ರಾತ್ರಿ 12ರವರೆಗೆ ಯಕ್ಷಗಾನಕ್ಕೆ ಅವಕಾಶ: ಜಿಲ್ಲಾಧಿಕಾರಿಗೆ, ಸಂಸ್ಕೃತಿ ಸಚಿವರಿಗೆ ಮೇಳಗಳ ಮನವಿ


ಬಿಜೆಪಿಯ ಜಿಲ್ಲಾ ಸಾಂಸ್ಕೃತಿಕ ಪ್ರಕೋಷ್ಠದ ಮುಖ್ಯಸ್ಥ ಸರಪಾಡಿ ಅಶೋಕ ಶೆಟ್ಟಿ ನೇತೃತ್ವದಲ್ಲಿ ಕಲಾವಿದರು, ಮೇಳಗಳ ಯಜಮಾನರು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಮಂಗಳೂರು: ಕೋವಿಡ್-19 ಹಾಗೂ ಅದರ ಸುಧಾರಿತ ತಳಿ ಓಮೈಕ್ರಾನ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಹೇರಿರುವುದರಿಂದ, ರಾತ್ರಿಯೇ ನಡೆಯುವ ಬೆಳಕಿನ ಸೇವೆಯಾಗಿರುವ ಯಕ್ಷಗಾನ ಪ್ರದರ್ಶನಕ್ಕೆ ತೊಂದರೆಯಾಗಿದೆ. ಕನಿಷ್ಠ ರಾತ್ರಿ 12ರವರೆಗೆ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಹಲವು ಯಕ್ಷಗಾನ ಮೇಳಗಳ ಮುಖ್ಯಸ್ಥರು, ಕಲಾವಿದರು ಮಂಗಳವಾರ ಮಂಗಳೂರು ಜಿಲ್ಲಾಧಿಕಾರಿಗೆ ಹಾಗೂ ಉಡುಪಿ ಉಸ್ತುವಾರಿ ಸಚಿವರೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು.
ಹಲವು ಮೇಳಗಳ ಕಲಾವಿದರು ಮತ್ತು ಯಜಮಾನರು ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠ ನೇತೃತ್ವದಲ್ಲಿ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರನ್ನು ಭೇಟಿಯಾಗಿ ಕಲೆಗೆ ಮತ್ತು ಕಲಾವಿದರಿಗೆ ಆಗುತ್ತಿರುವ ಸಮಸ್ಯೆಗಳನ್ನು ಗಮನಕ್ಕೆ ತಂದು, ಸೂಕ್ತ ಕ್ರಮಕ್ಕಾಗಿ ವಿನಂತಿಸಿದರು.

ಸರಕಾರವು ಡಿ.28ರಿಂದ ರಾತ್ರಿ ಕರ್ಫ್ಯೂ ಹೇರಿಕೆ ಮಾಡಿದೆ. ಇದರಿಂದಾಗಿ ರಾತ್ರಿ ಯಕ್ಷಗಾನ ಪ್ರದರ್ಶನಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಬುಕ್ಕಿಂಗ್‌ ಆದ ಪ್ರದರ್ಶನಗಳು ರದ್ದುಗೊಳ್ಳುತ್ತಿದ್ದು, ಸುಮಾರು 30ರಷ್ಟು ಯಕ್ಷಗಾನ ಕಲಾತಂಡಗಳ 900ಕ್ಕೂ ಅಧಿಕ ಕಲಾವಿದರ ಸಂಪಾದನೆಗೆ ಧಕ್ಕೆಯಾಗಿದೆ, ಜೀವನಕ್ಕೆ ತೊಂದರೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಈ ಕುರಿತು ಮಾತನಾಡಿದ ಹಿರಿಯ ಕಲಾವಿದ ಸರಪಾಡಿ ಅಶೋಕ್‌ ಶೆಟ್ಟಿ ಅವರು, ಕಲಾವಿದರ ಮನವಿಗೆ ಜಿಲ್ಲಾಧಿಕಾರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಸದರು, ಶಾಸಕರು ಪ್ರಯತ್ನಿಸಬೇಕಾಗಿದೆ ಎಂದು ತಿಳಿಸಿದರು.

ಸಸಿಹಿತ್ಲು ಮೇಳದ ವ್ಯವಸ್ಥಾಪಕ ರಾಜೇಶ್‌ ಗುಜರನ್‌, ಮಂಗಳಾದೇವಿ ಮೇಳದ ವ್ಯವಸ್ಥಾಪಕ ಎಸ್‌.ಎ ವರ್ಕಾಡಿ, ಸಂಚಾಲಕ ಕಡಬ ದಿನೇಶ್‌ ರೈ, ಬಪ್ಪನಾಡು ಮೇಳದ ವ್ಯವಸ್ಥಾಪಕ ವಿನೋದ್‌ ಕುಮಾರ್‌ ಬಜ್ಪೆ, ಸುಂಕದಕಟ್ಟೆ ಮೇಳದ ಪ್ರಬಂಧಕ ರಮೇಶ್‌ ಕುಲಶೇಖರ, ನಾಗಶಕ್ತಿ ಮೇಳದ ವ್ಯವಸ್ಥಾಪಕ ಸಂತೋಷ್‌ ಶೆಟ್ಟಿ ಕಡ್ತಲ, ಕಲಾವಿದರಾದ ಎಂ.ಕೆ. ರಮೇಶ್‌ ಆಚಾರ್ಯ, ಮಿಜಾರು ತಿಮ್ಮಪ್ಪ, ಶ್ರೀನಿವಾಸ ಸಾಲ್ಯಾನ್‌ ಬೋಂದೆಲ್‌, ಪ್ರದೀಪ್‌ ಕೊಡ್ಯಡ್ಕ, ಕೋಡಪದವು ದಿನೇಶ್‌ ಶೆಟ್ಟಿಗಾರ್‌, ಸಂತೋಷ್‌ ಕರಂಬಾರ್‌, ಚಂದ್ರಶೇಖರ ಗುರುವಾಯನಕೆರೆ, ಸಂದೇಶ್‌ ಬಡಗಬೆಳ್ಳೂರ್‌ ಮುಂತಾದವರು ಈ ನಿಯೋಗದಲ್ಲಿ ಇದ್ದರು.

ಉಡುಪಿಯಲ್ಲಿ ಸಂಸ್ಕೃತಿ ಸಚಿವರಿಗೆ ಮನವಿ
ಇದೇ ವೇಳೆ, ಓಮೈಕ್ರಾನ್‌ ಹರಡುವಿಕೆ ಮುಂಜಾಗ್ರತೆಗಾಗಿ ಸರಕಾರ ತೆಗೆದುಕೊಳ್ಳುವ ನಿಯಮಗಳು ಕಲಾವಿದರಿಗೆ, ಕಲಾ ಚಟುವಟಿಕೆಗಳಿಗೆ ತೊಡಕಾಗಬಾರದು ಎಂದು ಕಲಾವಿದರು, ಸಂಘಟಕರು, ಯಕ್ಷಗಾನ ಮೇಳಗಳ ಯಜಮಾನರು, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜಕರು ಹಾಗೂ ಸಂಬಂಧಪಟ್ಟ ವ್ಯಾಪಾರ ಸಂಸ್ಥೆಯವರು ಕಲಾಕ್ಷೇತ್ರ ಕುಂದಾಪುರ ಸಂಸ್ಥೆ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ಅವರಿಗೆ ಸಾಮೂಹಿಕ ಮನವಿ ನೀಡಿದರು.

ಈ ಸಂಬಂಧ ಅಗತ್ಯ ಗಮನ ಹರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.

ರಾತ್ರಿ ಕರ್ಫ್ಯೂ ವಿಧಿಸಿರುವುದರಿಂದ ಹೆಚ್ಚಿನ ಯಕ್ಷಗಾನ ಮೇಳಗಳು ರಾತ್ರಿಯ ಬದಲು, ಮಧ್ಯಾಹ್ನಾನಂತರವೇ ಯಕ್ಷಗಾನವನ್ನು ಆರಂಭಿಸಿ, ರಾತ್ರಿ 9ರೊಳಗೆ ಮುಗಿಸುವಂತೆ, ಸರಕಾರದ ಆದೇಶವನ್ನು ಪಾಲಿಸುತ್ತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು