ಯಕ್ಷಮೆಲುಕು: ನೆಡ್ಲೆಯವರು ಚೌಕಿಯೊಳಗೆ ಓಡಾಡುತ್ತಾ ಮಲಗಿದ್ದವರನ್ನು ಎಬ್ಬಿಸುತ್ತಿದ್ದ ಪರಿ


ತಮ್ಮ ಅರುವತ್ತು ವರ್ಷಗಳ ಯಕ್ಷಗಾನ ತಿರುಗಾಟದ ಅವಧಿಯ ಕೆಲವು ಸ್ವಾರಸ್ಯಗಳನ್ನು ಯಕ್ಷಮೆಲುಕು ಸರಣಿಯಲ್ಲಿ ಹರಿನಾರಾಯಣ ಬೈಪಾಡಿತ್ತಾಯರು ಹಂಚಿಕೊಂಡಿದ್ದಾರೆ.
ಇದು ಧರ್ಮಸ್ಥಳ ಮೇಳದಲ್ಲಿ ತಿರುಗಾಟದ ನೆನಪು. ನಾನು ಪುರುಷಯ್ಯ ಆಚಾರ್ಯರಲ್ಲಿ, ವಿಷ್ಣು ಅಮ್ಮಣ್ಣಾಯರಲ್ಲಿ ಆರಂಭಿಕವಾಗಿ ಕಲಿತಿದ್ದರೂ, ತಿರುಗಾಟದ ವೇಳೆ ಎಲ್ಲ ಪೆಟ್ಟು-ಮಟ್ಟುಗಳನ್ನು ಹೇಳಿಕೊಟ್ಟವರು ಗುರುಗಳಾದ ನೆಡ್ಲೆ ನರಸಿಂಹ ಭಟ್ಟರು. ಅವರೊಂದಿಗಿನ ತಿರುಗಾಟದ ದಿನಗಳನ್ನು ಎಂದಿಗೂ ಮರೆಯಲಾಗದು.

ಧರ್ಮಸ್ಥಳ ಮೇಳದಲ್ಲಿ ಲಾಗಾಯ್ತಿನಿಂದಲೂ ಒಂದು ನಿಯಮವಿತ್ತು. ಯಾವುದೇ ಕಲಾವಿದರು ಚೌಕಿಯೊಳಗೆ ನಿದ್ದೆ ಮಾಡಬಾರದು ಅಂತ. ಇದಕ್ಕೆ ಪ್ರಮುಖ ಕಾರಣವೆಂದರೆ, ಎಲ್ಲರೂ ಆಟವನ್ನು ನೋಡಬೇಕು, ರಂಗದ ಅನುಭವ ಪಡೆಯಬೇಕು ಎಂಬುದೇ ಆಗಿತ್ತು. ಸಾಧ್ಯವೇ ಆಗದಿದ್ದರೆ, ನಿದ್ದೆ ಮಾಡುವುದಕ್ಕೆ ಅವರು ಬಿಡಾರಕ್ಕೆ ಹೋಗಿ ನಿದ್ದೆ ಮಾಡಬಹುದಿತ್ತು.
ರಂಗಸ್ಥಳದಲ್ಲಿ ಆಟ ಆಗುತ್ತಿರುವಾಗ, ಚೆಂಡೆಗೆ ಕೆಲಸವಿಲ್ಲದ ನಿಧಾನ ಪದ್ಯದ ಸಂದರ್ಭದಲ್ಲಿ ನೆಡ್ಲೆಯವರು ಹೆಗಲಿನಿಂದ ಚೆಂಡೆ ಕೆಳಗಿಟ್ಟು, ಚೌಕಿಗೆ ಹೋಗುತ್ತಿದ್ದರು. ಅವರ ಕಿವಿಗಳು ರಂಗಸ್ಥಳದತ್ತಲೇ ಇರುತ್ತಿತ್ತು, ಕಣ್ಣುಗಳು ಚೌಕಿಯನ್ನೊಮ್ಮೆ ಸುತ್ತಿ ಬರುತ್ತಿದ್ದವು.

ಕೆಲವು ಕಲಾವಿದರು ಚೌಕಿಯಲ್ಲೇ ಮಲಗಿ ನಿದ್ರಿಸುತ್ತಿದ್ದರು. ಅವರನ್ನು ಎಬ್ಬಿಸಬೇಕಲ್ಲ! ಅತ್ತ ರಂಗಸ್ಥಳದಲ್ಲಿ ಚೆಂಡೆಯ ಅಗತ್ಯವಿರುವಾಗ ಮದ್ದಳೆಯವರು ಧೋಂ ಅಂತ ಎರಡು ಬಾರಿ ಬಾರಿಸಿ, ಸಿಗ್ನಲ್ ನೀಡುವುದು ರೂಢಿ. ಹೀಗೆಯೇ, ಧೋಂ ಅಂತ ಮದ್ದಳೆ ಧ್ವನಿಯ ಸಿಗ್ನಲ್ ಸಿಕ್ಕ ತಕ್ಷಣ ನೆಡ್ಲೆಯವರು, ಗಡಿಬಿಡಿಯಲ್ಲಿ ಎದ್ದು ಇಡೀ ಚೌಕಿಯಲ್ಲಿ ಓಡಾಡುತ್ತಾ, ಮಲಗಿದವರನ್ನೆಲ್ಲಾ ಎಬ್ಬಿಸುತ್ತಾ, 'ಲಕ್ಲೇ ಲಕ್ಲೇ ಮಾರ್ರೇ, ಚೆಂಡೆಗ್ ಆಂಡ್' ಅಂತ ಹೇಳುತ್ತಾ ರಂಗಸ್ಥಳಕ್ಕೆ ಓಡುತ್ತಿದ್ದರು!

ಏಳದಿದ್ದವರನ್ನು ಪುನಃ ಎಬ್ಬಿಸಿ, ಲಕ್ಲೇ ಮಾರ್ರೇ, ಚೆಂಡೆಗಾಯ್ತು. ಕರೀತಾ ಇದ್ದಾರೆ. ಏಳಿ ಏಳಿ ಅಂತ ಮತ್ತೆ ಹೇಳುತ್ತಾ, ತಮ್ಮ ಪಾಡಿಗೆ ತಾವು ರಂಗಸ್ಥಳದತ್ತ ಹೋಗುತ್ತಿದ್ದರು.

ಹೀಗೆ, ಕುಶಾಲಿನಲ್ಲಿಯೇ ಚೌಕಿಯಲ್ಲಿದ್ದವರನ್ನೆಲ್ಲ ಎಬ್ಬಿಸುತ್ತಾ, ಅವರೂ ಆಟ ನೋಡಿ ಅನುಭವ ಪಡೆಯುವುದಕ್ಕೆ ಉತ್ತೇಜಿಸುತ್ತಿದ್ದರು ನೆಡ್ಲೆಯವರು.

-ಹರಿನಾರಾಯಣ ಬೈಪಾಡಿತ್ತಾಯ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು