ಅನುಕರಣೆಯ ಆಧಿಕ್ಯದಿಂದ ಯಕ್ಷಗಾನಕ್ಕೆ ಸಂಚಕಾರ: ರಾಜ ಕಲೆಯಾಗಿಸೋಣ ಬನ್ನಿ!

ಒಂದು ಕಾಲದಲ್ಲಿ ಪಾರಂಪರಿಕವಾಗಿ, ಯಾವುದೇ ಕುಂದುಗಳಿಲ್ಲದೆ ಜ್ಞಾನ ಪ್ರಸಾರಕ್ಕೆ, ಜನಾಕರ್ಷಣೆಗೆ ಹೇತುವಾಗಿದ್ದ ಯಕ್ಷಗಾನ ಇಂದು ಅನ್ಯ ಕಲೆಗಳ ಅಂಧಾನುಕರಣೆಯಿಂದ ಸೊರಗುತ್ತಿದೆ. ಯಕ್ಷಗಾನೀಯತೆ ಉಳಿಸಿಕೊಂಡು, ಕರ್ನಾಟಕದ ರಾಜ್ಯದ ಪ್ರಧಾನ ಕಲೆಯಾಗಿ ಯಕ್ಷಗಾನವನ್ನು ಬೆಳೆಸುವ ಜವಾಬ್ದಾರಿ ಕಲಾವಿದರಿಗೆ ಮತ್ತು ಪ್ರೇಕ್ಷಕರಿಗೆ ಇದೆ ಎನ್ನುತ್ತಾರೆ ಮುಷ್ತಾಕ್ ಹೆನ್ನಾಬೈಲ್.
ಕಾಳಿಂಗ ನಾವಡರ ಯಕ್ಷಗಾನ ವೈಭವದ ದಿನಗಳು
ಇಡೀ ಜಗತ್ತು ಮಲಗಿರುವಾಗ ನಡುರಾತ್ರಿಯ ನಂತರದ ಆ ಹೊತ್ತಲ್ಲದ ಹೊತ್ತಿನಲ್ಲಿ ತನ್ನ ಕಂಚಿನ ಕಂಠದೊಂದಿಗೆ ಭಾಗವತ ಕಾಳಿಂಗ ನಾವಡರು ಪೌರಾಣಿಕ ಪ್ರಸಂಗಗಳ ಪದ್ಯ ಹೇಳುತ್ತಿದ್ದರೆ ಕರಾವಳಿ ಜಿಲ್ಲೆಗಳ ಯಕ್ಷಗಾನ ಪ್ರೇಕ್ಷಕರು ಅದ್ಯಾವುದೋ ಲೋಕದಲ್ಲಿ ವಿಹರಿಸುತ್ತಾ ತಮ್ಮನ್ನು ತಾವು ಮರೆಯುತ್ತಿದ್ದರು. ರಾಗ ಸಾವೇರಿಯಲ್ಲಿ ಗದಾಯುದ್ಧ ಪ್ರಸಂಗದ "ಇತ್ತ ಕುರುಕ್ಷೇತ್ರದೊಳು ಕುರುರಾಯನಿದನೆಲ್ಲ ಕಂಡು ಸಂತಾಪದಿ ಮರುಗಿ ತನ್ನಯ ಭಾಗ್ಯವಿದೆನುತಾ" ಎಂಬ ಪದ್ಯಕ್ಕೆ ಗೋಡೆ ನಾರಾಯಣ ಹೆಗಡೆಯವರ ಕೌರವ ಪಾತ್ರದ ವಿಭಿನ್ನ ಪ್ರವೇಶ ರಂಗದಲ್ಲಿ ಮೂಡಿಸುವ ಶ್ರಾವ್ಯ, ದೃಶ್ಯ ಮತ್ತು ಭಾವಗಳ ಸಂಗಮ ವರ್ಣನಾತೀತ. ಶೃಂಗಾರಭರಿತ ಸನ್ನಿವೇಶಗಳಿಗೆ ಅಳವಡಿಸುವ ನಾವಡರ "ಎಲ್ಲೆಲ್ಲೂ ಸೊಬಗಿದೆ" "ನವಿಲು ಕುಣಿಯುತಿದೆ" ಪದ್ಯಗಳು ಇಂದಿಗೂ ಜನಜನಿತ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಶ್ರುತಿಬದ್ಧವಾದ, ಸ್ಪಷ್ಟ ಪದೋಚ್ಚಾರ ಮತ್ತು ನಿಖರ ನಿಲುವು ಕಾಣುವ ನಾವಡರ ಭಾಗವತಿಕೆಯ ಸ್ವರದ ಆರೋಹಣ -ಅವರೋಹಣ, ರಾಗ, ತಾಳ, ಲಯಗಳ ಸಮಾಗಮದಲ್ಲಿ ಸೃಷ್ಟಿಯಾಗುವ ಸ್ವರ ಸಂಚಲನ, ಹೊಮ್ಮುವ ಮಾಧುರ್ಯ, ಮೂಡುವ ಸೊಬಗು ಮತ್ತು ಸುಶ್ರಾವ್ಯತೆ ಕೇಳಿದವರು ನೋಡಿದವರಿಗಷ್ಟೇ ಗೊತ್ತು. ಯಕ್ಷಗಾನಕ್ಕೆ ಸಾಂಪ್ರದಾಯಿಕತೆಯ ಚೌಕಟ್ಟಿನೊಳಗೆ ನವರೂಪ ನವರಾಗಗಳನ್ನು ಕೊಟ್ಟ ರಸರಾಗ ಚಕ್ರವರ್ತಿ ಕಾಳಿಂಗ ನಾವಡ ಅಕ್ಷರಶಃ ಯಕ್ಷಗಾನದ ಅನ್ವರ್ಥನಾಮ. ಅಸಾಮಾನ್ಯ ಪ್ರತಿಭಾವಂತರು ಮತ್ತು ಧರ್ಮ, ಜಾತಿ, ತಿಟ್ಟುಗಳನ್ನು ಮೀರಿದ ಅಪಾರ ಅಭಿಮಾನಿ ಬಳಗ ಹೊಂದಿದರೂ ನಾವಡರು ನಿಗರ್ವಿ.

ಹೆಚ್ಚುಕಡಿಮೆ ಮಧ್ಯರಾತ್ರಿ ಒಂದು ಗಂಟೆಯ ಸುಮಾರಿಗೆ ರಂಗಸ್ಥಳಕ್ಕೆ ಅವರ ಆಗಮನವಾದಾಗ ಪ್ರೇಕ್ಷಕರಿಗಾಗುವ ರೋಮಾಂಚನ, ಮುಗಿಲುಮುಟ್ಟುವ ಸಂಭ್ರಮ, ಅಕ್ಷರ ನಿರೂಪಣೆಗೆ ನಿಲುಕದ್ದು. ಆಬಾಲವೃದ್ಧರಾದಿಯಾಗಿ ಜಾತಿ ಧರ್ಮಗಳ ಭೇದವಿಲ್ಲದೆ ಕರಾವಳಿ ಜಿಲ್ಲೆಗಳ ಜನರು ಯಕ್ಷಗಾನದ ಅಪಾರ ಅಭಿಮಾನಿಗಳು. ಯಕ್ಷಗಾನದ ಹಲವು ತಿಟ್ಟುಗಳಲ್ಲಿ ಪ್ರಧಾನವಾಗಿ ತೆಂಕು ಬಡಗು ಎಂಬ ಭಿನ್ನ ತಿಟ್ಟು-ಪ್ರಕಾರಗಳಿದ್ದರೂ ಕರಾವಳಿಯಲ್ಲಿ ಯಕ್ಷಗಾನದ ಅಭಿಮಾನಿಗಳು ಮತ್ತು ಕಾಳಿಂಗ ನಾವಡರ ಅಭಿಮಾನಿಗಳು ಎಂದು ಎರಡು ಭಿನ್ನ ವರ್ಗವಿಲ್ಲ. ಯಕ್ಷಾಭಿಮಾನಿಯಾದವನು ಕಾಳಿಂಗ ನಾವಡರ ಅಭಿಮಾನಿ ಆಗಿಯೇ ಇರುತ್ತಾನೆ ಎಂಬುದು ಯಕ್ಷಗಾನದ ಅಲಿಖಿತ ಉಲ್ಲೇಖ.

ನಾವಡರ ಕಾಲ ಕನ್ನಡ ಚಿತ್ರರಂಗ ಉತ್ತುಂಗದಲ್ಲಿದ್ದ ಕಾಲವೂ ಹೌದು. ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಅನಂತ್ ನಾಗ್, ಶಂಕರ್ ನಾಗ್, ಪ್ರಭಾಕರ್, ರವಿಚಂದ್ರನ್ ತಮ್ಮ ಜೀವಮಾನದ ಶ್ರೇಷ್ಠ ನಟನೆಯ ಅದ್ಭುತ ಕಥೆ ಹೊಂದಿರುವ ಮತ್ತು ಸಂಗೀತಮಯ ಚಿತ್ರಗಳನ್ನು ನೀಡಿದ್ದರು. ಆ ಕಾಲದಲ್ಲಿ ಕಾದಂಬರಿ ಆಧಾರಿತ ಸೃಜನಶೀಲ ಸಾಹಿತ್ಯದ ಕನ್ನಡ ಚಿತ್ರಗಳು ಹಿಂದಿಯೂ ಸೇರಿದಂತೆ ಇತರ ಭಾರತೀಯ ಭಾಷೆಗಳ ಚಿತ್ರಗಳ ಮೇಲೆ ವಿಪರೀತ ಪ್ರಭಾವ ಬೀರುತ್ತಿದ್ದವು. ಹೀಗಿದ್ದ ಕನ್ನಡ ಚಿತ್ರಗಳ ಪ್ರಬಲ ಸ್ಪರ್ಧೆಯ ನಡುವೆಯೂ ಕರಾವಳಿಯಲ್ಲಿ ಮಾತ್ರ ನಾವಡರ ನೇತೃತ್ವದಲ್ಲಿ ಯಕ್ಷಗಾನ ವಿಜೃಂಭಿಸುತಿತ್ತು. ರಾಜ್ಯದಲ್ಲೆಡೆ ಜನರು ಸಿನಿಮಾ ಪದ್ಯಗಳನ್ನು ಹಾಡುತ್ತಿದ್ದರೆ ಕರಾವಳಿ ಕನ್ನಡಿಗರು ಮಾತ್ರ ಕಾಳಿಂಗ ನಾವಡರ ಯಕ್ಷಗಾನ ಪದ್ಯಗಳನ್ನು ಗುನುಗುನಿಸುತ್ತಿದ್ದರು. ಅವಘಡವೊಂದರಲ್ಲಿ ಅಕಾಲ ಮೃತ್ಯುಗೀಡಾಗುವ ಮುಂಚೆ ಬದುಕಿದ್ದು 30 ಚಿಲ್ಲರೆ ವರ್ಷವೇ ಆದರೂ, ಒಂದಿಡೀ ಯಕ್ಷ ಪೀಳಿಗೆಯ ಪಾಲಿನ ಅಭಿನವ ಗಂಧರ್ವ ಕಾಳಿಂಗ ನಾವಡರೇ.

ನಡುರಾತ್ರಿಯ ಬಳಿಕವೂ ಆಸ್ವಾದಿಸಬಲ್ಲ ಏಕೈಕ ಕಲೆ
ಹಾಗಂತ ನಾವಡರನ್ನು ಸ್ವರ ಸಾಮ್ರಾಟ ಕಾಳಿಂಗ ನಾವಡರನ್ನಾಗಿಸಿದ್ದು ಯಕ್ಷಗಾನವೇ. ನವರಸವನ್ನು ನಿದ್ದೆಗೆ ಸಡ್ಡುಹೊಡೆದು ರಾತ್ರಿಯ ಅಂತಿಮ ಚರಣದಲ್ಲೂ ಪ್ರೇಕ್ಷಕರಿಗೆ ಭರಪೂರ ಉಣಬಡಿಸುವ ಅಪೂರ್ವ ಕಲೆ ಯಕ್ಷಗಾನ. ಜಗತ್ತಿನ ಅದ್ಯಾವ ಕಲೆಯ ರಸಸ್ವಾದನೆಯನ್ನೂ ರಾತ್ರಿಯ ಮೊದಲ ಚರಣದ ನಂತರದ ನಿದ್ದೆಯು ಮಲಗಿಸಿಬಿಡುತ್ತದೆ. ನೀವು ನಿಮ್ಮ ಇಷ್ಟದ ಚಲನಚಿತ್ರ, ಸಂಗೀತ, ನೃತ್ಯ, ಕ್ರೀಡೆಯನ್ನು ನಡುರಾತ್ರಿಯ ನಂತರ ಆಸ್ವಾದಿಸಲಾರಿರಿ. ಆದರೆ ಯಕ್ಷಗಾನದ್ದು ಮಾತ್ರ ಚಂದ್ರ ಮುಳುಗದ ಸಾಮ್ರಾಜ್ಯ. ಅದೆಂತಹ ಪ್ರಕ್ಷುಬ್ಧ ಮನಸ್ಸನ್ನೂ ಯಕ್ಷಗಾನ ಪುಳಕಿತಗೊಳಿಸುತ್ತದೆ. ಎಂತಹ ಆಯಾಸ ಆಲಸ್ಯವನ್ನೂ ಹೋಗಲಾಡಿಸುವ ಗುಣ ಯಕ್ಷಗಾನಕ್ಕಿದೆ. ಹೊತ್ತಲ್ಲದ ಹೊತ್ತಿನಲ್ಲಿ ಎದುರಿಗೆ ಕೂತವರನ್ನು ಹುಚ್ಚೆಬ್ಬಿಸಿ ಕುಣಿಸುವ, ಮನಮಿಡಿಸುವ, ಮೌನವಾಗಿಸುವ ಸಾಮರ್ಥ್ಯ ಈ ಕಲೆಗಿದೆ. ಬೆಳಗಿನ ಜಾವದ ನಿದ್ದೆಯ ಮಂಪರಿನಲ್ಲಿ ನಡೆಯುವಾಗ ಕುಡಿದು ತೂರಾಡಿದಂತೆ ಕಂಡರೂ, ನಿದ್ದೆಯನ್ನು ಒದ್ದು ಒಂದಿಡೀ ರಾತ್ರಿ ಕೂರಿಸಿಕೊಂಡು ಪ್ರೇಕ್ಷಕರ ಮನಸ್ಸನ್ನು ಸ್ಥಿರ-ಸಮಚಿತ್ತವಾಗಿರಿಸಿ ‍ನಿರಂತರ ರಸಾಸ್ವಾದನೆ ನೀಡಬಲ್ಲ, ಅಪರೂಪದಲ್ಲೇ ಅಪರೂಪದ ಅದ್ವಿತೀಯ ಕಲೆ ಯಕ್ಷಗಾನ. ಅಕ್ಷರ ಜ್ಞಾನವಿಲ್ಲದ ಯಕ್ಷಗಾನ ಪ್ರೇಮಿ ಅದೆಂತಹ ಅಕ್ಷರಸ್ಥನ ಜ್ಞಾನಕ್ಕೂ ಸವಾಲೊಡ್ಡಬಲ್ಲ.

ಕರಾವಳಿಯನ್ನೇ ಸುಸಂಸ್ಕೃತವಾಗಿಸಿದ ಯಕ್ಷಗಾನ
ಕಾಸರಗೋಡಿನಿಂದ ಕಾರವಾರದವರೆಗಿನ ಕರಾವಳಿ ಜಿಲ್ಲೆಗಳು ಶಿಕ್ಷಣ, ಆರೋಗ್ಯ, ಸಂಪರ್ಕ, ಸಂವಹನ ಕ್ಷೇತ್ರದಲ್ಲಿ ರಾಜ್ಯದ ಉಳಿದ ಜಿಲ್ಲೆಗಳಿಗಿಂತ ಮುಂದಿದ್ದರೆ ಅದಕ್ಕೆ ಯಕ್ಷಗಾನ ಸೃಷ್ಟಿಸಿದ ಸುಸಂಸ್ಕೃತ ವಾತಾವರಣವೇ ಮೂಲ ಕಾರಣ. ಮೂರು-ನಾಲ್ಕು ದಶಕಗಳ ಹಿಂದೆ ಜಿಲ್ಲೆಗೆ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾನಿಲಯ, ವಿದ್ಯಾಸಂಸ್ಥೆಗಳು ಬರುವ ಮುಂಚೆಯೇ ಯಕ್ಷಗಾನ ಇಲ್ಲಿ ಸುಶಿಕ್ಷಿತ ವಾತಾವರಣವನ್ನು ನಿರ್ಮಿಸಿಯಾಗಿತ್ತು. ಭಾಷಾ ಶುದ್ಧತೆ, ವೈಚಾರಿಕತೆ, ಕಥೆ, ಸಂಗೀತ, ಸಾಹಿತ್ಯ, ಸಂಭಾಷಣೆ, ಸಂಯೋಜನೆಗಳ ವಿಚಾರದಲ್ಲಿ ಯಕ್ಷಗಾನ ಅಪ್ಪಟ ಜ್ಞಾನ ವಿಶ್ವವಿದ್ಯಾನಿಲಯ. ಯಾರೇನೇ ಅಂದರೂ ಆಧ್ಯಾತ್ಮದ ಆನಂದ ಮತ್ತು ಧರ್ಮ ಶಿಕ್ಷಣಕ್ಕೆ ಪರ್ಯಾಯವಿಲ್ಲ. ಎರಡನ್ನೂ ಏಕಕಾಲದಲ್ಲಿ ನವರಸಗಳ ಅಳವಡಿಕೆಯ ಮೂಲಕ ಅಗಾಧವಾಗಿ ಯಕ್ಷಗಾನ ನೀಡುತ್ತದೆ.

ಆಹಾ...ಅದೆಂತಹ ಅದ್ಭುತ ಕಲೆ ಯಕ್ಷಗಾನ. ಕಟ್ಟಾ ಅಭಿಮಾನಿ ಮಾತ್ರವಲ್ಲ ಯಕ್ಷಗಾನದ ವಿಚಾರದಲ್ಲಿ ನಾನು ವಿಪರೀತ ಪಕ್ಷಪಾತಿಯೂ ಹೌದು. ಚಲನಚಿತ್ರ ನಟರಿಗಿಂತ ಯಕ್ಷಗಾನ ಪಾತ್ರಧಾರಿಗಳೇ ಒಂದು ಕೈ ಮೇಲು ಎಂಬುದು ಹಲವು ಸಾಕ್ಷಿ- ಸಬೂಬುಗಳೊಂದಿಗೆ ನನ್ನ ನಿತ್ಯದ ವಾದ. ಸಮಗ್ರತೆಯ ವಿಚಾರ ಬಂದಾಗ ಈ ಕಲೆಯನ್ನು ಮೀರಿಸುವ ಮತ್ತೊಂದು ಕಲೆ ಈ ಜಗತ್ತಿನಲ್ಲಿ ಇಲ್ಲ ಎಂದಾಗ ಯಾರಿಗಾದರೂ ಅತಿಶಯೋಕ್ತಿ ಎನಿಸಿದರೆ ಅಂತವರಿಗೆ ಯಕ್ಷಗಾನದ ಬಗ್ಗೆ ಏನೂ ಗೊತ್ತಿಲ್ಲ ಎಂದೇ ಅರ್ಥ. ಕಡು ಬಡವರ ಕೈಯಲ್ಲಿರುವ ಅತೀ ಶ್ರೀಮಂತ ಸಾಹಿತ್ಯ, ಸಂಗೀತ, ಸಂಸ್ಕಾರಭರಿತ ಕಲೆ ಇದು... ಯಾರದ್ದಾದರೂ ಮನೆಯಲ್ಲಿ ಯಕ್ಷಗಾನವಿದ್ದರೆ ಯಾರೂ ಯಾರಿಗೂ ಆಮಂತ್ರಣ ಕೊಡಬೇಕಿಲ್ಲ. ಯಕ್ಷಗಾನವೇ ಸರ್ವರನ್ನು ಆಕರ್ಷಿಸಿ ಆವರಿಸಿ ಆಮಂತ್ರಿಸಿಕೊಂಡು ತನ್ನೊಳಗೆ ಸೆಳೆದುಕೊಳ್ಳುತ್ತದೆ.

ಎಷ್ಟು ಬಾರಿ ನೋಡಿದರೂ ತಣಿಯದ ದಾಹ
ಅದೆಷ್ಟೇ ಆಕರ್ಷಕ-ಗಣ್ಯ ತಾರಾಗಣ, ಅಭಿನಯ, ಅದ್ಧೂರಿಯ ತಂತ್ರಜ್ಞಾನ-ಬಜೆಟ್, ಕಥೆ, ಸಂಗೀತ, ಸಾಹಿತ್ಯವಿದ್ದರೂ ಅಥವಾ ಫಿಲ್ಮ್ ಫೇರ್-ಆಸ್ಕರ್ ಪ್ರಶಸ್ತಿ ಪಡೆದ ದೇಶೀ ವಿದೇಶೀ ಯಾವುದೇ ಚಲನಚಿತ್ರವನ್ನು ಒಂದಕ್ಕಿಂತ ಹೆಚ್ಚು ಬಾರಿ ನೋಡಿದರೆ ಮತ್ತೆ ನೋಡಬೇಕೆನಿಸುವುದಿಲ್ಲ. ಚೀನಾದ ಅಧ್ಯಕ್ಷನೊಬ್ಬ 80ರ ದಶಕದ ಹಿಂದಿ ಚಿತ್ರ "ಮೇರಾ ನಾಮ್ ಜೋಕರ್" ಅನ್ನು ಸುಮಾರು 60 ಬಾರಿ ನೋಡಿದನಂತೆ. ಆ ಚಿತ್ರದ ಕಥೆ ಮತ್ತು ನಟನೆಯನ್ನು ವಿಪರೀತ ಹಚ್ಚಿಕೊಂಡು ಗೀಳಾಗಿ ಪರಿಣಮಿಸಿದ್ದು ಆತ ಚಿತ್ರವನ್ನು ಅಷ್ಟು ಬಾರಿ ನೋಡಲು ಇದ್ದ ಕಾರಣ ಹೊರತು ಬೇರೇನೂ ಕಾರಣ ಇರಲಿಲ್ಲ. ಅದೇ ಚಿತ್ರ ಭಾರತದಲ್ಲಿ ಸೋಲು ಕಂಡಿತು. ಗೀಳು ಒಂದು ಮನೋರೋಗ. ಆದರೆ ಯಕ್ಷಗಾನದ ಒಂದೇ ಪ್ರಸಂಗ ನೀವು ನೂರು ಬಾರಿ ನೋಡಿದರೂ ನಿಮಗೆ ನೂರಾ ಒಂದನೇ ಬಾರಿ ನೋಡಲು ಬಹಳಷ್ಟು ಕಾರಣಗಳಿರುತ್ತವೆ. ಅದೆಷ್ಟೋ ಪ್ರಸಂಗಗಳು ಸಾವಿರಾರು ಪ್ರದರ್ಶನಗಳನ್ನು ಕಂಡಿವೆ. ನೋಡಿದವರೇ ಅದನ್ನು ಮತ್ತೆ ಮತ್ತೆ ನೋಡುತ್ತಾರೆ. ನಿರಂತರ ಪ್ರದರ್ಶನಗೊಂಡರೂ ಪ್ರೇಕ್ಷಕರನ್ನು ತನ್ನತ್ತ ನಿತ್ಯ ಸೆಳೆಯುವ ಆಕರ್ಷಣೆ ಯಕ್ಷಗಾನದಲ್ಲಿದೆ.

ಕಲಾವಿದರ ಹೆಚ್ಚುಗಾರಿಕೆ
ಈ ಕಲೆಯಲ್ಲಿ ಕಲಾವಿದನೊಬ್ಬ ಮಾತುಗಾರಿಕೆಯಲ್ಲಿ ತೋರುವ ಪ್ರತ್ಯುತ್ಪನ್ನಮತಿತ್ವ, ಸೀಮಿತ ರಂಗದೊಳಗೆ ಸೃಷ್ಟಿಸುವ ಕ್ಷಿಪ್ರ ನಯನ ಮನೋಹರ ನೋಟ, ಬಹುರೂಪಿ ಪಾತ್ರಗಳಿಗೆ ಬಹುಬೇಗ ಒಗ್ಗಿಕೊಳ್ಳುವುದು, ವೇಷದಲ್ಲಿ ಮಾತ್ರವಲ್ಲದೆ ಆಂಗಿಕಾಭಿನಯ ಮತ್ತು ವಾಚಿಕಾಭಿನಯದಲ್ಲಿ ಗಂಡು ಅಡಿಯಿಂದ ಮುಡಿಯವರೆಗೆ ಅಕ್ಷರಶಃ ಹೆಣ್ಣಾಗಿ ಪರಿವರ್ತಿತವಾಗುವುದು, ಆಳ ಸಾಹಿತ್ಯದ ಪದ್ಯವನ್ನು ಕ್ಷಣಮಾತ್ರದಲ್ಲಿ ಗದ್ಯವಾಗಿಸಿ ಪ್ರಸ್ತುತಪಡಿಸುವುದು, ಜಗತ್ತಿನ ಬೇರಾವ ಕಲೆಯಲ್ಲಿ ಯಾವ ಕಲಾವಿದರಿಂದಲೂ ಕಾಣಲು ಸಾಧ್ಯವಿಲ್ಲ.


ಸಿದ್ಧ ಸೂತ್ರವಿಲ್ಲದ ಪಾತ್ರಚಿತ್ರದ ವೈವಿಧ್ಯ
ಪ್ರಸಂಗದ ಪಾತ್ರವನ್ನು ಬೇರೆ ಬೇರೆ ಕಲಾವಿದರು ಭಿನ್ನ ರೀತಿಯಲ್ಲಿ ಭಿನ್ನ ಸಾಹಿತ್ಯ-ಸಂಭಾಷಣೆಯೊಂದಿಗೆ ಮಂಡಿಸುತ್ತಾರೆ. ಸಿದ್ಧ ಮತ್ತು ಪೂರ್ವಯೋಜಿತವಲ್ಲದ  ಸಂಭಾಷಣೆಯು ಪಾತ್ರಧಾರಿಯಿಂದ ಪಾತ್ರಧಾರಿಗೆ ಬದಲಾಗುತ್ತದೆ. ಕರ್ಣ ಮತ್ತು ಅರ್ಜುನ ಪಾತ್ರದ ಕಥಾ ಸಾರಾಂಶದಲ್ಲಿ ಅರ್ಜುನ ಸಾತ್ವಿಕ ಪಾತ್ರ. ಕರ್ಣ ಖಳನಾಯಕ. ಪ್ರೇಕ್ಷಕ ಕರ್ಣ ಸಾಯಲಿ ಎಂದೇ ಬಯಸಿ ಅರ್ಜುನನ ಪರವಿರುತ್ತಾನೆ. ಅದಕ್ಕೆ ತುಂಬಿದ ಹಸ್ತಿನೆಯ ಅರಮನೆಯಲ್ಲಿ ದ್ರೌಪದಿಯ ಸೀರೆ ಎಳೆಯುವಾಗ ಕರ್ಣ ಕೌರವ ಗಡಣಕ್ಕೆ ಬೆಂಬಲವಾಗಿ ನಿಂತದ್ದು ಮತ್ತು ಪಾಂಡವರಿಗೆ ಸಲ್ಲಬೇಕಾದ ನ್ಯಾಯ ದಕ್ಕದಿರುವಂತೆ ಕೌರವನ ದುಷ್ಟಕೂಟದಲ್ಲಿ ಸೇರಿ ಪ್ರಭಾವ ಬೀರಿದ ಎನ್ನುವುದು ಕರ್ಣನನ್ನು ಪ್ರೇಕ್ಷಕ ಸಾಯಲಿ ಎಂದು ಬಯಸಲು ಇರುವ ಪ್ರಮುಖ ಕಾರಣ.

ಆದರೆ ಕರ್ಣ ಪಾತ್ರಧಾರಿ ಪಳಗಿದ ಕಲಾವಿದನಾಗಿದ್ದರೆ ದ್ರೌಪದಿಯ ಸೀರೆ ಎಳೆದದ್ದು ಪಾಂಚಾಲದ ಅರಮನೆಯಲ್ಲಿ ಆಕೆ ಮಾಡಿದ ವಿಲಕ್ಷಣ ಅವಮಾನಕ್ಕೆ ಪ್ರತಿಯಾಗಿ ಎಂದು ಸಮರ್ಥಿಸುವುದರ ಜೊತೆಗೆ, ಸೂತಪುತ್ರನೆಂದು ಆಗಾಗ ಚುಚ್ಚಿದ್ದನ್ನೇ ಎತ್ತಿಹಿಡಿದು ಅರ್ಜುನನೊಂದಿಗೆ ದೈವೀಕ ಸ್ವರೂಪದ ಪಾತ್ರ ಕೃಷ್ಣನ ದೈವೀಕತೆಗೆ ಮತ್ತು ಭಿನ್ನ ಸಂದರ್ಭಗಳಲ್ಲಿ ಪಿತಾಮಹ ಭೀಷ್ಮನ ಮುತ್ಸದ್ಧಿತನಕ್ಕೆ, ಪರಮ ಸಾತ್ವಿಕ ವಿದುರನ ಸಾತ್ವಿಕತೆಗೂ ಒಂದು ಗತಿ ಕಾಣಿಸುತ್ತಾನೆ. ಅಲ್ಲಿಗೆ ಕರ್ಣ ಪಾತ್ರಧಾರಿಯ ಪಾತ್ರ ಪ್ರಸ್ತುತಿಯ ಪ್ರಭಾವಕ್ಕೆ ಒಳಗಾಗಿ ಪ್ರೇಕ್ಷಕ ಕರ್ಣ ಹೇಳುವುದೇ ಸರಿ ಎಂದು ಕರ್ಣನ ಪರವಾಗುತ್ತಾನೆ.

ಈ ತೆರನಾದ ವೈಚಾರಿಕತೆ ಮತ್ತು ಸಿದ್ಧ ಚಿತ್ರಣದ ಪಲ್ಲಟವನ್ನು ಯಕ್ಷಗಾನದಲ್ಲಿ ಮಾತ್ರ ನೋಡಲು ಸಾಧ್ಯ. ಪಾತ್ರಪೂರ್ವದಲ್ಲಿ ಖಳನಾಯಕನಾದರೂ ಪಾತ್ರ ಪ್ರಸ್ತುತಿಯ ಜಾಣ್ಮೆ ಮತ್ತು ಜ್ಞಾನದಿಂದಾಗಿ ಪಾತ್ರವನ್ನು ಹೀಗೆ ಸಮರ್ಥಿಸಿಕೊಂಡು ನಾಯಕನಾಗಿ ಬದಲಾಗಿ ಪಾತ್ರ ಮತ್ತು ಪ್ರಕರಣ ಎರಡಕ್ಕೂ ಸಮರ್ಥನೆ ನೀಡಬಲ್ಲ ಅವಕಾಶ ಯಕ್ಷಗಾನದಲ್ಲಿದೆ. ಯಕ್ಷಗಾನದಲ್ಲಿ ಸಾಮಾನ್ಯ ಪಾತ್ರಧಾರಿಯೊಬ್ಬ ಈ ಮಟ್ಟದ ಬೌದ್ಧಿಕ ಪಲ್ಲಟಗಳಿಗೆ ಕಾರಣನಾಗುವುದು ವಿಶೇಷ. ಶತಶತಮಾನಗಳ ಕಾಲ ಇದಮಿತ್ಥಂ ಎನ್ನುವಂತಿದ್ದು ಕಣ್ಮುಚ್ಚಿ ಒಪ್ಪಿಕೊಳ್ಳುವ ಪೌರಾಣಿಕ ಸಾಹಿತ್ಯದಲ್ಲಿ ಬರುವ ವ್ಯಕ್ತಿತ್ವಗಳನ್ನು ಆಳವಾಗಿ ಕೆದಕಿ ವಿಮರ್ಶೆಗೊಳಪಡಿಸಿ ಸರ್ವ ಪ್ರಕಾರದ ಲಿಖಿತ-ಅಲಿಖಿತ ಸ್ಥಳೀಯ ಭಾಷಾ ಸಾಹಿತ್ಯದಲ್ಲಿ ಆ ಪಾತ್ರಗಳನ್ನು ವಿವೇಚನಾ ವ್ಯಾಪ್ತಿಗೆ ತರುವಲ್ಲಿ ಪ್ರಭಾವ ಬೀರಿದ ಹಿರಿಮೆ ಯಕ್ಷಗಾನಕ್ಕೇ ಸಲ್ಲಬೇಕು. ಇಂಥ ಅವಕಾಶ- ವೈಶಾಲ್ಯ ಇರುವ ಮತ್ತೊಂದು ಕಲೆಯನ್ನು ಎಲ್ಲೂ ಕಾಣಲಾಗದು. ಅನುಕ್ರಮವಾಗಿ ತ್ರೇತಾ-ದ್ವಾಪರ ಯುಗಾವತಾರಿಗಳಾದ ರಾಮ-ಕೃಷ್ಣರಂತಹ ದೈವೀಕ ಸ್ವರೂಪದ ಪಾತ್ರಗಳೂ ಕೂಡ ಕೆಲವೊಮ್ಮೆ ಎದುರು ಪಾತ್ರಧಾರಿಗಳ ವಿವೇಕದ ಹೊಡೆತಕ್ಕೆ ಸಿಲುಕಿ ಗಲಿಬಿಲಿಗೊಳ್ಳುವುದಿದೆ.

ಕನ್ನಡಕ್ಕೆ ಕೊಡುಗೆ
ಕನ್ನಡ ಭಾಷೆಗೆ ಯಕ್ಷಗಾನ ನೀಡಿದಷ್ಟು ಕಾಣಿಕೆಯನ್ನು ಸರ್ಕಾರಿ ಇಲಾಖೆಗಳಾಗಲಿ, ಭಾಷಾ ಅಕಾಡೆಮಿಗಳಾಗಲಿ, ವಿಶ್ವವಿದ್ಯಾಲಯಗಳಾಗಲಿ, ಭಾಷಾ ಸಂಘಟನೆಗಳಾಗಲಿ ಸಲ್ಲಿಸಿಲ್ಲ. ಯಕ್ಷಗಾನದಲ್ಲಿ ಭಾಷೇತರ ಶಬ್ದಪ್ರಯೋಗ ಮಹಾಪರಾಧ. ಗದ್ಯ- ಪದ್ಯ, ನಡೆ-ನರ್ತನ, ನವರಸಗಳ ಸುಂದರ ಸಂಗಮ ಯಕ್ಷಗಾನ. ಭಾಗವತನೇ ಇಲ್ಲಿ ಸೂತ್ರಧಾರ. ಒಂದೇ ವೇದಿಕೆಯಲ್ಲಿ ಚಂಡೆ, ಮದ್ದಳೆ, ತಾಳ, ಸ್ವರ, ಶ್ರುತಿ, ಸಂಗೀತ, ಗದ್ಯ, ಪದ್ಯ, ನಾಟ್ಯ,ವೇಷಭೂಷಣಗಳ ಪರಮೋಚ್ಚ ಅಭಿವ್ಯಕ್ತಿಯನ್ನು ಯಕ್ಷಗಾನದಲ್ಲಿ ಮಾತ್ರ ಆಸ್ವಾದಿಸಬಹುದು.

ಶೀಲವಂತ ಕಲೆ
ಯಕ್ಷಗಾನವು ಬರೀ ಹೀಗೆ ಬಹುರೂಪಿ ಕಲೆ ಮಾತ್ರವಲ್ಲ ಶೀಲವಂತ ಕಲೆಯೂ ಹೌದು. ಚಲನಚಿತ್ರ ಮತ್ತು ನಾಟಕಗಳಂತೆ ಇಲ್ಲಿ ಪರಸ್ಪರ ವಿರುದ್ಧ ಲಿಂಗಿಗಳು ಏಕವೇದಿಕೆಯಲ್ಲಿ ಕಂಡುಬರುವುದು ಅಪರೂಪ. ಪ್ರಣಯಾಧಾರಿತ ದೃಶ್ಯಗಳಲ್ಲೂ ಬರೀ ಕೈಗಳ ಮಿಲನ ಅಥವ ಹೆಚ್ಚೆಂದರೆ ಸಣ್ಣಮಟ್ಟದ ಸಾಂಕೇತಿಕ ದೈಹಿಕ ಸ್ಪರ್ಶಗಳು ಬಿಟ್ಟರೆ ಬೇರಾವುದೇ ಆಂಗಿಕ ಸಾಂಗತ್ಯದ ದೃಶ್ಯಾಭಿವ್ಯಕ್ತಿ ಇಲ್ಲಿಲ್ಲ. ಪ್ರೇಕ್ಷಕರನ್ನು ಆಕರ್ಷಿಸಲು ಇತರ ಮನರಂಜನಾ ಪ್ರಕಾರಗಳಂತೆ ಹೆಣ್ಣಿನ ಅಂಗಾಂಗ ಪ್ರದರ್ಶನ, ಅತಿರೇಕದ ಅಶ್ಲೀಲ ಭಾವ-ಭಾಷೆಗಳಿಗೆ ಯಕ್ಷಗಾನದಲ್ಲಿ ಅವಕಾಶವಿಲ್ಲ.

ಲಿಂಗಭೇದವಿಲ್ಲ
ಸಾಂಪ್ರದಾಯಿಕವಾದ ಏರುಶ್ರುತಿಯ ಪದ್ಯಗಳಿಗೆ ಅನುವಾಗುವ ಹಾಗೆ ಏರುಸ್ವರದಲ್ಲಿ ಮಾತನಾಡುವ ಕಾರಣಕ್ಕಾಗಿ ಯಕ್ಷಗಾನವು ಪ್ರಧಾನವಾಗಿ ಗಂಡಸರೇ ಅಭಿನಯಿಸುವ ಕಲೆ. ಈ ಕಲಾಪ್ರಕಾರವನ್ನು ಗಂಡುಕಲೆ ಎಂದು ಹೇಳುವುದಕ್ಕೆ ಎರಡು ಕಾರಣಗಳಿವೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಕಲೆಯ ಪ್ರಭಾವವನ್ನು ಸಂಕೇತಿಸುವುದಕ್ಕೆ ಗಂಡುಕಲೆ ಎಂದರೆ, ರಾತ್ರಿಯಿಡೀ ಏರುಸ್ವರದಲ್ಲಿ ಗಂಡಸರಿಗೆ ಮಾತ್ರ ಈ ಕಲೆಯಲ್ಲಿ ಅಭಿನಯ ಸಾಧ್ಯ ಎಂಬ ಪರೋಕ್ಷವಾದ ಇನ್ನೊಂದು ಕಾರಣವೂ ಇದೆ. ಆದರೆ ಆಧುನಿಕ ತಂತ್ರಜ್ಞಾನ, ಆಕರ್ಷಣೆ ಮತ್ತು ರಂಗ ಪರಿವರ್ತನೆಗಳಿಂದಾಗಿ ಈಗೀಗ ಸ್ತ್ರೀಯರೂ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನದ ಹಿಮ್ಮೇಳ-ಮುಮ್ಮೇಳದಲ್ಲಿ ಭಾಗವಹಿಸುತ್ತಾರೆ.

ಅನ್ಯಾಯಕ್ಕೆ ಅಪಜಯವೆಂಬ ಧರ್ಮಬೋಧನೆ
ಮನರಂಜನೆಯ ಜೊತೆಗೇ ಯಕ್ಷಗಾನವು ಪ್ರಭಾವಿಯಾಗಿ ಧರ್ಮವನ್ನು ಪಸರಿಸಿದೆ. ಧರ್ಮವೆಂದರೆ ಯಾವುದೇ ದೇಶ, ಭಾಷೆ, ಜನಾಂಗಗಳಿಗೆ ಸೀಮಿತವಾಗಿ ಸಂಕುಚಿತವಾಗಿರುವ ರಾಜಕೀಯ ಪರಿಭಾಷೆಯ ಧರ್ಮವಲ್ಲ. ಸತ್ಯ-ಸುಳ್ಳು ನ್ಯಾಯ-ಅನ್ಯಾಯಗಳ ಅಂತರಗಳನ್ನು ಯಕ್ಷಗಾನ ಆಕರ್ಷಕ ರೀತಿಯಲ್ಲಿ ಜನಮಾನಸಕ್ಕೆ ಅರಿವು ನೀಡುವ ಉತ್ತಮ ಕೆಲಸ ಮಾಡಿದೆ. ಇದುವೇ ಯಕ್ಷಗಾನದ ಧರ್ಮ. ಪೌರಾಣಿಕವಾದ ಯಕ್ಷಗಾನ ಪ್ರಸಂಗಗಳ ಸಾಹಿತ್ಯದಲ್ಲಿ ಒಂದೇ ಒಂದು ಜೀವವಿರೋಧಿ ಸಂಭಾಷಣೆಯನ್ನು ಕಾಣಲಾಗದು. ಧರ್ಮಗ್ರಂಥಗಳನ್ನು ಓದದ ಗ್ರಾಮೀಣ ಭಾಗದ ಸಾಮಾನ್ಯ ಜನರಿಗೆ ಧಾರ್ಮಿಕ ಜ್ಞಾನ, ಸಂಬಂಧಗಳ ಸ್ಪಂದನ, ಗತ ಯುಗಗಳ ಪರಿಚಯವನ್ನು ಮಾಡಿಸಿದ ಹಿರಿಮೆ ಯಕ್ಷಗಾನಕ್ಕಿದೆ. ವೇಷರಹಿತವಾದ ಪಂಡಿತರ ಪಾಂಡಿತ್ಯಪೂರ್ಣ ವೇದಿಕೆಯಾದ ತಾಳಮದ್ದಲೆಯಂತೂ ಅಕ್ಷರಶಃ ಜ್ಞಾನ ಜಗತ್ತನ್ನು ಸೃಷ್ಟಿಸಿಬಿಡುತ್ತದೆ. ಹೀಗೆ ಯಕ್ಷಗಾನವೆಂಬ ಕಲೆಯ ಬಗ್ಗೆ ಬರೆಯಲು ಹೊರಟರೆ ಅದೊಂದು ಮುಗಿಯದ ಪುಸ್ತಕ.

ಆದರೆ...

ಈ ಕಲೆಯ ಮೇರು ಪ್ರತಿಭೆ ಭಾಗವತ ಕಾಳಿಂಗ ನಾವಡರ ಕಾಲದವರೆಗೆ ಯಕ್ಷಗಾನವು ತನ್ನ  ಸಹಜ ಕಲಾ ಶ್ರೀಮಂತಿಕೆಯಿಂದ ಜನಮಾನಸಕ್ಕೆ ಹತ್ತಿರವಾಗಿ ಆಕರ್ಷಕವಾಗಿತ್ತು. 1990ರಲ್ಲಿ ಇವರ ಅಕಾಲಿಕ ಅಗಲಿಕೆಯ ನಂತರ ಪೌರಾಣಿಕ ಪ್ರಸಂಗಗಳ ಬದಲಿಗೆ ಸಾಮಾಜಿಕ ಪ್ರಸಂಗಗಳು ಯಕ್ಷಗಾನದಲ್ಲಿ ಚಾಲ್ತಿಗೆ ಬಂದವು. ಸ್ವತಃ ನಾವಡರೇ ಹಲವಾರು ಸಾಮಾಜಿಕ ಪ್ರಸಂಗಗಳನ್ನು ತಮ್ಮದೇ ಪದ್ಯ ಸಂಯೋಜನೆಯಲ್ಲಿ ರಚಿಸಿದ್ದರು. ಅವರ ನಾಗಶ್ರೀ ಎಂಬ ಪ್ರಸಂಗ ಇಂದಿಗೂ ಪ್ರದರ್ಶಿತವಾದರೆ ಕಿಕ್ಕಿರಿದ ಜನಸಂದಣಿ ಇರುತ್ತದೆ. 90ರ ದಶಕದಲ್ಲಿ ಪೌರಾಣಿಕ ಪ್ರಸಂಗಗಳ ಸ್ಥಾನದಲ್ಲಿ ವಿಪರೀತ ಸ್ವರಚಿತ ಸಾಮಾಜಿಕ ಪ್ರಸಂಗಗಳು ಎಗ್ಗಿಲ್ಲದೆ ಪ್ರದರ್ಶನಗೊಳ್ಳಲು ಆರಂಭಗೊಂಡವು. ಶ್ರೀಮಂತ ಕಲೆ ಯಕ್ಷಗಾನದ ಮೇಲೆ ಮೊಟ್ಟಮೊದಲ ನೇರ ಪ್ರಹಾರ ಆರಂಭವಾದದ್ದು ಇಲ್ಲಿಯೇ.

ಸಾಮಾಜಿಕ ಪ್ರಸಂಗಗಳಿಂದ ಕುತ್ತು
ಪೌರಾಣಿಕ ನೆಲೆಗಟ್ಟಿನಲ್ಲಿ ಕಥೆಗಳನ್ನು ರಚಿಸುವ ವಿಪುಲ ಅವಕಾಶಗಳಿದ್ದರೂ ಚಲನಚಿತ್ರಗಳ ಕಥೆಗಳಿಗೆ ಮಾರುಹೋದ ಕೆಲ ನವ ಪ್ರಸಂಗಕರ್ತರು ಯಕ್ಷಗಾನ ಸಾಹಿತ್ಯ ಮತ್ತು ಸಂಸ್ಕೃತಿಯ ಮೂಲ ಸ್ವರೂಪವನ್ನೇ ಬದಲಿಸಿಬಿಟ್ಟರು. ಕಲೆಯ ಸಹಜ ಸಂವೇದನೆಯಿಲ್ಲದ ಸಾಮಾಜಿಕ ಮತ್ತು ಅವೈಜ್ಞಾನಿಕ ಕ್ಷೇತ್ರ ಮಹಾತ್ಮೆ ಪ್ರಸಂಗಗಳು ಯಕ್ಷಗಾನ ಘನತೆ ಮತ್ತು ಸ್ವರೂಪದ ಮೇಲೆ ದೊಡ್ಡ ಮಟ್ಟದಲ್ಲಿ ನಕಾರಾತ್ಮಕ ಪ್ರಭಾವ ಬೀರಿದವು. ಥಿಯೇಟರ್ ಸಾಹಿತಿಗಳ ಪ್ರಸಂಗಗಳು ವರ್ಷ ಪೂರೈಸುವಷ್ಟರಲ್ಲೇ ಮೌಲ್ಯ ಕಳೆದುಕೊಂಡು ರಂಗಸ್ಥಳದಿಂದ ಹೊರಬೀಳುತ್ತಿದ್ದವು. ವಿಪರೀತ ಚಲನಚಿತ್ರ ಮತ್ತು ಕಂಪೆನಿ ನಾಟಕಗಳ ಅನುಕರಣೆ ಆರಂಭವಾಯಿತು. ಈ ಕಾಲಕ್ಕಿಂತ ಮುಂಚೆಯೂ ಕೂಡ ಯಕ್ಷಗಾನವು ದೇಶ ವಿದೇಶದ ಸಾಹಿತ್ಯಗಳಿಂದ ಪ್ರಭಾವಿತವಾಗಿತ್ತು. ಷೇಕ್ಸ್‌ಪಿಯರ್ ನಾಟಕಗಳು ಸೇರಿದಂತೆ ಆಂಗ್ಲ ಮತ್ತು ಅರಬ್ಬೀ ಸಾಹಿತ್ಯದಿಂದ ಪ್ರೇರಣೆಗೊಂಡ ಪ್ರಸಂಗಗಳೂ ಯಕ್ಷಗಾನದಲ್ಲಿ ಆರೋಗ್ಯಕರ ಬದಲಾವಣೆಗಳೊಂದಿಗೆ ಜನರನ್ನು ತಲುಪಿದ್ದೂ ಇದೆ.

ಆದರೆ 90ರ ದಶಕದ ನಂತರ ಸ್ಥಳೀಯವಾದ ಕಥೆ, ಸಾಹಿತ್ಯ,ಸಂಗೀತ ಮತ್ತು ಕಲಾಪ್ರಕಾರಗಳ ಅನುಕರಣೆಯು ಯಕ್ಷಗಾನದಲ್ಲಿ ಅತಿಯಾಯಿತು. ಈ ಮಧ್ಯೆ ಕೆಲ ಸಾಮಾಜಿಕ ಪ್ರಸಂಗಕರ್ತರ ಪ್ರಸಂಗಗಳು ಪೌರಾಣಿಕ ಪ್ರಸಂಗಗಳಿಗೆ ಸಡ್ಡುಹೊಡೆದು ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಪ್ರೇಕ್ಷಕರಿಗೆ ಹೊಸತನದ ಸವಿ ಉಣ್ಣಿಸಿದ್ದನ್ನು ಅಲ್ಲಗಳೆಯಲಾಗದು. ಇಂದಿಗೂ ಯಕ್ಷಗಾನದ ಸಾಂಪ್ರದಾಯಿಕ ಚೌಕಟ್ಟು ಮೀರದ ಉತ್ತಮ ಪ್ರಸಂಗಕರ್ತರು ಇದ್ದಾರೆ. ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಬದ್ಧತೆಯನ್ನು ಹೊಂದಿದ ಉತ್ತಮ ಕಲಾವಿದರೂ ಇದ್ದಾರೆ.

ಅನುಕರಣೆಯ ಆಧಿಕ್ಯ
ಆದರೆ ಅನುಕರಣೆ ಮಿತಿಮೀರಿ ಮುಂದೆ ಬರಲಾರದಷ್ಟು ಯಕ್ಷಗಾನ ಹಿಂದೆ ಹೋಗಿದೆ ಅನಿಸುತ್ತಿದೆ. ಅನುಕರಣೆಯ ಆಧಿಕ್ಯವು ದಾಸ್ಯವಾಗಿ ಪರಿವರ್ತನೆಯಾಗುತ್ತದೆ. ಯಕ್ಷಗಾನದ ಮಟ್ಟಿಗೆ ಅದೇ ಆಗಿದೆ. ಭಾಗವತಿಕೆಯಲ್ಲಿ, ಯಕ್ಷಗಾನೀಯವಲ್ಲದ, ರಾಗ ಚಲನೆ ಮತ್ತು ಸಂಪನ್ನತೆಯ ಮೇಲೆ ಕನಿಷ್ಠ ಹಿಡಿತವಿಲ್ಲದ ಶಾಸ್ತ್ರೀಯ ಸಂಗೀತ ಹೋಲುವ ವಿಪರೀತ ಅಪಕ್ವ ಆಲಾಪನೆ, ಭಾವಗೀತೆಗಳ ಅಳವಡಿಕೆ, ಸಾಹಿತ್ಯ ಬದಲಿಸಿ ಸಿನಿಮಾ ಗೀತೆಗಳ ರಾಗ ಅಳವಡಿಸಿ ಹಾಡುವುದು, ಸರ್ಕಸ್ ಶೈಲಿಯ ನರ್ತನ ಮತ್ತು ವಸ್ತುಗಳನ್ನು ಬಳಸಿ ರಂಜಿಸುವುದು, ಚಿತ್ರ ಸಂಗೀತದ ಡ್ರಮ್-ಪ್ಯಾಡ್‌ಗಳನ್ನು ಅನುಕರಿಸಿ ಅಗತ್ಯಕ್ಕಿಂತ ಹೆಚ್ಚು ಚೆಂಡೆ-ಮದ್ದಲೆಗಳನ್ನು ನುಡಿಸುವುದು, ಯಕ್ಷಗಾನೀಯವಲ್ಲದ ವಾದ್ಯಗಳ ಪ್ರವೇಶ, ಇವುಗಳು ಯಕ್ಷಗಾನ ಹಿಮ್ಮೇಳದ ಸಾಂಪ್ರದಾಯಿಕತೆಗೆ ಧಕ್ಕೆ ತಂದವು.

ಘನತೆಗೆ ಧಕ್ಕೆ
ಮುಮ್ಮೇಳದಲ್ಲೂ, ಅಶ್ಲೀಲ- ಅನುಕರಣೆ-ಅಸಂಬದ್ಧಗಳು ಆರಂಭಗೊಂಡವು. ಪಾತ್ರಗಳನ್ನು ವ್ಯಕ್ತಿಗತವಾಗಿ ತೆಗೆದುಕೊಂಡು ಪರಸ್ಪರ ಕಚ್ಚಾಡುವುದು, ಕೊಂಕು-ಚುಚ್ಚು ಮಾತುಗಳಿಂದಲೇ ಎದುರು ಪಾತ್ರವನ್ನು ಹಣಿಯಲು ಪ್ರಯತ್ನಿಸುವುದು, ಆಡುವ ಮಾತುಗಳು ಚಿಂತನೆಗೆ ಹಚ್ಚದೆ ಪ್ರೇಕ್ಷಕರನ್ನು ಪ್ರಚೋದಿಸುವುದು, ವಿಪರೀತ ಜಾತಿ, ಧರ್ಮ, ಪಕ್ಷಗಳ ಪರ-ವಿರೋಧ ಮಾತನಾಡುವುದು, ಸಿನಿಮಾ ಶೈಲಿ- ಸಂಭಾಷಣೆಗಳನ್ನು ಅನುಕರಿಸುವುದು, ರಾಜಕೀಯ ವ್ಯಕ್ತಿಗಳ ವೈಭವೀಕರಣ ಮತ್ತು ತೇಜೋವಧೆ ಮಾಡುವುದು, ಎದುರಿಗೆ ಕೂತ ಪ್ರೇಕ್ಷಕರಲ್ಲಿ ಸರ್ವ ಜನಾಂಗ, ಪಕ್ಷ, ಪಂಗಡ, ಭಾಷೆಯವರಿದ್ದಾರೆ ಎಂಬ ಸಾಮಾನ್ಯ ಪ್ರಜ್ಞೆಯಿಲ್ಲದೆ ಬಾಯಿ ಹರಿಯಬಿಡುವುದು, ಹತ್ತಾರು ವರ್ಷಗಳಿಂದ ಕಲಾಸೇವೆಯಲ್ಲಿದ್ದರೂ ಸಾಹಿತ್ಯ ಕಿಂಚಿತ್ತೂ ಬದಲಿಸದೇ ಸನ್ನಿವೇಶದ ಸಂಭಾಷಣೆಯನ್ನು ಉರುಹೊಡೆದಂತೆ ಹೋದಲ್ಲೆಲ್ಲ ಒಂದೇ ರೀತಿ ಪ್ರಸ್ತುತಪಡಿಸುವುದು, ತಮಗಾಗದ ಧರ್ಮದ ಪಾತ್ರಗಳನ್ನು ಸೃಷ್ಟಿಸಿ ಕತ್ತೆ ಕುದುರೆಗಳಿಗೆ ಮದುವೆ ಮಾಡಿಸುವುದು, ಶಿಳ್ಳೆ ಚಪ್ಪಾಳೆಗಳಿಗೆ ಬೇಕಾಗಿ ಬಾಯಿಗೆ ಬಂದಂತೆ ಮಾತನಾಡುವುದು, ಇಂತಹ ನಿರ್ಲಜ್ಜ, ಅಸಂಬದ್ಧ ಮತ್ತು ಅನಾಗರಿಕ ಪ್ರಕ್ರಿಯೆಗಳು ಮುಮ್ಮೇಳದ ಹಿರಿಮೆ ಗರಿಮೆ ಘನತೆಯನ್ನು ಕುಗ್ಗಿಸಿದವು. ಸಾಮಾಜಿಕ ಪ್ರಸಂಗಗಳಲ್ಲಿ ಬೆರಳೆಣಿಕೆಯ ಹಾಸ್ಯಗಾರರನ್ನು ಬಿಟ್ಟರೆ ಬಹುತೇಕ ಹಾಸ್ಯಗಾರರ ಹಾಸ್ಯಗಾರಿಕೆಯು ರಾಜಹಾಸ್ಯದಿಂದ ಅಕ್ಷರಶಃ ರೋಗಹಾಸ್ಯವಾಯಿತು.

ಸುಂದರ ಕಲೆಗೆ ಸಂಚಕಾರ
ಇಂದು ಕೆಲವು ಸುಸಂಸ್ಕೃತ ಹಿನ್ನೆಲೆಯ ಬಯಲಾಟ-ಡೇರೆ ಮೇಳಗಳನ್ನು ಹೊರತುಪಡಿಸಿ ಬಹುತೇಕ ಮೇಳಗಳ ಯಕ್ಷಗಾನವನ್ನು ಎಲ್ಲ ಧರ್ಮ ಪಕ್ಷ ಜಾತಿಯವರು ಒಟ್ಟಿಗೆ ಕುಳಿತು ಅಭಿಮಾನದಿಂದ ನೋಡುವ ಪರಿಸ್ಥಿತಿ ಇಲ್ಲ. ಸ್ವತಃ ನಾನೇ ಜಾತಿ ಧರ್ಮದ ಕುರಿತು ಕೆಲ ಅರೆಪ್ರಬುದ್ಧ ಕಲಾವಿದರ ವಾಚಾಳಿತನದಿಂದ ಮುಜುಗರಕ್ಕೀಡಾಗಿ 500 ರೂಪಾಯಿ ಟಿಕೆಟ್ ಪಡೆದು 100 ರೂಪಾಯಿ ಸಾಲಿನ ಕುರ್ಚಿಗಳ ಮರೆಯಲ್ಲಿ ರಾತ್ರಿಯಿಡೀ ಇಣುಕಿ ಯಕ್ಷಗಾನ ನೋಡಿದ್ದೂ ಇದೆ. ಸರ್ವ ಜನಾಂಗ ಅಪ್ಪಿಕೊಂಡ ಈ ಸರ್ವಾಂಗೀಣ ಸಾಮರ್ಥ್ಯದ ಸುಂದರ ಕಲೆಯನ್ನು ಕುಲಗೆಡಿಸಿ ಸಂಕುಚಿತಗೊಳಿಸಿದ ಕುಖ್ಯಾತಿ ಈ ಪೀಳಿಗೆಯ ಕೆಲ ಬೇಜವಾಬ್ದಾರಿ ಪ್ರಸಂಗಕರ್ತರು ಮತ್ತು ಅಪ್ರಬುದ್ಧ ಕಲಾವಿದರಿಗಿದೆ.

ಕನ್ನಡದ ಪ್ರಧಾನ ಕಲೆಯಾಗುವ ಯೋಗ್ಯತೆ
ಕನಿಷ್ಠ ರಾಜ್ಯವಿಡೀ ಆವರಿಸಿಕೊಂಡು ರಾಜ್ಯದ ಪ್ರಧಾನ ಕಲೆಯಾಗುವ ಸರ್ವ ಸಾಮರ್ಥ್ಯ, ಸಂಯೋಜನೆ, ಆಕರ್ಷಣೆಯಿದ್ದರೂ ಯಕ್ಷಗಾನವು ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತವಾಗಿದ್ದೂ ಒಂದು ಈ ಕಾರಣದಿಂದ. ಇನ್ನೊಂದು, ಸೃಜನಶೀಲ ಸಾಹಿತ್ಯವಿರುವ ಯಕ್ಷ ಕವಿಗಳ ಕೊರತೆಯಿಂದ. ಯಕ್ಷಗಾನಕ್ಕೆ ಯಾವ ಕೋನದಿಂದಲೂ ಸರಿಸಾಟಿಯಾಗದ ಇತರ ಮನರಂಜನಾ ಮಾಧ್ಯಮದ ಸ್ಪರ್ಧೆ ಮತ್ತು ಕೆಲ ಕಲಾವಿದರ ಸಂಕುಚಿತತೆಯ ಹೊಡೆತಕ್ಕೆ ಯಕ್ಷಗಾನ ಅದೆಷ್ಟು ನಲುಗಿದೆಯೆಂದರೆ ಕೆಲವೊಮ್ಮೆ ಕೆಲ ಪ್ರದರ್ಶನಗಳಲ್ಲಿ ಕಲಾವಿದರಿಗಿಂತಲೂ ಕಡಿಮೆ ಪ್ರೇಕ್ಷಕರು ಇರುತ್ತಾರೆ.

ಸ್ವಾಭಿಮಾನಿಯಾದ ಯಕ್ಷಗಾನ ಪ್ರೇಮಿ ಅನುಕರಣೆಯ ಆಧಿಕ್ಯದಿಂದಾಗುವ ದಾಸ್ಯವನ್ನು ಒಪ್ಪಲಾರ ಎಂಬ ಜ್ಞಾನ ಯಕ್ಷಲೋಕಕ್ಕೆ ಇನ್ನಷ್ಟೇ ಮೂಡಬೇಕಿದೆ. ಅನ್ಯ ಕಲಾಪ್ರಕಾರಗಳ ಅನುಕರಣೆ, ಸಾಹಿತ್ಯ, ಸಂಗೀತ, ಸಂಭಾಷಣೆಗಳ ಅಸಂಬದ್ಧ ಮತ್ತು ರಾಜಕೀಯ ಚಾಳಿಗಳಿಂದ ವಿಮುಖವಾಗದೇ ಇದ್ದರೆ ಯಕ್ಷಗಾನವನ್ನು ಆಡುವ ಮತ್ತು ನೋಡುವ ಕಟ್ಟಕಡೆಯ ಪೀಳಿಗೆ ನಾವಾಗುವ ಸರ್ವ ಸಾಧ್ಯತೆಗಳು ನಿಚ್ಚಳವಾಗಿದೆ. ರಾಜನಿಗೆ ರಾಜಧರ್ಮ ಇರುವ ಹಾಗೆ ಕಲಾವಿದನಿಗೆ ಕಲಾಧರ್ಮವಿದೆ. ಕಲೆಯಲ್ಲಿ ಕಲಾವಿದನೇ ರಾಜ. ಕಲಾಧರ್ಮವನ್ನು ಎತ್ತಿಹಿಡಿಯುವ ಸಂಕಲ್ಪ ಕಲಾವಿದ ಮಾತ್ರವಲ್ಲ ಯಕ್ಷಗಾನೀಯರೆಲ್ಲ ಸೇರಿ ಮಾಡಬೇಕಿದೆ. ಹಾಗಾದಾಗ ಮಾತ್ರ ಈಗ ವಿಪರೀತವಾಗಿರುವ ಪಕ್ಷಗಾನದಿಂದ ಯಕ್ಷಗಾನವು ವಿಶ್ವಗಾನವಾಗುವತ್ತ ಸಾಗುವುದು.

✒️ ಮುಷ್ತಾಕ್ ಹೆನ್ನಾಬೈಲ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು