ಸಿರಿಕಲಾ ಪುರಸ್ಕಾರ | ಜನರಿಗೆ ಪುರಾಣ ತಲುಪಿಸುವ ಏಕೈಕ ಕಲೆ ಯಕ್ಷಗಾನ: ಸುಧಾಕರ ಪೈ

ಸಿರಿಕಲಾ ಮೇಳ ವತಿಯಿಂದ ನಾಲ್ವರು ಸಾಧಕರಿಗೆ ಸಿರಿಕಲಾ ಪುರಸ್ಕಾರ
ಬೆಂಗಳೂರಿನ ನಯನ ಸಭಾಂಗಣದಲ್ಲಿ ಭಾನುವಾರ ನಡೆದ ಸಿರಿಕಲಾ ಮೇಳ ಯಕ್ಷೋತ್ಸವ, ಸಿರಿಕಲಾ ಪುರಸ್ಕಾರ ಪ್ರದಾನ ಸಮಾರಂಭ
ಬೆಂಗಳೂರು: ರಾಮಾಯಣ, ಮಹಾಭಾರತ ಮುಂತಾದ ಪುರಾಣಗಳನ್ನು ಜನರಿಗೆ ತಲುಪಿಸುತ್ತಿರುವ ಏಕೈಕ ಕಲಾ ಮಾಧ್ಯಮ ಯಕ್ಷಗಾನ ಎಂದು ಬೆಂಗಳೂರಿನ ವಕೀಲ, ಕಲಾಪೋಷಕ ಸುಧಾಕರ ಪೈ ಹೇಳಿದರು.

ಸಿರಿಕಲಾ ಮೇಳದ ವತಿಯಿಂದ ಭಾನುವಾರ ನಯನ ಸಭಾಂಗಣದಲ್ಲಿ ನಡೆದ ಸಿರಿಕಲಾ ಕನ್ನಡ ಸಂಸ್ಕೃತಿ ಯಕ್ಷೋತ್ಸವ ಕಾರ್ಯಕ್ರಮದಲ್ಲಿ ನಾಲ್ಕು ಮಂದಿಗೆ ಸಿರಿಕಲಾ ಪುರಸ್ಕಾರ ನೀಡಿ ಗೌರವಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.

ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಹಳದೀಪುರ ವಾಸುದೇವ ರಾವ್ ಅವರು, ಅಂದಿನ ಕಲಾವಿದರು ಆರ್ಥಿಕ ಬೆಂಬಲವಿಲ್ಲದೆ ಪರಿಶ್ರಮ ಪಟ್ಟು ಯಕ್ಷಗಾನ ಕಲೆಯನ್ನು ನಮಗೆ ಉಳಿಸಿ ಹೋಗಿದ್ದಾರೆ. ಹಿರಿಯ ಕಲಾವಿದರನ್ನು ಗೌರವಿಸಬೇಕಾದುದು ಎಲ್ಲರ ಕರ್ತವ್ಯ ಎಂದರಲ್ಲದೆ, ರಾಮಾಯಣ, ಮಹಾಭಾರತ, ದೇವಿಭಾಗವತ ಮುಂತಾದ ಮಹಾಕಾವ್ಯಗಳನ್ನು ಓದಿ ಜ್ಞಾನ ವೃದ್ಧಿಸಿಕೊಳ್ಳಲು ಯಕ್ಷಗಾನ ಸ್ಫೂರ್ತಿಯಾಗುತ್ತದೆ ಎಂದರು.

ಹಿರಿಯ ಯಕ್ಷಗಾನ ಕಲಾವಿದ ಶಿರಳಗಿ ತಿಮ್ಮಪ್ಪ ಹೆಗಡೆ ಹಾಗೂ ಹಿರಿಯ ಮದ್ದಳೆವಾದಕ  ರಮೇಶಅ ಭಂಡಾರಿ ಕಡತೋಕ ಅವರಿಗೆ ಸಿರಿಕಲಾ ಪುರಸ್ಕಾರ ಮತ್ತು ಯಕ್ಷಗಾನ ಕಲೆಯನ್ನು ಪೋಷಿಸುತ್ತಿದುರವ ಹಳದೀಪುರ ವಾಸುದೇವ ರಾವ್ ಹಾಗೂ ದೀಪಕ್ ಬಿ.ಎಚ್.ಬಾರ್ಕೂರು ಅವರಿಗೆ 'ಸಿರಿಕಲಾ ಪೋಷಕ' ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಮಾನಪತ್ರ, ಫಲಕ ಹಾಗೂ ₹25000 ನಗದು ಪುರಸ್ಕಾರವನ್ನು ಹೊಂದಿದೆ.

ಸಿರಿಕಲಾ ಮೇಳದ ಸಂಚಾಲಕ ಸುರೇಶ್ ಹೆಗಡೆ ಕಡತೋಕ ಅವರು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸಿರಿಕಲಾ ಮೇಳವು ಕಲೆಯನ್ನು ಬೆಳೆಸಲು ಮತ್ತು ವಿಶೇಷವಾಗಿ ಮಹಿಳಾ ಕಲಾವಿದರನ್ನು ಪ್ರೋತ್ಸಾಹಿಸಲು ಶ್ರಮಿಸುತ್ತಿದೆ. ಮುಂಬೈ, ದೆಹಲಿ ಸಹಿತ ಅನ್ಯ ರಾಜ್ಯಗಳಲ್ಲಿಯೂ ಮೇಳವು ಯಕ್ಷಗಾನ ಪಸರಿಸಿದೆ ಎಂದರು.

ಸಿರಿಕಲಾ ಮೇಳದ ವಿದ್ಯಾರ್ಥಿ ಕಲಾವಿದರಿಂದ ಕಂಸವಧೆ ಹಾಗೂ ಸುರೇಶ್ ಹೆಗಡೆ ಪುತ್ರಿ ಅರ್ಪಿತಾ ಹೆಗಡೆ ಮತ್ತು ಬಳಗದಿಂದ ಪಾಂಚಜನ್ಯ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಸರ್ವೇಶ್ವರ ಹೆಗಡೆ ಮೂರೂರು, ಸುಬ್ರಾಯ ಹೆಬ್ಬಾರ್, ಎ.ಪಿ.ಪಾಠಕ್, ಕಾರ್ತಿಕ್ ಧಾರೇಶ್ವರ, ಮುಮ್ಮೇಳದಲ್ಲಿ ನಾಗಶ್ರೀ ಜಿ.ಎಸ್., ಅರ್ಪಿತಾ ಹೆಗಡೆ, ಪ್ರಶಾಂತ ವರ್ಧನ್, ನಿಹಾರಿಕಾ ಭಟ್, ವಿನಯ ಮುಂತಾದವರಿದ್ದರು.

ಪಾಂಚಜನ್ಯ ಪ್ರಸಂಗದ ಒಂದು ಹಾಡು - ಯಾರೇ ನೀನು ಭುವನ ಮೋಹಿನಿ:

ಸಭಾ ಕಾರ್ಯಕ್ರಮದಲ್ಲಿ ಸಿರಿಕಲಾ ಮೇಳದ ಕಾರ್ಯದರ್ಶಿ ಟಿ.ಎಸ್.ಮಹಾಬಲೇಶ್ವರ ಭಟ್, ಸಾಕ್ಷಿ ಸಂಸ್ಥೆಯ ರ.ವಿ.ಜಹಾಗೀರದಾರ್, ಸ್ಮಾರ್ಟ್ ಸಂಸ್ಥೆಯ ಅಮರನಾಥ ಶೆಟ್ಟಿ ಮಂದಾರ್ತಿ, ಕಲಾ ಪ್ರೋತ್ಸಾಹಕ ಎನ್.ಆರ್.ಹೆಗಡೆ ಮುಂತಾದವರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು