ಯಕ್ಷಗಾನದಲ್ಲಿ ಧ್ವನಿ ವ್ಯವಸ್ಥೆಯಲ್ಲಾದ ವಿಕಾಸಗಳು ಈ ಕಲೆಗೆ ಮಾರಕವಾಗದಂತೆ ನೋಡಿಕೊಳ್ಳಬೇಕಿದೆ ಎನ್ನುತ್ತಾರೆ, ಯಕ್ಷಗಾನಕಲೆ- ಪ್ರೇಕ್ಷಕರವರ್ಗ-ಬದಲಾದ ದೃಷ್ಟಿಕೋನ ಸರಣಿ -19 ರಲ್ಲಿ ಲೇಖಕ ಸುರೇಂದ್ರ ಪಣಿಯೂರು
ಭಾರತೀಯ ರಂಗಕಲೆಗಳು ಆವಿರ್ಭವಿಸಿದ ಆದಿ ಕಾಲದಲ್ಲಿ ಸಂಗೀತ ಉಪಕರಣಗಳ ಧ್ವನಿ ಹಾಗೂ ಮಾನವ ಸಹಜವಾದ ಕಂಠ ಧ್ವನಿಯನ್ನು ಗಾಯನ ಹಾಗೂ ವಾಚಿಕದಲ್ಲಿ ವರ್ಧಿಸಿ ಪ್ರೇಕ್ಷಕರಿಗೆ ತಲುಪಿಸುವ ಹಾಗಿನ ವೈಜ್ಞಾನಿಕವಾದ ವ್ಯವಸ್ಥೆ ಇದ್ದಿರಲಿಲ್ಲ. ಪ್ರಾಕೃತಿಕವಾದ ಧ್ವನಿಯೇ ರಂಗದಲ್ಲಿ ಅನುರಣಿಸುತ್ತಿತ್ತು. ಯಕ್ಷಗಾನದಲ್ಲಿಯೂ ಅದೇ ಕ್ರಮ ಮುಂದುವರಿದು ಬಂದಿತ್ತು.
ಯಕ್ಷಗಾನ ಕಲೆಯಲ್ಲಿ ಹಿಮ್ಮೇಳದಲ್ಲಿ ಹೇಳುವ ಹಾಡುಗಬ್ಬಗಳ ತರಂಗಿತತೆಯ ಗಾಯನಕ್ಕೆ ಅನುಗುಣವಾಗಿ ಮುಮ್ಮೇಳದವರು ನರ್ತಿಸಿ, ಅಭಿನಯಿಸಿ ಮುಂದೆ ತಮ್ಮ ಪ್ರಸಂಗ ಸಾಹಿತ್ಯವನ್ನು ವಾಚಿಕದಲ್ಲಿ ಪ್ರೇಕ್ಷಕರ ಇದಿರು ಅನಾವರಣಗೊಳಿಸುತ್ತಿದ್ದರು. ಇಲ್ಲಿ ಹಿಮ್ಮೇಳ ಮುಮ್ಮೇಳ ಎರಡೂ ಪರಸ್ಪರ ಸಂವಾದಿಯಾಗಿದ್ದು, ಗೀತ ಪಠ್ಯವೂ ಒಟ್ಟಾಗಿ ಸೇರಿ ನಾಟ್ಯವಾಗುತ್ತದೆ. ತನ್ಮೂಲಕ ರಸೋತ್ಕರ್ಷವಾಗಿ ಪ್ರೇಕ್ಷಕ ತಾನು ಮನೋರಂಜನೆಯೊಂದಿಗೆ ಸಂತೋಷ ಭಾವ ಹೊಂದುತ್ತಾನೆ. ಅಭಿನಯಕ್ಕೆ ಪೂರಕವಾದ ಸಂಗೀತ ಹಾಗೂ ವಾಚಿಕವು ಧ್ವನಿಯ ಮೂಲಕ ಶ್ರಾವ್ಯವಾಗುತ್ತದೆ.
Yakshagana.in Updates ಗಾಗಿ: ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಯಕ್ಷಗಾನ ಭಾಗವತನಾದವನಿಗೆ ರಂಗದಲ್ಲಿ ಇಡೀ ರಾತ್ರಿ ಹಾಡಲು ಉನ್ನತ ಕಂಠಶ್ರೀಯ ಅಗತ್ಯ ಇತ್ತು. ಅದೇ ರೀತಿಯಲ್ಲಿ ಭಾಗವತಿಕೆಗೆ ಸಾಥಿಗಳಾಗುವ ಚೆಂಡೆ ಮದ್ದಳೆಗಳನ್ನು ನುಡಿಸಿ ಅವುಗಳ ನೈಜ ಧ್ವನಿಯನ್ನು ಹೊಮ್ಮಿಸಲು ವಾದಕರಿಗೆ ದೈಹಿಕ ಶ್ರಮ ಹಾಗೂ ವಿಭಾಗದಲ್ಲಿ ಪರಿಣತಿಯ ಅಗತ್ಯವೂ ಇತ್ತು.
ಧ್ವನಿ ತರಂಗಗಳು ಅಲೆಗಳ ರೂಪದಲ್ಲಿ ಒಂದು ಮಾಧ್ಯಮದ ಮೂಲಕ ಚಲಿಸುತ್ತದೆ. ಅದು ಗಾಳಿ, ನೀರು ಅಥವಾ ಯಾವುದೇ ಘನರೂಪದ ವಸ್ತುಗಳಿರಬಹುದು. ಅದೇ ರೀತಿಯಲ್ಲಿ ಯಕ್ಷಗಾನದ ಈ ಎಲ್ಲ ಹಿಮ್ಮೇಳದ ಸ್ವರಗಳು ವಾತಾವರಣದ ಮಾಧ್ಯಮದ ಮೂಲಕ ಪ್ರೇಕ್ಷಕರಿಗೆ ತಲುಪುತಿತ್ತು.
ಆ ಕಾಲದ ರಾತ್ರಿಯ ನೀರವ ಮೌನದಲ್ಲಿ ಯಕ್ಷಗಾನದ ಭಾಗವತಿಕೆ ಚೆಂಡೆ ಮದ್ದಲೆಗಳ ನಾದವು ಬಹಳಷ್ಟು ದೂರಕ್ಕೆ ಸ್ಪಷ್ಟವಾಗಿ ಕೇಳುತ್ತಾ ಇತ್ತು. ಇದೆಲ್ಲದಕ್ಕೂ ಅಂದಿನ ಶಬ್ದ ಮಾಲಿನ್ಯ ಇಲ್ಲದ ವಾತಾವರಣ ಪ್ರಮುಖ ಕಾರಣಗಳಲ್ಲೊಂದು.
ಶಬ್ದದ ತೀವ್ರತೆಯನ್ನು ಡೆಸಿಬಲ್‌ನಿಂದ ಅಳೆಯಲಾಗುತ್ತದೆ. ನಿಜಾರ್ಥಲ್ಲಿ ಇದರ ಮಾನ ‘ಬೆಲ್’, ಆದರೆ ಇದರ 1/10ನೇ ಭಾಗವನ್ನು ಡೆಸಿಬಲ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮನುಷ್ಯನಿಗೆ 80 ಡೆಸಿಬೆಲ್ ತೀವ್ರತೆಯ ಶಬ್ದವನ್ನು ಕೇಳಿಸಿಕೊಳ್ಳಬಹುದು. ಅದಕ್ಕಿಂತ ಹೆಚ್ಚಿನ ಶಬ್ದ ಮಾನವ ಕಿವಿಗೆ ಅಪಾಯಕಾರಿ. ಹಾಗೂ ಶಬ್ದ ಮಾಲಿನ್ಯಕ್ಕೂ ಕಾರಣವಾಗುತ್ತದೆ.
ಯಕ್ಷಗಾನ ರಂಗದಲ್ಲಿಯ ಪದ (ಭಾಗವತಿಕೆ), ಮಾತು (ವಾಚಿಕ) ಹಾಗೂ ಪಕ್ಕ ವಾದ್ಯಗಳ ನುಡಿತದ ಧ್ವನಿಯು ಈ ಹಿಂದೆ ಪ್ರದರ್ಶನಕ್ಕೆ ರಂಗಸ್ಥಳದ ಎದುರಲ್ಲಿ ಪ್ರೇಕ್ಷಕರಾಗಿ ಸೇರುತ್ತಿದ್ದ 200ರಿಂದ 300 ಜನ ಪ್ರೇಕ್ಷಕರ ಕೇಳುವಿಕೆಗೆ, ಧ್ವನಿವರ್ಧಕದ ಬಳಕೆ ಇಲ್ಲದೆಯೂ ಏನೂ ತೊಡಕಾಗಿರಲಿಲ್ಲ. ಯಕ್ಷಗಾನ ರಂಗಸ್ಥಳದ ಮೂರು ಬದಿಯಲ್ಲಿ ಅಂದರೆ ಎದುರಿಗೆ ಇಕ್ಕೆಲದಲ್ಲಿ ಹಂಚಿಕೊಂಡು ನೆಲದ ಮೇಲೆ ಕೂರುತ್ತಿದ್ದ ಪ್ರೇಕ್ಷಕರು ಈ ನೈಜತೆಯ ಧ್ವನಿಯಲ್ಲಿ ಕರ್ಣಾನಂದಕರವಾದ ಗಾಯನವನ್ನು ಆಸ್ವಾದಿಸುತ್ತಿದ್ದರು. ರಾತ್ರಿಯ ನೀರವತೆಯಲ್ಲಿ ಶಬ್ದ ಮಾಲಿನ್ಯವಿಲ್ಲದ ಭಾಗವತಿಕೆಯ ಧ್ವನಿತರಂಗಗಳು ಮೈಲುಗಟ್ಟಲೆ ದೂರಕ್ಕೆ ಕೇಳಿಸುತ್ತಿದ್ದವು. ಆ ಕಾಲದಲ್ಲಿನ ಪ್ರಸಿದ್ಧ ಭಾಗವತರಾದ ದಿ.ಶೇಷಗಿರಿ ಕಿಣಿ ಹಾಗೂ ಹಿರಿಯ ಬಲಿಪ ನಾರಾಯಣ ಭಾಗವತರ ಪದಗಳು ಐದು ಮೈಲು ದೂರಕ್ಕೆ ಕೇಳಿಸುತ್ತಿತ್ತೆಂದು ಹಿರಿಯರು ಹೇಳುವುದನ್ನು ಕೇಳಿದ್ದೇನೆ.
ಬಂದಿತು ಆಧುನಿಕತೆ
ಯಕ್ಷಗಾನ ಪ್ರೇಕ್ಷಕರು ಅಸೀನರಾಗುವ ಪರಿಧಿ ವಿಸ್ತಾರವಾದಂತೆ ಸುಸ್ಪಷ್ಟ ಕೇಳುವಿಕೆಗಾಗಿ ಯಕ್ಷಗಾನ ಭಾಗವತಿಕೆಗೆ ಹಾಗೂ ಪಾತ್ರಧಾರಿಗಳ ಮಾತುಗಾರಿಕೆಗೆ ಅನುಕೂಲ ಆಗುವಂತೆ ಧ್ವನಿವರ್ಧಕವನ್ನು ಬಳಸಲಾಯಿತು. ಇದು ಸುಧಾರಣೆಯ ಹಾದಿಯಲ್ಲಾದ ಬದಲಾವಣೆ. ವಿದ್ಯುತ್ ಉಪಯೋಗವನ್ನು ಕಂಡುಕೊಂಡ ಕಾಲಘಟ್ಟದಲ್ಲಿ ಯಕ್ಷಗಾನ ರಂಗಭೂಮಿಯಲ್ಲಿ ಬೆಳಕು ಹಾಗೂ ಧ್ವನಿ ವ್ಯವಸ್ಥೆಯಲ್ಲಿ ವಿದ್ಯುತ್ತನ್ನು ಬಳಸಿಕೊಳ್ಳಲಾಯಿತು. ಆವಾಗ ಪರಿಚಯಗೊಂಡ ಸಾಧನವೇ ಧ್ವನಿವರ್ಧಕ (ಅಂಪ್ಲಿಫಯರ್)ಗಳು. ಮಾನವ ಸಹಜವಾದ ಧ್ವನಿಯನ್ನು ವರ್ಧಿಸಿ ಕೊಡುವ ಕೆಲಸವೇ ಈ ಧ್ವನಿವರ್ಧಕದ್ದು. ಮೈಕ್ರೊಫೋನ್‌ಗಳ ಮೂಲಕ ರಂಗಸ್ಥಳದಲ್ಲಿ ಗ್ರಹಿಸಿದ ಧ್ವನಿಯು ಧ್ವನಿವರ್ಧಕದ ಮೂಲಕ ವರ್ಧಿಸಿಕೊಂಡು ಹಾರ್ನ್‌ಗಳ ಮೂಲಕ ಪ್ರಸಾರಗೊಂಡು ಬಯಲಲ್ಲಿ ಇದ್ದ ಯಕ್ಷಗಾನ ಬಯಲಾಟದ ಪ್ರೇಕ್ಷಕರಿಗೆ ಸುಸ್ಪಷ್ಟವಾಗಿ ತಲುಪಿಸುವಲ್ಲಿ ಸಹಕಾರಿಯಾಯಿತು. ಆ ಹಂತದಲ್ಲಿ ಬಳಸಿದ್ದು ಕೇವಲ ಎರಡು ಮೈಕ್‌ಗಳು. ಒಂದು ಭಾಗವತರ ಪದಕ್ಕೆ, ಇನ್ನೊಂದು ಪಾತ್ರಧಾರಿಗಳ ವಾಚಿಕಕ್ಕೆ. ಹಿಗ್ಗಿದ ಸಭಿಕರ ವ್ಯಾಪ್ತಿ ಹಾಗೂ ವಾತಾವರಣದಲ್ಲಾದ ಶಬ್ದ ಮಾಲಿನ್ಯದಿಂದ ಮಂಕಾದ ಧ್ವನಿಯು ಈ ಧ್ವನಿವರ್ಧಕ ಬಳಕೆಯಿಂದ ಯಕ್ಷಗಾನ ಕ್ಷೇತ್ರದಲ್ಲಿ ಶ್ರವಣ ವಿಭಾಗದಲ್ಲಿ ಅನುಕೂಲವಾಯಿತು.
ಆಧುನಿಕತೆಯ ಲಾಭ
ಯಕ್ಷಗಾನ ಮೇಳಗಳು ವ್ಯವಸಾಯದ ಟೆಂಟ್ ಮೇಳಗಳಾಗಿ ಪರಿವರ್ತನೆ ಹೊಂದಿದ ಸಮಯದಲ್ಲಿ ಈ ಧ್ವನಿವರ್ಧಕವನ್ನು ತಾಂತ್ರಿಕವಾಗಿ ವಿಶೇಷವಾಗಿ ಮೇಲ್ದರ್ಜೆಗೇರಿಸಲಾಯಿತು. ಇದಕ್ಕೆ ಕಂಪನಿ ನಾಟಕದ ಥಿಯೇಟರ್ ವ್ಯವಸ್ಥೆಯೂ ಕಾರಣವೆನ್ನಬಹುದು. 90ರ ದಶಕದಲ್ಲಿ ಟೆಂಟ್ ಮೇಳಗಳಲ್ಲಿ ಆದ ಸುಧಾರಣೆಯ ಭಾಗವಾಗಿ ಧ್ವನಿ ವ್ಯವಸ್ಥೆಯಲ್ಲಿ ಬಹಳಷ್ಟು ಆಧುನಿಕತೆಯನ್ನು ಅಳವಡಿಸಿಕೊಳ್ಳಲಾಯಿತು. ಹೆಚ್ಚು ಸಾಮರ್ಥ್ಯದ ಮೈಕ್‌ಗಳು ಆಂಪ್ಲಿಫಯರ್‌ಗಳು, ಸೌಂಡ್ ಬಾಕ್ಸ್‌ಗಳನ್ನು ಉಪಯೋಗಿಸಿಕೊಳ್ಳಲಾಯಿತು. ಇದರಿಂದಾಗಿ ರಂಗದಲ್ಲಿ ಬಿದ್ದ ಸೂಜಿಯ ಶಬ್ದವೂ ಟೆಂಟ್ ಒಳಗಡೆ ಅನುರಣಿಸಿತು. ಈ ರೀತಿಯ ವ್ಯವಸ್ಥೆಯನ್ನು ಸ್ವಲ್ಪ ಮಟ್ಟಿಗೆ ಬಯಲಾಟ ಮೇಳಗಳಲ್ಲಿಯೂ ಅಳವಡಿಸಿಕೊಳ್ಳಲಾಯಿತು. ಇದನ್ನೆಲ್ಲ ಸಮರ್ಥವಾಗಿ ಬಳಸಿಕೊಂಡ ಭಾಗವತರಿಗೆ ಹಾಡುವಿಕೆಯಲ್ಲಿ ಹಾಗೂ ಕಲಾವಿದರಿಗೆ ಸಂಭಾಷಣೆಯಲ್ಲಿ ಕಂಠ ಶೋಷಣೆ ಕಡಿಮೆಯಾಗಿ ಆರಾಮದಾಯಕವಾಯಿತು. ಇವು ಬದಲಾದ ವ್ಯವಸ್ಥೆಯಲ್ಲಾದ ಲಾಭಗಳು.
2000 ಇಸವಿ ನಂತರದಲ್ಲಿ ಈ ಕ್ರಾಂತಿ ಇಷ್ಟಕ್ಕೆ ನಿಲ್ಲದೆ ಮುಂದುವರಿದು ಯಕ್ಷಗಾನ ರಂಗದ ಧ್ವನಿ ತಾಂತ್ರಿಕತೆಯ ಬಗ್ಗೆ ಅರಿವಿಲ್ಲದ ಸೌಂಡ್ ಸಿಸ್ಟಮ್ ನಿರ್ವಾಹಕರು ಎಕೋ ಮೈಕ್ ಮಿಕ್ಸರ್, ಆಂಪ್ಲಿಫಯರ್, ಟ್ವೀಟರ್ ಬಾಕ್ಸ್ ಮುಂತಾದವುಗಳು ಏನೆಲ್ಲ ಇಲೆಕ್ಟ್ರಾನಿಕ್ ವಸ್ತುಗಳು ಇವೆಯೋ, ಅವೆಲ್ಲವನ್ನೂ ರಂಗದಲ್ಲಿ ಅಳವಡಿಸಿದರು. ಮದ್ದಳೆಯ ಎಡ-ಬಲ ಎರಡಕ್ಕೂ ಮೈಕ್ ಇಡಲಾಯಿತು. ಈ ಸುಧಾರಣೆಯನ್ನು ಖಂಡಿತವಾಗಿ ಒಪ್ಪಿಕೊಳ್ಳೋಣ. ದೈಹಿಕವಾಗಿ ನಿಶ್ಯಕ್ತಿ ಇದ್ದ ಒಳ್ಳೆಯ ನುಡಿತಗಾರನ ಮದ್ದಳೆಯ ನಾದವು ಸುಸ್ಪಷ್ಟವಾಗಿ ರಂಗಕ್ಕೆ ಒದಗಿ ಕೇಳಿಬರಲು ಈ ಮೈಕ್‌ಗಳು ಸಹಕಾರಿ ಕೂಡಾ. ಹಾಗೆಯೇ ಕಂಠತ್ರಾಣ ಕಡಿಮೆ ಇದ್ದ ಭಾಗವತನೂ ಇದರಿಂದ ರಂಗದಲ್ಲಿ ಸುಶ್ರಾವ್ಯವಾಗಿ ಹಾಡಿ ತೋರಿಸಬಲ್ಲವನಾದಾನು.
ಆದರೆ, ಧ್ವನಿ ತಂತ್ರಜ್ಞಾನದ ಅರಿವಿಲ್ಲದೆ ಸಿಕ್ಕಾಪಟ್ಟೆ ಎಕೋ-ರಿಪೀಟ್ ಹಾಗೂ ಸ್ವರದ ಷಡ್ಜವನ್ನು ಹಿಗ್ಗಿಸುವ ವ್ಯವಸ್ಥೆಯಲ್ಲಿ ನೈಜ ಸ್ವರವನ್ನು ಅಡಗಿಸಿ ಕೇಳುಗರಿಗೆ ಕರ್ಕಶವಾಗಿಸುವ ವ್ಯವಸ್ಥೆ ಸರಿಯೇ? ಎಂಬುದು ಈಗಿರುವ ಪ್ರಶ್ನೆ.
ಮದ್ದಳೆ ಚೆಂಡೆಯ ಸ್ವರವು ಭಾಗವತಿಕೆಗೆ ಸಂವಾದಿಯಾಗಿ ಸಾಹಿತ್ಯ ಭಾಗವನ್ನು ಅಡಗಿಸದೆ ನರ್ತಕನಿಗೆ ಅನುಕೂಲವಾಗುವಂತೆ ಇರಬೇಕು. ಅವಾಗ ಅದರ ನಾದ ಮಾಧುರ್ಯವನ್ನು ಪ್ರೇಕ್ಷಕರು ಅನುಭವಿಸುವಂತಾಗುತ್ತದೆ. ಯಾಕೆಂದರೆ ಈಗಿನ ಮೈಕ್‌ಗಳು ಸೂಕ್ಷ್ಮಾತಿಸೂಕ್ಷ್ಮ ಧ್ವನಿಯನ್ನೂ ಗ್ರಹಿಸುವ ಸಾಮರ್ಥ್ಯ ಇದ್ದವುಗಳು. ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಜ್ಞಾನ ಹಾಗೂ ಬದ್ಧತೆಯು ವಾದಕರು ಹಾಗೂ ಗಾಯಕರಿಗೆ ಬೇಕೇಬೇಕು. ಅದೇ ಇದೀಗ ಕಾಣೆಯಾಗಿ ಬರೀ ಗುಲ್ಲು- ನಿದ್ದೆಗೇಡಿನ ಪರಿಸ್ಥಿತಿ ಉಂಟಾಗಿದೆ. ಈ ಕಾರಣಕ್ಕಾಗಿ ಯಕ್ಷಗಾನದ ನಾದ ಸೌಂದರ್ಯವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂದಿನ ದಿನಗಳಲ್ಲಿ ಹಿಮ್ಮೇಳದವರು ಯೋಚಿಸಿ ಮುಂದುವರಿಯುವ ಅಗತ್ಯ ಅತೀ ಅಗತ್ಯವಿದೆ.(ಸಶೇಷ).
✍ ಸುರೇಂದ್ರ ಪಣಿಯೂರು
Tags:
ಲೇಖನ