ಯಕ್ಷಗಾನಕ್ಕೊಬ್ಬನೇ ಯಕ್ಷಬ್ರಹ್ಮ: ಅಗರಿ ಶ್ರೀನಿವಾಸ ಭಾಗವತರ ಸ್ಮೃತಿ ಗೌರವ ಗ್ರಂಥ ಬರುತ್ತಿದೆ



ಯಕ್ಷಗಾನಾಭಿಮಾನಿಗಳಿಗೆ ರೋಮಾಂಚನ ಸೃಷ್ಟಿಸಬಲ್ಲ ಹೆಸರು ಅಗರಿ. ಯಕ್ಷಗಾನ ಪ್ರಸಂಗಗಳು, ಆಶು ಕವಿತ್ವ, ಪ್ರಸಂಗ ಸಂಯೋಜನೆ, ರಂಗ ನಿರ್ದೇಶನದ ಮೂಲಕ ಕೀರ್ತಿಶೇಷರಾಗಿ ತಮ್ಮದೇ ಶೈಲಿಯನ್ನು ಸಂಸ್ಥಾಪಿಸಿದವರು ಅಗರಿ ಶ್ರೀನಿವಾಸ ಭಾಗವತರು. ಅವರ ಅಭಿನಂದನ ಗ್ರಂಥವು ಈಗ ಸ್ಮೃತಿಗೌರವ ಗ್ರಂಥವಾಗಿ ಪುನಃ ಲೋಕಾರ್ಪಣೆಯಾಗುತ್ತಿದೆ. ತನ್ನಿಮಿತ್ತ ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು ಅಗರಿಯವರನ್ನು ಸ್ಮರಿಸಿಕೊಂಡಿದ್ದಾರೆ.

"ಅಗರಿ" ಈ ಮೂರಕ್ಷರವು ಯಕ್ಷಾಭಿಮಾನಿಗಳ ಮನಸ್ಸಿನಲ್ಲಿ ರೋಮಾಂಚನವುಂಟು ಮಾಡಿದ ಹೆಸರು. ಯಕ್ಷಗಾನದ ದಾರಿಯಲ್ಲಿ ಮೈಲುಗಲ್ಲಾದ ಹೆಸರು. ವಿದ್ವಾ೦ಸರ ಬಾಯಲ್ಲಿ ಅನುರಣಿಸಿದ ಹೆಸರು!

ಸತತ ಸಾಧನೆಯಿಂದಲೇ, ತನ್ನದೇ ಶೈಲಿ ಮತ್ತು ದಾರಿಯನ್ನು ಮುಂದಿನ ತಲೆಮಾರಿಗೆ ಬಿಟ್ಟುಹೋದ ಯಕ್ಷಗಾನದ ಸಮರ್ಥ ಭಾಗವತ, ಶ್ರೇಷ್ಠ ರಂಗ ನಿರ್ದೇಶಕ ಮತ್ತು ಅಸಾಮಾನ್ಯ ಕವಿತ್ವವನ್ನು ಹೊಂದಿದ್ದವರು ಅಗರಿ ಶ್ರೀನಿವಾಸ ಭಾಗವತರು.
ಮಂಗಳೂರು ತಾಲೂಕಿನ ಹೊಸಬೆಟ್ಟು ಎಂಬಲ್ಲಿ ತಿಮ್ಮಪ್ಪಯ್ಯ ಮತ್ತು ರಾಧಮ್ಮ ದಂಪತಿಯ ಪುತ್ರನಾಗಿ 1906ರಲ್ಲಿ ಅಗರಿಯವರು ಜನಿಸಿದರು. ಅಗರಿಯವರ ಭಾಗವತಿಕೆಯಲ್ಲಿ ಪಾತ್ರದ ಭಾವ ಸ್ಫುರಿಸುತ್ತಿತ್ತು. ಭಾಗವತಿಕೆಯಲ್ಲಿ ಜೀವಂತಿಕೆಯಿರುತ್ತಿತ್ತು. ಯಾವುದೇ ಪಾತ್ರಧಾರಿಯ ಪ್ರತಿಭೆಯನ್ನು ಗುರುತಿಸಿ ಅದನ್ನು ಹೊರತೆಗೆಯುವ ಚಾಕಚಕ್ಯತೆ ಅಗರಿಯವರಿಗಿತ್ತು.

ಭಾಗವತನ ಸ್ಥಾನಕ್ಕೆ ಔನ್ನತ್ಯದ ಗೌರವವನ್ನು ತಂದುಕೊಟ್ಟ ವ್ಯಕ್ತಿ ಅಗರಿಯವರು. ತನ್ನದೇ ಆದ ಪ್ರಸಂಗ ನಿರೂಪಣೆ ಮತ್ತು ರಂಗ ನಡೆಯಿಂದ ಮೇಳವನ್ನು, ಪ್ರಸಂಗಗಳನ್ನು ಮೇಲೆತ್ತಿದವರು. ಕಲಾವಿದರಿಗೆ ಅವರ ತಪ್ಪು-ಒಪ್ಪುಗಳನ್ನು ಯಾವುದೇ ದಾಕ್ಷಿಣ್ಯಕ್ಕೆ ಒಳಗಾಗದೆ ಹೇಳಿ ಸರಿಪಡಿಸಿದವರು, ತಿದ್ದಿದವರು.

ಅಗರಿಯವರಿಗೆ ಪ್ರಸಂಗಗಳು ಕಂಠ ಪಾಠ. ಮತ್ತು ಕಥೆಗೆ ಪದ್ಯವನ್ನು ರಂಗದಲ್ಲೇ ರಚಿಸಬಲ್ಲ ಅಸಾಧಾರಣ ಆಶುಕವಿತ್ವವಿತ್ತು. ರಸಪ್ರಜ್ಞೆ, ರಂಗ ಶಿಸ್ತು, ಪ್ರಸಂಗ ನಡೆಗಳ ನಿಖರತೆ ಅಗರಿಯವರ ಹೆಚ್ಚುಗಾರಿಕೆಯಾಗಿತ್ತು.

ಇಂದು ತೆಂಕು ಬಡಗು ತಿಟ್ಟುಗಳ ಎಲ್ಲಾ ಭಾಗವತರುಗಳು ಬಳಸುವ ಹಿಂದೋಳ ರಾಗ ಮತ್ತು ಭೀಮ್‌ಪಲಾಸ್ ರಾಗವನ್ನು ಯಕ್ಷಗಾನಕ್ಕೆ ತಂದವರು ಅಗರಿಯವರು. 1937ರಲ್ಲಿ ಮಂಗಳೂರಿನಲ್ಲಿ ಒಂದೇ ಕಡೆ 22 ದಿನಗಳ ಕಾಲ ಕದ್ರಿ ಮೇಳದ ವತಿಯಿಂದ ಮಹಾಭಾರತ ಕತೆಯ ಬಯಲಾಟವನ್ನು ಅಗರಿಯವರು ರಂಗದಲ್ಲಿ ಆಶು ಪದ್ಯಗಳನ್ನು ರಚಿಸಿ ಹಾಡಿ 22 ದಿನಗಳಲ್ಲೇ ಭಾರತ ಕಥಾನಕವನ್ನು ಪೂರೈಸಿದ ಅತ್ಯದ್ಭುತ ಕಲಾಕಾರ ಅವರು.

ಸುಮಾರು 45 ವರ್ಷಕ್ಕೂ ಮೇಲ್ಪಟ್ಟು ಮೇಳದ ತಿರುಗಾಟ ಮಾಡಿದ್ದಾರೆ. ಸಾಕಷ್ಟು ಕಲಾವಿದರನ್ನು ಸಜ್ಜುಗೊಳಿಸಿದ್ದಾರೆ. ಯಕ್ಷಗಾನಕ್ಕೆ ಹೊಸ ರಾಗಗಳನ್ನು ಮೊಟ್ಟಮೊದಲು ಅಳವಡಿಸಿದ್ದಾರೆ. ಈ ಎಲ್ಲ ಕಾರಣಕ್ಕಾಗಿಯೇ ಅವರನ್ನು "ಯಕ್ಷಬ್ರಹ್ಮ"ನೆಂದು ಕಲಾಭಿಮಾನಿಗಳು ಕರೆದರು. ಅಗರಿಯವರು 25ಕ್ಕೂ ಹೆಚ್ಚು ಪ್ರಸಂಗಗಳನ್ನೂ ರಚಿಸಿದ್ದಾರೆ. ಈ ಕಾರಣದಿಂದಲೇ ಯಕ್ಷಗಾನಕ್ಕೊಬ್ಬನೇ "ಯಕ್ಷ ಬ್ರಹ್ಮ".

ಮುಂಬೈಯಲ್ಲಿ ಅತ್ಯುತ್ತಮ ಸಂಘಟಕರೂ, ಕಲಾಭಿಮಾನಿಗಳೂ ಆಗಿದ್ದ ಶ್ರೀ ಎಚ್.ಬಿ. ಎಲ್. ರಾಯರ ಮುಖ್ಯ ಸಂಪಾದಕತ್ವದಲ್ಲಿ ದಿ. ಅಗರಿ ಶ್ರೀನಿವಾಸ ಭಾಗವತರು ರಚಿಸಿದ ಪ್ರಸಂಗಗಳ ಸಂಪುಟ ಪ್ರಕಟವಾಗಿದ್ದು, ಇದರಲ್ಲಿ ಅಗರಿ ಶ್ರೀನಿವಾಸ ಭಾಗವತರು ರಚಿಸಿದ ಹದಿನಾರು ಪ್ರಸಂಗಗಳಾದ ದೇವೀ ಮಹಾತ್ಮೆ , ಬ್ರಹ್ಮ ಕಪಾಲ, ಬಪ್ಪನಾಡು ಕ್ಷೇತ್ರ ಮಹಾತ್ಮೆ, ವೆಂಕಟೇಶ ಮಹಾತ್ಮೆ, ಭಸ್ಮಾಸುರ ಮೋಹಿನಿ, ಸುಂದೋಪಸುಂದರ ಕಾಳಗ, ಮಹಾದೇವಿ ಲಲಿತೋಪಾಖ್ಯಾನ, ಶಿವಲೀಲಾರ್ಣವ, ಅಂಧಕಾಸುರ ವಧೆ, ಪ್ರಭಾವತಿ ಪರಿಣಯ, ಧನಗುಪ್ತ ಮಹಾಬಲಿ, ಭಗವಾನ್ ಏಸುಕ್ರಿಸ್ತ, ನಾರಾಯಣ ಗುರು ಮಹಾತ್ಮೆ, ಭರತೇಶ ವೈಭವ, ಶ್ರೀ ದೇವಿ ಭ್ರಮರಾಂಬಿಕಾ ವಿಲಾಸ, ಸಿರಿ ಮಹಾತ್ಮೆ ಎಂಬ ಪ್ರಸಂಗಗಳು  ಇವೆ.

"ಯಕ್ಷಬ್ರಹ್ಮ " ಲೋಕಾರ್ಪಣೆ
ಅಗರಿಯವರ ಸಾಧನೆಗಳ ದ್ಯೋತಕವಾಗಿ "ಯಕ್ಷಬ್ರಹ್ಮ"  ಎಂಬ ಅಭಿನಂದನ ಗ್ರಂಥವನ್ನು ಅಗರಿ ಸ್ಮೃತಿ ಗೌರವ ಗ್ರಂಥವಾಗಿ ಮರಳಿ ಲೋಕಾರ್ಪಣೆ ಮಾಡುವ ಸ್ತುತ್ಯ ಕೆಲಸವನ್ನು ಕುರಿಯ ಪ್ರತಿಷ್ಠಾನ ಈಗ ಮತ್ತೆ ಮಾಡುತ್ತಿದೆ. ಪ್ರತಿಷ್ಠಾನವೊಂದು ಮುಂದಿನ ತಲೆಮಾರಿಗೆ ಅತೀ ಅಗತ್ಯವಾಗಿದ್ದ ಕೆಲಸವೊಂದನ್ನು ಮಾಡುವುದರ ಮೂಲಕ ಗಮನಾರ್ಹವಾದ ಕೆಲಸವೊಂದನ್ನು ಮಾಡುತ್ತಿದೆ. ಈ ಮೂಲಕ "ಅಗರಿ" ಯವರ ನೆನಪನ್ನು ಚಿರಸ್ಥಾಯಿಯಾಗಿಸುತ್ತಿದೆ.

ಅಭಿನಂದನೀಯ ಸಂಯೋಜನೆ ಸಹಕಾರ: ಉಜಿರೆ ಅಶೋಕ ಭಟ್ಟ, ಸಂಚಾಲಕರು, ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಜಿರೆ 
ದಿನಾಂಕ : 08 -01 -2022
ಸಮಯ: ಸಾಯಂ 3 .00 ಗಂಟೆ
ಸ್ಥಳ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇಡ್ಯಾ, ಸುರತ್ಕಲ್ 

✒️ ಕುಮಾರ ಸುಬ್ರಹ್ಮಣ್ಯ ಮುಳಿಯಾಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು