ಯಕ್ಷಗಾನದಲ್ಲಿ ದೈವಾರಾಧನೆ: ರಂಗಸ್ಥಳದಲ್ಲಿ ಯಕ್ಷಗಾನ ವೇಷಗಳೇ ಇರಲಿ!


ಯಕ್ಷಗಾನಕ್ಕೆ ದೈವಗಳನ್ನು ತಂದು ನೇಮ ಅಥವಾ ಕೋಲ ಹೆಸರಿನಲ್ಲಿಯೋ, ಅಬ್ಬರದ ಪ್ರವೇಶ ಅಂತಲೋ, ದೈವಾರಾಧನೆಗೆ ಅಪಚಾರ ಮಾಡಬಾರದು. ರಂಗಸ್ಥಳದಲ್ಲಿ ಯಾವುದೇ ದೈವ ಬರುವುದಿದ್ದರೂ ಅದು ಯಕ್ಷಗಾನ ವೇಷವಾಗಿಯೇ ಬರಲಿ. ಏನನ್ನುತ್ತೀರಿ?

ಹೌದು, ಯಕ್ಷಗಾನದಲ್ಲಿ ತುಳುನಾಡಿನ ಆರಾಧ್ಯ ದೈವಗಳನ್ನು ಕರೆತಂದು, ಕೆಲವೊಮ್ಮೆ ವಿಪರೀತ ಎಂಬಂತೆ ಅಪಹಾಸ್ಯ ಮಾಡುವ ಅದೆಷ್ಟೋ ಘಟನೆಗಳನ್ನು ನಾವು ನೋಡಿದ್ದೇವೆ. ದೈವ ಪಾತ್ರಿಯಾಗಿಯೋ, ಅಥವಾ ಸ್ವತಃ ದೈವಗಳೇ ರಂಗಸ್ಥಳಕ್ಕೆ ಬರುವುದು, ದೊಂದಿ ಹಿಡಿದು ಬೆಂಕಿಯೊಡನೆ ಸರಸವಾಡುವುದು, ದೈವಗಳ ರಂಗಸ್ಥಳ ಪ್ರವೇಶದ ನೆಪದಲ್ಲಿ ರಂಗಸ್ಥಳದ ಕಂಬ ಏರಿ, ಅಲ್ಲಿಯೂ ಬೆಂಕಿ ಉಗುಳುವುದು ಮುಂತಾದ ಸರ್ಕಸ್ ಆರಂಭವಾಗಿದೆ. ಭಂಡಾರ ಬರುವುದು, ಭೂತದ ಕೋಲ, ದೈವ ದರ್ಶನ - ಇಂಥ ದೈವೀ ಭಾವನೆಗಳನ್ನು ನಗುವಿನ ವಸ್ತುವಾಗಿ ಮಾಡಲಾಗುತ್ತಿದೆ.

ಇಂಥವುಗಳು ಕೇವಲ ಯಕ್ಷಗಾನಕ್ಕಷ್ಟೇ ಅಲ್ಲ, ದೈವಾರಾಧನೆಗೂ ಅಪಚಾರವೇ. ಈ ಕುರಿತು ಈಗಾಗಲೇ ದೈವಾರಾಧಕರು ಧ್ವನಿ ಎತ್ತಿರುವುದು ಸಮಾಜವು ಸುಶಿಕ್ಷಿತವಾಗಿದೆ ಎಂಬುದರ ಸಂಕೇತ.

ಹಿಂದೆ ಯಕ್ಷಗಾನ ಕಲಾವಿದರು ಸುಶಿಕ್ಷಿತರಾಗಿರಲಿಲ್ಲ. ಅಧ್ಯಯನ, ಮನನ, ಶ್ರವಣಗಳೇ ಅವರ ಬಂಡವಾಳವಾಗಿದ್ದವು. ಆದರೀಗ, ವಿದ್ಯಾವಂತರೂ ಯಕ್ಷಗಾನಕ್ಕೆ ಪ್ರವೇಶಿಸುತ್ತಿದ್ದಾರೆ. ರಂಗಸ್ಥಳದಲ್ಲಿ ಮೆರೆಯುತ್ತಿದ್ದಾರೆ. ಆದರೆ, ಕೆಲವೇ ಕೆಲವು ಚಪ್ಪಾಳೆಪ್ರಿಯ ಯಕ್ಷಗಾನ ಕಲಾವಿದರ ಈ ಪರಿಯ ಸರ್ಕಸ್ಸುಗಳಿಂದಾಗಿ ಯಕ್ಷಗಾನ ಮರೆಗೆ ಸರಿಯುತ್ತಿದೆ. ಯಕ್ಷಗಾನ ಬಿಟ್ಟು ಬೇರೆಲ್ಲವೂ ವಿಜೃಂಭಿಸುವಂತೆ ಮಾಡುತ್ತಾರೆ ಇವರು.
ಇದು ಸಾಲದೆಂಬಂತೆ, 80-90ರ ದಶಕದಲ್ಲಿ ತುಳು ತಿಟ್ಟು ವಿಜೃಂಭಿಸುತ್ತಿದ್ದ ಸಂದರ್ಭದಿಂದಲೇ ಅದೆಷ್ಟೋ ದೈವಗಳ ಸಾಮರ್ಥ್ಯವನ್ನು ಪ್ರಚುರಪಡಿಸುವ ಯಕ್ಷಗಾನ ಪ್ರಸಂಗಗಳೂ ಬಂದವು. ಕಾರ್ನಿಕದ ದೈವ ಎಂಬರ್ಥದಲ್ಲಿ 'ಕಾರ್ನಿಕ' ಅಥವಾ ಕಾರಣಿಕ ಎಂಬ ಪದವೊಂದು ಪ್ರಸಂಗ ಶೀರ್ಷಿಕೆಯಲ್ಲಿರುವ ಮೂಲಕ, ತುಳು ನಾಡಿನ ಜನರ ಭಾವನೆಗಳನ್ನು ವಾಣಿಜ್ಯೀಕರಣಗೊಳಿಸಲು ಆರಂಭಿಸಲಾಗಿತ್ತು. ನಂತರ ಕೆಲವೊಂದು ಕ್ಷೇತ್ರ ಮಹಾತ್ಮೆಗಳೂ ಬಂದವು. ದೈವಗಳ ನಡುವೆ ಯುದ್ಧದಲ್ಲಿ ಒಂದು ದೈವವನ್ನು ಸೋಲುವಂತೆ, ಮತ್ತೊಂದು ದೈವ ಗೆಲ್ಲುವಂತೆ ಮಾಡುವುದು - ಇವು ನಂಬಿಕೆಯ ವಿಷಯವನ್ನು ಅಪನಂಬಿಕೆಯಾಗಿಸಲಾರಂಭಿಸಿದವು.

ಆದರೆ, ದೈವಾರಾಧನೆ ಬೇರೆ, ಯಕ್ಷಾರಾಧನೆ ಬೇರೆ. ದೈವಾರಾಧನೆಯಲ್ಲಿ ಭಕ್ತಿ ಒಂದೇ ಏಕೈಕ ಗುರಿ. ಯಕ್ಷಾರಾಧನೆಯಲ್ಲಿ ಭಕ್ತಿಯೊಂದೇ ಪ್ರಧಾನವಲ್ಲ- ಇಲ್ಲಿ ಮನರಂಜನೆಯ ಅಂಶವೂ ಇದೆ. ಆದರೆ, ಭಕ್ತಿಗೆ ಚ್ಯುತಿಯಾದರೆ ಯಕ್ಷಗಾನಕ್ಕೂ ಚ್ಯುತಿಯಾದಂತೆಯೇ.

ದೈವಾರಾಧನೆಯಲ್ಲಿ ಭಾಗವಹಿಸುವವರೂ ಸುಶಿಕ್ಷಿತರಾಗಿದ್ದಾರೆ ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಸುಶಿಕ್ಷಿತರೇ ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ದೈವಗಳ ನುಡಿ, ನುಡಿಗಟ್ಟುಗಳೆಲ್ಲವೂ ಆಧುನೀಕರಣಗೊಳ್ಳುತ್ತಿವೆ. ಇದರ ಬಗ್ಗೆಯೂ ಎಚ್ಚೆತ್ತುಕೊಳ್ಳಬೇಕಿದೆ.

ಈ ಕುರಿತು ಮಂಗಳೂರಿನ ಜಯಕಿರಣ ಪತ್ರಿಕೆಯಲ್ಲಿ ಇತ್ತೀಚೆಗೊಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿದ್ದ ಈ ಅಂಶವೊಂದನ್ನು ಪರಿಗಣಿಸಲೇಬೇಕು. ದೈವಾರಾಧನೆ ಮತ್ತು ಯಕ್ಷಗಾನ - ಎರಡರ ಪಾವಿತ್ರ್ಯ ರಕ್ಷಣೆಗೆ ಚಿಂತಿಸುವಂತೆ ಮಾಡುವ ಸಾಲು ಈ ಕೆಳಗಿದೆ:

ಕೆಲವು ಮೇಳಗಳಲ್ಲಿ ಗುಳಿಗನ ಪ್ರವೇಶವನ್ನು ದೈವಾರಾಧನೆಯ ರೀತಿಯಲ್ಲಿ ತೋರಿಸಲಾಗುತ್ತದೆ. ಇದು ಖಂಡಿತವಾಗಿಯೂ ದೊಡ್ಡ ಅಪಚಾರ. ದೊಂದಿ ಹಿಡಿದು ಎಲ್ಲಾ ಕಡೆ ಸುತ್ತಾಡುವುದು, ಹಸಿ ಹಸಿ ಕೋಳಿ ತಿನ್ನು ವುದು, ಬಾರಣೆ ಮಾಡುವುದು, ಅಬತಾರ ಮಾಡುವುದು... ಯಕ್ಷಗಾನದಲ್ಲಿ ಸರಿಯಲ್ಲ. ಯಾಕೆಂದರೆ ಅಲ್ಲಿ ದೈವ ಆವೇಶ ಆಗುವುದಿಲ್ಲ ಎಂದು ಸಾಮಾನ್ಯವಾಗಿ ಭಾವಿಸಬಹುದು. ಆದರೆ ಕೋಲ ಕರೆದಲ್ಲಿ ದೈವದ ಆವೇಶ ಇದೆ ಎಂದು ಭಾವಿಸಲಾಗುತ್ತದೆ. ಇದು ಈ ಎರಡರಲ್ಲಿ ಇರುವ ಪ್ರಮುಖ ವ್ಯತ್ಯಾಸ, ಗುಳಿಗನ ವೇಷವು ಯಕ್ಷಗಾನದಂತೆ ಪ್ರವೇಶವನ್ನು ಪಡೆದರೆ ಅದು ಯಕ್ಷಗಾನೀಯವಾಗುತ್ತದೆ. ಇಲ್ಲದೇ ಇದ್ದರೆ ಅದು ಅತ್ತ ಯಕ್ಷಗಾನವೂ ಅಲ್ಲ. ಇತ್ತ ನೇಮವೂ ಅಲ್ಲ ಎಂಬಂತಾಗುತ್ತದೆ. ಜನ ಮೆಚ್ಚುತ್ತಾರೆ ಎಂದು ಹೊಸತನ್ನು ಆರಂಭಿಸಿದರೆ ಅದು ಮಿತಿ ಮೀರಿ ವಿವಾದಕ್ಕೆ ಕಾರಣವಾಗುತ್ತದೆ. ಆದುದರಿಂದ ಯಕ್ಷಗಾನವನ್ನು ಯಕ್ಷಗಾನವನ್ನಾಗಿಯೇ ತೋರಿಸುವ ಕೆಲಸವನ್ನು ಯಕ್ಷಗಾನ ಮೇಳಗಳು, ಸಂಘಟಕರು, ಪ್ರಸಂಗಕರ್ತರು ಮಾಡಬೇಕಾಗಿದೆ. ಇಲ್ಲಿ ಸ್ಪರ್ಧೆ, ಮೇಲು ಕೀಳು, ಅವಹೇಳನ ಬೇಡ.

ಚಿಂತನೆಗೆ ಯೋಗ್ಯವಿದು. ಪ್ರಸಂಗಕರ್ತರೂ, ಯಕ್ಷಗಾನ ಕಲಾವಿದರೂ ಗಮನಿಸಬೇಕಾದ ವಿಚಾರ. ಗುಳಿಗನೇ ಆಗಲಿ, ಮಂತ್ರದೇವತೆಯೇ ಆಗಲಿ, ಬೊಬ್ಬರ್ಯನೇ ಆಗಲಿ; ಯಕ್ಷಗಾನ ರಂಗಸ್ಥಳಕ್ಕೆ ಬರುವಾಗ ಯಕ್ಷಗಾನದ ವೇಷದಲ್ಲೇ ಬರಲಿ. ಯಾಕೆಂದರೆ, ಅದು ಯಕ್ಷಗಾನದ ಪಾತ್ರ. ದೈವವೇ ರಂಗಸ್ಥಳಕ್ಕೆ ಬರುವಂತಾಗಬಾರದಲ್ಲ! ದೇವೇಂದ್ರನೂ ಯಕ್ಷಗಾನ ವೇಷದಲ್ಲಿಯೇ ಬರುವುದು, ವಿಷ್ಣುವೂ ಯಕ್ಷಗಾನ ವೇಷದಲ್ಲಿಯೇ ಬರುವುದು, ನರಕಾಸುರನೂ ಯಕ್ಷಗಾನೀಯವಾಗಿಯೇ ರಂಗಸ್ಥಳಕ್ಕೆ ಬರುತ್ತಾರೆ. ಹೀಗಿರುವಾಗ, ಭೂತ-ದೈವಗಳನ್ನೂ ಯಕ್ಷಗಾನ ರೂಪದಲ್ಲಿಯೇ ತೋರಿಸಲು ಏನು ಅಡ್ಡಿ?
-ಅಭಿಜಾತ, ಮಂಗಳೂರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು