ಅ. 24ರಿಂದ 30: ವಿಟ್ಲದಲ್ಲಿ ಸಿರಿಬಾಗಿಲು ಪ್ರತಿಷ್ಠಾನದಿಂದ ತಾಳಮದ್ದಳೆ ಸಪ್ತಾಹ



ಕಾಸರಗೋಡು:
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಇವರ ಸಂಯೋಜನೆಯಲ್ಲಿ ವಿಟ್ಲ ಭಗವತಿ ದೇವಸ್ಥಾನದಲ್ಲಿ ಅಕ್ಟೋಬರ್ 24 ರಿಂದ 30 ರವರೆಗೆ ಯಕ್ಷಗಾನ ತಾಳಮದ್ದಳೆ ಸಪ್ತಾಹ ಜರುಗಲಿದೆ.

ವಿಟ್ಲ ಶ್ರೀ ಭಗವತಿ ದೇವಸ್ಥಾನದ ಆಶ್ರಯದಲ್ಲಿ ನಡೆಯುವ ಸಪ್ತಾಹಕ್ಕೆ ಬಹುಶ್ರುತ ವಿದ್ವಾಂಸ ಕೀರ್ತಿಶೇಷ ದೇರಾಜೆ ಸೀತಾರಾಮಯ್ಯ ಸಂಸ್ಮರಣಾ ಸಮಿತಿ ಮಂಗಳೂರು ಸಹಕಾರ ಹಾಗೂ ಸಹಯೋಗ ನೀಡಲಿದೆ. ಕಲಾ ಪೋಷಕರ ಸಹಕಾರದೊಂದಿಗೆ ನಡೆಯುವ ಸಪ್ತಾಹ ಕೋವಿಡ್ ಲಾಕ್‌ಡೌನ್ ಬಳಿಕ ಯಕ್ಷಗಾನ ಪುನಃಶ್ಚೇತನಕ್ಕೆ ನಾಂದಿಯಾಗಲಿದೆ.
ಕೋವಿಡ್ ಮೊದಲನೇ ಅಲೆ ಸಮಯದಲ್ಲಿ ಕೊರೊನಾ ಜಾಗೃತಿ ಯಕ್ಷಗಾನ ಮೂಲಕ ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕರ ಮೆಚ್ಚುಗೆಗೆ ಪಾತ್ರವಾದ ಸಿರಿಬಾಗಿಲು ಪ್ರತಿಷ್ಠಾನವು ತಾಳಮದ್ದಳೆ ಸಪ್ತಾಹದಲ್ಲಿ ಪ್ರಸಿದ್ಧ ಕಲಾವಿದರ ಜತೆ ಉದಯೋನ್ಮುಖ ಕಲಾವಿದರ ಭಾಗವಹಿಸುವಿಕೆ ಮೂಲಕ ಕೆಲವು ವಿಭಿನ್ನ ಪ್ರಸಂಗಗಳ ಉತ್ತಮ ಸಂಯೋಜನೆಯಲ್ಲಿ ಕಲಾಭಿಮಾನಿಗಳ ಮನಸೂರೆಗೊಳ್ಳಲಿದೆ.

ಸಪ್ತಾಹವನ್ನು ಪರಮ ಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಸಂಸ್ಥಾನಂ ಎಡನೀರು ಮಠ, ಕಾಸರಗೋಡು - ಇವರು ಉದ್ಘಾಟಿಸಿ ಆಶೀರ್ವಚಿಸಲಿದ್ದಾರೆ. ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ದತ್ತ ಸಂಸ್ಥಾನಂ ಒಡಿಯೂರು ಇವರು ಆಶೀರ್ವಚನ ನೀಡಲಿದ್ದಾರೆ. ಪ್ರತೀದಿನ ಕೀರ್ತಿಶೇಷ ಕಲಾವಿದರ ಸಂಸ್ಮರಣೆಯೊಂದಿಗೆ ತಾಳಮದ್ದಳೆ ಜರುಗಲಿದೆ.

ಸಿರಿಬಾಗಿಲು ಪ್ರತಿಷ್ಠಾನವು ಈಗಾಗಲೇ ಹತ್ತು ಹಲವು ಕಲಾ ಸಂಬಂಧಿ ಚಟುವಟಿಕೆಯಿಂದ ಮನೆ ಮಾತಾಗಿದೆ. ಪ್ರತಿಷ್ಠಾನದ ಮುಂದಿನ ಕಾರ್ಯಚಟುವಟಿಕೆಗಳಿಗೆ ಪೂರಕವಾಗಿ ಸಿರಿಬಾಗಿಲಿನಲ್ಲಿ ಸುಮಾರು 2 ಕೋಟಿ ವೆಚ್ಚದಲ್ಲಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ತಲೆಯೆತ್ತಲಿದ್ದು ಕಾಮಗಾರಿ ಪ್ರಗತಿಯಲ್ಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು