ಇಡಗುಂಜಿ ಕೃಷ್ಣ ಯಾಜಿ: ಲಯ, ಲಾಸ್ಯದ ಚೆಂಡೆಯ ನುಡಿ ಸಾಧಕ


ಬಡಗುತಿಟ್ಟು ಯಕ್ಷಗಾನ ರಂಗದ ಅಪ್ರತಿಮ ಚೆಂಡೆ ವಾದಕ ಕೃಷ್ಣ ಯಾಜಿ ಅವರು 2020ರ ಏಪ್ರಿಲ್ 24ರ ಶುಕ್ರವಾರ ತಮ್ಮ 74ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು. ಬಡಗು ಯಕ್ಷಗಾನ ರಂಗದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ ಇಡಗುಂಜಿ ಕೃಷ್ಣ ಯಾಜಿ ಅವರ ಕುರಿತು ಯಕ್ಷಗಾನ ಅಭಿಮಾನಿಗಳೆಲ್ಲರೂ ನೆನಪಿಸಿಕೊಳ್ಳಬೇಕಾದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ ಗೌರೀಶ ಶಾಸ್ತ್ರಿ ಅವರು.

ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ ಇಡಗುಂಜಿ ಕೃಷ್ಣ ಯಾಜಿಯವರ ಯಕ್ಷಗಾನ ರಂಗಸ್ಥಳ ಪ್ರವೇಶವಾಗಿದ್ದು ಬಾಲ ಗೋಪಾಲ, ಸ್ತ್ರೀವೇಷದ ಮೂಲಕ ಎಂಬುದು. ಸ್ತ್ರೀ ವೇಷಕ್ಕೆ ಲಾಯಕ್ಕಾಗಿಯೇ ಇತ್ತು ಅವರ ಎಳೆಯ ಬಾಳೆ ಸುಳಿಯಂತಿದ್ದ ಮೈಕಟ್ಟು. ಇಡಗುಂಜಿ, ಗುಂಡಬಾಳ ಮೇಳದಲ್ಲಿ ಸ್ತ್ರೀ ವೇಷ ಮಾಡಿ ನಂತರ ಚೆಂಡೆ, ಮೃದಂಗವಾದಕರಾಗಿ ಮುಮ್ಮೇಳದಿಂದ ಹಿಮ್ಮೇಳಕ್ಕೆ ಬಂದರು. ನಂತರದ ದಿನಗಳಲ್ಲಿ ಹಿಮ್ಮೇಳ  ಅವರ ಶಾಶ್ವತ 'ಆ'ಸ್ಥಾನವಾಯಿತು. ಮೇಳದಲ್ಲಿ ಒಮ್ಮೊಮ್ಮೆ ಅನೇಕ ತಾಳಮದ್ದಲೆಯಲ್ಲೂ ಮೃದಂಗಕ್ಕೂ ಕುಳಿತು ಕೈಬೆರಳಿನ ಚಟಪಟಿಕೆಯ ಸಾಮರ್ಥ್ಯ ತೋರಿಸಿದವರು. ಇವರ ಮೊದಲ ಗುರು ಖ್ಯಾತ ಮೃದಂಗ ವಾದಕರಾಗಿದ್ದ ದಿ. ಕಿನ್ನೀರು ನಾರಾಯಣ ಹೆಗಡೆ ಅವರು. ಚೆಂಡೆಯ ವಿಷಯದಲ್ಲಿ ಇವರಿಗೆ ನಿರಂತರವಾಗಿ ಕಲಿಸಿದ ಗುರುಗಳು ಯಾರೂ ಇರಲಿಲ್ಲ. ಕೇವಲ ಮಾಹಿತಿಗಾಗಿ ಕೆಲವರಲ್ಲಿ ಸಲಹೆ ಪಡೆಯುತ್ತ ಸ್ವಂತ ತಾಕತ್ತಿನಿಂದ ಪ್ರಯೋಗ ಮತ್ತು ಚಿಂತನಶೀಲರಾಗಿ ಇವರಿಗೆ ಇವರೇ ಗುರುಗಳಾದರು. ಕೃಷ್ಣ ಯಾಜಿ ತಮ್ಮ ಅಧ್ಯಯನಶೀಲತೆಯಿಂದ ತಮ್ಮದೇ ಆದ ಪ್ರತ್ಯೇಕತೆಯ ವಿಶೇಷತೆಯಾಗಿ ಗುರುತಿಸಿಕೊಳ್ಳುವಂತಾಯಿತು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಅವರು ಒಮ್ಮೆ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಕ್ಕೆ ಮೊದಲು ಚೆಂಡೆಯನ್ನು ಅವರ ಹತ್ತಿರ ಸಂಬಂಧಿ ಗಜಾನನ ಭಟ್ಟರಿಗೆ ಬಾರಿಸಲು ಹೇಳಿ ರವೀಂದ್ರ ಕಲಾಕ್ಷೇತ್ರದ ಉದ್ದಗಲಕ್ಕೂ ಮೂಲೆ ಮೂಲೆಗೆ ಹೋಗಿ ನಿಂತು ಆ ಪೆಟ್ಟು ಎಲ್ಲೆಲ್ಲಿ ಹೇಗೆ ಕೇಳಬಹುದು ಎಂಬುದನ್ನು ಪರಿಶೀಲಿಸಿ ಚೆಂಡೆಯನ್ನು ಅದಕ್ಕೆ ಹೊಂದಿಸಿಕೊಂಡು ಬಾರಿಸುವಂತಹಾ ಅವರ ಆ ಚಿಂತನೆ, ಬೇರೆ ಯಾವ ಕಲಾವಿದರು ಮಾಡಲು ಸಾಧ್ಯ? ಬಹಳ ಸೂಕ್ಷ್ಮ ವಾಗಿ ಚೆಂಡೆ ವಾದನದ ನಾದವನ್ನು  ಸ್ವತಃ ಗಮನಿಸುತ್ತಿದ್ದರು. ಚೆಂಡೆಯ ಶ್ರುತಿ ಬಗ್ಗೆ ಬಹಳ ನಿಗಾ ವಹಿಸುವವರು. ಚೆಂಡೆಯ ಸುತ್ತ ಒಂದೇ ಶ್ರುತಿಗೆ ಒಳಪಡುವಂತಿರಬೇಕು ಎಂಬುದು ಅವರ ಅಭಿಪ್ರಾಯ. ಚೆಂಡೆಯ ಒಂದು ಬದಿಯಲ್ಲಿ ಶ್ರುತಿ ಇಟ್ಟುಕೊಂಡು ಅಕಸ್ಮಾತ್ ಪೆಟ್ಟು ಆ ಜಾಗದಲ್ಲಿ ಬೀಳದೆ ಬೇರೆ ಕಡೆ ಬಿದ್ದರೆ ಅದು ಬೇರೆ ಶ್ರುತಿಯಾಗಿ ಬಿಡುತ್ತದೆ ಎಂಬ ಕಾರಣಕ್ಕೆ ಇಡೀ ಚೆಂಡೆಯನ್ನು ಒಂದೇ ಶ್ರುತಿಗೆ ಇವರು ಅಳವಡಿಸಿಕೊಳ್ಳುತ್ತಿದ್ದರು.

ರಾತ್ರಿಯ ವಾತಾವರಣ ಆಗಾಗ ಬದಲಾವಣೆ ಆಗಿ ಚೆಂಡೆಯ ಶ್ರುತಿ ಕೂಡಾ ಹವಾಮಾನದ ಅನುಸಾರ ಬದಲಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಆಗಾಗ ಶ್ರುತಿಯತ್ತ ಗಮನಿಸಿ ಅದನ್ನು ಸರಿಪಡಿಸಿಕೊಳ್ಳುವದರ ಅಗತ್ಯವಿರುತ್ತದೆ. ಕೆಲವು ಸಲ ಸಾಮಾನ್ಯ ಎಲ್ಲಾ  ಭಾಗವತರು ತಮಗೆ ಬೇಕಾದಂತೆ ತಟ್ಟನೆ  ಶ್ರುತಿಯನ್ನು  ಒಂದು ಮನೆಗೆ ಎತ್ತರಿಸಿ ಹೇಳಿ ಮೃದಂಗ, ಚೆಂಡೆಗೆ ಪೂರಕವಾಗದೇ ಹೋಗುತ್ತದೆ ಎಂಬ ಅಸಮಾಧಾನ ಅವರಲ್ಲಿ ಇತ್ತು. ಅವರ ದೃಷ್ಟಿಯಲ್ಲಿ  ಕೆರೆಮನೆ ಮಹಾಬಲ ಹೆಗಡೆ ಅವರು ಮಾತ್ರ ಇದನ್ನು ತಿಳಿದು ಹಾಡುತ್ತಿದ್ದರು ಎಂಬುದನ್ನು ಹೇಳುತ್ತಿದ್ದರು. ಇಂತಹ ಸೂಕ್ಷ್ಮ ಚಿಂತನೆ ಅವರದ್ದು. ತಾವು ಬಳಸುವ ಚೆಂಡೆಯನ್ನು ಹೆಚ್ಚಾಗಿ ಕುಂದಾಪುರದಲ್ಲಿ ಒಬ್ಬರಿಗೆ ತಯಾರಿಸಲು ಕೊಡುತ್ತಿದ್ದರಂತೆ. ಅವರೇ ಎದುರಿಗೆ ಕುಳಿತು ಅವರಿಗೆ ಬೇಕಾದ ರೀತಿಯಲ್ಲಿ ತಯಾರಿಸಿಕೊಂಡು ಬರುವುದು. ಪೂರ್ತಿಯಾಗಿ ಸಿದ್ಧಗೊಳಿಸಿದ ಮೇಲೂ ಅದು ಸರಿಬರಲಿಲ್ಲ ಎಂದರೆ ಮತ್ತೆ ಪುನಃ ಬಿಚ್ಚಿಸಿ ಅವರಿಗೆ ಸರಿಹೊಂದುವ  ತನಕ ಬಿಡುತ್ತಿರಲಿಲ್ಲ. ಚೆಂಡೆಯ ಬಗ್ಗೆ ಅಷ್ಟೊಂದು ವಿಪರೀತ ಕಾಳಜಿ.

ಇನ್ನೊಂದು ವಿಶೇಷ ಎಂದರೆ ಚೆಂಡೆಯ ಹಗ್ಗ ಅದಕ್ಕೆ ಮಣ್ಣು ತಗುಲಬಾರದು. ಮೂರೂ ಹಗ್ಗ ಚೆಂಡೆಯ ಚೀಲದಲ್ಲಿ ಪ್ರತ್ಯೇಕವಾಗಿ ಸದಾ ಇಟ್ಟುಕೊಳ್ಳುವವರು. ಆಗಾಗ ಅವರೇ ಅದನ್ನು ಖುದ್ದಾಗಿ ಬದಲಿಸುತ್ತಿದ್ದರು. ಇನ್ನು ಚೆಂಡೆಯ  ಮೇಲ್ಮುಚ್ಚಳಿಕೆ ಬೆಳ್ಳಗೆ ಇರಬೇಕು. ಚೆಂಡೆಯನ್ನು ಕವಚಿ ಹಾಕಿ ಪಾಲಿಶ್ ಪೇಪರ್‌ನಲ್ಲಿ ತಿಕ್ಕಿ ಅದನ್ನು ಹೊಳಪು ಬರುವಂತೆ ನೋಡಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲದೇ ರಂಗಸ್ಥಳದಲ್ಲಿ ಮಣ್ಣು ಅಥವಾ ಧೂಳು ಇದ್ದರೆ ಅವರು ರಂಗಸ್ಥಳಕ್ಕೆ ಪ್ರವೇಶ ಮಾಡುವಾಗ ಕಾಲಿಗೆ 'ಸಾಕ್ಸ್' ಹಾಕಿಕೊಂಡು ಹೋಗಿದ್ದೂ ಇದೆಯಂತೆ. ಕಾರಣ ಕಾಲಿಗೆ ಮಣ್ಣು ತಾಗಿದರೆ ಚೆಂಡೆಯನ್ನು ಮೆಟ್ಟಿ ಹಿಡಿಯುವಾಗ ಚೆಂಡೆಗೂ ಮಣ್ಣು ತಾಗೀತು ಎಂಬ ಕಾಳಜಿ.  ಪ್ರದರ್ಶನದ ಸ್ಥಳ ಅದೆಷ್ಟೇ ದೂರ ಇರಲಿ   ಚೆಂಡೆಯ ಚೀಲ ಸ್ವತಃ ಕೈಯಲ್ಲಿ ಹಿಡಿದುಕೊಂಡೇ ಹೋಗುತ್ತಿದ್ದರು. ಅವರ ಚೆಂಡೆ ಅದು ಅವರದ್ದೇ ಆಗಬೇಕು, ಬೇರೆ ಚೆಂಡೆ ಉಪಯೋಗಿಸುತ್ತಿರಲಿಲ್ಲ. ಅವರದ್ದು ಚೆಂಡೆಯೆಂದರೆ ಮಕ್ಕಳ ಮೇಲಿನಷ್ಟೇ ಕಾಳಜಿ, ಮಮಕಾರ! ಚೆಂಡೆಯನ್ನು ಬಾರಿಸುವ ಕೋಲು ಕೂಡಾ ಅವರದ್ದೇ ಆದ ಪ್ರತ್ಯೇಕ ರೀತಿಯಲ್ಲಿ ಅವರದ್ದೇ ಆದ  ಕಲ್ಪನೆಯಂತಿರಬೇಕು. ಎರಡು ಕೋಲು ಬೇರೆ ಬೇರೆಯೇ ಆಗಿರುತ್ತದೆ. ಅಂದರೆ ಒಂದು ಗಡುತರ, ಇನ್ನೊಂದು ಸಪೂರ, ಯಾವುದೋ ಕೋಲು ತೀರಾ ನುಣುಪಾಗಿರಬೇಕು ಉದ್ದ ಗಿಡ್ಡ ಇತ್ಯಾದಿ ಎಲ್ಲದಕ್ಕೂ ಅವರದ್ದೇ ಆದ ವಿಶಿಷ್ಟ ಕಲ್ಪನೆ, ಚಿಂತನೆ ಉಳಿದ ಕಲಾವಿದರುಗಳಿಗಿಂತ ವಿಭಿನ್ನವಾದುದು.

ಯಾಜಿಯವರ ಕಲಾಸಾಮರ್ಥ್ಯಕ್ಕೆ, ಸಾಧನೆಗೆ ಅವರು ಹುಟ್ಟಿ ಬೆಳೆದ ಪರಿಸರವೇ ಹಾಗಿತ್ತು. ಯಕ್ಷಗಾನದ ಹಿಂದಿನ ತಲೆಮಾರಿನ ಖ್ಯಾತ ದಿ. ಯಾಜಿ ಭಾಗವತರ ಮನೆತನದವರು. ದಿ. ಗಣಪತಿ ಯಾಜಿ ಒಂದು ಕಾಲದ ಖ್ಯಾತ ಯಕ್ಷಗಾನದ ಹಾಸ್ಯ ಕಲಾವಿದರು. ಇಡಗುಂಜಿ ಮೇಳದಲ್ಲಿ ಬಹುಕಾಲ ಅವರ ಸೇವೆ ಸಂದಿದೆ. ಹಾಗೆಯೇ ಶಾಸ್ತ್ರೀಯ ಸಂಗೀತ ಖ್ಯಾತಿಯ ದಿ. ಗಜಾನನ ಯಾಜಿ ಅವರು ಕೂಡ ಈ ಕುಟುಂಬದವರು. ಹೀಗಾಗಿ ಆ ಕುಟುಂಬದ ಇನ್ನೊಂದು ಕಲಾ ನಕ್ಷತ್ರವಾಗಿ ಕೃಷ್ಣ ಯಾಜಿಯವರು ಹೊಳೆದರು. ಆ ನಕ್ಷತ್ರ ಈಗ ಮರೆಯಾಗಿದೆ. ಆದರೂ ಚೆಂಡೆಯ ಮಧುರ  ನಿನಾದ ನಮಗಾಗಿ ಉಳಿಸಿ ಹೋಗಿದ್ದಾರೆ. ಅದರ ನಾದ ಸ್ವಾದ ಸವಿಯೇ ಅವರ ಜೀವಂತಿಕೆಯನ್ನು ಸಾಬೀತು ಪಡಿಸುತ್ತದೆ.  ಅವರ ಶ್ರದ್ದೆ, ಆಸಕ್ತಿ, ಅಭ್ಯಾಸ, ತೊಡಗಿಸಿಕೊಳ್ಳುವಿಕೆ ಮೂಲಕ ಯಾಜಿಯವರು ನಿಜಕ್ಕೂ ಇನ್ನೊಬ್ಬ ಕಲಾವಿದರಿಗೆ ಆದರ್ಶರಾಗಿ ಶಾಶ್ವತವಾಗಿ ನಮ್ಮೊಂದಿಗೆ ಇದ್ದಾರೆ.


ಕೃಷ್ಣ ಯಾಜಿ ಅವರ ಕುರಿತು...
ಐದು ದಶಕಗಳ ಕಾಲ ಬಡಗು ತಿಟ್ಟು ಯಕ್ಷಗಾನ ರಂಗದಲ್ಲಿ ಸಮಗ್ರವಾಗಿ ಕಸುಬು ಮಾಡಿದ್ದಾರೆ ಇಡಗುಂಜಿ ಕೃಷ್ಣ ಯಾಜಿ ಅವರು. ಇಡಗುಂಜಿ, ಕರ್ಕಿ ಹಾಸ್ಯಗಾರ, ಕಮಲಶಿಲೆ, ಸಾಲಿಗ್ರಾಮ, ಅಮೃತೇಶ್ವರಿ, ಮೂಲ್ಕಿ, ಗುಂಡಬಾಳ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರಲ್ಲದೆ, ಉಮಾಮಹೇಶ್ವರಿ ಕಲಾವರ್ಧಕ ಸಂಘದ ತಾಳಮದ್ದಲೆ ಕೂಟದಲ್ಲಿ ಪ್ರಧಾನ ಮದ್ದಲೆ ವಾದಕರಾಗಿ, ಶ್ರೀಮಯ ಕಲಾಕೇಂದ್ರ ಗುಣವಂತೆ, ಮುರೂರು ದೇವರು ಹೆಗಡೆ ಯಕ್ಷಗಾನ ಶಾಲೆಯಲ್ಲಿ ಯಕ್ಷಗಾನ ಗುರುವಾಗಿ ಇವರು ದಶಕದ ಕಾಲ ಶಿಷ್ಯರನ್ನು ರೂಪಿಸಿದ್ದಾರೆ. ಇಷ್ಟಲ್ಲದೆ, ದೆಹಲಿ, ಮುಂಬಯಿ, ಕೋಲ್ಕತ್ತಾ, ಅಮೃತಸರ, ತ್ರಿವೇಂಡ್ರಂ, ಭೋಪಾಲ್, ಝಾನ್ಸಿ, ಬೆಂಗಳೂರು ಮುಂತಾದೆಡೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ವಿದೇಶಗಳಲ್ಲಿಯೂ ಚೆಂಡೆಯ ಸದ್ದು ಮೊಳಗಿಸಿದ್ದಾರೆ. ಲಂಡನ್, ಸ್ಪೇನ್, ಫ್ರಾನ್ಸ್, ಚೀನಾ, ನೇಪಾಳ, ಬರ್ಮಾ, ಲಾಹೋತ್ಸೆ, ಮಲೇಶಿಯಾ, ಸಿಂಗಾಪುರ, ಫಿಲಿಪ್ಪೀನ್ಸ್ ರಾಷ್ಟ್ರಗಳಿಗೆ ಇವರು ಇಡಗುಂಜಿ ಮೇಳದೊಂದಿಗೆ ತೆರಳಿದ್ದರು.

ಕಿನ್ನೀರು ನಾರಾಯಣ ಹೆಗ್ಡೆ ಪ್ರತಿಷ್ಠಾನದ ಪ್ರಶಸ್ತಿ, 2012ರಲ್ಲಿ ಉಡುಪಿ ಕಲಾಕೇಂದ್ರದಿಂದ ಭಾಗವತ ನಾರಾಯಣಪ್ಪ ಉಪ್ಪೂರ ಪ್ರಶಸ್ತಿ, 2012ರಲ್ಲಿ ಕಾಶ್ಶಪ ಪ್ರತಿಷ್ಠಾನ, ವಿದ್ಯಾ ಸಂಸ್ಕೃತಿ ಟ್ರಸ್ಟ್ ಗಡಿಗೆಹೊಳೆ ಮತ್ತು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಬೆಂಗಳೂರಿನ ಯಕ್ಷ ಸಿಂಚನ ಟ್ರಸ್ಟ್ ಗೌರವ ಮೊದಲಾದ ಪ್ರತಿಷ್ಠಿತ ಪ್ರಶಸ್ತಿಗಳು ಇವರ ಮುಡಿಗೇರಿವೆ.

ಕೆಮ್ಮಣ್ಣು ಆನಂದ ರಾವ್ ಅವರ ಬಳಿಕ ಬಡಗು ತಿಟ್ಟಿನಲ್ಲಿ ಕಾಣಿಸಿಕೊಂಡ ಪ್ರಶಸ್ತ ಚೆಂಡೆವಾದಕರಲ್ಲಿ ಇಡಗುಂಜಿ ಕೃಷ್ಣ ಯಾಜಿ ಅವರ ಹೆಸರು ಅಜರಾಮರ. ಮದ್ದಳೆ, ಚೆಂಡೆ ಎರಡರಲ್ಲೂ ಸಮಾನ ಪ್ರಾವೀಣ್ಯವಿದ್ದವರು. ಡಾ. ಆರ್.ಗಣೇಶ್-ಮಂಟಪ ಪ್ರಭಾಕರ ಉಪಾಧ್ಯಾಯ ಅವರ ನವೀನ ಗೀತರೂಪಕ ಪ್ರಯೋಗಗಳಲ್ಲೂ ಸೈ ಅನ್ನಿಸಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು