ಮೂಡುಬಿದಿರೆ ಸಮೀಪದ ಮಾರೂರಿನ ನೂಯಿ ಎಂಬಲ್ಲಿ ತಮ್ಮ ತಂದೆ, ಹೆಸರಾಂತ ಬಲಿಪ ನಾರಾಯಣ ಭಾಗವತರ ಪುತ್ರರಾಗಿ ಜನಿಸಿದ್ದ ಬಲಿಪ ಪ್ರಸಾದ ಭಾಗವತರಿಗೆ ವರ್ಷದ ಹಿಂದೆ ಗಂಟಲಿನ ಕ್ಯಾನ್ಸರ್ ಕಾಣಿಸಿಕೊಂಡು, ಚೇತರಿಸುವ ಲಕ್ಷಣಗಳೂ ಇದ್ದವು. ಆದರೆ, ಏ.11ರ ಸೋಮವಾರ ಸಂಜೆ ಅನಾರೋಗ್ಯ ತೀವ್ರಗೊಂಡು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗದೆ, ಅವರು ಯಕ್ಷಗಾನದ ಭೌತಿಕ ರಂಗಸ್ಥಳದಿಂದ ನಿರ್ಗಮಿಸಿದರು.
ಬಲಿಪ ಪರಂಪರೆಯ ಸಮರ್ಥ ಉತ್ತರಾಧಿಕಾರಿಯಾಗಿ ತಮ್ಮ ಕಂಚಿನ ಕಂಠ, ಸರಳ ಮತ್ತು ಸಜ್ಜನತೆಯಿಂದಲೂ ಜನಮಾನಸದಲ್ಲಿ ಧ್ರುವತಾರೆಯಂತೆ ಕಂಗೊಳಿಸುತ್ತಿದ್ದ ಬಲಿಪ ಪ್ರಸಾದರು ನಿರ್ಗಮಿಸಿರುವುದು ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನ ರಂಗಕ್ಕೆ ಹೊಸತನದ ಸುಳಿಗಾಳಿಯ ನಡುವೆಯೂ ಪರಂಪರೆಯನ್ನು ಬಿಡದೆ, ಹೊಸತನಕ್ಕೂ ಒಗ್ಗಿಕೊಂಡು ಗಾನವೈಭವಗಳಲ್ಲಿ ಅವರು ಹಾಡುತ್ತಿದ್ದ ರೀತಿಯೇ ರೋಮಾಂಚಕಾರಿ. ಜೊತೆಗೆ, ಯಾವುದೇ ಪ್ರಸಂಗವನ್ನು ಸಮರ್ಥವಾಗಿ ನಿಭಾಯಿಸುವ ಛಾತಿಯಿದ್ದ ಬಲಿಪ ಪ್ರಸಾದ ಭಾಗವತರು, ತಮ್ಮ ತಂದೆಯ ಮತ್ತು ಬಲಿಪ ಪರಂಪರೆಯ ಹೆಸರಿಗೆ ಒಂದಿನಿತೂ ಕುಂದು ಬಾರದಂತೆ ಹಾಡುತ್ತಿದ್ದರು.
ಕಟೀಲು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಅವರು, ಗಂಟಲ ಕ್ಯಾನ್ಸರ್ ಕಾಣಿಸಿಕೊಂಡ ಬಳಿಕ ಮೇಳಕ್ಕೆ ಹೋಗದೆ, ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಕೆಲವು ಖಾಸಗಿ ಕಾರ್ಯಕ್ರಮಗಳಲ್ಲಿ ಹಾಡಿಯೂ ಗಮನ ಸೆಳೆದು, ಮತ್ತೆ ಹಿಂದಿನ ರಂಗವೈಭವವನ್ನು ಸಾಕ್ಷಾತ್ಕರಿಸಲಿದ್ದಾರೆ ಎಂಬ ಆಶಾವಾದ ಮೂಡಿಸಿದ್ದರು. ಆದರೆ ವಿಧಿಯಾಟ ಬೇರೆಯೇ ಇತ್ತು.
17ನೇ ವರ್ಷದಲ್ಲೇ ಅಂದರೆ, 1994ರಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯನ್ನು ಸೇರಿಕೊಂಡ ಅವರು ಮೂರು ದಶಕಗಳ ಕಾಲ ಯಕ್ಷಗಾನ ಅಭಿಮಾನಿಗಳನ್ನು ರಂಜಿಸಿದ್ದಾರೆ.
1976ರ ಏಪ್ರಿಲ್ 14ರಂದು ಜನಿಸಿದ ಬಲಿಪ ಪ್ರಸಾದ ಭಾಗವತರು, ಪೌರಾಣಿಕ ಪ್ರಸಂಗಗಳ ಹಾಡುಗಾರಿಕೆಯಲ್ಲಿ ಸಿದ್ಧಿ ಸಾಧಿಸಿದ್ದರು. ದೇಶ ವಿದೇಶಗಳಲ್ಲಿಯೂ ಅವರು ಯಕ್ಷಗಾನೀಯ ಭಾಗವತಿಕೆಯನ್ನು ಮೆರೆಸಿದವರು. ನಯವಿನಯದಿಂದ ಅಜಾತ ಶತ್ರುವಾಗಿ ಎಲ್ಲರ ಆದರಾಭಿಮಾನಗಳಿಗೆ ಪಾತ್ರರಾದವರು ಬಲಿಪ ಪ್ರಸಾದರು.
ತೆಂಕು ತಿಟ್ಟು ಯಕ್ಷಗಾನ ರಂಗದಲ್ಲಿ ಛಂದೋಬದ್ಧವಾಗಿ, ಸೂಕ್ತ ಮಟ್ಟುಗಳ ರಾಗ, ತಾಳ, ಲಯದೊಂದಿಗೆ ಹಾಡುವ ಕೆಲವೇ ಕೆಲವು ಸಾಧಕ ಭಾಗವತರಲ್ಲಿ ಬಲಿಪ ಪ್ರಸಾದರ ಹೆಸರು ಮೇಲ್ಪಂಕ್ತಿಯಲ್ಲಿದೆ. ಇದು ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟ.
ಬಲಿಪ ಪ್ರಸಾದ ಭಟ್ ಅವರು ತಮ್ಮ ತಂದೆ, 84ರ ಹರೆಯದ 'ಯಕ್ಷರಂಗದ ಭೀಷ್ಮ' ಖ್ಯಾತಿಯ ಬಲಿಪ ನಾರಾಯಣ ಭಾಗವತರು, ಪತ್ನಿ, ಮೂವರು ಪುತ್ರಿಯರು ಹಾಗೂ ಸಹೋದರರಾದ ಬಲಿಪ ಶಿವಶಂಕರ ಭಟ್, ಬಲಿಪ ಮಾಧವ ಭಟ್ ಹಾಗೂ ಬಲಿಪ ಶಶಿಧರ ಭಟ್ ಅವರನ್ನು ಅಕಾಲದಲ್ಲಿ ಅಗಲಿದ್ದಾರೆ.
ಅವರ ಅಂತ್ಯಕ್ರಿಯೆಯು ಇಂದು ರಾತ್ರಿಯೇ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.