ಬೆಂಗಳೂರು: ವಿದ್ಯಾರ್ಥಿಗಳ ಪರಿಪೂರ್ಣ ವಿಕಸನವನ್ನೇ ಗುರಿಯಾಗಿ ಹೊಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳ ಹಂತದಿಂದಲೇ ಕಲೆಗಳ ಕಲಿಕೆಗೆ ಒತ್ತು ಕೊಡಲಾಗಿದೆ. ಈ ಮೂಲಕ ಮೂಡಲಪಾಯದಂತಹ ದೇಶೀಯ ಮತ್ತು ಸ್ಥಳೀಯ ಕಲೆಗಳ ಸಂರಕ್ಷಣೆ ಮತ್ತು ಉಜ್ವಲ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಸೋಮವಾರ ಮೂಡಲಪಾಯ ಯಕ್ಷಗಾನ ಪರಿಷತ್ತನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಯಾವುದೇ ವೃತ್ತಿಯಲ್ಲಿ ತೊಡಗಿಕೊಂಡರೂ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿರುಚಿಗಳಿರಲೇಬೇಕು. ಇಲ್ಲದೆ ಹೋದರೆ ಬದುಕಿನ ಆನಂದ ಸಿಗುವುದಿಲ್ಲ ಎಂದರು.
ಹಳೇ ಮೈಸೂರಿನ ಭಾಗದಲ್ಲಿ ಮೂಡಲಪಾಯ ಯಕ್ಷಗಾನವು ಕಾರಣಾಂತರಗಳಿಂದ ತುಸು ನೇಪಥ್ಯಕ್ಕೆ ಸರಿದಿದೆ. ಈ ಪ್ರದೇಶದ ಪ್ರತಿಯೊಂದು ಮನೆಯಲ್ಲೂ ಕಲಾವಿದರಿದ್ದು, ಬದುಕಿನಲ್ಲಿ ಒಮ್ಮೆಯಾದರೂ ಮುಖಕ್ಕೆ ಬಣ್ಣ ಹಚ್ಚಿಕೊಂಡು ರಂಗದ ಮೇಲೆ ಅಭಿನಯಸಿದವರಿದ್ದಾರೆ. ಇಂತಹ ಶ್ರೀಮಂತ ಕಲಾ ಪ್ರಕಾರವನ್ನು ಕಾಲಕ್ಕೆ ತಕ್ಕಂತೆ ಪುನರುಜ್ಜೀವನಗೊಳಿಸಬೇಕಾಗಿದೆ. ಇದಕ್ಕೆ ಆದಿಚುಂಚನಗಿರಿ ಶ್ರೀಗಳು ಪೋಷಕರಾಗಿರುವುದು ಸ್ವಾಗತಾರ್ಹ ಎಂದು ಅವರು ಹೇಳಿದರು.
Yakshagana.in Updates ಪಡೆಯಲು: ವಾಟ್ಸ್ಆ್ಯಪ್-4 | ವಾಟ್ಸ್ಆ್ಯಪ್-3 | ವಾಟ್ಸ್ಆ್ಯಪ್-1 | ವಾಟ್ಸ್ಆ್ಯಪ್-2 | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
ರಾಷ್ಟ್ರೀಯ ಶಿಕ್ಷಣ ನೀತಿಯು ದೇಶೀ ಕಲೆಗಳ ಉತ್ಕರ್ಷ ಮತ್ತು ಕಲಿಕೆಯಲ್ಲಿ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅಗತ್ಯವಾದ ಕಾರ್ಯತಂತ್ರವನ್ನು ಒಳಗೊಂಡಿದೆ. ಮೂಡಲಪಾಯ ಯಕ್ಷಗಾನವು ದಕ್ಷಿಣ ಕರ್ನಾಟಕದ ಸಾಂಸ್ಕೃತಿಕ ಸಿರಿವಂತಿಕೆಗೆ ಒಂದು ನಿದರ್ಶನವಾಗಿದೆ ಎಂದು ಅವರು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಸೌಮ್ಯನಾಥಾನಂದ ಸ್ವಾಮೀಜಿ, ಮಂಡ್ಯದ ಶಾಸಕ ಎಂ.ಶ್ರೀನಿವಾಸ, ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಐಆರೆಸ್ ಅಧಿಕಾರಿ ಮತ್ತು ನಾಟಕಕಾರ ಜಯರಾಮ ರಾಯಪುರ, ಹಿರಿಯ ಲೇಖಕ ಪ್ರೊ.ಬಿ.ಜಯಪ್ರಕಾಶ ಗೌಡ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಂಡ್ಯ ತಾಲ್ಲೂಕಿನ ಬೇಲೂರು ಪ್ರೌಢಶಾಲೆಯ ಮಕ್ಕಳಿಂದ 'ಕರ್ಣಾವಸಾನ' ಮತ್ತು ಹನಕೆರೆಯ ವಿವೇಕ ವಿದ್ಯಾಸಂಸ್ಥೆಯ ಮಕ್ಕಳಿಂದ 'ದೇವೀ ಮಹಾತ್ಮೆ' ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಲಾಯಿತು.
Tags:
ಸುದ್ದಿ