತಿಳಿಸುತ್ತಾನೆ. ಅದರಂತೆ ದೂರ್ವಾಸನು, ಅಂಬರೀಷನ ಬಳಿ ಕ್ಷಮೆ ಯಾಚಿಸುತ್ತಾನೆ. ಅಂಬರೀಷನು ದೂರ್ವಾಸನನ್ನು ಬಿಟ್ಟುಬಿಡುವಂತೆ ಸುದರ್ಶನ ಚಕ್ರಕ್ಕೆ ಪ್ರಾರ್ಥಿಸಿದಾಗ, ಅದು ದೂರ್ವಾಸನಿಗೆ ಅಭಯ ನೀಡುತ್ತದೆ.

ಸಂ.: ದಾಮೋದರ ಶೆಟ್ಟಿ, ಇರುವೈಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು