Yakshagana Viral: ಟ್ವಿಟರ್‌ನಲ್ಲಿ ವೈರಲ್ ಆಗಿ ದೇಶಾದ್ಯಂತ ಮೆಚ್ಚುಗೆ ಗಳಿಸಿದ ಕೋಳ್ಯೂರು ನಾಟ್ಯ


ಮಂಗಳೂರು:
ಯಕ್ಷಗಾನ ರಂಗ ಕಂಡ ಅಪ್ರತಿಮ ಸ್ತ್ರೀಪಾತ್ರಧಾರಿ ಕೋಳ್ಯೂರು ರಾಮಚಂದ್ರ ರಾವ್ ಅವರು, ಕಳೆದ ತಿಂಗಳು ಕುರಿಯ ಗಣಪತಿ ಶಾಸ್ತ್ರಿಗಳ ಮನೆಯಲ್ಲಿ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಗಳ ಮದ್ದಳೆಯ ನಾದಕ್ಕೆ ಮಾಡಿದ ಕುಣಿತ ಹಾಗೂ ಅಭಿನಯದ ವಿಡಿಯೊ ಟ್ವಿಟರ್‌ನಲ್ಲಿ ಭರ್ಜರಿ ಹವಾ ಸೃಷ್ಟಿಸಿದೆ. ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ 66 ಸಾವಿರದಷ್ಟೂ ವೀಕ್ಷಣೆಗಳು, ಸಾವಿರಕ್ಕೂ ಹೆಚ್ಚು ರೀ-ಟ್ವೀಟ್‌ಗಳು, ನಾಲ್ಕು ಸಾವಿರದಷ್ಟು ಲೈಕ್ಸ್ - ಮತ್ತು ಇದು ಇನ್ನೂ ಬೆಳೆಯುತ್ತಲೇ ಇದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ನಮ್ಮ ಮಾತೃಸಂಸ್ಥೆಯಾದ ಡಿಜಿ ಯಕ್ಷ ಫೌಂಡೇಶನ್‌ಗೆ ಒಳಪಟ್ಟ Yakshagana.in ಜಾಲತಾಣದ ಟ್ವಿಟರ್ ತಾಣದಲ್ಲಿ (www.Twitter.com/_yakshagana) ಇದು ವೈರಲ್ ಆಗಿಬಿಟ್ಟಿದೆ. 90 ದಾಟಿದರೂ ಅವರಲ್ಲಿರುವ ಉತ್ಸಾಹ ಕಂಡು ದೇಶದಾದ್ಯಂತದಿಂದ ಜನರು ಮೆಚ್ಚುಗೆ ಸೂಸಿದ್ದಾರೆ, ಅಚ್ಚರಿ ವ್ಯಕ್ತಪಡಿಸಿದ್ದಾರೆ, ನಮ್ಮ ಕಲೆಯ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೊ ನಿಜ ಅರ್ಥದಲ್ಲಿ ವೈರಲ್ ಆಗಿಬಿಟ್ಟಿದೆ. ಈ ವಿಡಿಯೊ ವಾಟ್ಸ್ಆ್ಯಪ್ ಮೂಲಕ ಬಂದಿತ್ತು.

ಸೋಷಿಯಲ್ ಮೀಡಿಯಾದ ಶಕ್ತಿಯೇ ಇದು. ಯಕ್ಷಗಾನವೆಂಬ ಕಮನೀಯ ಕಲೆಯ ಶಕ್ತಿಯೂ ಹೌದು. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೂ ಆಗಿರುವ ಕೋಳ್ಯೂರು ರಾಮಚಂದ್ರ ರಾವ್ ಅವರು ಹಿರಿಯ ಭಾಗವತರಾದ ಕಂಚಿನ ಕಂಠದ ಕುರಿಯ ಗಣಪತಿ ಶಾಸ್ತ್ರಿಗಳ ಮನೆಗೆ ಇತ್ತೀಚೆಗೆ ತೆರಳಿದ್ದರು. ಅಲ್ಲಿ ಭಾಗವತರು ಹಾಡಿದರು, ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಯವರು ಆಪ್ಯಾಯಮಾನವಾಗಿ ಮದ್ದಳೆ ನುಡಿಸಿದರು. ಕೋಳ್ಯೂರರು ಹುಮ್ಮಸ್ಸಿನಿಂದ, ಲಾಲಿತ್ಯದಿಂದ ದಕ್ಷಯಜ್ಞ ಪ್ರಸಂಗದ ಪದಗಳಿಗೆ ಲಾಲಿತ್ಯಪೂರ್ಣ ನಡೆ, ಅಭಿನಯ, ಭಾವನೆಗಳೊಂದಿಗೆ ಕುಣಿದ ಪರಿ ನೋಡಿ ಯಕ್ಷಗಾನ ಅಭಿಮಾನಿಗಳೆಲ್ಲರೂ ಉಘೇ ಉಘೇ ಎಂದರೆ, ಯಕ್ಷಗಾನದ ಬಗ್ಗೆ ತಿಳಿಯದವರೂ ಟ್ವಿಟರ್‌ನಲ್ಲಿ ಶಹಬ್ಬಾಸ್ ಹೇಳಲಾರಂಭಿಸಿದರು.

ಈ ವಿಡಿಯೊ ತುಣುಕಿನಲ್ಲಿ ಚಾಲು ಕುಣಿತವೂ ಇದೆ.
 2022ರ ಮಾರ್ಚ್ 26ರಂದು ಪದ್ಯಾಣ ದೇವಸ್ಥಾನದಲ್ಲಿ ಸನ್ಮಾನ ಸ್ವೀಕರಿಸಲೆಂದು ಬಂದಿದ್ದರು. ಅಲ್ಲಿಗೆ ಬಂದವರು ಸಮೀಪವೇ ಇದ್ದ ಕುರಿಯ ಗಣಪತಿ ಶಾಸ್ತ್ರಿಗಳ ಮನೆಗೂ ಭೇಟಿ ನೀಡಿದರು. ಭಾಗವತರು ಹೇಗೂ ಇದ್ದರು, ಮದ್ದಳೆಯ ಮಣಿಮುಂಡ ಸುಬ್ರಹ್ಮಣ್ಯ ಶಾಸ್ತ್ರಿಗಳೂ ಜೊತೆಯಾದರು. ಅಲ್ಲಿಗೆ ಶುರುವಾಯಿತು, ಕೋಳ್ಯೂರು ಅವರ ಸಿದ್ಧಿ ಮತ್ತು ಪ್ರಸಿದ್ಧಿಗೆ ಕಾರಣವಾದ, ದಕ್ಷ ಯಜ್ಞ ಪ್ರಸಂಗದ ದಾಕ್ಷಾಯಿಣಿಯ ನೃತ್ಯ, ಅಭಿನಯ.

ಆರಂಭದಲ್ಲಿ ಕರಮುಗಿವೆ ಕರಿಮುಖನೆ ಸ್ತುತಿ ಪದ್ಯ, ಬಳಿಕ ದಕ್ಷ ಯಜ್ಞ ಪ್ರಸಂಗದ "ಆವಲ್ಲಿಂದ ಬಂದಿರಯ್ಯ ಭೂಮಿ ದೇವ" ಹಾಗೂ "ನೋಡಿರಿ ದ್ವಿಜರು ಪೋಪುದನು...." ಈ ಹಾಡುಗಳಿಗೆ ಕುಣಿಯುತ್ತಾ ಕೋಳ್ಯೂರರು ವಯಸ್ಸು ಮರೆತು ತರುಣಿಯಾಗಿ ಮಾರ್ಪಟ್ಟರು. ಅತ್ಯಂತ ಸಹಜವಾದ ನಾಟ್ಯವನ್ನು ಅಭಿನಯದೊಂದಿಗೆ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದರು. ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಈ ವಿಡಿಯೊ ಇದೇ ಮೊದಲ ಬಾರಿಗೆ ಟ್ವಿಟರ್‌ನಲ್ಲಿಯೂ ಭರ್ಜರಿಯಾಗಿ ಮೆರೆಯಿತು.

ಪೂರ್ಣ ವಿಡಿಯೋ ಇಲ್ಲಿದೆ: 

ಸಂದರ್ಭ ಯಾವುದು ಗೊತ್ತೇ?
2022 ಮಾ.26ರಂದು ಪದ್ಯಾಣ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉಪ್ಪಳ ಕುರುಡಪದವಿನ ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ (ರಿ) ವತಿಯಿಂದ ನಡೆದ 'ಸಂಸ್ಮರಣೆ-ಸನ್ಮಾನ-ಬಯಲಾಟ' ಕಾರ್ಯಕ್ರಮ ಇತ್ತು. ಇದೇ ಸಂದರ್ಭದಲ್ಲಿ, ಮರೆಯಲಾಗದ ಕೀರ್ತಿಶೇಷ ಮಹಾನ್ ಕಲಾವಿದರಾದ ಕುರಿಯ ವಿಠಲ ಶಾಸ್ತ್ರಿ, ನೆಡ್ಲೆ ನರಸಿಂಹ ಭಟ್ ಹಾಗೂ ಕರುವೋಳು ದೇರಣ್ಣ ಶೆಟ್ಟಿ ಅವರ ಸಂಸ್ಮರಣೆ ಹಾಗೂ ಅವರ ಹೆಸರಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೂ ಇತ್ತು.

ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿಯನ್ನು ಕಲಾವಿದ, ಸಂಘಟಕ ಪಟ್ಲ ಮಹಾಬಲ ಶೆಟ್ಟಿ ಅವರಿಗೆ, ನೆಡ್ಲೆ ಪ್ರಶಸ್ತಿಯನ್ನು ಹಿರಿಯ ಹಿಮ್ಮೇಳ ವಾದಕರಾದ ಪೆರುವಾಯಿ ಕೃಷ್ಣ ಭಟ್ ಮತ್ತು ಪೆರುವಾಯಿ ನಾರಾಯಣ ಭಟ್ ಅವರಿಗೆ ಹಾಗೂ ಕರುವೋಳು ಸಂಸ್ಮರಣಾ ಪ್ರಶಸ್ತಿಯನ್ನು ಕೋಳ್ಯೂರು ರಾಮಚಂದ್ರ ರಾವ್ ಅವರಿಗೆ ನೀಡಿ ಗೌರವಿಸಲಾಯಿತು. ತದನಂತರ ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಲಲಿತ ಕಲಾ ಕೇಂದ್ರದ ವಿದ್ಯಾರ್ಥಿಗಳಿಂದ ಸಂಪೂರ್ಣ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವೂ ನಡೆಯಿತು.

ಸನ್ಮಾನ ಸ್ವೀಕರಿಸಿದ ಬಳಿಕ ಕೋಳ್ಯೂರರು ಕುರಿಯ ಅವರ ಮನೆಗೆ ತೆರಳಿದಾಗ, ಯಕ್ಷಗಾನದ ನೆಲೆವೀಡಿನ ಚಾವಡಿಯಲ್ಲಿ ನಡೆದ ಈ ಪ್ರದರ್ಶನವೀಗ ಇತಿಹಾಸವನ್ನೇ ಸೃಷ್ಟಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು