ಹನುಮಗಿರಿ ಸೇವೆಯಾಟದಲ್ಲಿ ವೀರ ಸೇನಾನಿ ಬಿಪಿನ್ ರಾವತ್‌ಗೆ ಭಾವುಕ ಶ್ರದ್ಧಾಂಜಲಿ

ಪದ್ಯಾಣ ಗಣಪತಿ ಭಟ್ ಅವರಿಗೆ ಪುಷ್ಪಾಂಜಲಿ, ದಿ.ಬಿಪಿನ್ ರಾವತ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈಶ್ವರಮಂಗಲ (ಪುತ್ತೂರು): ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಚಾಣಾಕ್ಷ, ಭಾರತೀಯ ಸೇನೆಯ ಸ್ಪೂರ್ತಿಯ ಸೆಲೆಯಾಗಿದ್ದು, ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಅವರ ಅಕಾಲಿಕ, ಆಕಸ್ಮಿಕ ನಿಧನಕ್ಕೆ ಹನುಮಗಿರಿ ಮೇಳವು ನಮ್ರತೆಯ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ, ದೇಶ ಭಕ್ತಿ ಮೆರೆದಿದೆ.

ಡಿ.10ರಂದು ಶುಕ್ರವಾರ ಪುತ್ತೂರು ಈಶ್ವರಮಂಗಲ ಸಮೀಪದ ಹನುಮಗಿರಿಯಲ್ಲಿ ನಡೆದ ಕ್ಷೇತ್ರದ ಮೇಳದ ಸೇವೆಯಾಟದ ನಡುವೆ ಆಟ ನಿಲ್ಲಿಸಿ ಮೌನ ಪ್ರಾರ್ಥನೆಯೊಂದಿಗೆ, ಮಡಿದ ವೀರ ಸೇನಾನಿಗೆ ಶ್ರದ್ಧಾಂಜಲಿ ಸೂಚಿಸಲಾಯಿತು.
ಮೇಳದ ಸರ್ವ ಕಲಾವಿದರು ಮತ್ತು ಸಿಬ್ಬಂದಿ ಸಹಿತ ಪ್ರೇಕ್ಷಕರೆಲ್ಲರೂ ಒಟ್ಟಾಗಿ ಸೇನಾ ಮುಖ್ಯಸ್ಥರ ವಿಯೋಗಕ್ಕೆ ಗೌರವದ ನಮನ ಸಲ್ಲಿಸಿದ್ದು ರಾಷ್ಟ್ರಭಕ್ತಿ, ನಿಷ್ಠೆಯ ಸಂದೇಶ ಸಾರಿತಲ್ಲದೆ, ಮಾದರಿ ನಡೆಯಾಗಿ ಪರಿಗಣಿಸಲ್ಪಟ್ಟಿತು.

ಶ್ರೀಮದೆಡನೀರು ಮಠಾಧೀಶ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಗೌರವಾನ್ವಿತರಾದ ಯಕ್ಷಕಲಾ ಪೋಷಕ ಡಾ| ಟಿ ಶ್ಯಾಂ ಭಟ್ ಐಎಎಸ್,  ನನ್ಯ ಅಚ್ಯುತ ಮೂಡಿತ್ತಾಯ, ಹಿರಣ್ಯ ವೆಂಕಟೇಶ್ವರ ಭಟ್ ಸಹಿತ ಹಲವು ಗಣ್ಯರು, ನೂರಾರು ಪ್ರೇಕ್ಷಕರು ಬಯಲಾಟದಂಗಳದ ಶ್ರದ್ದಾಂಜಲಿ ನಮನದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರದ ಸೇನಾ ಮುಖ್ಯಸ್ಥರ ವಿಯೋಗಕ್ಕೆ ಯಕ್ಷಗಾನ ಬಯಲಾಟದ ಸಂದರ್ಭ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿರುವುದು ರಾಷ್ಟ್ರ ಭಕ್ತಿಯ ಪ್ರಚೋದನಾತ್ಮಕ ಗೌರವ ಸಂದೇಶ ನೀಡಿತು.

ಪದ್ಯಾಣರಿಗೆ ಪುಷ್ಪನಮನ
ಇದೇ ಸಂದರ್ಭ, ಇತ್ತೀಚೆಗೆ ನಮ್ಮನ್ನು ಅಗಲಿದ ಹಿರಿಯ ಭಾಗವತರಾದ ದಿ. ಶ್ರೀ ಪದ್ಯಾಣ ಗಣಪತಿ ಭಟ್ ಅವರಿಗೆ ಮೇಳದ ವತಿಯಿಂದ ಅಶ್ರುತರ್ಪಣ ಸಲ್ಲಿಸಲಾಯಿತು.

ಮೇಳದ ವತಿಯಿಂದ  ಶ್ರದ್ಧಾಂಜಲಿ ಹಾಗೂ ಶಿಷ್ಯ ರವಿಚಂದ್ರ ಕನ್ನಡಿಕಟ್ಟೆ ಅವರಿಂದ ಪದ್ಯ ನಮನ ಸಲ್ಲಿಸಲಾಯಿತು. ಹಿರಿಯ ಕಲಾವಿದ ವಾಸುದೇವ ರಂಗ ಭಟ್ ಅವರು ಪದ್ಯಾಣರಿಗೆ ನುಡಿನಮನ ಸಲ್ಲಿಸಿದರು. ಮೇಳದ ಸರ್ವ ಕಲಾವಿದ ಹಾಗೂ ಸಿಬ್ಬಂದಿ ವರ್ಗದವರು ಪುಷ್ಪ ನಮನ ಸಲ್ಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು