ಎಲ್ಲಿ ಕಲೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆಯೋ ಅಲ್ಲಿ ಜನರು ಹೆಚ್ಚು ಸಂತೋಷದಿಂದ ಇರುತ್ತಾರೆ. ಈ ಕಲೆಗಳು ಸಮಾಜದಲ್ಲಿ ಸದ್ಭಾವನೆ, ಸತ್ ಚಿಂತನೆಗಳನ್ನು ಬೆಳೆಸುವುದಕ್ಕೆ ಸಹಕಾರಿ. ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಿಸುವಲ್ಲಿ ಯಕ್ಷಗಾನದಂತಹ ಕಲೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.
ಯಕ್ಷಗಾನ ರಂಗಭೂಮಿಯ ಸೃಜನಶೀಲತೆಗೆ ಭಾಷ್ಯ ಬರೆದ ಕುರಿಯ
ಹಿರಿಯ ಯಕ್ಷಗಾನ ಕಲಾವಿದ, ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಮಾತನಾಡಿ ಕುರಿಯ ವಿಠಲ ಶಾಸ್ತ್ರಿಗಳು ಯಕ್ಷಗಾನ ರಂಗಭೂಮಿಯ ಸೃಜನಶೀಲತೆಗೆ ಭಾಷ್ಯ ಬರೆದವರು. ಅವರ ನೆನಪಿಗಾಗಿ 1998ರಲ್ಲಿ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನವು ಆರಂಭವಾಯಿತು. ಈಗ ಅದು ರಜತಪರ್ವವನ್ನು ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಾವು ಏಳು ದಿನಗಳ ತಾಳಮದ್ದಳೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಕಸ್ತೂರ್ಬಾ ಆಸ್ಪತ್ರೆಯ ಡಾ. ದುರ್ಗಾದಾಸ್ ಆಸ್ರಣ್ಣ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ (ರಿ.)ದ ಮುಖ್ಯಸ್ಥ ಎಸ್. ಎನ್. ಪಂಜಾಜೆ, ಯಕ್ಷಗಾನ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಎಂ. ಅನಂತರಾವ್, ಯಕ್ಷದೀವಿಗೆಯ ಅಧ್ಯಕ್ಷೆ ಆರತಿ ಪಟ್ರಮೆ, ಕೋಶಾಧಿಕಾರಿ ಸಿಬಂತಿ ಪದ್ಮನಾಭ ಉಪಸ್ಥಿತರಿದ್ದರು.
ಉದ್ಘಾಟನೆಯ ಬಳಿಕ 'ಗುರುದಕ್ಷಿಣೆ' ತಾಳಮದ್ದಳೆಯು ನಡೆಯಿತು. ಹಿಮ್ಮೇಳ ಕಲಾವಿದರಾಗಿ ಕಾವ್ಯಶ್ರೀ ನಾಯಕ್ ಆಜೇರು, ಶ್ರೀಪತಿ ನಾಯಕ್ ಆಜೇರು, ಅಕ್ಷಯ ರಾವ್ ವಿಟ್ಲ ಸಹಕರಿಸಿದರು. ಅರ್ಥಧಾರಿಗಳಾಗಿ ವಿದ್ವಾನ್ ಉಮಾಕಾಂತ ಭಟ್ ಕೆರೇಕೈ (ದ್ರೋಣ), ಉಜಿರೆ ಅಶೋಕ ಭಟ್(ಏಕಲವ್ಯ), ಸಿಬಂತಿ ಪದ್ಮನಾಭ (ಅರ್ಜುನ), ಆರತಿ ಪಟ್ರಮೆ (ದ್ರುಪದ) ಭಾಗವಹಿಸಿದರು. ಮೇ 21ರವರೆಗೆ ಪ್ರತೀದಿನ ಸಂಜೆ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.