ಯಕ್ಷ ಮೆಲುಕು: ಮಹಿಳೆಯ ಪ್ರವೇಶದ ಬಗೆಗಿದ್ದ ತುಚ್ಛ ಭಾವನೆಯ ತೊಲಗಿಸಿದ ಯಕ್ಷಗಾನದ ಆ ಸಂಸ್ಕಾರ

1986-87ನೇ ಸಾಲಿನ ಅರುವ ಮೇಳದ ಕರಪತ್ರ. ಕಲಾವಿದರ ಹೆಸರುಗಳನ್ನು ನೋಡಿ.
ಮಹಿಳೆಯೊಬ್ಬಳನ್ನು ಯಕ್ಷಗಾನ ರಂಗಕ್ಕೆ ಕರೆತಂದ ಸಂದರ್ಭದಲ್ಲಿ ಸಾಮಾಜಿಕ ಮನೋಭಾವದ ಕುರಿತ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ ಹಿರಿಯ ಯಕ್ಷಗಾನ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯರು.
ಯಕ್ಷಗಾನ ಕಲಾವಿದರ ಬಗ್ಗೆ ಆ ಕಾಲದಲ್ಲಿ ಎಷ್ಟು ಅನಾದರ, ಅಪಪ್ರಚಾರ ಇತ್ತು ಎಂಬುದಕ್ಕೆ ನನ್ನ ಜೀವನದಲ್ಲಿ ನಡೆದ ಈ ಘಟನೆಯೇ ಸಾಕ್ಷಿ.

ಮದುವೆಯಾಗಿ ಪತ್ನಿಗೂ (ಲೀಲಾ ಬೈಪಾಡಿತ್ತಾಯ) ಯಕ್ಷಗಾನದ ಭಾಗವತಿಕೆಯನ್ನು ಕಲಿತ ಮೇಲೆ ಅವಳಿಗೆ ನಿಧಾನವಾಗಿ ಹೆಸರು ಬರತೊಡಗಿತು. ಆಗೆಲ್ಲ ಈಗಿನಂತೆ ತಕ್ಷಣ ಪ್ರಚಾರಕ್ಕೆ ಬರುವುದಕ್ಕೆ ವಾಟ್ಸಪ್, ಫೇಸ್‌ಬುಕ್ ಎಲ್ಲ ಇರಲಿಲ್ಲ. ನಿಧಾನವಾಗಿ ಒಂದೊಂದೇ ಮೆಟ್ಟಿಲು ಏರುತ್ತಿರುವಂತೆಯೇ, ಬಾಯಿಯಿಂದ ಬಾಯಿಗೆ ವಿಷಯ ಹರಡುತ್ತಿತ್ತು. ಊರಿಂದ ಊರಿಗೆ ಹರಡುವುದಕ್ಕಂತೂ ತಿಂಗಳುಗಳೇ ಬೇಕಾಗುತ್ತಿದ್ದವು. ಪರವೂರಿಗೆ ಗೊತ್ತಾಗುವುದಕ್ಕೆ ವರ್ಷಗಟ್ಟಲೆ ಬೇಕಾಗುತ್ತಿತ್ತು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಹೀಗೆ, ಲೀಲಾ ಯಕ್ಷಗಾನಕ್ಕೆ ಹೊರಡುವಾಗ, ಕೆಲ ಬಂಧುಗಳಿಂದ 'ಸೀರೆ ನೆರಿಗೆಯಾಡಿಸಲು ಗಂಡನೊಂದಿಗೆ ತಿರುಗಾಡಲು ಹೊರಟಳು' ಎಂಬ ಚುಚ್ಚು ಮಾತು ಕೇಳಿಬಂದಿತ್ತು. ಇವಳು ಆರಂಭದಲ್ಲಿ ನೊಂದುಕೊಂಡಳಾದರೂ, ಇಂಥ ಅಪವಾದಕ್ಕೆ ಸೊಪ್ಪು ಹಾಕದಿರಲು ನಿರ್ಧರಿಸಿಬಿಟ್ಟಿದ್ದಳು. ಪುರುಷರೇ ಇರುವ ಯಕ್ಷಗಾನ ಮೇಳಗಳಲ್ಲಿ ಹೆಣ್ಣೊಬ್ಬಳು, ಅದು ಕೂಡ ರಾತ್ರಿಯಿಡೀ ನಡೆಯುವ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸುವುದೆಂದರೆ, ಆ ಕಾಲದಲ್ಲಿ ಸರ್ವಥಾ ಒಪ್ಪತಕ್ಕ ಮಾತಾಗಿರಲಿಲ್ಲ.

ಸ್ತ್ರೀಯರಿಗೂ ಬದುಕುವ ಹಕ್ಕಿದೆ, ದುಡಿಯುವ ಹಕ್ಕಿದೆ, ಶಿಕ್ಷಣ ಪಡೆಯುವ ಹಕ್ಕಿದೆ ಅಂತೆಲ್ಲ ಈಗಿನಂತೆ ವಿಶಾಲ ಮನೋಭಾವ ಬೆಳೆದಿರಲಿಲ್ಲ ಎನ್ನಬಹುದು. ಸ್ತ್ರೀಯರಿಗೆ ಸ್ವಾತಂತ್ರ್ಯವೂ ಇರಲಿಲ್ಲ ಆಗ. ಈ ಕಾಲದಲ್ಲಿ ಗಂಡನೊಂದಿಗೇ ಹೋಗುತ್ತಿದ್ದರೂ, ಚುಚ್ಚು ಮಾತುಗಳಿಗೇನೂ ಬರವಿರಲಿಲ್ಲ. ಆದರೆ, ಅದಕ್ಕೆ ಆ ಸಮಾಜವೇ ಹಾಗಿತ್ತು ಎಂಬುದು ಸಮಾಧಾನ ತರುವ ವಿಷಯ. ಒಬ್ಬ ವ್ಯಕ್ತಿಯನ್ನು ದ್ವೇಷಿಸಲು ಹೀಗೆ ಹೇಳಿದ್ದಾಗಿರಲಿಲ್ಲ. ಅಂದಿನ ಸಂಪ್ರದಾಯದ ಪ್ರಕಾರವೇ ಸಮಾಜದ ಮನಸ್ಥಿತಿ ಇತ್ತು ಮತ್ತು ಅದು ಬದಲಾಗಲು ಸಾಕಷ್ಟು ಕಾಲ ಬೇಕಾಗುತ್ತಿತ್ತು. ಹೀಗಾಗಿ, ಇಂಥದ್ದೊಂದು ಕ್ರಾಂತಿಕಾರಿ ಹೆಜ್ಜೆ ಇರಿಸಲು ಕಾರಣನಾದೆನಲ್ಲ ಎಂಬುದರ ಬಗ್ಗೆ ನನಗೆ ಯಾವತ್ತೂ ತಪ್ಪಿತಸ್ಥ ಭಾವನೆ ಬರಲಿಲ್ಲ. ಇವಳಿಗೂ ಅದನ್ನೇ ಹೇಳಿದ್ದೆ.

ಹೀಗೇ ಮುಂದುವರಿದಾಗ, ನಾವಿಬ್ಬರೂ ಅರುವ ಮೇಳವನ್ನು ಸೇರಿಕೊಂಡು ತಿರುಗಾಟ ಆರಂಭಿಸಿದೆವು. ಅಲ್ಲಿ ಧಣಿಗಳಾದ ಅರುವ ನಾರಾಯಣ ಶೆಟ್ಟರು ನಮ್ಮನ್ನು ಚೆನ್ನಾಗಿ ನೋಡಿಕೊಂಡಿದ್ದರು ಮತ್ತು ಇಡೀ ಯಕ್ಷಗಾನದ ತಂಡಕ್ಕೆ, 'ಅಮ್ಮನ ವ್ಯಕ್ತಿತ್ವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ' ಎಂದು ಸೂಚಿಸಿದ್ದರು. ಯಾಕೆಂದರೆ, ಹೆಣ್ಣೊಬ್ಬಳನ್ನು ಯಕ್ಷಗಾನದ ತಂಡದಲ್ಲಿ ಕರೆದುಕೊಂಡು ಹೋಗುವುದೆಂದರೆ ಮೇಳದ ಯಜಮಾನರಿಗೂ ರಿಸ್ಕ್ ವಿಷಯವೇ. ಹೀಗಾಗಿ, ಎಲ್ಲ ಕಲಾವಿದರಿಗೂ ಸೂಚಿಸಿದ್ದರು.

ಅಷ್ಟೇ ಅಲ್ಲ, ಯಾವುದೇ ಮೇಳದ ಆಟಗಳಲ್ಲಿ ಅತಿಥಿ ಕಲಾವಿದರಾಗಿ ಹೋದಾಗಲೂ ಲೀಲಾ ಬಗ್ಗೆ ಬಹುತೇಕ ಕಲಾವಿದರು ಗೌರವ ಭಾವನೆಯನ್ನೇ ಇರಿಸಿಕೊಂಡಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು. ಅಮ್ಮಾ, ಅಕ್ಕೆರೆ ಅಂತ ಅಕ್ಕರೆಯಿಂದಲೇ ಅವರು ಕರೆಯುತ್ತಾ, ಭಾಗವತರ ಸ್ಥಾನಕ್ಕೆ ಗೌರವ ನೀಡುತ್ತಿದ್ದರು. ಅನ್ಯ ಭಾವನೆಯಿಂದ ನೋಡಲು ಯತ್ನಿಸಿದವರಿಗೆ ಲೀಲಾಳ ಕಣ್ಣೋಟವೇ ಸಾಕಾಗುತ್ತಿತ್ತು, ಅವರನ್ನು ಸುಮ್ಮನಿರಿಸಲು. ತೆಪ್ಪಗಾಗದಿದ್ದರಷ್ಟೇ ಮೇಳದ ಧಣಿಗಳ ಬಳಿಗೆ ವಿಷಯ ಹೋದಮೇಲೆ ಎಲ್ಲವೂ ಸರಿಯಾಗುತ್ತಿತ್ತು.

'ಸೀರೆಯ ನೆರಿಗೆಯಾಡಿಸಲು ಹೊರಟಳು' ಅಂತ ಹೇಳಿದವರನ್ನು ಹಲವು ಬಾರಿ ಉದ್ದೇಶಪೂರ್ವಕವಾಗಿ ನಮ್ಮ ಮೇಳದ (ಅರುವ) ಆಟದ ಕ್ಯಾಂಪ್ ಹತ್ತಿರವಿದ್ದಾಗ, ಆಟಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ಆಟ ನೋಡುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಆದರೆ, ಚೌಕಿಯೊಳಗಂತೂ ಕರೆದುಕೊಂಡು ಹೋಗುತ್ತಿದ್ದೆ.

ಇಂಥದ್ದೇ ಒಂದು ಸಂದರ್ಭದಲ್ಲಿ, ಹೀಗೆ ತುಚ್ಛ ಭಾವನೆ ಹೊಂದಿದವರನ್ನು ಚೌಕಿಗೆ ಕರೆದುಕೊಂಡು ಹೋದೆ. ನಾನು ಮತ್ತು ಪತ್ನಿ ಚೌಕಿಗೆ ಹೊಕ್ಕ ಕೂಡಲೇ, ಹಿರಿಯ ಕಲಾವಿದರೆಲ್ಲರೂ ನಮಸ್ಕಾರ ಅಮ್ಮಾ, ನಮಸ್ಕಾರ ಅಕ್ಕಾ ಎನ್ನುತ್ತಿದ್ದರೆ, ಕಿರಿಯ ಕಲಾವಿದರು ಕಾಲಿಗೆ ಬಿದ್ದು ಆಶೀರ್ವಾದ ಬೇಡುತ್ತಿದ್ದರು! ಇದು ಆ ಕಾಲದಲ್ಲಿ ಯಕ್ಷಗಾನವು ಬೆಳೆಸಿದ ಸಂಪ್ರದಾಯ, ಸಂಸ್ಕಾರವೇ ಆಗಿತ್ತು ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬಲ್ಲೆ. ಗುರು, ಹಿರಿಯರ ಬಗೆಗಿನ ಗೌರವ ಭಾವವದು.

ಈ ಸಂದರ್ಭವನ್ನು ಕಣ್ಣಾರೆ ಕಂಡ ಅವರಂತೂ ಬೆಚ್ಚಿ ಬಿದ್ದು ಹೋದರು. ಯಕ್ಷಗಾನ ಕಲಾವಿದರೆಂದರೆ ಇಷ್ಟು ಸಂಸ್ಕಾರವಂತರೇ? ಎಂದು ಅಚ್ಚರಿಪಟ್ಟರು. (ಆ ಕಾಲದಲ್ಲಿ ಈ ರೀತಿಯ ನೆಗೆಟಿವ್ ಭಾವನೆ ಇರುವುದಕ್ಕೆ ಕಾರಣಗಳು ಹಲವು ಇದ್ದವು. ಅದು ಬಹುತೇಕರಿಗೆ ತಿಳಿದಿರುವಂಥದ್ದೇ). ತಾನು ತಪ್ಪಾಗಿ ಭಾವಿಸಿದೆ ಎಂದವರು ಬಹುಶಃ ನೊಂದುಕೊಂಡಿರಬೇಕು.

ಈ ರೀತಿಯ ಗೌರವ, ಹೆಸರು ಎಲ್ಲ ಸಿಗುತ್ತಿರುವ ಲೀಲಾಳ ಬಗ್ಗೆ ನಿಧಾನವಾಗಿ ಜನರ ಅಭಿಪ್ರಾಯ ಬದಲಾಗತೊಡಗಿತು. ಅವಳನ್ನು ತನ್ನ ಬಂಧುವೆಂದು ಹೆಮ್ಮೆಯಿಂದ ಹೇಳಿಕೊಂಡು ತಿರುಗಾಡತೊಡಗಿದರು ಅವರು.

ಹೀಗೆ, ಯಕ್ಷಗಾನದ ಒಳಗಿನ ಸಂಸ್ಕಾರವೊಂದು, ಸಮಾಜದ ಅಭಿಪ್ರಾಯವನ್ನೇ ಬದಲಾಯಿಸುವಲ್ಲಿ ಹೇಗೆ ಪಾತ್ರ ವಹಿಸಿತು ಎಂಬುದನ್ನು ಮೆಲುಕು ಹಾಕಿದಾಗಲೆಲ್ಲಾ, ಯಕ್ಷಗಾನದ ಹಿರಿಮೆಯ ಬಗ್ಗೆ ನನಗೆ ಮತ್ತಷ್ಟು ಹೆಮ್ಮೆಯಾಗುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು