ಮತ್ತೆ ಹುಟ್ಟಿ ಬರುವಿರಿ: ಕೃಷ್ಣಪ್ರಕಾಶ ಉಳಿತ್ತಾಯರಿಂದ ಬಲಿಪ ಪ್ರಸಾದರಿಗೆ ನುಡಿ ನಮನ

ಚಿತ್ರಕೃಪೆ: ಸಾಮಾಜಿಕ ಜಾಲತಾಣಗಳಿಂದ
ಅಕಾಲ ಮೃತ್ಯುವಿಗೀಡಾಗಿ ಯಕ್ಷಗಾನ ಲೋಕವನ್ನು ಕಣ್ಣೀರಲ್ಲಿ ಮುಳುಗಿಸಿದ ನಯವಿನಯ ಸಂಪನ್ನ, ಯಕ್ಷಗಾನದ ಪರಂಪರೆಯ ಪ್ರತಿನಿಧಿ ಬಲಿಪ ಪ್ರಸಾದ ಭಾಗವತ (46) ಅವರಿಗೆ, ಅವರ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿದ್ದ ಮದ್ದಳೆಗಾರ ಕೃಷ್ಣಪ್ರಕಾಶ ಉಳಿತ್ತಾಯರಿಂದ ಭಾವುಕ ನುಡಿ ನಮನ.
ಪ್ರಿಯ ಬಲಿಪ ಪ್ರಸಾದಣ್ಣ, ಕೃಷ್ಣಪ್ರಕಾಶ ಉಳಿತ್ತಾಯನ ನಮನ,

ಪ್ರಸಾದಣ್ಣ, ವಿಷಾದವನ್ನೂ ಮೀರಿದ ನಿರ್ವೇದ ಮನಸ್ಥಿತಿ ಒತ್ತರಿಸಿಕೊಂಡಿದೆ. ನಾನು ಆಶಾವಾದಿಯಾಗಿದ್ದೆ- ನೀವು ಆ ಅಸೌಖ್ಯವನ್ನು  ಮೆಟ್ಟಿ ನಿಲ್ಲುವಿರೆಂದು; ಮರಳಿ ಜಾಗಟೆಯ ದನಿಗೆ ನಿಮ್ಮ ಕೊರಳನ್ನು ಸೇರಿಸುವಿರೆಂದು. ವಿಧಿಯ ಭಾಗವತಿಕೆಯೇ ಬೇರೆಯಾಯ್ತಲ್ಲಾ!!

ಯಕ್ಷಗಾನ ಭಾಗವತಿಕೆಯಲ್ಲಿ ನಿಮ್ಮ ಬಲಿಪ ಶೈಲಿ ಮುಂಚೂಣಿಯ ಸಾಂಪ್ರದಾಯಿಕ ಹಾಡುಗಾರಿಕೆ. ನೀವು ಆ ಮಾರ್ಗದ ವಾರಸುದಾರರಾಗಿದ್ದಿರಿ- ಬಲಿಪ ನಾರಾಯಣ ಭಾಗವತರ ಸುಪುತ್ರರಾಗಿಯೂ. "ಅದೋ ಅಲ್ಲಿದೆ ನೋಡಿ ತೆಂಕುತಿಟ್ಟು ಯಕ್ಷಗಾನ ಹಾಡಿಕೆಯ ನಿಜ ಮಾರ್ಗ-ಪ್ರಾಚೀನ ಪದ್ಧತಿ"  ಅಂತ ನಿಮ್ಮಲ್ಲಿಗೆ ತೋರಿಸುತ್ತಿದ್ದೆವಲ್ಲಾ!! ಹಾಗೇಯೇ ಬಿಟ್ಟು ಹೋದ್ರಿಯಲ್ಲಾ-ನಿಮ್ಮ ಮೊಗದ ಮೇಲಿರುವ ಸಹಜ ಸ್ನಿಗ್ಧ, ಸರಳ, ವಿಧೇಯ ನಗುವನ್ನು ನಮ್ಮಲ್ಲಿ ಮರೆಯಲಾಗದ, ಕಾಡುವ ನೆನಪಾಗಿಸಿ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಜೀರ್ಣಿಸಲು ಅಸಾಧ್ಯವಾದರೂ ದುಃಖವನ್ನು ಹಾಗೆಯೇ ಒಳಗೆಳೆದುಕೊಂಡಾಗ ಕಾಣುವುದು ಕೇವಲ ನಿಮ್ಮ ಹಾಡು. ಆ ಹಾಡು ನಿಮ್ಮ‌ ಸಹಜ ಏರುಶ್ರುತಿಯಲ್ಲಿ ಯಕ್ಷಗಾನ ಸಾಹಿತ್ಯದ ಕಟ್ಟೋಣಕ್ಕೆ ಜೀವತುಂಬುವಂತೆ- ಗಂಡುಮಿಡಿತದಂತೆ. ಅಷ್ಟು ಮಾತ್ರವೇ? ಆ ಹಾಡಿಕೆಯನ್ನು ಮದ್ದಳೆಯ ನಾದದಲ್ಲಿ ಹೇಗೆ ಪ್ರತಿಫಲಿಸಬಹುದೆಂದು ಯೋಚಿಸುತ್ತಿರುವಾಗಲೇ " ನೋಡು ಹೀಗೆ ಹೀಗೆ ನುಡಿಸು" ಎಂದು ನೀವು ನಿಮ್ಮ ಹಾಡಿಕೆಯಿಂದಲೇ ತೋರುವ ಕೈದೀವಿಗೆಗೆ ನನ್ನ ಮೈ ಮನಸ್ಸು ಬಾಗಿ ಬಾಗಿ ನಮಿಸದೆ ಇರಲು ಸಾಧ್ಯವೇ ಪ್ರಸಾದಣ್ಣ!! 

ಇನ್ನೆಲ್ಲಿ, ಹಾಗೆ ನುಡಿಸಲಿ. ಹಾಡು ನಿಧಾನ ಲಯದಲ್ಲಿದ್ದಷ್ಟೂ ಉತ್ಸಾಹ ನಿಮಗೆ; ಆಗ ನಿಮ್ಮ ಮನದಲ್ಲಿ ಉದಿಸುವ ಕಲ್ಪನಾ ವಿಲಾಸಕ್ಕೆ ಎಣೆ ಇಲ್ಲ.  ಹಾಡಿಕೆಯು ನುಡಿತದಲ್ಲಿ ಎರಕವಾಗಿ ಅದು ಸಹೃದಯರ ಮನದಲ್ಲಿ ಭಾವ ಸಮೃದ್ಧಿಯ ಉಲ್ಲಾಸವನ್ನು ಕೊಟ್ಟಾಗ ಪ್ರತಿಕ್ರಿಯಾತ್ಮಕವಾದ ಚಪ್ಪಾಳೆಯನ್ನು ಸ್ವೀಕರಿಸುವಾಗ ನಿಮಗಿರುವ ವಿಧೇಯತೆ  ಹೇಗೆಂದರೆ- ಈ ಕಲಾಸಿದ್ಧಿಗೆ ಕಾರಣವಾದ ತನ್ನೊಳಗಿರುವ ಚೇತನ ಮತ್ತು ಚೆಂಡೆ-ಮದ್ದಳೆವಾದಕನೆಡೆಗೆ ನೋಡುವ ನಿಮ್ಮ ಆ ನಮ್ರತೆಗೆ ಏನೆನ್ನಲಿ. ರಂಗದ ಯಶಸ್ಸಿಗೆ ಕೇವಲ ತನ್ನ ಹಾಡಿಕೆ ಮಾತ್ರವೇ ಕಾರಣವಲ್ಲ, ರಂಗದ ಉಳಿದ  ಅಂಗಗಳ  ಕೊಡುಗೆಯೂ ಕಾರಣವೆಂದು ಗಟ್ಟಿಯಾಗಿ ನಂಬಿದವರು ನೀವು. ಯಶಸ್ಸಿನ ಬಹುಪಾಲನ್ನು ತಾನೊಬ್ಬನೇ ಇಟ್ಟುಕೊಳ್ಳ್ಳದೆ, ವೇಷಧಾರಿ, ಚೆಂಡೆ- ಮದ್ದಳೆಯವರ ಪ್ರಸ್ತುತಿಗೂ ಪಾಲನ್ನು ಕೊಟ್ಟ ಉದಾರಿ ನೀವು. ಕಲಾವಿದನಿಗಿಂತಲೂ ಕಲೆ ದೊಡ್ಡದು ಎಂದು ನಂಬಿ ಬಾಳಿದವರು. 


ಇನ್ನು ಬರೆಯಲಾಗುತ್ತಿಲ್ಲ ಪ್ರಸಾದಣ್ಣ. ನಿರ್ವೇದ ನಮ್ಮನ್ನು ಪರಮಶಾಂತಿಯೆಡೆಗೇ ಒಯ್ಯಬೇಕು- ಅದು ರಸಸೂತ್ರವೂ ಹೌದು. ಆದರೆ ಈ ಬಗೆಯ ನಿರ್ವೇದ  ಸ್ಮಶಾನಶಾಂತಿಗೆ ಅಧೀನವಾದಾಗ  ಪರಮಶಾಂತಿಯ ಸಿದ್ಧಿ ಹೇಗೆ ಉಳಿದೀತು- ಮತ್ತೆ ಶೋಕವೇ ಮಡುಗಟ್ಟಿ ನಿಂತಿದೆ ಪ್ರಸಾದಣ್ಣ.  ನೀವು ನನ್ನಲ್ಲಿ  ಹಾಗೆಯೇ ಇದ್ದೀರಿ. ನೀವು ನನ್ನ ಮನದಲ್ಲಿ ಮತ್ತೆ ಮತ್ತೆ ಹುಟ್ಟಿ ಬರುವಿರಿ ಪ್ರಸಾದಣ್ಣ. ನಿಮ್ಮ ಹಾಡನ್ನು ಕಿವಿಗಾನಿಸಿ ನಿಮಗಾಗಿ ನಾ ನುಡಿಸುವ ಮದ್ದಳೆಯೇ ನಾನು ಕೊಡುವ ಶ್ರದ್ಧಾಂಜಲಿ. 

-ಕೃಷ್ಣ ಪ್ರಕಾಶ ಉಳಿತ್ತಾಯ
ಖ್ಯಾತ ಮದ್ದಳೆಗಾರರು, ಕರ್ಣಾಟಕ ಬ್ಯಾಂಕ್ ಅಧಿಕಾರಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು