ಮೇ 13-14: ತುಮಕೂರಿನಲ್ಲಿ ಯಕ್ಷಗಾನ ಬಣ್ಣಗಾರಿಕೆ ಕಮ್ಮಟ, ಮಾಂಬಾಡಿಯವರಿಗೆ ಗೌರವ, ಯಕ್ಷಗಾನ ಪ್ರದರ್ಶನ

ಯಕ್ಷಗಾನ ಪಾತ್ರಗಳು: ವೇಷಧಾರಿ ಈಶ್ವರಚಂದ್ರ ಭಟ್ ನಿಡ್ಲೆ

ತುಮಕೂರು: ಯಕ್ಷದೀವಿಗೆ (ರಿ.) ತುಮಕೂರು ವತಿಯಿಂದ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ರಾಜ್ಯಮಟ್ಟದ ಯಕ್ಷಗಾನ ಬಣ್ಣಗಾರಿಕೆ ಕಮ್ಮಟ, ಯಕ್ಷದೀವಿಗೆ ವಾರ್ಷಿಕ ಗೌರವ ಪ್ರದಾನ ಹಾಗೂ ಯಕ್ಷಗಾನ ಪ್ರದರ್ಶನವು 2022 ಮೇ 13, 14ರಂದು ತುಮಕೂರಿನಲ್ಲಿ ನಡೆಯಲಿದೆ.

ಅಮಾನಿಕೆರೆಯ ಕನ್ನಡ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಬಣ್ಣಗಾರಿಕೆ ಕಮ್ಮಟದ ಜೊತೆಗೆ, ಯಕ್ಷದೀವಿಗೆಯ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಾಗೂ ಯಕ್ಷಗಾನದ ಹೊಸ ವಿದ್ಯಾರ್ಥಿಗಳಿಂದ ಎರಡು ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಬಣ್ಣಗಾರಿಕೆ ಕಮ್ಮಟ
ಮುಖವರ್ಣಿಕೆ ಹಾಗೂ ವಿಶಿಷ್ಟ ವೇಷಭೂಷಣ ಯಕ್ಷಗಾನದ ಜೀವಾಳ. ಕಲಾವಿದ ತನ್ನ ಮುಖವರ್ಣಿಕೆಯನ್ನು ತಾನೇ ಮಾಡಿಕೊಳ್ಳುವುದು ಯಕ್ಷಗಾನದ ವೈಶಿಷ್ಟ್ಯ. ಬಣ್ಣಗಾರಿಕೆಯಲ್ಲಿ ತೊಡಗುತ್ತಾ ತಾನೇ ಪಾತ್ರವಾಗಿ ಮಾರ್ಪಡುವ ರೋಚಕ ಪ್ರಕ್ರಿಯೆಯೊಂದು ಇಲ್ಲಿ ನಡೆಯುತ್ತದೆ. ಹೀಗಾಗಿ ಮುಖವರ್ಣಿಕೆಯ ತಿಳಿವಳಿಕೆ ಪ್ರತಿಯೊಬ್ಬ ಕಲಾವಿದನ ಪ್ರಧಾನ ಅರ್ಹತೆಯಾಗಿದೆ. ಎರಡು ದಿನಗಳ ಈ ರಾಜ್ಯಮಟ್ಟದ ಬಣ್ಣಗಾರಿಕೆ ಕಮ್ಮಟದಲ್ಲಿ ತೆಂಕುತಿಟ್ಟು ಯಕ್ಷಗಾನದ ಮುಖವರ್ಣಿಕೆಯ ತರಬೇತಿ ನೀಡಲಾಗುತ್ತದೆ.
ಕಮ್ಮಟದ ಪ್ರಯೋಜನಗಳು
ಕಮ್ಮಟದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಸ್ವತಃ ಮುಖವರ್ಣಿಕೆ ಮಾಡಿಕೊಳ್ಳುವುದನ್ನು ಕಲಿತುಕೊಳ್ಳಲಿದ್ದಾರೆ. ಪಾತ್ರದಿಂದ ಪಾತ್ರಕ್ಕೆ ಬಣ್ಣಗಳು, ಮುದ್ರೆಗಳು, ರೇಖೆಗಳು ಹೇಗೆ ವ್ಯತ್ಯಾಸವಾಗುತ್ತವೆ ಎಂಬುದನ್ನು ತಿಳಿದುಕೊಳ್ಳುವ ಮೂಲಕ ಯಕ್ಷಗಾನದ ವಿವಿಧ ಪಾತ್ರಗಳ ಚಿತ್ರಣ, ವೈಶಿಷ್ಟ್ಯ ಹಾಗೂ ಸೂಕ್ಷ್ಮಗಳನ್ನು ಅರ್ಥೈಸಿಕೊಳ್ಳುವುದು ಇದರಿಂದ ಸುಲಭವಾಗಲಿದೆ. ಕಲಾ ಕೌಶಲ ಹಾಗೂ ಏಕಾಗ್ರತೆಯ ವೃದ್ಧಿ, ರಸಾಸ್ವಾದನೆಯ ಸಂತೋಷ ಹೆಚ್ಚುವರಿ ಲಾಭಗಳು.

ಸಂಪನ್ಮೂಲ ವ್ಯಕ್ತಿಗಳು
ಲೇಖಕರೂ, ಯಕ್ಷಗಾನ ಕಲಾವಿದರೂ, ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರೂ ಆಗಿರುವ ಶ್ರೀ ಗಣರಾಜ ಕುಂಬ್ಳೆ ಹಾಗೂ ಅನುಭವಿ ಯಕ್ಷಗಾನ ಪ್ರಸಾಧನ ಕಲಾವಿದರೂ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆಗಿರುವ ಶ್ರೀ ದಿವಾಕರದಾಸ್ ಕಾವಳಕಟ್ಟೆ ಈ ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.

ಯಾರೆಲ್ಲ ಭಾಗವಹಿಸಬಹುದು?
ಕಮ್ಮಟದಲ್ಲಿ ಭಾಗವಹಿಸಲು ವಯಸ್ಸಿನ ನಿರ್ಬಂಧವಿಲ್ಲ. ವಿದ್ಯಾರ್ಥಿಗಳು, ಕಲಾವಿದರು, ಅಧ್ಯಾಪಕರು, ಯಾವುದೇ ಉದ್ಯೋಗದಲ್ಲಿ ನಿರತರಾಗಿರುವವರು, ಗೃಹಿಣಿಯರು, ಎಲ್ಲ ಕಲಾಸಕ್ತರು ಭಾಗವಹಿಸಬಹುದು. ಸಾಹಿತ್ಯ, ಜಾನಪದ, ಲಲಿತ ಕಲೆಗಳ ಅಧ್ಯಯನಶೀಲರು, ಸಂಶೋಧನಾರ್ಥಿಗಳಿಗೂ ಉಪಯುಕ್ತ.

ನೋಂದಣಿ ಶುಲ್ಕ
ಕಮ್ಮಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೆ ರೂ. 1000 ನೋಂದಣಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಎರಡು ದಿನಗಳ ತರಬೇತಿ, ಮೇಕಪ್ ಕಿಟ್, ಊಟ, ಉಪಾಹಾರ, ಪ್ರಮಾಣಪತ್ರಗಳನ್ನು ನೀಡಲಾಗುವುದು. ವಸತಿ ವ್ಯವಸ್ಥೆ ಅಪೇಕ್ಷಿಸುವವರು ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಆಸಕ್ತರು  ಕೋಶಾಧಿಕಾರಿ ಶ್ರೀ ಸಿಬಂತಿ ಪದ್ಮನಾಭ (9449525854) ಅವರನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ನೋಂದಣಿಗೆ ಕೊನೆಯ ದಿನ: ಮೇ 10, 2022. ನೋಂದಣಿ ಶುಲ್ಕವನ್ನು ಕೋಶಾಧಿಕಾರಿಗಳಿಗೆ ನೀಡಬಹುದು ಅಥವಾ ಯಕ್ಷದೀವಿಗೆಯ ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಬಹುದು. ಖಾತೆಯ ವಿವರಗಳು ಕೆಳಗಿವೆ.

ಮಾಂಬಾಡಿ ಸುಬ್ರಹ್ಮಣ್ಯ ಭಟ್‌ಗೆ ಯಕ್ಷದೀವಿಗೆಯ ವಾರ್ಷಿಕ ಗೌರವ
ಕಮ್ಮಟದ ಎರಡನೇ ದಿನ ಅಂದರೆ ಮೇ 14, 2022ರಂದು ಅಪರಾಹ್ನ 3-00ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಹಿಮ್ಮೇಳ ಗುರುಗಳಾದ ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಗೌರವಿಸಲಾಗುವುದು.

ಯಕ್ಷಗಾನ ಪ್ರದರ್ಶನ
ಸಭಾ ಕಾರ್ಯಕ್ರಮದ ಬಳಿಕ ಯಕ್ಷದೀವಿಗೆಯ ವಿದ್ಯಾರ್ಥಿಗಳಿಂದ ಎರಡು ಯಕ್ಷಗಾನ ಪ್ರದರ್ಶನವಿದೆ. ಸಂಜೆ 4-30ರಿಂದ 6-30ರವರೆಗೆ ಬಭ್ರುವಾಹನ ಕಾಳಗ (ಕವಿ: ದೇವಿದಾಸ) ಹಾಗೂ 6-30ರಿಂದ 8-30ರವರೆಗೆ ವೀರ ವೃಷಸೇನ (ಕವಿ: ಪಾಂಡೇಶ್ವರ ವೆಂಕಟ) ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ತುಮಕೂರಿನ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಈಗಾಗಲೇ ಇವುಗಳ ಅಭ್ಯಾಸದಲ್ಲಿ ತೊಡಗಿದ್ದಾರೆ.

ಯಕ್ಷಗಾನೇತರ ನೆಲದಲ್ಲಿ ಯಕ್ಷಗಾನದ ದೀವಿಗೆ
ಜಾನಪದ ಕಲೆಗಳಿಗೆ ಹೆಸರಾಗಿರುವ ತುಮಕೂರಿನಲ್ಲಿ ಯಕ್ಷಗಾನದ ಕಂಪನ್ನು ಬೀರುವ ನಿಟ್ಟಿನಲ್ಲಿ ಯಕ್ಷದೀವಿಗೆ ಕಳೆದ ಎಂಟು ವರ್ಷಗಳಿಂದ ತನ್ನದೇ ಆದ ರೀತಿಯಲ್ಲಿ ಶ್ರಮಿಸುತ್ತಿದೆ. ಬಯಲುಸೀಮೆಯ ಕಲಾಸಕ್ತರಲ್ಲಿ, ಅದರಲ್ಲೂ ವಿದ್ಯಾರ್ಥಿಗಳು, ಯುವಜನರು ಹಾಗೂ ಮಹಿಳೆಯರಲ್ಲಿ ಯಕ್ಷಗಾನದ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಸೆಪ್ಟೆಂಬರ್ 2014ರಲ್ಲಿ ಆರಂಭಗೊಂಡ ಯಕ್ಷದೀವಿಗೆ 2016ರಲ್ಲಿ ಒಂದು ಟ್ರಸ್ಟ್ ಆಗಿ ನೋಂದಣಿಗೊಂಡಿತು.

ಯಕ್ಷದೀವಿಗೆಯ ಅಧ್ಯಕ್ಷರಾದ ಶ್ರೀಮತಿ ಆರತಿ ಪಟ್ರಮೆಯವರ ನೇತೃತ್ವದಲ್ಲಿ ವಾರಾಂತ್ಯದ ತರಗತಿಗಳ ಮೂಲಕ ತೆಂಕುತಿಟ್ಟು ಯಕ್ಷಗಾನದ ಮುಮ್ಮೇಳದ ತರಬೇತಿಯನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಅವರ ಮಾರ್ಗದರ್ಶನದಲ್ಲಿ ತುಮಕೂರಿನ ಅನೇಕ ಆಸಕ್ತರು ಈವರೆಗೆ ಯಕ್ಷಗಾನದ ತರಬೇತಿ ಪಡೆದು ರಂಗವೇರಿದ್ದಾರೆ. ಶ್ರೀ ಅವಿನಾಶ್ ಬೈಪಾಡಿತ್ತಾಯರು ಚೆಂಡೆ-ಮದ್ದಳೆ ತರಗತಿಗಳನ್ನೂ ಪ್ರಾರಂಭಿಸಿದ್ದಾರೆ.

ಕಲಾಸಕ್ತ ಸಹೃದಯರ ಕೋರಿಕೆಯ ಮೇರೆಗೆ ತುಮಕೂರು ಜಿಲ್ಲೆಯೂ ಸೇರಿದಂತೆ ಅನೇಕ ಭಾಗಗಳಲ್ಲಿ ಯಕ್ಷದೀವಿಗೆಯ ಕಲಾವಿದರು ಯಶಸ್ವೀ ಪ್ರದರ್ಶನ ನೀಡಿದ್ದಾರೆ. ಕೃಷ್ಣಾರ್ಜುನ ಕಾಳಗ, ಗದಾಯುದ್ಧ, ಸುದರ್ಶನ ಗರ್ವಭಂಗ, ಕರ್ಣಾರ್ಜುನ ಕಾಳಗ, ಜಾಂಬವತಿ ಕಲ್ಯಾಣ, ವೀರಮಣಿ ಕಾಳಗ, ರುಕ್ಮಿಣೀ ಕಲ್ಯಾಣ, ದಕ್ಷಯಜ್ಞ, ವಾಲಿಮೋಕ್ಷ, ಅತಿಕಾಯ ಕಾಳಗ ಮೊದಲಾದ ಪ್ರಸಂಗಗಳನ್ನು ಈವರೆಗೆ ಪ್ರಸ್ತುತಪಡಿಸಲಾಗಿದೆ. ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಪ್ರೊ. ಅಮೃತ ಸೋಮೇಶ್ವರರ ಮಾರಿಷಾ ಕಲ್ಯಾಣ, ಶ್ರೀ ಸೂರಿಕುಮೇರು ಗೋವಿಂದ ಭಟ್ಟರು ರಚಿಸಿದ ಶೇಕ್ಸ್‌ಪಿಯರ್ ಕವಿಯ ಮ್ಯಾಕ್‌ಬೆತ್ ನಾಟಕದ ಯಕ್ಷಗಾನ ರೂಪ ಮುಂತಾದ ಪ್ರಯೋಗಾತ್ಮಕ ಪ್ರದರ್ಶನಗಳನ್ನೂ ನೀಡಲಾಗಿದೆ.

ಹಿರಿಯ ಕಲಾವಿದರನ್ನು ಆಹ್ವಾನಿಸಿ ಶ್ರೇಷ್ಠ ಮಟ್ಟದ ಪ್ರದರ್ಶನಗಳನ್ನು ಆಯೋಜಿಸುವ ಕಾರ್ಯವೂ ಯಕ್ಷದೀವಿಗೆಯಿಂದ ನಡೆಯುತ್ತಿದೆ. ಶ್ರೀ ಉಮಾಕಾಂತ ಭಟ್ ಕೆರೇಕೈ, ಶ್ರೀ ಗಣರಾಜ ಕುಂಬ್ಳೆ, ಶ್ರೀ ಉಜಿರೆ ಅಶೋಕ ಭಟ್, ಶ್ರೀ ರಾಧಾಕೃಷ್ಣ ಕಲ್ಚಾರ್, ಶ್ರೀ ಪುತ್ತಿಗೆ ರಘುರಾಮ ಹೊಳ್ಳ, ಶ್ರೀ ಪದ್ಯಾಣ ಶಂಕರನಾರಾಯಣ ಭಟ್, ಶ್ರೀ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀ ಕೊಳಗಿ ಕೇಶವ ಹೆಗಡೆ, ಶ್ರೀ ಪುತ್ತೂರು ರಮೇಶ್ ಭಟ್, ಶ್ರೀ ಪಿ.ಜಿ. ಜಗನ್ನಿವಾಸರಾವ್, ಶ್ರೀ ವಾಸುದೇವ ರಂಗಾಭಟ್, ಶ್ರೀಮತಿ ಕಾವ್ಯಶ್ರೀ ಆಜೇರು ಮೊದಲಾದ ಕಲಾವಿದರನ್ನು ಆಮಂತ್ರಿಸಿ ತಾಳಮದ್ದಳೆಗಳನ್ನು ಸಂಘಟಿಸಲಾಗಿದೆ.

ಯಕ್ಷ ದೀವಿಗೆ ನೋಂದಾಯಿತ ಟ್ರಸ್ಟ್‌ನಲ್ಲಿ ಅಧ್ಯಕ್ಷರಾಗಿ ಯಕ್ಷಗಾನ ಅಕಾಡೆಮಿ ಸದಸ್ಯೆ, ಉಪನ್ಯಾಸಕಿ ಆರತಿ ಪಟ್ರಮೆ, ಕಾರ್ಯದರ್ಶಿಯಾಗಿ ಹವ್ಯಾಸಿ ಅರ್ಥಧಾರಿ, ಸಾಫ್ಟ್‌ವೇರ್ ಉದ್ಯೋಗಿ ಶಶಾಂಕ ಅರ್ನಾಡಿ, ಕೋಶಾಧಿಕಾರಿಯಾಗಿ ಹವ್ಯಾಸಿ ಕಲಾವಿದ, ಉಪನ್ಯಾಸಕ ಡಾ. ಸಿಬಂತಿ ಪದ್ಮನಾಭ ಹಾಗೂ ಟ್ರಸ್ಟಿಗಳಾಗಿ ಟಿ. ಎನ್. ಹರಿಪ್ರಸಾದ್, ಡಾ. ವೆಂಕಟರೆಡ್ಡಿ ರಾಮರೆಡ್ಡಿ ಅವರು ಇದ್ದಾರೆ.

ಉದಾರ ಧನಸಹಾಯಕ್ಕೆ ವಿನಂತಿ
ಯಕ್ಷದೀವಿಗೆಯ ವಿವಿಧ ರಚನಾತ್ಮಕ ಚಟುವಟಿಕೆಗಳು ಸಹೃದಯರ ಉದಾರ ನೆರವಿನಿಂದಲೇ ನಡೆದುಕೊಂಡು ಬಂದಿವೆ. ಅವರೆಲ್ಲರಿಗೂ ಯಕ್ಷದೀವಿಗೆ ಸದಾ ಋಣಿಯಾಗಿದೆ. ಉಲ್ಲೇಖಿತ ಬಣ್ಣಗಾರಿಕೆ ಕಮ್ಮಟ, ಯಕ್ಷಗಾನ ಪ್ರದರ್ಶನಗಳಿಗೂ ಕಲಾಪ್ರೇಮಿಗಳಿಂದ ಧನಸಹಾಯವನ್ನು ಅಪೇಕ್ಷಿಸುತ್ತಿದ್ದೇವೆ. ತಮ್ಮ ನೆರವನ್ನು ಕೆಳಗೆ ನೀಡಿರುವ ಯಕ್ಷದೀವಿಗೆಯ ಬ್ಯಾಂಕ್ ಖಾತೆಗೆ ಪಾವತಿಸಬಹುದು. ತಮ್ಮ ಪ್ರಾಯೋಜಕತ್ವವನ್ನು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಉಲ್ಲೇಖಿಸಲಾಗುವುದು.
YAKSHADEEVIGE
A/c No.: 3032000100170696
Punjab National Bank, BH Road, Tumkur
IFSC: PUNB0303200 MICR: 572024002

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು