ಕೊರೋನಾಸುರನಿಗೆ ಕಡಿವಾಣ ಬೀಳುವ ಆಶಾವಾದದೊಂದಿಗೆ ಮೇಳಗಳು ಹೊರಟಿವೆ ದಿಗ್ವಿಜಯಕೆ


ಹಲವಾರು ಹಿರಿಯ ಕಲಾವಿದರನ್ನು ಕೋವಿಡ್ ಕಾಲದಲ್ಲಿ ಕಳೆದುಕೊಂಡು ಬಡವಾಗಿರುವ ಯಕ್ಷಗಾನ ಮೇಳಗಳು, ಕೊನೆಗೂ ನೋವು ಮರೆತು ತಿರುಗಾಟ ಆರಂಭಿಸಿರುವುದರೊಂದಿಗೆ ಅದನ್ನೇ ನೆಚ್ಚಿಕೊಂಡಿರುವ ಕಲಾವಿದರು ಮತ್ತು ಇತರ ಉದ್ಯೋಗಿಗಳು ನಿಟ್ಟುಸಿರು ಬಿಡುತ್ತಿದ್ದಾರೆ. 
ನವೆಂಬರ್ 10ರಂದು ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರು ಗೆಜ್ಜೆ ಕಟ್ಟುವುದರೊಂದಿಗೆ 2021-22ನೇ ಸಾಲಿನ ಯಕ್ಷಗಾನ ತಿರುಗಾಟಕ್ಕೆ ಚಾಲನೆ ದೊರೆತು, ಬಹುತೇಕ ಯಕ್ಷಗಾನ ಮೇಳಗಳು ಕೋವಿಡೋತ್ತರ ಕಾಲದಲ್ಲಿ ಹೊಸ ಹುರುಪು, ಹೊಸ ಉತ್ಸಾಹ ಮತ್ತು ಹೊಸ ಆಶಾವಾದದೊಂದಿಗೆ ಹೊಸ ಯಕ್ಷ ಋತುವಿನ ಜೈತ್ರಯಾತ್ರೆಗೆ ಹೊರಟಿವೆ.

2020-21 ಸಾಲಿನಲ್ಲಿ ಮಾರ್ಚ್ ತಿಂಗಳಲ್ಲಿ ಲಾಕ್‌ಡೌನ್ ಘೋಷಣೆಯಾದ ಬಳಿಕ ಬಲವಂತವಾಗಿ ಯಕ್ಷಗಾನ ಮೇಳಗಳು ತಿರುಗಾಟ ನಿಲ್ಲಿಸಿ 'ಒಳಗಾಗಿದ್ದವು'. ಈಗ ಹೊಸ ಹುರುಪು ಬಂದಿದೆ. ಕೊರೋನಾ ಮತ್ತೆ ಕಾಡದಿರಲಿ ಎಂಬ ಪ್ರಾರ್ಥನೆಯ ಧ್ವನಿ ಎಲ್ಲ ಕಲಾವಿದರ ಮನದಲ್ಲಿದೆ.
ಧರ್ಮಸ್ಥಳ ಮೇಳವು ಧರ್ಮಸ್ಥಳದಲ್ಲಿ ಡಿ.4ರವರೆಗೆ ಯಕ್ಷಗಾನ ಸೇವೆ ನಡೆಸಿದ್ದು, ಡಿ.5ರಿಂದ ಊರೂರು ತಿರುಗಾಟಕ್ಕೆ ಹೊರಟಿದೆ. ಅದು ರಾತ್ರಿ 7ರಿಂದ 12ರವರೆಗಿನ ಕಾಲಮಿತಿ ಆಟಗಳನ್ನು ಆಡಲಿದೆ. ಧರ್ಮಸ್ಥಳ ಮೇಳದಲ್ಲಿ ಕೂಡ ಬಹುತೇಕ ಹರಕೆ ಸೇವೆಯಾಟಗಳೇ ಆಗಿದ್ದು, ಈ ರೀತಿ ಹರಕೆ ಹೊತ್ತವರ ಯಕ್ಷಗಾನ ಪ್ರದರ್ಶನಗಳು ಮುಂದಿನ 10 ವರ್ಷಗಳಿಗೆ ಸಾಕಾಗುವಷ್ಟು ಈಗಾಗಲೇ ಬುಕ್ ಆಗಿವೆ.

ಶತಮಾನಗಳಷ್ಟು ಹಳೆಯ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳು ನವೆಂಬರ್ 29ರಂದು ಅದ್ಧೂರಿಯಿಂದಲೇ ತಿರುಗಾಟ ಪ್ರಾರಂಭಿಸಿವೆ. ಈ ದೇವಸ್ಥಾನದ ಬಯಲಾಟ ಮೇಳಗಳು ರಾತ್ರಿಯಿಡೀ ಪ್ರದರ್ಶನ ನೀಡಲಿದ್ದು, ಸುಮಾರು 25-30 ವರ್ಷದ ಹರಕೆ ಸೇವೆಯಾಟಗಳು ಈಗಾಗಲೇ ಬುಕ್ ಆಗಿವೆ.

ಪಳ್ಳಿ ಕಿಶನ್ ಹೆಗ್ಡೆಯವರ ಯಜಮಾನಿಕೆಯಲ್ಲಿರುವ ಸಾಲಿಗ್ರಾಮ, ಸೌಕೂರು, ಹಿರಿಯಡ್ಕ, ಮಡಾಮಕ್ಕಿ ಮತ್ತು ಮೇಗರವಳ್ಳಿ - ಈ ಪಂಚ ಮೇಳಗಳೂ ಕೂಡ ಗೆಜ್ಜೆ ಕಟ್ಟುತ್ತಿವೆ. ಸೌಕೂರು ಮೇಳ ನ.29ರಂದು, ಡೇರೆ ಮೇಳವಾಗಿರುವ ಸಾಲಿಗ್ರಾಮದ ತಿರುಗಾಟವು ಡಿ.6ರಂದು ಆರಂಭವಾಗಿದ್ದರೆ, ಹಿರಿಯಡ್ಕ ಡಿ.9ರಂದು, ಮಡಾಮಕ್ಕಿ ಡಿ.13ರಂದು ಮತ್ತು ಮೇಗರವಳ್ಳಿ ಮೇಳವು ಡಿ.20ರ ಆಸುಪಾಸಿನಲ್ಲಿ ತಿರುಗಾಟ ಆರಂಭಿಸಲಿದೆ. ಈ ಐದೂ ಮೇಳಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆತಿದೆ.

ಶತಮಾನಗಳಷ್ಟು ಹಳೆಯ ಐತಿಹ್ಯ ಹೊಂದಿರುವ ಮತ್ತೊಂದು ಮೇಳ, ಬಡಗುತಿಟ್ಟಿನ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮೇಳ. ಇಲ್ಲಿ ಐದು ಮೇಳಗಳಿದ್ದು, ನವೆಂಬರ್ 28ರಂದು ತಿರುಗಾಟ ಆರಂಭಿಸಿವೆ. ಈ ಐದೂ ಮೇಳಗಳಲ್ಲಿ ಸುಮಾರು 250ರಷ್ಟ ಮಂದಿ ಉದ್ಯೋಗದಲ್ಲಿದ್ದು, ರಾತ್ರಿಯಿಡೀ ಪ್ರದರ್ಶನ ನಡೆಸುವ ಮೇಳಗಳಿವು.

ಬಡಗಿನ ಮತ್ತೊಂದು ಡೇರೆ ಮೇಳವಾಗಿರುವ ಪೆರ್ಡೂರು ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿಯು ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರ ಮರು ಆಗಮಮನದ ಬಲದೊಂದಿಗೆ ತಿರುಗಾಟಕ್ಕೆ ಹೊರಟಿದೆ.

ತೆಂಕು ತಿಟ್ಟಿನಲ ಗಜ ಗಟ್ಟಿ ಮೇಳವೆಂದೇ ಹೆಸರಾಗಿರುವ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯು ಡಿ.10ರಂದು ತನ್ನ ಅಶ್ವಮೇಧ ಜೈತ್ರಯಾತ್ರೆ ಆರಂಭಿಸುತ್ತಿದೆ.

ತೆಂಕು ತಿಟ್ಟಿನಲ್ಲಿ ಮತ್ತೊಂದು ಹೆಸರಾಂತ ಮೇಳವಾಗಿರುವ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ನ.26ರಂದು ಹೊರಟಿದ್ದು, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ನಾಗವೃಜ ಕ್ಷೇತ್ರದ ಮೇಳವು ಪಟ್ಲ ಸತೀಶ್ ಶೆಟ್ಟರ ಮುಂದಾಳುತ್ವದಲ್ಲಿ 2ನೇ ವರ್ಷದ ತಿರುಗಾಟವನ್ನು ಪ್ರಾರಂಭಿಸಿದೆ. ತೆಂಕಿನ ಕಳವಾರು ಶ್ರೀ ಬೆಂಕಿನಾಥೇಶ್ವರ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಡಿಸೆಂಬರ್ 1ರಂದು ಗೆಜ್ಜೆ ಕಟ್ಟಿದೆ.

ಸಂಪೂರ್ಣವಾಗಿ ತೆಂಕುತಿಟ್ಟಿನ ಮೇಳವಾಗಿ ಪರಿವರ್ತನೆಗೊಂಡಿರುವ ಹಿರಿಯಡ್ಕ ಶ್ರೀ ವೀರಭದ್ರಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿಯು ಡಿ.6ರಂದು ತಿರುಗಾಟ ಹೊರಟಿದ್ದರೆ, ಮಾಣಿಲ ಶ್ರೀ ಮಹಾಲಕ್ಷ್ಮಿ ಕೃಪಾಪೋಷಿತ ಯಕ್ಷಗಾನ ಮಂಡಳಿಯೂ 2ನೇ ವರ್ಷದ ತಿರುಗಾಟಕ್ಕೆ ಹೊರಟಿದ್ದರೆ, ದೇಂತಡ್ಕ ಶ್ರೀ ವನದುರ್ಗಾ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯು ಡಿ.7ರಂದು ತಿರುಗಾಟ ಪ್ರಾರಂಭಿಸುತ್ತಿದೆ.

ಶ್ರೀಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯು ನವೆಂಬರ್ 17ರಂದು ಅಭಿಯಾನ ಆರಂಭಿಸಿದ್ದರೆ, ಕೋಟ ಶ್ರೀ ಕ್ಷೇತ್ರ ಅಮೃತೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಸಿಗಂದೂರು ಚೌಡಮ್ಮದೇವಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸೌಕೂರು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಗಳು ಕೂಡ ಹೊಸ ಹುರುಪಿನಲ್ಲಿ ಸಿದ್ಧಗೊಂಡಿವೆ.

ಶ್ರೀಕ್ಷೇತ್ರ ಮಾರಣಕಟ್ಟೆಯ 3 ಮೇಳಗಳು, ಸುಂಕದಕಟ್ಟೆ ಮೇಳ, ನೀಲಾವರ ಮಹಿಷಮರ್ದಿನಿ ಮೇಳ, ಶ್ರೀಕ್ಷೇತ್ರ ಗೋಳಿಗರಡಿ ಮೇಳ, ಶನೀಶ್ವರ ಮೇಳ, ಹಟ್ಟಿಯಂಗಡಿ ಮೇಳ, ಶ್ರೀಕ್ಷೇತ್ರ ಬೊಳ್ಳಂಬಳ್ಳಿ ಪದ್ಮಾವತಿ ದೇವಿ ಮೇಳ ಮುಂತಾದವು ಕೂಡ ಈಗಾಗಲೇ ತಿರುಗಾಟ ಹೊರಟಿದ್ದು, ಕಲಾಸೇವೆ ಮಾಡುತ್ತಿವೆ.

ವಿದ್ಯಾವಂತರು ಬಂದಿದ್ದಾರೆ...
ವಿಶೇಷವೆಂದರೆ, ಹಿಂದೆಲ್ಲ ಯಕ್ಷಗಾನ ಕಲಾವಿದರು ಅವಿದ್ಯಾವಂತರಿರುತ್ತಿದ್ದರು. ಎಂದರೆ, ಬಡತನದಿಂದಾಗಿ ಶಾಲೆಗೆ ಹೋಗಲಾರದೆ, ಯಕ್ಷಗಾನಕ್ಕೆ ಸೇರಿದವರು; ಯಕ್ಷಗಾನಕ್ಕೆ ಸೇರಿದ ಮೇಲೆಯೇ ವಿದ್ಯಾಭ್ಯಾಸ ಕಲಿತವರು. ಈಗ ಪರಿಸ್ಥಿತಿ ಹಾಗಿಲ್ಲ. ಯಕ್ಷಗಾನಕ್ಕೆ ವಿದ್ಯಾವಂತರು ಬರುತ್ತಿದ್ದಾರೆ. ಶಾಲೆ-ಕಾಲೇಜುಗಳಲ್ಲಿ ಯಕ್ಷಗಾನ ಕಲಾವಿದರು ಸೃಷ್ಟಿಯಾಗುತ್ತಿದ್ದಾರೆ. ಈಗ ಮೇಳಗಳು ಕಾಲಮಿತಿ ಪ್ರಯೋಗವನ್ನೇ ನೆಚ್ಚಿಕೊಂಡಿರುವುದರಿಂದ ಮತ್ತು ಇದ್ದ ಕಲಾವಿದರಿಗೂ ಇಂತಿಷ್ಟೇ ಗಂಟೆಗಳವರೆಗೆ ಇರಬಹುದೆಂಬ ಅವಕಾಶವೂ ದೊರೆತಿರುವುದರಿಂದಾಗಿ, ಹಗಲು ಉದ್ಯೋಗಕ್ಕೆ ಹೋಗುವವರು ರಾತ್ರಿ ಕಲಾವಿದರಾಗಿ ದುಡಿಯುತ್ತಿದ್ದಾರೆ.

ಯಕ್ಷಗಾನ ಮೇಗಳಲ್ಲಿ ಪದವೀಧರರಿದ್ದಾರೆ, ವೈದ್ಯರಿದ್ದಾರೆ, ಶಿಕ್ಷಕರಿದ್ದಾರೆ, ಬ್ಯಾಂಕ್ ಉದ್ಯೋಗಿಗಳಿದ್ದಾರೆ, ವಿದ್ಯಾರ್ಥಿಗಳೂ ಇದ್ದಾರೆ. ವಿದ್ಯಾವಂತರು ಯಕ್ಷಗಾನ ರಂಗಕ್ಕೆ ಕಾಲಿಡುವ ಹೊತ್ತಲ್ಲೇ ಯಕ್ಷಗಾನವು ತನ್ನತನ ಕಳೆದುಕೊಳ್ಳುತ್ತಿದೆ, ಪಾರಂಪರಿಕ ಮೌಲ್ಯಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂಬ ಕೂಗು ಕೇಳಿಬರತೊಡಗಿರುವುದರಿಂದ, ಯಕ್ಷಗಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಲಾವಿದರ ಹೊಣೆಗಾರಿಕೆ ಬಹಳ ಹೆಚ್ಚಾಗಿದೆ. ಯಕ್ಷಗಾನಕ್ಕೆ ಅಭ್ಯಾಸ, ಅಧ್ಯಯನ, ಮನನ - ಈ ಕ್ರಿಯೆಗಳು ಬೇಕೇಬೇಕು ಎಂಬುದನ್ನೂ ಅವರು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗಿದೆ.

ಯಕ್ಷಗಾನಕ್ಕೆ ಚ್ಯುತಿಯಾಗದಿರಲಿ ಎಂಬ ಹಾರೈಕೆಯೊಂದಿಗೆ, ತಿರುಗಾಟಕ್ಕೆ ಹೊರಟಿರುವ ಎಲ್ಲ ಕಲಾವಿದರಿಗೆ, ಚೌಕಿಯಲ್ಲಿ ಮತ್ತು ರಂಗಸ್ಥಳದಲ್ಲಿ ದುಡಿದು ಯಕ್ಷಗಾನದ ಏಳಿಗೆಗೆ ಕಾರಣರಾಗುತ್ತಿರುವ ಕಲಾವಿದೇತರ ಸಿಬ್ಬಂದಿಗೆ ಶುಭವಾಗಲಿ, ಯಕ್ಷಗಾನ ಕಲಾ ಮಾತೆಯ ಅನುಗ್ರಹವಾಗಲಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು