ಯಕ್ಷ ಶ್ರೀಧರ ಗೌರವ ಗ್ರಂಥ ಬಿಡುಗಡೆ, ಅಭಿನಂದನೆ, ಯಕ್ಷಗಾನ



ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘ಪಾರ್ತಿಸುಬ್ಬ ಪ್ರಶಸ್ತಿ’ ಪುರಸ್ಕೃತರಾದ ಯಕ್ಷಗಾನ ಕವಿ, ಬಹುಶ್ರುತ ವಿದ್ವಾಂಸರಾದ ಶ್ರೀಧರ ಡಿ.ಎಸ್. ಅಭಿನಂದನ ಸಮಾರಂಭವು ದಿನಾಂಕ 11-12-2021, ಶನಿವಾರ ಸಂಜೆ 6 ಗಂಟೆಗೆ ನಿಟ್ಟೂರಿನ ರಾಮೇಶ್ವರ ಸಭಾಭವನದಲ್ಲಿ ನಡೆಯಲಿದೆ.

ಇದೇ ಸಂದರ್ಭದಲ್ಲಿ ಶ್ರೀಧರ ಡಿ.ಎಸ್. ಸಾಧನೆಗಳನ್ನು ಒಳಗೊಂಡ ಗೌರವ ಗ್ರಂಥ ‘ಯಕ್ಷ ಶ್ರೀಧರ’ ಬಿಡುಗಡೆಯಾಗಲಿದೆ. ಡಾ.ಶಾಂತಾರಾಮ ಪ್ರಭು, ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರ, ಮುರಳಿ ಕಡೆಕಾರ್, ವಿದ್ವಾನ್ ಹರಿನಾರಾಯಣದಾಸ ಆಸ್ರಣ್ಣ, ನಾರಾಯಣ ಎಂ.ಹೆಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಪರಾಹ್ನ 3 ಗಂಟೆಯಿಂದ ವಿವಿಧ ಯಕ್ಷ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆರಂಭದಲ್ಲಿ ತಾಳಮದ್ದಲೆ ನಡೆಯಲಿದ್ದು, ಶ್ರೀಧರ ಡಿ.ಎಸ್. ಬರೆದ ಕಬಂಧ ಮೋಕ್ಷ ಪ್ರಸಂಗವು ಪ್ರಸ್ತುತಗೊಳ್ಳಲಿದೆ. ಸುಬ್ರಹ್ಮಣ್ಯ ಧಾರೇಶ್ವರ ಅವರ ಭಾಗವತಿಕೆ, ವೆಂಕಟರಮಣ ಹೆಗಡೆ ಅಡೆಮನೆ ಮದ್ದಳೆಯಲ್ಲಿದ್ದು ಡಾ.ಶಾಂತಾರಾಮ ಪ್ರಭು, ಅನಂತ ಹೆಗಡೆ ನಿಟ್ಟೂರು, ನಿರಂಜನ ಹೆಗಡೆ ಅಡೆಮನೆ ಅರ್ಥಧಾರಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ 4.30 ಗಂಟೆಗೆ ‘ಶ್ರೀಪಾದ ಶತಮಾನ ಸಂಸ್ಮರಣೆ’ ಕಾರ್ಯಕ್ರಮದ ನಂತರ ಸಂಜೆ 5.30 ಗಂಟೆಗೆ ಸ್ವರ್ಣಾ ಡಿ.ಎಸ್ ಮತ್ತು ಸ್ನೇಹಾ ಡಿ.ಎಸ್. ಅವರಿಂದ ಯಕ್ಷನೃತ್ಯ ನಡೆಯಲಿದೆ. 

ಸಂಜೆ 7 ಗಂಟೆಗೆ ಬೆಂಗಳೂರಿನ ‘ಯಕ್ಷ ಸಿಂಚನ’ ಬಳಗದವರಿಂದ ‘ಮೃತ ಸಂಜೀವಿನಿ’ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಭಾಗವತರಾಗಿ ಲಂಬೋದರ ಹೆಗಡೆ, ಮದ್ದಳೆಯಲ್ಲಿ ವೆಂಕಟರಮಣ ಹೆಗಡೆ ಅಡೆಮನೆ, ಚೆಂಡೆಯಲ್ಲಿ ರಾಧಾಕೃಷ್ಣ ಕುಂಜತ್ತಾಯ ಅವರಿದ್ದು ಮುಮ್ಮೇಳದಲ್ಲಿ ರವಿ ಮಡೋಡಿ, ಮನೋಜ ಭಟ್, ಶಶಿರಾಜ್ ಸೋಮಯಾಜಿ, ಶಶಾಂಕ್ ಕಾಶಿ, ಆದಿತ್ಯ ಉಡುಪ ಭಾಗವಹಿಸಲಿದ್ದಾರೆ. ಈ ಯಕ್ಷಗಾನ ಪ್ರದರ್ಶನದ ನಿರ್ದೇಶಕ ಕೃಷ್ಣಮೂರ್ತಿ ತುಂಗ. 

‘ಯಕ್ಷ ಶ್ರೀಧರ’ ಗೌರವ ಗ್ರಂಥದ ವಿಶೇಷತೆಗಳು: 
ಯಕ್ಷಗಾನದ ಪ್ರಸಿದ್ಧ ಅರ್ಥಧಾರಿ, ವಿದ್ವಾಂಸ ಹಾಗೂ ‘ಪಾರ್ತಿಸುಬ್ಬ’ ಪ್ರಶಸ್ತಿ ಪುರಸ್ಕೃತ ಡಾ.ಎಂ.ಪ್ರಭಾಕರ ಜೋಶಿ ಅವರು ಈ ಅಭಿನಂದನಾ ಗ್ರಂಥಕ್ಕಾಗಿ ಶ್ರೀಧರ ಡಿ.ಎಸ್. ಅವರ ವಿಶೇಷ ಸಂದರ್ಶನ ನಡೆಸಿಕೊಟ್ಟಿದ್ದಾರೆ. ಯಕ್ಷಗಾನ ಕ್ಷೇತ್ರದ ಪ್ರಸಿದ್ಧರಾದ ಡಾ.ಪಾದೇಕಲ್ಲು ವಿಷ್ಣು ಭಟ್ಟ, ರಾಧಾಕೃಷ್ಣ ಕಲ್ಚಾರ್, ಅನಂತ ಹೆಗಡೆ ನಿಟ್ಟೂರು, ಗಿಂಡೀಮನೆ ಮೃತ್ಯುಂಜಯ ಮತ್ತಿತರರು ಬರೆದ ಇಪ್ಪತ್ತೈದಕ್ಕೂ ಮಿಕ್ಕಿ ಲೇಖನಗಳನ್ನು ಒಳಗೊಂಡಿದೆ. ಇವು ಯಕ್ಷಗಾನ ತಾಳಮದ್ದಲೆ, ಪ್ರಸಂಗ ರಚನೆ ನಡೆದು ಬಂದ ಹಾದಿಯ ಪರಿಚಯವನ್ನು ಸ್ಥೂಲವಾಗಿ ಮಾಡುವ ಜೊತೆಗೆ, ಸಂಘಟನೆಯ ಸ್ವರೂಪ, ಯಕ್ಷಕವಿಯ ಸವಾಲು ಹಾಗೂ ಸದ್ಯದ ಯಕ್ಷ ಲೋಕದ ಸ್ಥಿತಿಗತಿಗಳಿಗೂ ಕನ್ನಡಿ ಹಿಡಿದಂತಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು