ಬಿ.ಜಯಶ್ರೀಗೆ ಕೆರೆಮನೆ ಪುರಸ್ಕಾರ: ಯಕ್ಷಗಾನದಲ್ಲಿ ಪಾತ್ರ ಮಾಡುವ ಇಚ್ಛೆ ವ್ಯಕ್ತಪಡಿಸಿದ ರಂಗಭೂಮಿ ಕಲಾವಿದೆ


ಹೊನ್ನಾವರ: ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ವತಿಯಿಂದ ಗುಣವಂತೆಯ ಯಕ್ಷಾಂಗಣದಲ್ಲಿ ನಡೆದ ಎರಡು ದಿನಗಳ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಉದ್ಘಾಟನಾ (ನ.04, 2021) ಸಮಾರಂಭದಲ್ಲಿ ರಂಗಭೂಮಿ, ಸಿನಿಮಾ ಕಲಾವಿದೆ ಬಿ.ಜಯಶ್ರೀ ಅವರಿಗೆ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ.ಜಯಶ್ರೀ, ಯಕ್ಷಗಾನವು ಶ್ರೇಷ್ಠ ಕಲಾ ಪ್ರಕಾರಗಳಲ್ಲಿ ಒಂದಾಗಿದ್ದು, ಅದರಲ್ಲಿ ಪಾತ್ರ ಮಾಡುವ ಆಕಾಂಕ್ಷೆ ಹೊಂದಿದ್ದೇನೆ ಎಂದು ಹೇಳಿದರು. ಎಲ್ಲ ಕಲಾ ಪ್ರಕಾರಗಳ ಬಗ್ಗೆ ನನಗೆ ಪ್ರೀತ್ಯಾದರಗಳಿವೆ. ಎಲ್ಲ ಕಲೆಗಳನ್ನು ಮೈಗೂಡಿಸಿಕೊಳ್ಳುವ ಇಚ್ಛೆಯೂ ಇದೆ ಎಂದು ಬಿ.ಜಯಶ್ರೀ ಹೇಳಿದರು.
ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ, ಯಕ್ಷಗಾನ ಕಲಾವಿದರಾದ ರಾಜೀವ ಶೆಟ್ಟಿ ಹೊಸಂಗಡಿ, ದಯಾನಂದ ಬಳೆಗಾರ ನಾಗೂರು, ಯಕ್ಷಗಾನ ಸಂಘಟಕ ಸೂರ್ಯನಾರಾಯಣ ಪಂಜಾಜೆ, ಮರಣೋತ್ತರವಾಗಿ ಸುಬ್ರಾಯ ಭಟ್ ಗುಂಡಿಬೈಲ್ ಹಾಗೂ ಕೃಷ್ಣ ಭಂಡಾರಿ ಕರ್ಕಿ ಅವರಿಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ ಪ್ರದಾನ ಮಾಡಲಾಯಿತು.

ಪತ್ರಕರ್ತ ಎಂ.ಕೆ.ಭಾಸ್ಕರರಾವ್ ಅಭಿನಂದನಾ ನುಡಿಗಳನ್ನಾಡಿದರು. ಕವಿ ಡಾ.ಎಚ್.ಎಸ್.ಶಿವಪ್ರಕಾಶ, ಪ್ರಕಾಶಕ ನ.ರವಿಕುಮಾರ, ಯಕ್ಷಗಾನ ಅರ್ಥಧಾರಿ ದಿವಾಕರ ಹೆಗಡೆ, ನಾಟ್ಯೋತ್ಸವ ಸಮಿತಿಯ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ, ಕೆರೆಮನೆ ಯಕ್ಷಗಾನ ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ, ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ ಗೌಡ ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು