ಅಚಾತುರ್ಯಕ್ಕೆ ವಿಷಾದ: ರಂಗದ ಅಪಸವ್ಯ ನಿಯಂತ್ರಣ ಆಗಬೇಕಿದೆ ಎಂದ ಯಕ್ಷಗಾನ ಕಲಾವಿದರು


ಹೊನ್ನಾವರ: ಯಕ್ಷಗಾನದ ವೇಷಭೂಷಣ ತೊಟ್ಟು ಹೋಟೆಲ್‌ನಲ್ಲಿ ಮಸಾಲೆದೋಸೆ ವಿತರಿಸಿದ್ದು ಖಂಡಿತಾ ತಪ್ಪು. ಈ ಅಚಾತುರ್ಯಕ್ಕೆ ವಿಷಾದಿಸುತ್ತೇವೆ ಎಂದಿರುವ ವಿವಾದಿತ ಕಲಾವಿದರು, ಯಕ್ಷರಂಗದಲ್ಲಿ ಇತ್ತೀಚೆಗೆ ಆಗುತ್ತಿರುವ ಅಪಸವ್ಯಗಳನ್ನು ನಿಯಂತ್ರಿಸಲು ಒಂದು ಸಮರ್ಥ ಪ್ರಾಧಿಕಾರ ಬೇಕು ಎಂದು ಪ್ರತಿಪಾದಿಸಿದ್ದಾರೆ.

ಮಹಾರಾಷ್ಟ್ರದ ಹೋಟೆಲ್ ಒಂದರಲ್ಲಿ ಯಕ್ಷಗಾನ ವೇಷಧಾರಿಗಳು ಮಸಾಲೆ ದೋಸೆಯನ್ನು ಗ್ರಾಹಕರಿಗೆ ವಿತರಿಸುತ್ತಿರುವ ವಿಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಈ ಕಲಾವಿದರನ್ನು ಯಕ್ಷಗಾನದ ಅಭಿಮಾನಿಗಳು ಕೆಲವರು ಮನಬಂದಂತೆ ನಿಂದಿಸಿದ್ದರು.

ಈ ಕುರಿತು ಹೊನ್ನಾವರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಾದಿತ ಕಲಾವಿದರು, ತಮ್ಮಿಂದ ಅಚಾತುರ್ಯವಾಗಿದ್ದು ಹೌದು. ಕಲಾಭಿಮಾನಿಗಳಿಗೆ ನೋವಾಗಿದೆ. ಈ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಹೇಳಿದ್ದಾರೆ.
ಕಲಾವಿದರಾದ ಭಾಸ್ಕರ ಗಾಂವ್ಕರ್ ಹಾಗೂ ಸದಾಶಿವ ಭಟ್ಟ ಅವರು, ನ.24ರಿಂದ 26ರವರೆಗೆ ಮಹಾರಾಷ್ಟ್ರದ ನಾಗಪುರದಲ್ಲಿ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊನೆಯ ದಿನ ಹೋಟೆಲ್ ಉದ್ಘಾಟನೆಯ ಬಳಿಕ ಈ ಸಂಗತಿ ಘಟಿಸಿದೆ. ಇದರ ವಿಡಿಯೊ ತುಣುಕು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಯಕ್ಷಗಾನದ ವೇಷಭೂಷಣ ಧರಿಸಿ ಈ ರೀತಿ ಮಾಡಿರುವುದು ಸರಿಯಲ್ಲ ಎಂಬುದು ಯಕ್ಷಗಾನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣ.

ಈ ಬಗ್ಗೆ ಯಲ್ಲಾಪುರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾಸ್ಕರ ಗಾಂವ್ಕರ್, ‘ಯಕ್ಷಗಾನ ಕಾರ್ಯಕ್ರಮ ಮುಗಿಸಿ ಹೋಟೆಲ್ ಉದ್ಘಾಟನಾ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದೆವು. ಹೋಟೆಲ್ ಮಾಲೀಕರು ನಮ್ಮನ್ನು ಸತ್ಕರಿಸಿ ಉಪಾಹಾರ ನೀಡಿದ್ದರು. ಆ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ ಇತರ ಗಣ್ಯರಿಗೆ ಅನಿರೀಕ್ಷಿತವಾಗಿ ನಮ್ಮ ಕೈಯಿಂದ ಒಂದು ಮಸಾಲೆ ದೋಸೆ ತಟ್ಟೆಯನ್ನು ಕೊಡಿಸಿದ್ದಾರೆ. ಆ ಸಂದರ್ಭದಲ್ಲಿ ನಾವು ಯಕ್ಷಗಾನದ ದಿರಿಸಿನಲ್ಲೇ ಇದ್ದೆವು’ ಎಂದು ತಿಳಿಸಿದರು

ಇದು ಉದ್ದೇಶಪೂರ್ವಕ ನಡೆಯಲ್ಲ. ನಾಗಪುರದಲ್ಲಿ ಬೇರೆ ಯಕ್ಷಗಾನ ಕಾರ್ಯಕ್ರಮಕ್ಕೆ ಕರೆಸಿದ್ದ ಹೋಟೆಲ್ ಉದ್ಯಮಿಯೊಬ್ಬರು, ತಮ್ಮ ಹೋಟೆಲ್ ಉದ್ಘಾಟನೆಯ ದಿನ, ಆತ್ಮೀಯತೆಯಿಂದ ಮಸಾಲೆ ದೋಸೆ ತಂದುಕೊಡುವಂತೆ ಹೇಳಿದರು. ಅವರ ಆತ್ಮೀಯತೆಗೆ ಕಟ್ಟುಬಿದ್ದು ಅದನ್ನು ಅವರ ಟೇಬಲ್‌ಗೆ ತೆಗೆದುಕೊಂಡುಹೋಗಿದ್ದೆವು. ಇದು ಪೂರ್ವಯೋಜಿತ ಆಗಿರಲಿಲ್ಲ. ಆ ಕ್ಷಣದಲ್ಲಿ ನಮ್ಮ ಮನಸ್ಸಿಗೆ ಇದು ದೊಡ್ಡ ತಪ್ಪು ಅಂತ ಹೊಳೆದಿರಲಿಲ್ಲ. ಈಗ ಮನವರಿಕೆಯಾಗಿದೆ, ಇದು ನಡೆಯಬಾರದಿತ್ತು ಎಂದಿರುವ ಗಾಂವ್ಕರ್, ಯಕ್ಷಗಾನ ಅಭಿಮಾನಿಗಳಿಗಿಂತ ನಮ್ಮ ಸಂತೋಷವೇನೂ ದೊಡ್ಡದಲ್ಲ. ಈ ಘಟನೆಯಿಂದ ಯಕ್ಷಗಾನ ಅಭಿಮಾನಿಗಳಿಗೆ ಆದ ಬೇಸರಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವಾಗಿ ತುಂಬ ಚರ್ಚೆಗಳಾಗಿವೆ. ಕೆಲವರು ವೈಯಕ್ತಿಕವಾಗಿ ನಿಂದಿಸಿದ್ದಾರೆ, ಟ್ರೋಲ್ ಮಾಡಿದ್ದಾರೆ. ಹಿಂದೆಯೂ ಈ ರೀತಿಯ ಅಪಸವ್ಯಗಳು ಸಾಕಷ್ಟು ಆಗಿವೆ. ಆದರೆ ಹಿಂದೆ ಆಗಿದೆ ಅಂತ ಹೇಳಿ ಅದೇ ನಮ್ಮ ಕೆಲಸಕ್ಕೆ ಆಧಾರ ಅಂತ ನಾವು ಸಮರ್ಥಿಸುವುದಿಲ್ಲ. ತಪ್ಪು ಯಾರೇ ಮಾಡಿದರೂ ತಪ್ಪನ್ನು ಖಂಡಿಸುವಂಥ ವ್ಯವಸ್ಥೆ ಆಗಬೇಕು ಎಂದು ಗಾಂವ್ಕರ ಹೇಳಿದರು.

ಯಕ್ಷಗಾನ ಕ್ಷೇತ್ರದಲ್ಲಿ ಆಗುತ್ತಿರುವ ಇಂಥ ಯಾವುದೇ ತಪ್ಪುಗಳವನ್ನು ನಿಯಂತ್ರಿಸುವಂಥ ಒಂದು ಪ್ರಾಧಿಕಾರ ಬೇಕಾಗುತ್ತದೆ. ಹೀಗೆ ಮಾಡಿದರೆ ಮಾತ್ರ ಸರಿ, ಹೀಗೆ ಮಾಡಿದರೆ ತಪ್ಪು ಅಂತ ನಿರ್ಣಯಿಸಿ ಕ್ರಮ ಕೈಗೊಳ್ಳುವ ನಿರ್ಣಾಯಕ ವ್ಯವಸ್ಥೆಯೊಂದು ಯಕ್ಷಗಾನಕ್ಕೆ ಬೇಕು. ಸಿನಿಮಾದಲ್ಲಾದರೆ ಫಿಲಂ ಚೇಂಬರ್ ಅಥವಾ ಸೆನ್ಸಾರ್ ಬೋರ್ಡ್ ಮುಂತಾದವುಗಳಿವೆ. ಯಕ್ಷಗಾನದಲ್ಲಿ ಅಂಥದ್ದು ಇಲ್ಲ. ಅದರ ಅಗತ್ಯವಿದೆ ಎಂದವರು ಹೇಳಿದರು.

ರಂಗಸ್ಥಳದಲ್ಲಂತೂ ಇತ್ತೀಚೆಗೆ ವ್ಯಾಪಕವಾಗಿ ಇಂಥ ಅಪಸವ್ಯಗಳು ನಡೆಯುತ್ತವೆ. ಅಲ್ಲಿ ಕೋಲಾಟ ಆಗುತ್ತದೆ, ಕೋಳಿ ಅಂಕವೂ ಬರುತ್ತದೆ. ಸಿನಿಮಾ ಹಾಡುಗಳ ನೇರವಾದ ಭಟ್ಟಿ ಇಳಿಸುವಿಕೆಯೂ ಆಗುತ್ತಿದೆ. ಒಟ್ಟಿನಲ್ಲಿ ಯಾರೇ ಏನೇ ತಪ್ಪು ಮಾಡಿದರೂ ಆ ತಪ್ಪು ನಿಯಂತ್ರಿಸುವಂಥ ಪ್ರಾಧಿಕಾರವೊಂದರ ಅಗತ್ಯವಿದೆ. ಈ ಬಗ್ಗೆ ಅಕಾಡೆಮಿ ಸದಸ್ಯರು, ಪ್ರಾಜ್ಞರು ಗಮನ ಹರಿಸಬೇಕು. ನಾವು ಮಾಡಿದಂಥ ಈ ರೀತಿಯ ಅಚಾತುರ್ಯಗಳು ಮುಂದೆ ಯಾರಿಂದಲೂ ಆಗಬಾರದು ಎಂದು ಪ್ರಾಂಜಲ ಮನಸ್ಸಿನಿಂದ ಕಲಾವಿದ ಭಾಸ್ಕರ ಗಾಂವಕರ ಅವರು ವಿನಂತಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು