ರಂಗದಲ್ಲಿ ಲೀಲಕ್ಕನೇ ಹರಿಯಣ್ಣನಿಗೆ ಗುರು: ಉಜಿರೆ ಅಶೋಕ ಭಟ್

ಕಾಶಿಪಟ್ಣ ಪಂಚಲಿಂಗೇಶ್ವರ ಯಕ್ಷ ಪ್ರಶಸ್ತಿ ಸ್ವೀಕರಿಸಿದ ಬೈಪಾಡಿತ್ತಾಯ ದಂಪತಿ

ಕಾಶಿಪಟ್ಣ ಪಂಚಲಿಂಗೇಶ್ವರ ಯಕ್ಷ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ ದಂಪತಿ ಹಾಗೂ ಎಂ.ಕೆ.ವಸಂತ ಮುರದಬೆಟ್ಟು, ಪೆರಿಂಜೆ ಇವರಿಗೆ ಗೌರವಾರ್ಪಣೆ.

ವೇಣೂರು: ಇಲ್ಲಿಗೆ ಸಮೀಪದ ಕಾಶಿಪಟ್ಣ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನ.29ರಂದು ಸೋಮವಾರ ಕಾರ್ತಿಕ ದೀಪೋತ್ಸವ ಸಂದರ್ಭದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಗುರು ದಂಪತಿಯಾದ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಲೀಲಾವತಿ ಬೈಪಾಡಿತ್ತಾಯ ಅವರಿಗೆ ಪಂಚಲಿಂಗೇಶ್ವರ ಯಕ್ಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿ ಮಾತನಾಡಿದ ಕಲಾವಿದ, ಹಿರಿಯ ಸಂಘಟಕ ಉಜಿರೆ ಅಶೋಕ್ ಭಟ್ ಅವರು, "ಬೈಪಾಡಿತ್ತಾಯರು ಮೇರು ಗುರುಗಳಾಗಿದ್ದು, ಅವರ ಮೊದಲ ಉತ್ಪನ್ನವೇ ಲೀಲಾವತಿ ಬೈಪಾಡಿತ್ತಾಯರು. ಮದುವೆಯಾದ ಬಳಿಕ ಕೈಹಿಡಿದ ಪತ್ನಿಗೆ ಯಕ್ಷಗಾನದ ಭಾಗವತಿಕೆ ಕಲಿಸಿ, ಅವರನ್ನು ಉತ್ತಮ ಭಾಗವತರನ್ನಾಗಿ ರೂಪಿಸಿದ್ದಾರೆ. ಇದರ ಪರಿಣಾಮವಾಗಿ ಯಕ್ಷಗಾನ ರಂಗಕ್ಕೆ ಉತ್ತಮ ಭಾಗವತಿಕೆಯ ಗುರುವೂ ದೊರಕಿದ್ದಾರೆ" ಎಂದರು.

ಮನೆಯಲ್ಲಿ ಲೀಲಕ್ಕನಿಗೆ ಹರಿನಾರಾಯಣರೇ ಯಕ್ಷಗಾನದ ಗುರು. ಮಹಿಳಾ ಭಾಗವತರನ್ನು ರೂಪಿಸಿದ್ದೇ ಹರಿಯಣ್ಣ. ಆದರೆ, ರಂಗವೇರಿದ ಬಳಿಕ, ಭಾಗವತನನ್ನು ಅನುಸರಿಸಿಕೊಂಡು ಹೋಗುವುದು ಮದ್ದಳೆಗಾರನ ಹೊಣೆ. ಹೀಗಾಗಿ ಲೀಲಕ್ಕನೇ ಹರಿಯಣ್ಣನಿಗೆ ರಂಗದಲ್ಲಿ ಗುರು. ಇದು ಯಕ್ಷಗಾನದ ಪರಂಪರೆ ಎಂದು ಅಶೋಕ ಭಟ್ ಹೇಳಿದರು.

ಮೇಳಗಳಲ್ಲಿ ತಿರುಗಾಟ ಮಾಡಿದ, ಪ್ರಸಂಗದ ನಡೆ, ಪಾತ್ರದ ಭಾವ, ರಸಕ್ಕೆ ಅನುಗುಣವಾಗಿ, ಪಾತ್ರಧಾರಿಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಪಾತ್ರ ಹಂಚಿಕೆ ಮಾಡುತ್ತಾ, ಅರುವ ಮೇಳದಲ್ಲಿರುವಾಗ ಹೊಸದಾಗಿಯೇ ಸಿದ್ಧವಾಗುತ್ತಿದ್ದ ತುಳು ಪ್ರಸಂಗಗಳ ಪ್ರದರ್ಶನವು ಯಶಸ್ವಿಯಾಗುವಲ್ಲಿ ಲೀಲಾವತಿ ಬೈಪಾಡಿತ್ತಾಯರ ಕೊಡುಗೆ ಹಿರಿದಾದುದು. ಅವರು ಅಕ್ಷರಾಭ್ಯಾಸವನ್ನು ಶಾಲೆಗೆ ಹೋಗಿ ಕಲಿಯದಿದ್ದರೂ, ಅವರ ಭಾಷಾ ಶುದ್ಧಿ, ಪದ ವಿಭಜನೆ, ಉಚ್ಚಾರ - ಇಂದಿನ ಭಾಗವತರಿಗೆ ಅನುಕರಣೀಯ. ಅವರದು ಸತ್ತ್ವಭರಿತ ಭಾಗವತಿಕೆ ಎಂದು ಉಜಿರೆ ಅಶೋಕ ಭಟ್ಟರು ಹೇಳಿದರು.

ಸನ್ಮಾನಕ್ಕೆ ಕೃತಜ್ಞತಾರೂಪದಲ್ಲಿ ಲೀಲಾವತಿ ಬೈಪಾಡಿತ್ತಾಯರು ಹಾಡಿದಾಗ... (ವಿಡಿಯೋ):


ಯಕ್ಷಗಾನ ರಂಗ ಕಂಡ ಶ್ರೇಷ್ಠ ಹಿಮ್ಮೇಳ ವಾದಕರಾದ ನೆಡ್ಲೆ ನರಸಿಂಹ ಭಟ್ಟರ ಗರಡಿಯಲ್ಲಿ, ದಿವಾಣ ಭೀಮ ಭಟ್ಟ, ಕುದ್ರೆಕೋಡ್ಲು ಹಿರಿಯ ರಾಮ ಭಟ್, ಚಕ್ಕುಲಿ ಶಾಂ ಭಟ್, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ ಮುಂತಾದವರೊಂದಿಗೆ ಒಡನಾಟವಿದ್ದ ಹರಿನಾರಾಯಣ ಬೈಪಾಡಿತ್ತಾಯರು ಯಕ್ಷಗಾನದ ಚೆಂಡೆ-ಮದ್ದಳೆ ವಾದನದ ಸೂಕ್ಷ್ಮಗಳನ್ನು, ರಂಗನಡೆಗಳನ್ನು, ಪ್ರಸಂಗ ನಡೆಗಳನ್ನು ಕರಗತ ಮಾಡಿಕೊಂಡು, ಈಗ ಶ್ರೇಷ್ಠ ಗುರುಗಳಾಗಿ ಯಕ್ಷಗಾನದ ಪರಂಪರೆಯನ್ನು ದಾಟಿಸುತ್ತಿದ್ದಾರೆ. ಕಡತೋಕ, ಬಲಿಪ, ಅಗರಿ, ಮಂಡೆಚ್ಚ, ಇರಾ ಮುಂತಾದ ಆ ಕಾಲದ ಭಾಗವತರಿಗೆ, ಕುರಿಯ, ಅಮ್ಮಣ್ಣಾಯ, ಪದ್ಯಾಣ, ಹೊಳ್ಳರೇ ಮೊದಲಾದ ಎರಡನೇ ಪೀಳಿಗೆಯ ಭಾಗವತರಿಗೆ ಮತ್ತು ಈಗಿನ ಪಟ್ಲ, ಕನ್ನಡಿಕಟ್ಟೆ ಮುಂತಾದ ಹೊಸ ಪೀಳಿಗೆಯ ಭಾಗವತರ ಹಾಡಿಗೂ ಬೈಪಾಡಿತ್ತಾಯರು ಮದ್ದಳೆ ನುಡಿಸಿ ಅನುಭವ ಸಂಪಾದಿಸಿದ್ದಾರೆ ಮತ್ತು ತಮ್ಮತನವನ್ನೆಂದಿಗೂ ಬಿಟ್ಟುಕೊಟ್ಟಿಲ್ಲ ಎಂದು ಅಶೋಕ ಭಟ್ಟರು ನೆನಪಿಸಿದರು.
ಯಕ್ಷಗಾನ ವಿದ್ಯಾರ್ಜನೆಗೆ ಬಂದ ಮಕ್ಕಳನ್ನು ತಮ್ಮದೇ ಮಕ್ಕಳಂತೆ ಪುತ್ರವಾತ್ಸಲ್ಯದಿಂದ ಕಲಿಸಿದ ಈ ಗುರು ದಂಪತಿಗಳು ಅದೆಷ್ಟೋ ಕಲಾವಿದರನ್ನು ಯಕ್ಷಗಾನ ರಂಗಕ್ಕೆ ನೀಡಿದ್ದಾರೆ. ಈಗ ಹೆಚ್ಚಿನ ಮೇಳಗಳಲ್ಲಿರುವ ಚೆಂಡೆ-ಮದ್ದಳೆ ವಾದಕರು ಬೈಪಾಡಿತ್ತಾಯರ ಗರಡಿಯಲ್ಲೇ ಬೆಳೆದವರು ಎಂದು ಅಶೋಕ ಭಟ್ ಹೇಳಿದರು.

ಇದೇ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ಎಲೆಮರೆಯ ಕಾಯಿಯಂತೆ ಯಕ್ಷಗಾನಕ್ಕಾಗಿ ಸೇವೆ ಸಲ್ಲಿಸಿದ ಎಂ.ಕೆ.ವಸಂತ ಮುರದಬೆಟ್ಟು, ಪೆರಿಂಜೆ ಅವರಿಗೂ ಕಾಶಿಪಟ್ಣ ಪಂಚಲಿಂಗೇಶ್ವರ ಯಕ್ಷ ಪ್ರಶಸ್ತಿಯನ್ನು ಅವರ ಅನುಪಸ್ಥಿತಿಯಲ್ಲಿ ಪತ್ನಿಗೆ ನೀಡಿ ಗೌರವಿಸಲಾಯಿತು.

ಕೇಳ-ಕಾಶಿಪಟ್ಣದ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆ.ಅನಂತ ಆಸ್ರಣ್ಣರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೇಮರಾಜ್ ಬೆಳ್ಳಿಬೀಡು, ಪಿ.ಕೆ.ರಾಜು ಪೂಜಾರಿ, ಮಿತ್ತೊಟ್ಟುಗುತ್ತು ವೇದಿಕೆಯಲ್ಲಿದ್ದರು.

ಆ ಬಳಿಕ, ಹೆಸರಾಂತ ಹಾಸ್ಯ ಕಲಾವಿದರ ಮುಮ್ಮೇಳದಲ್ಲಿ ಗದಾಯುದ್ಧ ಯಕ್ಷಗಾನ ಪ್ರಸಂಗ ಪ್ರದರ್ಶನಗೊಂಡಿತು. ಭಾಗವತಿಕೆಯಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಚೆಂಡೆ-ಮದ್ದಳೆಯಲ್ಲಿ ಚಂದ್ರಶೇಖರ ಭಟ್ ಕೊಂಕಣಾಜೆ ಮತ್ತು ಸೋಮಶೇಖರ ಭಟ್ ಕಾಶಿಪಟ್ಣ, ಚಕ್ರತಾಳದಲ್ಲಿ ದೇವಿಪ್ರಸಾದ್ ಗುರುವಾಯನಕೆರೆ ಭಾಗವಹಿಸಿದ್ದರು. ಕೌರವನಾಗಿ ಸೀತಾರಾಮ ಕುಮಾರ್ ಕಟೀಲು, ಭೀಮಸೇನನಾಗಿ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಹಾಗೂ ಮಿಜಾರು ತಿಮ್ಮಪ್ಪ, ಸುಂದರ ಬಂಗಾಡಿ, ವಾಮನ ಕುಮಾರ್ ವೇಣೂರು, ರಾಜೇಶ್ ದೇವಾಡಿಗ ಕುದ್ಯಾಡಿ, ಆದರ್ಶ ಮೂಡಬಿದ್ರಿ, ಪ್ರದ್ಯುಮ್ನ ಪೆಜತ್ತಾಯ ಮತ್ತಿತರರು ಮುಮ್ಮೇಳದಲ್ಲಿ ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು