ಪೆರ್ಡೂರು ಮೇಳ: ಜನ್ಸಾಲೆ ನಿರ್ಗಮನ, ಧಾರೇಶ್ವರ ಆಗಮನ - ವಿವಾದ ಬೇಡ, ಯಕ್ಷಗಾನ ವಿಜೃಂಭಿಸಲಿ

ಹಳೆ ಮತ್ತು ಹೊಸ ತಲೆಮಾರಿನ ಮೇರು ಭಾಗವತರು ಧಾರೇಶ್ವರ ಮತ್ತು ಜನ್ಸಾಲೆ

ಪ್ರಸ್ತುತ ಚಾಲ್ತಿಯಲ್ಲಿರುವ ಎರಡು ಡೇರೆ ಮೇಳಗಳಲ್ಲಿ ಒಂದಾದ ಪೆರ್ಡೂರು ಯಕ್ಷಗಾನ ಮೇಳವು ತಿರುಗಾಟ ಪ್ರಾರಂಭ ಮಾಡುವ ಕೆಲವೇ ದಿನಗಳ ಮೊದಲು ಪ್ರಧಾನ ಭಾಗವತರ ಬದಲಾವಣೆಯು, ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಸುಬ್ರಹ್ಮಣ್ಯ ಧಾರೇಶ್ವರ ಅವರ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿದೆ. ಯಕ್ಷಗಾನ ವಲಯದಲ್ಲಿಯೂ ಈ ಕುರಿತು ಸಾಕಷ್ಟು ಪರ-ವಿರೋಧ ಚರ್ಚೆಗಳಾದವು.

ಪೆರ್ಡೂರು ಮೇಳವನ್ನು ದಶಕದ ಹಿಂದೆಯೇ ವಿಜೃಂಭಿಸುವಂತೆ ಮಾಡಿ, ಬಳಿಕ ನಿವೃತ್ತರಾಗಿದ್ದ ಮೇರು ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ಮರಳಿದ್ದಾರೆ ಮತ್ತು ಇದುವರೆಗೆ ಪ್ರಧಾನ ಭಾಗವತರಾಗಿ ನವೀನ ಕ್ರಾಂತಿ ಮಾಡಿದ್ದ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರು ಮೇಳದಿಂದ ನಿರ್ಗಮಿಸಿದ್ದಾರೆ ಎಂಬುದು ವಿಷಯವಾದರೂ, ಇದು ಕಲಾವಿದರ ಪರಪ ಮತ್ತು ವಿರೋಧಕ್ಕೆ ಹೋಗಿ, ಮೇಳವನ್ನೇ ವಿರೋಧಿಸುವಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದೆ.
ಈ ಕುರಿತು ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯರು ನೀಡಿದ ಸ್ಪಷ್ಟನೆಯ ಸಾರಾಂಶ ಇಲ್ಲಿದೆ:

ಮಾರಣಕಟ್ಟೆ ಮೇಳದಲ್ಲಿದ್ದ ತನ್ನನ್ನು ಅಭಿಮಾನಿಗಳು ಗುರುತಿಸಿದ ಕಾರಣದಿಂದಾಗಿಯೇ ಪೆರ್ಡೂರು ಶ್ರೀ ಅನಂತಪದ್ಮನಾಭ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಯಜಮಾನರಾದ ವೈ. ಕರುಣಾಕರ ಶೆಟ್ಟರು ಮೇಳಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಒಂಬತ್ತು ವರ್ಷಗಳ ಕಾಲ ಮೇಳವನ್ನು ಯಶಸ್ವಿಯಾಗಿ ಮುನ್ನಡೆಸಿದ್ದೇನೆ. ಸೌಹಾರ್ದಯುತವಾಗಿ ಮೇಳವನ್ನು ನಡೆಸಿ, ಪ್ರೊ.ಪವನ್ ಕಿರಣ್‌ಕೆರೆ ಅವರ ಮೇಘರಂಜಿನಿ, ಶಂಕರಾಭರಣ, ಗಗನತಾರೆ, ಗೋಕುಲಾಷ್ಟಮಿ, ಕ್ಷಮಯಾಧರಿತ್ರಿ, ಶತಮಾನಂ ಭವತಿ, ಅಹಂ ಬ್ರಹ್ಮಾಸ್ಮಿ, ಮಾನಸಗಂಗಾ, ಶಪ್ತಭಾಮಿನಿ ಪ್ರಸಂಗಗಳು, ಮಣೂರು ವಾಸುದೇವ ಮಯ್ಯರ ಇಂದ್ರನಾಗ, ಪುಷ್ಪಸಿಂಧೂರಿ, ದೇವಗಂಗೆ, ಸೂರ್ಯಸಂಕ್ರಾಂತಿ ಮೊದಲಾದ ಪ್ರಸಂಗಗಳನ್ನು ಕಥೆಯ ಸತ್ತ್ವಕ್ಕೆ, ಅದು ನೀಡುವ ಸಂದೇಶಕ್ಕೆ ಚ್ಯುತಿಯಿಲ್ಲದಂತೆ ನಿರ್ದೇಶಿಸಿ ಆಡಿಸಿದ್ದೇನೆ ಎಂದು ಜನ್ಸಾಲೆ ತಾವು ನೀಡಿದ ಸ್ಪಷ್ಟೀಕರಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೊರೋನಾ ಕಾರಣದಿಂದಾಗಿ ಎರಡು ವರ್ಷ ತಿರುಗಾಟಕ್ಕೆ ಸಮಸ್ಯೆಯಾಗಿತ್ತು. ಈ ಬಾರಿ ಮೇಳ ಹೊರಡಲಿರುವಾಗ ಮೇಳಕ್ಕೆ ಜನ್ಸಾಲೆ ಇಲ್ಲ ಎಂಬ ಸುದ್ದಿ ಹರಿದಾಡಿದಾಗ, ಗೊಂದಲ ನಿವಾರಣೆಗಾಗಿ ತಾವೇ ಕರುಣಾಕರ ಶೆಟ್ಟರನ್ನು ಸಂಪರ್ಕಿಸಿರುವುದಾಗಿಯೂ, ತಿರುಗಾಟ ಸಂದರ್ಭದಲ್ಲಿ ಮೇಳದ ಹೊರತಾದ ಕಾರ್ಯಕ್ರಮಗಳಿಗೆ ಭಾಗವಹಿಸಬಾರದೆಂಬ ಷರತ್ತು ಒಡ್ಡಿದ್ದರು. ಅದಕ್ಕೆ ಒಪ್ಪಿ, ಪ್ರದರ್ಶನಗಳ ಪೂರ್ವತಯಾರಿಯಲ್ಲೂ ಭಾಗವಹಿಸಿದ್ದೆ. ಕೆಲವೆಡೆ ಕರಪತ್ರಗಳಲ್ಲಿಯೂ ನಾನು ಪ್ರಧಾನ ಭಾಗವತನೆಂದು ಮುದ್ರಿಸಲಾಗಿತ್ತು. ಜೀವನೋಪಾಯಕ್ಕಾಗಿ ಕಲೆಯೊಂದೇ ದಾರಿಯಾಗಿರುವುದರಿಂದ, ಮೇಳದ ಆಟದ ಸಮೀಪವಿರುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ, ದೂರವಿದ್ದರೆ ಭಾಗವಹಿಸುವೆ. ಅವಕಾಶ ಬಂದಾಗ ಸಂಘಟಕರೇ ಮೇಳದ ಯಜಮಾನರನ್ನು ಸಂಪರ್ಕಿಸುವಂತೆ ತಿಳಿಸಿದ್ದೆ. ಆದರೆ, ಕಳುಹಿಸಿಕೊಡಲು ಸಾಧ್ಯವಿಲ್ಲ ಎಂದು ಯಜಮಾನರು ನಿರಾಕರಿಸಿರುವ ವಿಷಯ ತಿಳಿಯಿತು.

ಮೇಳ ತಿರುಗಾಟ ಆರಂಭಿಸಲು 10 ದಿನ ಇರುವಾಗ ಮೇಳಕ್ಕೆ ತೊಂದರೆ ಕೊಡುವುದು ಸರಿಯಲ್ಲ, ಕಲಾವಿದನಾಗಿ ಮೇಳನಿಷ್ಠೆ  ತೋರಿಸಬೇಕು, ಮೇಳದ ವ್ಯವಸ್ಥೆಗೆ ಕೊನೆ ಕ್ಷಣದಲ್ಲಿ ಧಕ್ಕೆ ಬರಬಾರದು, ಮೇಳವನ್ನು ನಂಬಿಕೊಂಡ ಇತರ ಕಲಾವಿದ, ಸಿಬಂದಿಗೆ ತೊಂದರೆಯಾಗಬಾರದು ಎಂದು ನಾನು ಮೇಳದ ಯಜಮಾನರ ಎಲ್ಲ ಷರತ್ತುಗಳಿಗೂ ಒಪ್ಪಿ, ಹೊರಗಿನ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ್ದೆ. ಅದರ ಮರುದಿನ ಬೆಳಗ್ಗೆ ಇದ್ದಕ್ಕಿದ್ದಂತೆ ಕರೆ ಮಾಡಿದ ಕರುಣಾಕರ ಶೆಟ್ಟರು, ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ. ನಾನು ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತೇನೆ ಎಂದು ಬಿಟ್ಟರು. ಇದು ನನಗೆ ದಿಗಿಲಾಯಿತು ಎಂದು ವಿವರಿಸಿದ್ದಾರೆ.

ಈ ಸಂದರ್ಭದಲ್ಲಿ ಬೇರೆ ಬೇರೆ ಮೇಳಗಳಿಂದ ನನಗೆ ಆಹ್ವಾನ ಬಂದರೂ ಕೊನೆ ಹಂತದಲ್ಲಿ ಅಲ್ಲಿನ ವ್ಯವಸ್ಥೆಗೆ ತೊಂದರೆಯಾಗಬಾರದು, ಅಲ್ಲಿನ ಕಲಾವಿದರಿಗೆ ಇರಿಸುಮುರುಸು ಆಗಬಾರದು ಎಂದು ನಾನು ಯಾವುದೇ ಮೇಳದ ಜತೆಗೂ ಒಪ್ಪಂದ ಮಾಡಿಕೊಳ್ಳಲಿಲ್ಲ. ಒಬ್ಬ ಪ್ರಸಿದ್ಧ ಭಾಗವತ ಮೇಳ ಇಲ್ಲದೇ ಇರಬಾರದು ಎಂಬ ಕಾಳಜಿಯಿಂದ ನನಗೆ ಆಹ್ವಾನ ಇತ್ತ ಎಲ್ಲರಿಗೂ ನಾನು ಋಣಿ. ಯಾವುದೇ ಮೇಳದವರು, ಸಂಘಟಕರು ಆಹ್ವಾನಿಸಿದರೂ ಮೇಳದ ಆಡಳಿತ ಹಾಗೂ ಕಲಾವಿದರ ಸಹಮತದ ಮೇರೆಗೆ ನಾನು ಪ್ರೀತಿಯಿಂದ ಭಾಗವಹಿಸಲು ಸಿದ್ಧನಿದ್ದೇನೆ. ಉಳಿದಂತೆ ಗಾನವೈಭವ, ತಾಳಮದ್ದಳೆಗಳಲ್ಲಿ ಸಿಕ್ಕೇ ಸಿಗುತ್ತೇನೆ. 9 ವರ್ಷಗಳ ಕಾಲ ನನಗೆ ಅನ್ನದ ಋಣ ನೀಡಿದ, ನನ್ನ ಪ್ರಸಿದ್ಧಿಯ ಕಿರೀಟಕ್ಕೆ ಗರಿ ತೊಡಿಸಿದ ಪೆರ್ಡೂರು ಮೇಳದ ಮುಂದಿನ ತಿರುಗಾಟ ಯಶಸ್ವಿಯಾಗಿ ನಡೆಯಲಿ. ಈವರೆಗೆ ನನ್ನ ಜತೆಗಿದ್ದ ಮೇಳದ ಯಜಮಾನರು, ಸರ್ವ ಕಲಾವಿದರು, ಸಿಬ್ಬಂದಿಗೆ ನಾನು ನಂಬಿದ ಬ್ರಹ್ಮಲಿಂಗೇಶ್ವರ ಹಾಗೂ ಪದುಮನಾಭ ಸ್ವಾಮಿ ಒಳ್ಳೆಯದನ್ನು ಮಾಡಲಿ. ಹೊಸದಾಗಿ ಮತ್ತೆ ಮೇಳಕ್ಕೆ ಆಗಮಿಸಿದ ಧಾರೇಶ್ವರ ಭಾಗವತರಿಗೆ ಶುಭಹಾರೈಸುವೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಕುರಿತಾಗಲೀ, ಮೇಳದ ಕುರಿತಾಗಲೀ, ಧಾರೇಶ್ವರ ಭಾಗವತರ ಕುರಿತಾಗಲೀ ಯಾರೂ ಋಣಾತ್ಮಕ ಸಂದೇಶಗಳನ್ನು ಹಾಕಬಾರದಾಗಿ ಈ ಮೂಲಕ ವಿನಂತಿಸುತ್ತೇನೆ. ಮೇಳದ ಯಾವುದೇ ಕಲಾವಿದರಿಗೆ, ಕಾರ್ಯಕ್ರಮಕ್ಕೆ ತೊಂದರೆ ನೀಡಬಾರದಾಗಿ ನನ್ನ ಕಳಕಳಿಯ ವಿನಂತಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ ಜನ್ಸಾಲೆ ರಾಘವೇಂದ್ರ ಆಚಾರ್ಯ.

ಅಭಿಮಾನಿಗಳೇನು ಮಾಡಿದರು?
ಆದರೆ, ಯಕ್ಷಗಾನವು ವ್ಯಕ್ತಿ ಕೇಂದ್ರಿತವಾದ ಎಲ್ಲ ಲಕ್ಷಣಗಳನ್ನೂ ತೋರಿಸಿದ ಅಭಿಮಾನಿಗಳು ಈ ಬಗ್ಗೆ ಪರ-ವಿರೋಧ ಚರ್ಚೆಗಿಳಿದರು. ಸಾಕಷ್ಟು ಋಣಾತ್ಮಕ ಸಂದೇಶಗಳು ಹರಿದಾಡತೊಡಗಿದವು. ಮೇಳಕ್ಕೆ ಕಲೆಕ್ಷನ್ ಆಗುವುದಿಲ್ಲ, ಮೇಳ ಹಾಳಾಗಿ ಹೋಗುತ್ತದೆ ಅಂತೆಲ್ಲ ಕೆಲವರು ಬರೆದರು, ಮೇಳವನ್ನೂ ನಿಂದಿಸಿದರು. ಪಟ್ಲ ಸತೀಶ ಶೆಟ್ಟರಂತೆ ಜನ್ಸಾಲೆಯವರೂ ಮೇಳ ಕಟ್ಟಬೇಕೆಂಬ ಒತ್ತಾಸೆಯೂ ಕೇಳಿಬಂದಿತು. ಆದರೆ, ಈ ಪರಿಸ್ಥಿತಿಯಲ್ಲಿ ಮೇಳ ಕಟ್ಟುವುದು ಅಷ್ಟು ಸುಲಭದ ಮಾತಲ್ಲ.

ಇನ್ನು, ಮೇಳದ ಯಜಮಾನರು ನಿಬಂಧನೆ ಹಾಕಿದ್ದಾರೆ ಎಂದರೆ ಅದಕ್ಕೊಂದು ಕಾರಣವೂ ಇರುತ್ತದೆ. ಸಾಲಿಗ್ರಾಮ ಮೇಳವೂ ಹೀಗೆಯೇ, ತನ್ನ ಮೇಳದ ಕಲಾವಿದರು ತಿರುಗಾಟದ ಅವಧಿಯಲ್ಲಿ ಹೊರಗಿನ ಕಾರ್ಯಕ್ರಮಗಳಿಗೆ ಹೋಗುವಂತಿಲ್ಲ ಎಂದು ಷರತ್ತು ವಿಧಿಸಿದ್ದಾರೆ. ಇದು ಕಲಾವಿದರ ಆರೋಗ್ಯದ ದೃಷ್ಟಿಯಿಂದ ಅತ್ಯಮೂಲ್ಯ ಕ್ರಮ ಎಂದು ಈ ಹಿಂದೆ ಕಲಾವಿದರು, ಕಲಾವಿದರ ಅಭಿಮಾನಿಗಳನೇಕರು ಈ ನಡೆಯನ್ನು ಸ್ವಾಗತಿಸಿದ್ದರು. ನಿದ್ದೆಗೆಟ್ಟು ಹಲವು ಕಾರ್ಯಕ್ರಮಗಳಿಗೆ ಒಪ್ಪಿಕೊಂಡು, ಹಗಲು ಕೂಡ ನಿದ್ದೆಯಿಲ್ಲದೆ ಆರೋಗ್ಯಕ್ಕೆ ಸಮಸ್ಯೆ ಮಾಡಿಕೊಳ್ಳುವ ಕಲಾವಿದರನ್ನು ಈ ಹಿಂದೆ ಹಲವು ಬಾರಿ ನೋಡಿದ್ದೇವೆ. ಎಷ್ಟೋ ಕಲಾವಿದರು ಹೃದಯಾಘಾತವನ್ನೋ, ಅಪಘಾತವನ್ನೋ ಎದುರಿಸಿದವರಿದ್ದಾರೆ. ಇದಕ್ಕೆಲ್ಲ ನಿದ್ದೆಗೇಡುತನವೇ ಪ್ರಧಾನ ಕಾರಣ ಎಂದು ಹಲವು ಬಾರಿ ಸಾಬೀತಾಗಿದೆ. ಹೀಗಾಗಿ, ಕಲಾವಿದರ ಆರೋಗ್ಯದ ದೃಷ್ಟಿಯಿಂದ ಈ ನಡೆ ಸ್ವೀಕಾರಾರ್ಹ.

ಪೆರ್ಡೂರು ಮೇಳವೂ ಇದೇ ಕಾರಣಕ್ಕೆ ಷರತ್ತು ವಿಧಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಜನ್ಸಾಲೆಯವರು ಸ್ಟಾರ್ ಭಾಗವತ, ಅತ್ಯುತ್ತಮ ಸ್ವರಮಾಧುರ್ಯದಿಂದ ಪ್ರೇಕ್ಷಕರನ್ನು ಸೆಳೆಯಬಲ್ಲರು ಎಂಬುದು ನಿರ್ವಿವಾದ. ಆದರೆ, ಅಂಥ ಕಲಾವಿದರಿಗೇ ಮೇಳ ಇಲ್ಲದಂತಾಗುತ್ತದೆ ಎಂದಾಗುವಾಗ, ಮೇಳದ ಯಜಮಾನರ ಮನಸ್ಥಿತಿಯ ಹಿಂದೆ ಏನಿದೆ ಎಂಬುದು ಯಜಮಾನರೇ ಉತ್ತರಿಸಬೇಕಷ್ಟೆ. ಹೀಗಾಗಿ, ಏನೂ ತಿಳಿಯದೆ ಪರ-ವಿರೋಧ ಚರ್ಚೆ ಮಾಡುವುದು ಅಪಚಾರವಾದೀತು. ಅಭಿಮಾನ ಇರಬೇಕು, ಆದರೆ ಅದರ ಹಿಂದೆ ಸತ್ಯದ ಸತ್ತ್ವ ಇರಬೇಕು ಎಂಬುದು ಬಹುತೇಕ ಯಕ್ಷಗಾನ ಅಭಿಮಾನಿಗಳ ಇಂಗಿತ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಂತ ಕರೆದುಕೊಂಡ ಕೆಲವರು ಮಾಡಿದ ಪೋಸ್ಟ್‌ಗಳನ್ನು ನೋಡಿದರೆ, ಯಕ್ಷಗಾನ ಯಾವ ಮಟ್ಟಿಗೆ ತಲುಪಿತು ಎಂಬುದು ಹಲವರನ್ನು ಕಾಡಿದ ಆತಂಕ. ಜನ್ಸಾಲೆಯವರೇ ಹೇಳಿದ್ದಾರೆ, - ಮನಸ್ಸಿಗೆ ನೋವಾಗಿದ್ದು ಹೌದು, ಆದರೆ ವಿವಾದ ಮಾಡಲು ಹೋಗಬೇಡಿ. ಧಾರೇಶ್ವರರಿಗೆ, ಪೆರ್ಡೂರು ಮೇಳಕ್ಕೆ ಒಳಿತೇ ಆಗಲಿ ಅಂತ ಹಾರೈಸಿರುವಾಗ ಅವರೊಳಗಿನ ಯಕ್ಷಗಾನಾಭಿಮಾನ ಜಾಗೃತವಾಗಿದೆ ಎಂದೇ ಅರ್ಥ.

ಬದಲಾವಣೆ ಜಗದ ನಿಯಮ. ಹೀಗಿರುವಾಗ ಯಕ್ಷಗಾನವೆಂಬ ಚಲನಶೀಲ ಮಾಧ್ಯಮದಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತವೆ. ಯಕ್ಷಗಾನ ಮೆರೆದರೆ ಸಾಕು. ಈ ನಿಟ್ಟಿನಲ್ಲಿ ಎಲ್ಲವೂ ಸುಸೂತ್ರವಾಗಿ ಆಗಿ, ಜನ್ಸಾಲೆಯವರ ಕಂಠ ಸಿರಿ ಮತ್ತೆ ಮತ್ತೆ ಕೇಳುವಂತಾಗಲಿ, ಧಾರೇಶ್ವರರೂ ಯಕ್ಷಗಾನವನ್ನು ಉತ್ತುಂಗಕ್ಕೇರಿಸಲಿ ಎಂಬುದಷ್ಟೇ ಯಕ್ಷಗಾನ ಅಭಿಮಾನಿಗಳ ಮನದ ಬಯಕೆ. ಯಕ್ಷಗಾನವು ವಿಶ್ವಗಾನವೇ ಆಗಲಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು