ಮುಂಬಯಿ: ಬಿಲ್ಲವರ ಅಸೋಸಿಯೇಶನ್, ಮುಂಬಯಿ ಇದರ ಮಾಜಿ ಅಧ್ಯಕ್ಷ, ಭಾರತ್ ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣರ ತಾಯಿಯ ಸ್ಮರಣಾರ್ಥವಾಗಿ ಸ್ಥಾಪಿಸಲಾಗಿದ್ದ ನಿಧಿಯ ಅಡಿಯಲ್ಲಿ ನೀಡಲಾಗುವ ಗುರುನಾರಾಯಣ ಯಕ್ಷ ಕಲಾ ಪ್ರಶಸ್ತಿಗೆ ಹಿರಿಯ ವಾಗ್ಮಿ, ತಾಳಮದ್ದಳೆ ಕಲಾವಿದ ಜಬ್ಬಾರ್ ಸಮೊ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಪ್ರಶಸ್ತಿಯು 25,000 ರೂ. ನಗದು, ಸ್ಮರಣಿಕೆ, ಸನ್ಮಾನ ಪತ್ರಗಳನ್ನು ಒಳಗೊಂಡಿದೆ. ಮುಂಬಯಿ ಬಿಲ್ಲವರ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಜೆ.ಅಮೀನ್ ಅಧ್ಯಕ್ಷತೆಯಲ್ಲಿ ಬಿಲ್ಲವ ಭವನದಲ್ಲಿ ಜರುಗಿದ ಸಭೆಯಲ್ಲಿ ಜಬ್ಬಾರ್ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.
ಸುಳ್ಯದ ಸಂಪಾಜೆಯವರಾದ ಜಬ್ಬಾರ್ ಸಮೊ, ತಮ್ಮ ಅಸ್ಖಲಿತ ವಾಕ್ ಪ್ರತಿಭೆಯಿಂದ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಬೀರಿದವರು. ಕಳೆದ 35 ವರ್ಷಗಳಿಂದ ಯಕ್ಷಗಾನ ಅರ್ಥಧಾರಿಯಾಗಿ, ವೇಷಧಾರಿಯಾಗಿ ತೊಡಗಿಸಿಕೊಂಡಿರುವ ಜಬ್ಬಾರ್ ಅವರು ರಾಜ್ಯ ಸರ್ಕಾರದ ರೇಷ್ಮೆ ಇಲಾಖೆಯಲ್ಲಿ ಉದ್ಯೋಗಿಯಾಗಿ, ಸ್ವಯಂ ನಿವೃತ್ತಿ ಪಡೆದವರು.
ಕರ್ನಾಟಕದ ಯಕ್ಷಗಾನ ಕಲಾ ಕ್ಷೇತ್ರದಲ್ಲಿ ಬಹುಬೇಡಿಕೆಯ ಕಲಾವಿದರಾಗಿರುವ ಅವರು ತಮ್ಮ ವಾಕ್ಚಾತುರ್ಯದಿಂದ ವಾಲಿ, ಸುಗ್ರೀವ, ಅಂಗದ, ರಾವಣ, ಇಂದ್ರಜಿತು, ಅರ್ಜುನ, ಕರ್ಣ, ಭೀಮ, ಕೌರವ, ಭೀಷ್ಮ ಮುಂತಾದ ಪಾತ್ರಗಳಿಗೆ ಜೀವ ತುಂಬಿದವರು.
ಜಬ್ಬಾರ್ ಅವರಿಗೆ ಇತ್ತೀಚೆಗಷ್ಟೇ ಸುಳ್ಯದ ವನಜ ರಂಗಮನೆ ಪ್ರಶಸ್ತಿಯೂ ಒಲಿದಿತ್ತು. ಮಂಗಳೂರಿನ ಸಂದೇಶ ಪ್ರತಿಷ್ಠಾನ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳಲ್ಲದೆ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಅವರ ಪಾಲಿಗೆ ಬಂದಿದೆ. ಅವರು ಯಕ್ಷಗಾನ ಅಕಾಡೆಮಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ತಮಗೆ ಒಲಿದ ಪ್ರಶಸ್ತಿಯ ಕುರಿತು ಜಬ್ಬಾರ್ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹೀಗೆ ಸಂತಸ ಹಂಚಿಕೊಂಡಿದ್ದಾರೆ:
ಹುಟ್ಟಿ , ಬುದ್ಧಿ ಬಲಿತು, ಅರುವತ್ತರ ಅಂಚಿನವರೆಗೂ ಅಸಂಖ್ಯ ವೈವಿಧ್ಯಮಯ ಸಂಬಂಧಗಳಿಗೆ ನನ್ನನ್ನು ಒಪ್ಪಿಸಿಕೊಂಡು ಲೀಲಾಜಾಲವಾಗಿ ಬದುಕಿದೆ. ವಿವಿಧ ಮಜಲುಗಳಲ್ಲಿ ಮನುಜ ಮನಸ್ಸುಗಳ ವೈಚಿತ್ರ್ಯ, ವೈಶಿಷ್ಟ್ಯಗಳನ್ನು ಕಂಡು, ಉಂಡು, ಅನೇಕ ಸ್ಥಿತ್ಯಂತರಗಳನ್ನು ಹಾದು ಬಾಳ ದಾರಿಯಲ್ಲಿ ಸಲೀಸಾಗಿ ಸಾಗಿ ಬಂದೆ. ಸಿಹಿ ಮರೆಸುವ ಕಹಿ ಗುಳಿಗೆಗಳೂ, ಇವುಗಳ ಮರು ಮಗ್ಗುಲಲ್ಲೆ ಕಹಿ ಒರೆಸುವ ಸಿಹಿ ಹೂರಣಗಳೂ ಒಟ್ಟೊಟ್ಟಿಗೇ ಸಿಕ್ಕಿದವು. ಸೋಸಿ ತೆಗೆದು ಬೇಕಾದುದನ್ನು ಉಳಿಸಿ, ಅನವಶ್ಯವೆನಿಸಿದುದನ್ನು ಅಳಿಸಿ, ತೃಪ್ತಿ ಸಮಾಧಾನಗಳನ್ನು ಉಳಿಸಿಕೊಳ್ಳುವ ಕೌಶಲವೊಂದು, ಬಸವಳಿದ ಜೀವರುಗಳ ಪಾಲಿನ ಅಸಾಧಾರಣ ಮಾರ್ಗದರ್ಶಕರೆಂದು ಗುರುತಿಸಲ್ಪಟ್ಟ ಡಾ.ಮೀನಗುಂಡಿ ಸುಬ್ರಹ್ಮಣ್ಯಂ ಎಂಬ ಮಹಾನುಭಾವರ ಸಖ್ಯದಿಂದ ಸಿದ್ಧಿಸಿದುದರಿಂದ ಜೀವನ ಯಾನದಲ್ಲಿ ಮುಖಾಮುಖಿಯಾದ ಮರಳ ದಿನ್ನೆಗಳನ್ನು ಉಲ್ಲಾಸಗುಂದದೇ ಏರಿಳಿದೆ.
ಹೀಗಿರುವ ಬಾಳ ಪಯಣದಲ್ಲಿ ಒತ್ತಡ, ತೋರಿಕೆ, ಲಾಭಾಪೇಕ್ಷೆ, ಕೀರ್ತಿಗಳೆಂಬ ಕ್ಲೀಷೆಗಳ ಗೊಡವೆಯಿಲ್ಲದೇ ಒಪ್ಪಿ, ಅಳವಡಿಸಿ, ಸ್ಪಷ್ಟ ಗ್ರಹಿಕೆಯೊಂದಿಗೆ ರೂಢಿಸಿಕೊಂಡು ಬಂದ "ಸರ್ವ ಸಮತೆಯ ತತ್ವ"ವೆಂಬುದು ನನ್ನನ್ನೆಂದಿಗೂ ಬೀಳಗೊಡದೆ, ಜಾಳಾಗಿ ಹರಡಿ ಹೋಗದಂತೆ ಒಂದು ಸ್ಥಿರ ಕಕ್ಷೆಯಲ್ಲಿ ಸ್ಥಾಪಿಸಿತು. ಇಲ್ಲೇ ಸ್ಥಾವರವಾಗದೆ ಜಂಗಮನಾಗಿ ಊರೂರುಗಳನ್ನು ಅಲೆದು, ಎಣಿಕೆಗೆ ಸಿಕ್ಕದಷ್ಟು ಮನೆಗಳ ಪಡಸಾಲೆಗಳಲ್ಲಿ ಹರಹಿಟ್ಟ ಎಲೆಗಳಲ್ಲಿ ಬಡಿಸಲ್ಪಟ್ಟ ಪ್ರೀತಿ ಮಿಷ್ಟಾನ್ನವನ್ನು ಉಂಡು, ಜಾತಿ-ಮತ-ಪಂಗಡಗಳೆಂಬ ಗೆರೆಗಳೀಚೆ ಮಾನವ ಸಂಬಂಧವಷ್ಟೇ ಚಿರವೆಂದೊಪ್ಪಿದವರ ಹಸಿರು ಭಾವದುದ್ಯಾನಗಳಲ್ಲಿ ಯಥೇಚ್ಛ ವಿಹರಿಸಿ, ನನ್ನ ಶರೀರವೊಪ್ಪಿದ ಮುಷ್ಟಿ ಗಾತ್ರದ ಹೃದಯದೊಳಕ್ಕೆ ಬ್ರಹ್ಮಾಂಡ ಮೈತ್ರಿಯ ಅಮೃತ ಧಾರೆ ಹರಿಯಿಸಿಕೊಂಡು ಸುಖಿಸಿದೆ.
ಅನಿರೀಕ್ಷಿತ ಕಠಿನ ಪರೀಕ್ಷೆಗಳಿಗೆ ಮುಖವೊಡ್ಡಲು ನನ್ನನ್ನು ಸಜ್ಜುಗೊಳಿಸಿದ, ಜೀವನ್ಮುಖೀ ಪಠ್ಯ ಭಾಗಗಳಷ್ಟೇ ಮುಖ್ಯವಾಗಿರುವ ಬಾಳೆಂಬ ವಿದ್ಯಾಲಯದ ವಿವಿಧ ಹಂತಗಳ ಬೋಧನೆಗಳು ನನ್ನನ್ನು ತಿದ್ದಿ, ತೀಡಿ, ಹದಗೊಳಿಸಿದುದನ್ನು ಎಂತು ಮರೆಯಲಾದೀತು? ಇಂತಿರುವ ಈ ನನ್ನ ಬದುಕಿನಲ್ಲಿ ಆಪ್ತ, ಅನುಭವೀ, ಆತ್ಮ ಸಖನಾಗಿ 'ಅದು ಅಲ್ಲದಿರುವ ಅದರಾಚೆ'ಗಿನ ಅನುಭವವನ್ನು ಅರೆದು ಕುಡಿಸಿದ ಜೀವ ಸಾಂತ್ವನದ ಧನ್ವಂತರಿಯಂತಹ 'ಯಕ್ಷಗಾನ'ವು 'ನಾನು ಒಂದು/ಒಬ್ಬನೇ ಅಲ್ಲ; ಹಲವು ದಿವ್ಯಾನುಭೂತಿಗಳ ಒಕ್ಕಟ್ಟು ಸೂತ್ರದಿಂದ ನೇಯ್ಗೆಯಾಗಿ ನಿರೂಪಿತವಾದ ಲೌಕಿಕ ಜೀವಿಯು' ಎಂಬುದನ್ನು ತಿಳಿಸಿಕೊಟ್ಟಿತು. ಇದೀಗ ಈ ಅದ್ಭುತ ಕಲೆಯು ನನ್ನನ್ನು ಎಳೆತಂದು ಒಂದು ಪ್ರತಿಷ್ಠಿತ ಪ್ರಶಸ್ತಿಯೆದುರು ನಿಲ್ಲಿಸಿಬಿಟ್ಟಿದೆ.
Yakshagana.in Updates ಗಾಗಿ: ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಜಾತಿ ನಿಷ್ಠ ಚಿಂತನೆ ಹಾಗೂ ಈ ಕಾರಣದಿಂದ ನಮಗೆ ನಾವೇ ವಿಧಿಸಿಕೊಳ್ಳುವ ನಿರ್ಬಂಧಗಳನ್ನು ಮೀರಿ ನಿಲ್ಲಲು ವೈಯಕ್ತಿಕ ಬದುಕು ಹಾಗೂ ಬೋಧನೆಗಳ ಮೂಲಕ ತಿಳಿಸಿಕೊಟ್ಟ ವಿರಳಾತಿ ವಿರಳ 'ಸರಳ ಗುರು'ಗಳೆಂದೇ ಪ್ರಸಿದ್ಧರಾದ ಶ್ರೀ ನಾರಾಯಣ ಗುರುಗಳೆಂಬ ಮಹಾನುಭಾವರ ಬಗ್ಗೆ ಬರೆಯಲ್ಪಟ್ಟ ಕೃತಿಗಳನ್ನು, ಇವರ ಜೀವನ ಗಾಥೆಯನ್ನಾಧರಿಸಿ ಕವಿಗಳಾದ ಶ್ರೀ ಕೊಲೆಕಾಡಿ ಗಣೇಶರು ರಚಿಸಿದ ಯಕ್ಷಗಾನಕ್ಕಾಗಿ ನಾನು ಅಲೆದು, ಅರಸಿ ಓದಲೇಬೇಕಾಯಿತು.
'ಮಾನವ ಸಂಬಂಧಗಳ ಆತ್ಯಂತಿಕ ಉದ್ದೇಶ ಪಂಕ್ತಿ-ಪಂಥ ತರತಮಗಳಿಲ್ಲದ ವಿಕಾಸ ಸಾಧನೆಯೇ ಆಗಿದೆ. ಜ್ಞಾನ ಜ್ಯೋತಿಯೆಂಬುದು ಆಸಕ್ತ, ಕಠಿಣ ಪರಿಶ್ರಮಕ್ಕೆ ನೀಡಲ್ಪಡುವ ಪಾರಿತೋಷಕವೇ ಹೊರತು, ಅವರವರ ಅನುಕೂಲಕ್ಕೆ ತಕ್ಕಂತೆ ಅಡಗಿಸಿ ನೀಡಲ್ಪಡುವ ಪದಾರ್ಥವಲ್ಲ. ಸರ್ವ ಸಮತೆಯ ಪರಿಕಲ್ಪನೆ ಮರೆತ ಸಮಾಜವು ದುರ್ಬಲವೂ, ರೋಗಗ್ರಸ್ತವೂ ಆಗಿಬಿಡುವುದು' ಎಂಬ ಖಚಿತ ನಿಲುಮೆಯ ಶ್ರೀ ನಾರಾಯಣ ಗುರುಗಳ ವೈಚಾರಿಕ ದೃಷ್ಟಿಕೋನದ ಪ್ರಖರತೆಯ ಇದಿರು ನಮ್ಮೊಳಗಣ ಅಹಮಿಕೆಯ ಮುಳ್ಳುಗಳಷ್ಟೂ ಭಸ್ಮಗೊಳ್ಳಬೇಕು ಮತ್ತು ನಾನಾ ಕಾರಣಗಳಿಂದ ಲಯವಾಗಿ ಹೋಗಿರುವ ನಮ್ಮೊಳಗಣ ಜೀವ ಪ್ರೀತಿಯ ಮೊಗ್ಗು ಬಿರಿದು ಪ್ರೀತಿ ಸುಗಂಧ ಸೂಸುವ ಹೂವಾಗಬೇಕು.
ಇಂತಹ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಮುಂಬೈಯ ನನ್ನ ಕಲಾ ಬಂಧುಗಳು ನನಗೆ ಪ್ರಶಸ್ತಿ ನೀಡಲು ತೀರ್ಮಾನಿಸಿದ್ದಾರೆ. 'ಗುರು'ಗಳ ಲೋಕ ಪ್ರೀತಿಯ ಕಾಣ್ಕೆ ಅನುಗಾಲ ನನ್ನನ್ನು ಹಾದಿ ತಪ್ಪದಂತೆ, ಬುದ್ಧಿಗೆಡದಂತೆ, ಸಿದ್ಧಿ ಕೈತಪ್ಪದಂತೆ ಕಾಯುತ್ತಿರಲಿ ಎಂಬೊಂದು ಪ್ರಾಂಜಲ ಆಶಯದೊಂದಿಗೆ, ಪ್ರಶಸ್ತಿಯನ್ನು ವಿನಮ್ರತೆಯೊಂದಿಗೆ ಸ್ವೀಕರಿಸುವೆ.
-ಜಬ್ಬಾರ್ ಸಮೊ ಸಂಪಾಜೆ (ಫೇಸ್-ಬುಕ್ ಪೋಸ್ಟ್)
Tags:
ಸುದ್ದಿ