ನೈಟ್ ಕರ್ಫ್ಯೂ: ಉತ್ಸಾಹದಿಂದ ಹೊರಟ ಯಕ್ಷಗಾನ ಮೇಳಗಳಿಗೆ ಮತ್ತೆ ಬರೆ, ಕಾಲಮಿತಿಗೆ ಮೊರೆ

ಇನ್ನು ಹತ್ತು ದಿನ ಕಾಲ ಮಿತಿ ಯಕ್ಷಗಾನ

 ಈಗಷ್ಟೇ ಚೇತರಿಸಿಕೊಂಡಿದ್ದ ಯಕ್ಷಗಾನ ಮೇಳಗಳಿಗೆ ನೈಟ್ ಕರ್ಫ್ಯೂ ಘೋಷಣೆ ಮತ್ತೆ ಆತಂಕ ತಂದಿದ್ದು, ರಾತ್ರಿ 10ರೊಳಗೆ ಮುಗಿಸುವಂತೆ ಕಾಲಮಿತಿಯ ಯಕ್ಷಗಾನ ಪ್ರದರ್ಶನಕ್ಕೆ ಮುಂದಾಗಿವೆ.

ಮಂಗಳೂರು: ಪ್ರಪಂಚದಾದ್ಯಂತ ಹಬ್ಬಿರುವ ಕೋವಿಡ್-19 ಹಾಗೂ ಅದರ ಸುಧಾರಿತ ರೂಪವಾದ ಒಮೈಕ್ರಾನ್ (Omicron) ತಳಿಯು ವ್ಯಾಪಕವಾಗಿ ಹಬ್ಬುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಡಿ.28ರಿಂದ ಜ.7ರವರೆಗೆ ಜಾರಿಗೊಳಿಸಿದ ರಾತ್ರಿ ಕರ್ಫ್ಯೂ ಯಕ್ಷಗಾನವನ್ನೂ ತಟ್ಟಿದೆ.

ಎರಡು ವರ್ಷಗಳ ಕಾಲ ಕೋವಿಡ್ ನಿರ್ಬಂಧಗಳಿಂದಾಗಿ ಯಕ್ಷಗಾನ ಪ್ರದರ್ಶನಗಳಿಲ್ಲದೆ ಕಲಾ ರಂಗವೇ ಸೊರಗಿ ಹೋಗಿತ್ತು ಮತ್ತು ಯಕ್ಷಗಾನವನ್ನೇ ನೆಚ್ಚಿಕೊಂಡಿದ್ದ ಕಲಾವಿದರು ಬಸವಳಿದು ಹೋಗಿದ್ದರು. ಇದೀಗ ಮತ್ತೆ ರಾತ್ರಿ ಕರ್ಫ್ಯೂ ವಿಧಿಸಿರುವುದು ಈಗಾಗಲೇ ಹುಮ್ಮಸ್ಸಿನಿಂದ ತಿರುಗಾಟಕ್ಕೆ ಹೊರಟಿರುವ ಮೇಳಗಳಿಗೆ ಆಘಾತ ನೀಡಿದೆ.
ಇದರ ಪರಿಣಾಮವಾಗಿ ಆರು ಮೇಳಗಳುಳ್ಳ ಕಟೀಲು ಮೇಳವು ಪ್ರದರ್ಶನ ಅವಧಿಯನ್ನು ಸಂಜೆ 3.30ರಿಂದ ಆರಂಭಿಸಿ ರಾತ್ರಿ 9ರವರೆಗೆ ನಡೆಸಲು ನಿರ್ಧರಿಸಿದೆ. ಇದು ಕಾಲಮಿತಿಕ್ಕೊಳಪಡುವ ಯಕ್ಷಗಾನ ಪ್ರದರ್ಶನವಾಗಲಿದ್ದು, ಹರಕೆಯಾಟವನ್ನು ಈಗಾಗಲೇ ಕಾಯ್ದಿರಿಸಿದ ಕಲಾಭಿಮಾನಿಗಳು ಸಹಕರಿಸಬೇಕೆಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆಡಳಿತ ಮಂಡಳಿ ಮತ್ತು ಸಂಚಾಲಕರು ವಿನಂತಿಸಿದ್ದಾರೆ.

ಇದರ ಜೊತೆಗೆ, ಇತರ ಮೇಳಗಳೂ ಇದೇ ಹಾದಿ ಹಿಡಿಯುವ ನಿರೀಕ್ಷೆಯಿದೆ.

ಇದೇ ವೇಳೆ, ಸರ್ಕಾರದ ಆದೇಶವು ಎಲ್ಲ ಯಕ್ಷಗಾನ ಪ್ರದರ್ಶನಗಳು, ಕಂಬಳ ಸೇರಿದಂತೆ ರಾತ್ರಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಅನ್ವಯವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ರಾತ್ರಿ ಕರ್ಫ್ಯೂ ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೆ ಜಾರಿಯಲ್ಲಿರುತ್ತದೆ. ಹೀಗಾಗಿ, ಕರ್ಫ್ಯೂ ಆರಂಭವಾಗುವ ಮುನ್ನವೇ ಎಲ್ಲರೂ ತಮ್ಮ ತಮ್ಮ ಮನೆಗಳಿಗೆ ಸೇರುವಂತೆ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗುತ್ತದೆ ಎಂದವರು ಹೇಳಿದ್ದಾರೆ.

ಕೋವಿಡ್ ಹರಡುವಿಕೆ ಹೆಚ್ಚಿರುವುದರಿಂದ ಅದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿರುವುದರಿಂದ ಸ್ಥಳೀಯ ಮಟ್ಟದಲ್ಲಿ ನಿಯಮ ಸಡಿಲಿಸಲು ಸಾಧ್ಯವಾಗದು. ಇದು ಇಡೀ ರಾಜ್ಯಕ್ಕೇ ಅನ್ವಯವಾಗುವ ಸಂಗತಿ ಎಂದವರು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು