![]() |
ಪ್ರಾತಿನಿಧಿಕ ಚಿತ್ರ: ರಂಗಸ್ಥಳ (ಚಿತ್ರ: ಮಂಜುನಾಥ ಬಾಯಿರಿ). |
ಆರು ದಶಕಗಳ ತಿರುಗಾಟದ ಅನುಭವ ಹೊಂದಿರುವ ಯಕ್ಷಗಾನದ ಹಿರಿಯ ಹಿಮ್ಮೇಳ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯರು, ತಮ್ಮ ನೆನಪುಗಳ ಮೂಸೆಯಿಂದ ಮೆಲುಕು ಹಾಕಿದ ರಂಗ ಪ್ರಸಂಗವಿದು.
ಕೀರ್ತಿಶೇಷ ಎಂಪೆಕಟ್ಟೆ ರಾಮಯ್ಯ ರೈ ಅವರು ಯಕ್ಷಗಾನ ರಂಗವನ್ನು ಬೆಳಗಿದ ಬಗೆಯೇ ಅನನ್ಯ. ಅವರ ವಾಕ್ಪಟುತ್ವಕ್ಕೆ ಸ್ವಲ್ಪ ತುಂಟತನವೂ ಸೇರಿದರೆ ಅಲ್ಲೊಂದು ನಗುವಿನ ಲೋಕವೇ ಸೃಷ್ಟಿಯಾಗುತ್ತಿತ್ತು. ಜೊತೆಗೆ ಮತ್ತೊಬ್ಬ ಉದ್ಧಾಮ ಕಲಾವಿದರಾದ ಕೀರ್ತಿಶೇಷ ಶೇಣಿ ಗೋಪಾಲಕೃಷ್ಣ ಭಟ್ಟರದೂ ತುಂಟತನದ ಕೆಲವು ಅರ್ಥಗಳು ಎಂದೆಂದಿಗೂ ಸ್ಮರಣೀಯವೇ. ಅವರಿಬ್ಬರೂ ರಂಗದಲ್ಲಿ ಮುಖಾಮುಖಿಯಾಗುವಾಗಲಂತೂ ಸಾಕಷ್ಟು ರಸಮಯ ಸನ್ನಿವೇಶಗಳೇ ಸೃಷ್ಟಿಯಾಗುತ್ತಿದ್ದವು.
ಶೇಣಿಯವರಿಗೆ ಒಂದೊಂದ್ಸಲ ರೋಸಿಹೋಗುವುದುಂಟು. ಆದರೂ ಬಿಡದ ರಾಮಯ್ಯ ರೈಗಳು, ಕೊನೆಗೆ ಅವರನ್ನೇ ನಗಿಸಿ, ಏನೂ ಆಗಿಲ್ಲವೆಂಬಂತೆ ಹೊರಟುಹೋಗುತ್ತಿದ್ದರು. ಅಂಥದ್ದೊಂದು ಪ್ರಸಂಗ ಇಲ್ಲಿದೆ.
Yakshagana.in Updates ಗಾಗಿ: ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | . ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ಹೀಗೆಯೇ ಮಳೆಗಾಲದ್ದೊಂದು ಆಟ. ಧರ್ಮಸ್ಥಳ ಮೇಳ ಮತ್ತು ಇತರ ಮೇಳಗಳ ಕಲಾವಿದರ ಕೂಡುವಿಕೆಯಲ್ಲಿ ನಡೆದ ಯಕ್ಷಗಾನವದು. ಅಹಲ್ಯಾ ಶಾಪ ಪ್ರಸಂಗ. ಸುಮಾರು ದಶಕಗಳ ಹಿಂದಿನ ಕಥೆಯಾದುದರಿಂದ ಎಲ್ಲೀಂತ ಈಗ ನೆನಪಿಗೆ ಬರುತ್ತಿಲ್ಲ.
ಇದರಲ್ಲಿ ಶೇಣಿ ಗೋಪಾಲಕೃಷ್ಣ ಭಟ್ಟರು ಗೌತಮ ಮಹರ್ಷಿಯಾಗಿಯೂ, ಎಂಪೆಕಟ್ಟೆ ರಾಮಯ್ಯ ರೈಗಳು ದೇವೇಂದ್ರನಾಗಿಯೂ ಪಾತ್ರ ನಿರ್ವಹಿಸಿದ್ದರು.
ಗೌತಮ ಋಷಿಯು ಅಹಲ್ಯೆಯನ್ನು ಬಯಸಿಬಂದ ದೇವೇಂದ್ರನಿಗೆ ಶಾಪ ಕೊಡುವ ಸನ್ನಿವೇಶವದು. ಏರು ಪದ್ಯವೆಲ್ಲ ಆದ ಮೇಲೆ ಶೇಣಿಯವರು ಶಾಪ ಕೊಟ್ಟೇ ಬಿಟ್ಟರು. ಎಲಾ ದೇವೇಂದ್ರನೇ, ನೀನು ಏನನ್ನು ಇಲ್ಲಿ ಬಯಸಿ ಬಂದಿದ್ದೀಯೋ, ನಿನ್ನ ಮೈಯೆಲ್ಲಾ ಅದುವೇ ಗೋಚರಿಸುತ್ತಿರಲಿ!
ಶಾಪಗ್ರಸ್ಥನಾದ ದೇವೇಂದ್ರನು ಮರುಗುತ್ತಾ ರಂಗದಿಂದ ನಿರ್ಗಮಿಸುತ್ತಾನೆ. ಮದ್ದಳೆಗಾರರ ಸಮೀಪದ ಕಂಬದವರೆಗೆ ತೆರಳಿ, ಫಕ್ಕನೇ ಏನೋ ನೆನಪಾದವರಂತೆ ರಾಮಯ್ಯ ರೈಗಳು (ದೇವೇಂದ್ರ) ಮರಳಿ ಗೌತಮರ ಬಳಿ ಸಾರಿ, "ಮಹರ್ಷಿಗಳೇ, ಏನು ಶಾಪ ಕೊಟ್ಟಿರಿ ನೀವು?" ಎಂದು ಅರ್ಥವಾಗದಂತೆ ಕೇಳಿಯೇಬಿಟ್ಟರು.
ಶೇಣಿಯವರು ಪುನರುಚ್ಚರಿಸಿದರು. 'ನೀನು ಯಾವುದನ್ನು ಬಯಸಿ ಇಲ್ಲಿಗೆ ಬಂದಿದ್ದೆಯೋ, ಮೈಯೆಲ್ಲಾ ಅದುವೇ ಗೋಚರಿಸಲಿ ನಿನಗೆ'. ಶೇಣಿಯವರು ರೌದ್ರ ರಸದಿಂದ ಇನ್ನೂ ಹೊರಗೆ ಬಂದಿರಲಿಲ್ಲ, ಗಂಭೀರವಾಗಿಯೇ ಹೇಳಿದರು.
ಆದರೆ ರಾಮಯ್ಯ ರೈಗಳು ಬಿಡಬೇಕಲ್ಲ.
"ಓಹ್, ನಿಮಗೆ ಕೂಡ ಅದು ಕಾಣಿಸುತ್ತಿದೆಯಲ್ಲವೇ?"
ಇಷ್ಟೇ ಹೇಳಿ, ರಂಗದಿಂದ ನಿರ್ಗಮಿಸಿಯೇಬಿಟ್ಟರು.
ಇತ್ತ ಶೇಣಿಯವರಿಗೆ ನಗು ತಡೆಯಲಾಗಲಿಲ್ಲ. ಉಫ್ ಎನ್ನುತ್ತಾ, ಪಾತ್ರ ಮುಗಿಸಿ ಅವರೂ ನಿರ್ಗಮಿಸಿದರು!
✍ ಹರಿನಾರಾಯಣ ಬೈಪಾಡಿತ್ತಾಯ
Tags:
ಯಕ್ಷ ಮೆಲುಕು