ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಆಶ್ರಯದಲ್ಲಿ ‘ಯಕ್ಷಧ್ರುವ ಪಟ್ಲ ಸಂಭ್ರಮ– 2022’ ಕಾರ್ಯಕ್ರಮವು ಮೇ 29ರಂದು ಬೆಳಿಗ್ಗೆ 8ರಿಂದ ರಾತ್ರಿ 12ರವರೆಗೆ ಮಂಗಳೂರು ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಸ್ಥಾಪಕಾಧ್ಯಕ್ಷ, ಭಾಗವತ ಸತೀಶ್ ಶೆಟ್ಟಿ ಪಟ್ಲ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ಪುನೀತ್‌ರಾಜ್ ಕುಮಾರ್ ವೇದಿಕೆಯಲ್ಲಿ ಪಟ್ಲ ಸಂಭ್ರಮ ಜರುಗಲಿದೆ. ಅಂದು ಬೆಳಿಗ್ಗೆ 8ಕ್ಕೆ ಚೌಕಿಪೂಜೆ, ಯಕ್ಷದಿಬ್ಬಣ, ಪೂರ್ವರಂಗ, ಅಬ್ಬರತಾಳ, ಚೆಂಡೆ ಜುಗುಲ್‌ಬಂದಿ- ಸ್ಪರ್ಧಾತ್ಮಕ ಪೀಠಿಕೆ ಸ್ತ್ರೀವೇಷ ವಿಶೇಷ ಗಮನ ಸೆಳೆಯಲಿದೆ’ ಎಂದು ಹೇಳಿದರು. ಟ್ರಸ್ಟಿನ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ ಮಾರ್ಗದರ್ಶನದಲ್ಲಿ ಮತ್ತು ಶಶಿಧರ ಬಿ.ಶೆಟ್ಟಿ ಬರೋಡ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಮಾಂಬಾಡಿ ಅವರಿಗೆ ₹1 ಲಕ್ಷ ಸಹಿತ ಪಟ್ಲ ಪ್ರಶಸ್ತಿ
ಇದೇ ಸಂದರ್ಭದಲ್ಲಿ, ಯಕ್ಷಗಾನದ ಹಿಮ್ಮೇಳ ವಾದನದ ಹಿರಿಯ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರು ಯಕ್ಷಧ್ರುವ ಪಟ್ಲ ಫೌಂಡೇಷನ್ ಟ್ರಸ್ಟ್‌ನ 2022ನೇ ಸಾಲಿನ ‘ಪಟ್ಲ ಪ್ರಶಸ್ತಿ’ಗೆ ಆಯ್ಕೆಯಾಗಿದ್ದು, ಪ್ರಶಸ್ತಿಯು ₹1 ಲಕ್ಷ ಗೌರವಧನ ಒಳಗೊಂಡಿದೆ ಎಂದು ಸತೀಶ್ ಶೆಟ್ಟಿ ಪಟ್ಲ ತಿಳಿಸಿದರು.
ಅಂತೆಯೇ, ಯಕ್ಷಗಾನ ಕ್ಷೇತ್ರದ 10 ಸಾಧಕರಿಗೆ ‘ಯಕ್ಷಧ್ರುವ ಕಲಾ ಗೌರವ’ವನ್ನು ₹20 ಸಾವಿರ ನಗದಿನೊಂದಿಗೆ ಪ್ರದಾನ ಮಾಡಲಾಗುತ್ತದೆ. ಪದ್ಮನಾಭ ಉಪಾಧ್ಯಾಯ, ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ, ಆಜ್ರಿ ಗೋಪಾಲ ಗಾಣಿಗ, ಯೋಗಾಕ್ಷಿ ಗಣೇಶ್ ಗುಜರನ್, ಮಾಧವ ಭಂಡಾರಿ ಕುಳಾಯಿ, ಕಲ್ಲುಗುಂಡಿ ಕೊರಗಪ್ಪ ಮಣಿಯಾಣಿ, ಉಜಿರೆ ನಾರಾಯಣ ಪೂಜಾರಿ, ವಿಜಯಕುಮಾರ್ ಶೆಟ್ಟಿ ಮೈಲೊಟ್ಟು, ಅರೆಹೊಳೆ ಸಂಜೀವ ಶೆಟ್ಟಿ, ಮಧುಕುಮಾರ್ ಬೋಳೂರು ಈ ಗೌರವಕ್ಕೆ ಆಯ್ಕೆಯಾಗಿದ್ದಾರೆ.
ಉದ್ಘಾಟನೆ, ಕೃತಿ ಬಿಡುಗಡೆ, ಗೌರವಾರ್ಪಣೆ
ಬೆಳಿಗ್ಗೆ 9.45ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದೆ. ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ ಉಪಸ್ಥಿತಿಯಲ್ಲಿ ಮುಂಬೈ ಹೇರಂಬ ಕೆಮಿಕಲ್ ಇಂಡಸ್ಟ್ರೀಸ್‌ನ ನಿರ್ದೇಶಕ ಸದಾಶಿವ ಶೆಟ್ಟಿ ಕನ್ಯಾನ ಶುಭಾಶಂಸನೆ ಮಾಡುವರು. ಉದ್ಯಮಿ ಶಶಿಧರ ಬಿ.ಶೆಟ್ಟಿ ಬರೋಡ ಅಧ್ಯಕ್ಷತೆ ವಹಿಸುವರು. ಪಟ್ಲ ಸಂಭ್ರಮವನ್ನು ಸಿ.ಎ. ದಿವಾಕರ ರಾವ್ ಉದ್ಘಾಟಿಸುವರು. ಆರೋಗ್ಯ ಶಿಬಿರಕ್ಕೆ ಡಾ.ಕೃಷ್ಣ ಪ್ರಸಾದ್ ಕೂಡ್ಲು ಚಾಲನೆ ನೀಡುವರು. ಡಾ.ಎಂ. ಮೋಹನ್ ಆಳ್ವ, ಡಾ.ಸುಧಾಕರ ಶೆಟ್ಟಿ, ಕೃಷ್ಣ ಜೆ. ಪಾಲೇಮಾರ್ ಸೇರಿದಂತೆ ಹಲವರು ಭಾಗವಹಿಸುವರು.
ಸಮಾರಂಭದಲ್ಲಿ ಶರತ್ ಶೆಟ್ಟಿ ಪಡುಪಳ್ಳಿ ರಚಿಸಿರುವ ‘ಯಕ್ಷಾಂಗಣ ಧ್ರುವತಾರೆ ಪಟ್ಲ’ ಕೃತಿ ಬಿಡುಗಡೆಗೊಳ್ಳಲಿದೆ. ‘ಧ್ರುವ ಪ್ರಭ’ ಎಂಬ ಟ್ರಸ್ಟ್‌ನ ಸೇವಾ ಯಾನದ ಮೆಲುಕು ಕೃತಿ ಬಿಡುಗಡೆಯಾಗಲಿದೆ. ಭಾರತೀಯ ಭೂ ಸೇನೆಯಲ್ಲಿ ಮೇಜರ್ ಆಗಿ ಪದೋನ್ನತಿ ಹೊಂದುತ್ತಿರುವ ಭರತ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಕೆ.ಡಿ.ಶೆಟ್ಟಿ ದಂಪತಿ, ವಕ್ವಾಡಿ ಪ್ರವೀಣ್ ಶೆಟ್ಟಿ ದಂಪತಿ, ಕಡಂದಲೆ ಸುರೇಶ್ ಭಂಡಾರಿ ದಂಪತಿ, ಸವಣೂರು ಸೀತಾರಾಮ ರೈ ದಂಪತಿಯನ್ನು ಗೌರವಿಸಲಾಗುವುದು ಎಂದರು.
ಸಮಾರೋಪ: ಸಂಜೆ 6ಕ್ಕೆ ಸಮಾರೋಪ ಸಮಾರಂಭ ಜರುಗಲಿದ್ದು, ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ, ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಸಚಿವರಾದ ಆರಗ ಜ್ಞಾನೇಂದ್ರ, ಸುನಿಲ್ ಕುಮಾರ್, ಎಸ್.ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್‌ಕುಮಾರ್ ಕಟೀಲ್ ಭಾಗವಹಿಸುವರು ಎಂದು ಹೇಳಿದರು.
ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮ ವೈಭವ
ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ಯಕ್ಷಗಾನ ವೈಭವ- ಸಪ್ತಸ್ವರ, ಮಧ್ಯಾಹ್ನ 2ರಿಂದ ತಾಳಮದ್ದಲೆ, ಸಂಜೆ 4ರಿಂದ ಮಹಿಳಾ ಯಕ್ಷಗಾನ ‘ಮುರಾಸುರ ವಧೆ’, ಸಂಜೆ 5.15ರಿಂದ ಸನಾತನ ನೃತ್ಯಾಂಜಲಿ, ರಾತ್ರಿ 8ರಿಂದ ತೆಂಕು ಬಡಗುತಿಟ್ಟಿನ ಕಲಾವಿದರಿಂದ ಪ್ರಚಂಡ ಕೂಡಾಟ, ರಾತ್ರಿ 10ಕ್ಕೆ ‘ಶಿವದೂತ ಗುಳಿಗೆ’ 275ನೇ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಪಟ್ಲ ಸಂಭ್ರಮದಲ್ಲಿ ಭಾಗವಹಿಸುವ ವೃತ್ತಿಪರ ಕಲಾವಿದರು, ಹವ್ಯಾಸಿ ಕಲಾವಿದರು, ಮಹಿಳಾ ಕಲಾವಿದರು ಹಾಗೂ ವಿಶೇಷವಾಗಿ ಪ್ರೇಕ್ಷಕರಿಗೂ ಬಂಗಾರದ ಪದಕ ಬಹುಮಾನ ಗೆಲ್ಲುವ ಅವಕಾಶ ಇದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರೊಳಗೆ ಹೆಸರು ನೋಂದಾಯಿಸಬೇಕು ಎಂದರು. ‘ಯಕ್ಷಗಾನ ಕ್ಷೇತ್ರದಲ್ಲಿ ವೃತ್ತಿಪರ ಕಲಾವಿದರಾಗಿ ಸೇವೆ ಸಲ್ಲಿಸುತ್ತಿರುವ ಅಶಕ್ತ ಕಲಾವಿದರ ಬದುಕಿನಲ್ಲಿ ಭರವಸೆಯ ಬೆಳಕನ್ನು ಮೂಡಿಸುವ ನಿಟ್ಟಿನಲ್ಲಿ 6 ವರ್ಷಗಳ ಹಿಂದೆ ಆರಂಭವಾದ ಟ್ರಸ್ಟ್ ಮೂಲಕ ಈ ತನಕ ₹7.5 ಕೋಟಿಗೂ ಅಧಿಕ ಮೊತ್ತದ ಸೇವಾ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ’ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್, ಉಪಾಧ್ಯಕ್ಷ ಡಾ.ಮನು ರಾವ್, ಜತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕನಗರ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ ಇದ್ದರು.
Tags:
ಸುದ್ದಿ