ಮಂಗಳೂರು: ಖ್ಯಾತ ಯಕ್ಷಗಾನ ಕಲಾವಿದ ದಿವಂಗತ ಪುಳಿಂಚ ರಾಮಯ್ಯ ಶೆಟ್ಟಿ ಹೆಸರಿನಲ್ಲಿ ಕೊಡಮಾಡುವ ಪುಳಿಂಚ ಪ್ರಶಸ್ತಿ 2022ಗೆ ಐವರು ಯಕ್ಷಗಾನ ಕಲಾವಿದರು ಆಯ್ಕೆಯಾಗಿದ್ದಾರೆ.
ಏ.23ರಂದು ಪುಳಿಂಚ ಸೇವಾ ಪ್ರತಿಷ್ಠಾನದ ವತಿಯಿಂದ ಪ್ರಶಸ್ತಿ ಪ್ರದಾನ, ಯಕ್ಷಗಾನ ಬಯಲಾಟ, ತುಳು ಹಾಸ್ಯ ನಾಟಕ ಪ್ರದರ್ಶನ ಮತ್ತು ಕಲ್ಲುರ್ಟಿ ದೈವದ ತ್ರೈಮಾಸಿಕ ಕೋಲ ಮತ್ತಿತರ ಕಾರ್ಯಕ್ರಮಗಳು ಸಂಜೆ 4ರಿಂದ ನಡೆಯಲಿವೆ. ಬಂಟ್ವಾಳ ತಾಲ್ಲೂಕು ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮದ ಚೆಂಡೆ ಶ್ರೀ ಕಾರಣಿಕದ ಕಲ್ಲುರ್ಟಿ ದೈವಸ್ಥಾನ ಆವರಣದ ಬೋಳ್ನಾಡುಗುತ್ತು ದಿ.ಸರೋಜಿನಿ ರಾಮಯ್ಯ ಶೆಟ್ಟಿ ಪುಳಿಂಚ ಬಯಲು ರಂಗಮಂಟಪದಲ್ಲಿ ಕಾರ್ಯಕ್ರಮವು ನಡೆಯಲಿದೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಯಕ್ಷ ಕಲಾವಿದ ಪುಳಿಂಚ ರಾಮಯ್ಯ ಶೆಟ್ಟಿ ಹೆಸರಿನಲ್ಲಿ ಪ್ರತಿವರ್ಷ ಪುಳಿಂಚ ಪ್ರಶಸ್ತಿಗೆ ಯಕ್ಷಗಾನ ಕಲಾವಿದರಾದ ಬೆಳ್ಳಾರೆ ವಿಶ್ವನಾಥ ರೈ, ಬಾಯಾರು ರಘುನಾಥ ಶೆಟ್ಟಿ, ಕೊಳ್ತಿಗೆ ನಾರಾಯಣ ಗೌಡ, ಜಪ್ಪು ದಯಾನಂದ ಶೆಟ್ಟಿ ಮತ್ತು ಮುಂಡಾಜೆ ಬಾಲಕೃಷ್ಣ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಶೆಟ್ಟಿ ಪುಳಿಂಚ ಹೇಳಿದರು. ಪ್ರಶಸ್ತಿಯು ತಲಾ ₹25 ಸಾವಿರ ನಗದು, ಪ್ರಶಸ್ತಿಪತ್ರ ಒಳಗೊಂಡಿದೆ. ಅದೇ ರೀತಿ, ಕರ್ನಾಟಕ ಮೇಳದಲ್ಲಿ ಸೇವೆ ಸಲ್ಲಿಸಿದ ಪೂವಪ್ಪ ಪೂಜಾರಿ ಚೆಂಡೆ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ಜೀವಿತ ಚೆಂಡೆ ಅವರನ್ನು ಸನ್ಮಾನಿಸಲಾಗುವುದು.
ಶನಿವಾರ (ಏ.23) ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಸಂಸ್ಮರಣಾ ಭಾಷಣ ಮಾಡಲಿದ್ದು, ಯಕ್ಷಾಂಗಣ ಮಂಗಳೂರು ಇದರ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡುವರು.
ಸಂಜೆ ಗಂಟೆ 4 ಗಂಟೆಗೆ ‘ಚಂದ್ರಾವಳಿ ವಿಲಾಸ’ ಯಕ್ಷಗಾನ ಹಾಸ್ಯ ಪ್ರಸಂಗ, ನಿಧಿ ಶೆಟ್ಟಿ ಪುಳಿಂಚ ಅವರಿಂದ ಭರತನಾಟ್ಯ, ಗೌರವ್ ರೈ ತಂಡದಿಂದ ‘ವಂದೇ ಮಾತರಂ’ ದೇಶಭಕ್ತಿಗೀತೆ ಹಾಗೂ ಸಭಾ ಕಾರ್ಯಕ್ರಮದ ಬಳಿಕ ರಾತ್ರಿ ಗಂಟೆ 9ಕ್ಕೆ ಚಾಪರ್ಕ ಕಲಾವಿದರಿಂದ ದೇವದಾಸ್ ಕಾಪಿಕಾಡ್ ನಿರ್ದೇಶಿಸಿರುವ ‘ಕುರೆಪಟ್’ ತುಳು ಹಾಸ್ಯ ನಾಟಕ ಪ್ರದರ್ಶನವಿದೆ. ರಾತ್ರಿ 12 ಗಂಟೆಯಿಂದ ಕಲ್ಲುರ್ಟಿ ದೈವದ ತ್ರೈವಾರ್ಷಿಕ ಕೋಲ ಮತ್ತು ಹರಕೆಯ ಕೋಲ ದೊಂದಿ ಬೆಳಕಿನಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಪುಳಿಂಚ ಪ್ರತಿಷ್ಠಾನದ ಸಲಹೆಗಾರ ಭಾಸ್ಕರ ರೈ ಕುಕ್ಕುವಳ್ಳಿ, ಕೋಶಾಧಿಕಾರಿ ಪ್ರತಿಭಾ ಶ್ರೀಧರ ಶೆಟ್ಟಿ ಪುಳಿಂಚ, ಬೆಜ್ಜದಗುತ್ತು ಸುನಿಲ್‍ಕುಮಾರ್ ಶೆಟ್ಟಿ, ಸತೀಶ್ ಪೂಜಾರಿ ಚೆಂಡೆ ಭಾಗವಹಿಸಿದ್ದರು.
Tags:
ಸುದ್ದಿ