ತೆಂಕು-ಬಡಗಿನ ಸಮರ್ಥ ವೇಷಧಾರಿ ಶಿವರಾಮ ಶೆಟ್ಟಿ ಹೊಸಕೊಪ್ಪ ನಿಧನ

ಶಿವರಾಮ ಶೆಟ್ಟಿ ಹೊಸಕೊಪ್ಪ.           ನಿಶುಂಭನ ವೇಷದ ಚಿತ್ರಕೃಪೆ: ಯಕ್ಷಲೋಕ

ಮಂಗಳೂರು: ತೆಂಕು ಹಾಗೂ ಬಡಗು ತಿಟ್ಟಿನ ಯಕ್ಷಗಾನ ಕಲಾವಿದ ಹೊಸಕೊಪ್ಪ ಶಿವರಾಮ ಶೆಟ್ಟಿ (69) ಅವರು ಗುರುವಾರ (ಡಿ.09, 2021) ನಿಧನರಾದರು. ಅವರು ಪತ್ನಿ ಹಾಗೂ ಒಬ್ಬ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ನರಸಿಂಹರಾಜಪುರ ನಿವಾಸಿಯಾಗಿರುವ ಅವರು ಗಂಭೀರ ಪುರುಷ ಪಾತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದರು. 

ಕಳೆದ ವರ್ಷದವರೆಗೂ ಕಟೀಲು ಮೇಳದಲ್ಲಿದ್ದರು ಮತ್ತು ಅವರು ಒಬ್ಬ ಉತ್ತಮ ಅಡಿಕೆ ಕೃಷಿಕರೂ ಆಗಿದ್ದರು. ಉತ್ತಮ ಅಡಿಕೆ ಗೊನೆಗಾರ.. ಗೊನೆಗಾರನಾಗಿ ಕೊಪ್ಪ ಶೃಂಗೇರಿ ಕಡೆ ಇವರಿಗೆ ತುಂಬಾ ಬೇಡಿಕೆ ಇತ್ತು.
ತೆಂಕು-ಬಡಗು ಎರಡೂ ತಿಟ್ಟುಗಳಲ್ಲಿ ಸಮರ್ಥ ವೇಷಧಾರಿಯಾಗಿದ್ದ ಅವರು, ಮಂದಾರ್ತಿ, ಸಾಲಿಗ್ರಾಮ, ಕಮಲಶಿಲೆ, ಗೋಳಿಗರಡಿ, ಮಾರಣಕಟ್ಟೆ, ನಾಗರಕೋಡಿಗೆ, ಸೌಕೂರು, ಹೊಸಳ್ಳಿ, ರಂಜದಕಟ್ಟೆ ಮೇಳಗಳಲ್ಲಿ ಕಲಾಸೇವೆಗೈದಿದ್ದರು. ತೆಂಕಿನ ಕಟೀಲು ಮೇಳದಲ್ಲಿ ದೀರ್ಘಕಾಲ ಬಣ್ಣದ ವೇಷಧಾರಿಯಾಗಿ ಸೇವೆಗೈದ ಇವರು ಈ ವರ್ಷವಷ್ಟೇ ನಿವೃತ್ತರಾಗಿದ್ದರು.

2015ರಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಅವರಿಗೆ ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ ನೀಡಿ ಗೌರವಿಸಿತ್ತು. ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು