ಹೊನ್ನಾವರ: ಯಕ್ಷಗಾನ ರಂಗದ ಸಮರ್ಥ ಕಲಾವಿದ, ಸವ್ಯಸಾಚಿ ಕೃಷ್ಣ ಭಂಡಾರಿ ಗುಣವಂತೆ (61) ಅವರು ಸೆ.4ರ ಶನಿವಾರ ರಾತ್ರಿ ನಿಧನರಾದರು. ಅವರು ಮಿದುಳಿನ ಸಮಸ್ಯೆಯಿಂದ ಬಳಲುತ್ತಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೃಷ್ಣ ಭಂಡಾರಿ ಗುಣವಂತೆ ಹೆಸರು ಕೇಳದ ಯಕ್ಷಪ್ರಿಯರಿಲ್ಲ. ಹಲವರಿಗೆ ಗುರುವಾಗಿರುವ ಅವರು ಸರಳ, ಸಹಜ ಜೀವನ ನಡೆಸಿದವರು. ಯಕ್ಷಗಾನ ಪ್ರಿಯರು ಇವರ ಭಾಗವತಿಕೆಗೆ ತಲೆದೂಗಿದ್ದಾರೆ, ಇವರ ರಂಗ ಸಾಮರ್ಥ್ಯಕ್ಕೆ ಶಹಬ್ಬಾಸ್ ಹೇಳಿದ್ದಾರೆ. ಚೆಂಡೆ, ಮದ್ದಳೆಯನ್ನೂ ನುಡಿಸಬಲ್ಲ ಕೃಷ್ಣ ಭಂಡಾರಿ ಮರವಂತೆ ಅವರು ವೇಷವನ್ನೂ ಮಾಡಬಲ್ಲವರಾಗಿದ್ದು ಸವ್ಯಸಾಚಿ ಎಂದೇ ಹೆಸರಾದವರು.
Yakshagana.in Updates ಗಾಗಿ: ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಕೃಷ್ಣ ಭಂಡಾರಿಯವರನ್ನು ಸದಾ ಗೌರವಾದರದಿಂದ ಕಾಣುತ್ತಿದ್ದರು.
ಉಡುಪಿಯ ಕಾರಂತರ ಕಲಾ ಕೇಂದ್ರದಲ್ಲಿ ಪಳಗಿದ್ದು, ಕೆರೆಮನೆಯ ಮಹಾಬಲ ಹೆಗಡೆಯವರಲ್ಲಿ ರಾಗದ ಬಗ್ಗೆ ಹೆಚ್ಜಿನ ಅಧ್ಯಯನ ಮಾಡಿದವರು. ಕೆರಮನೆ ಶಂಭು ಹೆಗಡೆಯವರ ತಂಡದಲ್ಲಿ ಇವರು ಫ್ರಾನ್ಸ್, ಜರ್ಮನಿ, ಸ್ಪೇನ್ ದೇಶಗಳಲ್ಲಿ ತಮ್ಮ ಭಾಗವತಿಕೆಯ ಕಂಪು ಬೀರಿದ್ದಾರೆ. ಇಡಗುಂಜಿ, ಪೆರ್ಡೂರು, ಸಾಲಿಗ್ರಾಮ ಮೇಳಗಳಲ್ಲಿ ತಿರುಗಾಟ ಮಾಡಿರುವ ಭಂಡಾರಿಯವರು, 2012-13ನೇ ಸಾಲಿನ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.
ಜಿಲ್ಲೆಯಾದ್ಯಂತ ಸಾವಿರಾರು ಮಕ್ಕಳಿಗೆ ಯಕ್ಷಗಾನದ ಗೆಜ್ಜೆ ಕಟ್ಟಿ, ಹೆಜ್ಜೆ ಇಡಲು ಕಾರಣಕರ್ತರಾದ ಕೃಷ್ಣ ಭಂಡಾರಿಯವರು ಸಾಲಿಗ್ರಾಮ ಮೇಳದ ತಿರುಗಾಟದ ಅವಧಿಯಲ್ಲಿ ಶಿಸ್ತಿನ ಸಿಪಾಯಿಯಾಗಿ ಕ್ಲಪ್ತ ಸಮಯಕ್ಕಿಂತ ಮೊದಲೇ ಹಾಜರಾಗುವವರು. ಆದರೆ, ಕಳೆದ ವರ್ಷ ಕೃಷ್ಣ ಭಂಡಾರಿ ಅವರು ಧಾರವಾಡದಲ್ಲಿ ಯಕ್ಷಗಾನ ಮುಗಿಸಿ ತಮ್ಮ ತಂಡದ ಮಕ್ಕಳೊಂದಿಗೆ ಮರಳುತ್ತಿರುವಾಗ ರಸ್ತೆ ಅಪಘಾತವಾಗಿತ್ತು. ಇದು ಅವರಿಗೆ ದೊಡ್ಡ ಆಘಾತವನ್ನೂ ನೀಡಿತ್ತು.
Tags:
ಸುದ್ದಿ