ತುಮಕೂರು: ಮೂಡಲಪಾಯದ ಜಿಲ್ಲೆಯಾಗಿರುವ ತುಮಕೂರಿನಲ್ಲಿ ಪಡುವಲಪಾಯ ಯಕ್ಷಗಾನ ತಾಳಮದ್ದಳೆಯಷ್ಟೇ ಅಲ್ಲ, ವಾರಪೂರ್ತಿಯ ತಾಳಮದ್ದಳೆ ಸಪ್ತಾಹವೇ ನಡೆಯುತ್ತಿದೆ. 2022 ಮೇ 15ರಿಂದ ಮೇ 21ರವರೆಗೆ ಕರಾವಳಿಯ ಹೆಸರಾಂತ ಕಲಾವಿದರು ತುಮಕೂರಿನ ಜನತೆಗೆ ರಂಜನೆ-ಬೋಧನೆ ಉಣಬಡಿಸಲಿದ್ದಾರೆ.
ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ನೇತೃತ್ವದಲ್ಲಿ ಪ್ರತಿಷ್ಠಾನದ ಬೆಳ್ಳಿ ಹಬ್ಬ ಪ್ರಯುಕ್ತ ರಾಜ್ಯಾದ್ಯಂತ ತಾಳಮದ್ದಳೆ ಕಾರ್ಯಕ್ರಮಗಳು ನಡೆಯಲಿವೆ. ತುಮಕೂರಿನ ಕಾರ್ಯಕ್ರಮಕ್ಕೆ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಕಲಾ ಪ್ರತಿಷ್ಠಾನ (ರಿ) ಹಾಗೂ ತುಮಕೂರಿನ ಯಕ್ಷದೀವಿಗೆ (ರಿ) ಸಹಯೋಗ ನೀಡುತ್ತಿದ್ದು, ಸಂಘಟಕ ಉಜಿರೆ ಅಶೋಕ ಭಟ್ ಮುಂದಾಳುತ್ವದಲ್ಲಿ ನಡೆಯಲಿದೆ. ಪ್ರತಿ ದಿನ ಸಂಜೆ 5.30ರಿಂದ 8.30ರವರೆಗೆ ವಿಭಿನ್ನ ಯಕ್ಷಗಾನ ಪ್ರಸಂಗಗಳು ತುಮಕೂರು ಎಸ್.ಎಸ್.ಪುರಂನಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರಸ್ತುತಿಗೊಳ್ಳಲಿವೆ.
ಮೇ 15ರಂದು ಭಾನುವಾರ ಸಂಜೆ 5ಕ್ಕೆ ತುಮಕೂರಿನ ಕಸ್ತೂರ್ಬಾ ಆಸ್ಪತ್ರೆಯ ಡಾ.ದುರ್ಗಾದಾಸ ಆಸ್ರಣ್ಣ ಅವರು, ವಾಸವಿ ಸಂಘದ ಅಧ್ಯಕ್ಷ ಆರ್.ಎಲ್.ರಮೇಶ ಬಾಬು ಉಪಸ್ಥಿತಿಯಲ್ಲಿ ತಾಳಮದ್ದಳೆ ಸಪ್ತಾಹ ಉದ್ಘಾಟಿಸಲಿದ್ದಾರೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಮೊದಲೆರಡು ದಿನ (ಮೇ 15, 16) ಕಾವ್ಶಶ್ರೀ ನಾಯಕ್ ಆಜೇರು, ಶ್ರೀಪತಿ ನಾಯಕ್ ಆಜೇರು ಮತ್ತು ಅಕ್ಷಯ ರಾವ್ ಅವರ ಹಿಮ್ಮೇಳವಿರುತ್ತದೆ. ಅನುಕ್ರಮವಾಗಿ ಗುರುದಕ್ಷಿಣೆ ಮತ್ತು ಮಾಗಧ ವಧೆ ಪ್ರಸಂಗಗಳು ವಿದ್ವಾನ್ ಉಮಾಕಾಂತ ಭಟ್, ಉಜಿರೆ ಅಶೋಕ ಭಟ್, ಆರತಿ ಪಟ್ರಮೆ ಮತ್ತು ಕೆ.ವಿ.ಸಿಬಂತಿ ಪದ್ಮನಾಭ ಅವರ ಮುಮ್ಮೇಳದಲ್ಲಿ ಪ್ರಸ್ತುತಿಗೊಳ್ಳಲಿವೆ.
ಮೇ 17ರ ಮಂಗಳವಾರ ಹಾಗೂ ಮೇ 18ರ ಬುಧವಾರದಂದು ಅನುಕ್ರಮವಾಗಿ ಊರ್ವಶೀ ಶಾಪ ಹಾಗೂ ಕರ್ಣ ಭೇದನ ಪ್ರಸಂಗಗಳು ಪ್ರದರ್ಶನಗೊಳ್ಳಲಿವೆ. ಹಿಮ್ಮೇಳದಲ್ಲಿ ಸುರೇಶ್ ಶೆಟ್ಟಿ ಎಸ್., ನಾಗಭೂಷಣ ಹೆಗ್ಗೋಡು, ಕಾರ್ತಿಕ್ ಧಾರೇಶ್ವರ ಸಹಕರಿಸಲಿದ್ದರೆ, ಮುಮ್ಮೇಳದಲ್ಲಿ ಉಜಿರೆ ಅಶೋಕ ಭಟ್, ಪವನ್ ಕಿರಣ್‌ಕೆರೆ, ಕೆ.ವಿ.ಸಿಬಂತಿ ಪದ್ಮನಾಭ, ಆರತಿ ಪಟ್ರಮೆ ಇರುತ್ತಾರೆ.
ಮೇ 19, 20 ಹಾಗೂ 21ರಂದು ಅನುಕ್ರಮವಾಗಿ ತ್ರಿಶಂಕು ಸ್ವರ್ಗ, ಸುಧನ್ವ ಮೋಕ್ಷ ಹಾಗೂ ಭೀಷ್ಮ ಸೇನಾಧಿಪತ್ಯ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಳ್ಳಲಿದ್ದು, ಹಿಮ್ಮೇಳದಲ್ಲಿ ಪ್ರಶಾಂತ ರೈ ಮುಂಡಾಲಗುತ್ತು, ಬಿ.ಜನಾರ್ದನ ತೋಳ್ಪಾಡಿತ್ತಾಯ ಮತ್ತು ಸತ್ಯಜಿತ್ ರಾವ್ ರಾಯಿ ಅವರು ಇರುತ್ತಾರೆ. ತ್ರಿಶಂಕು ಸ್ವರ್ಗ ಪ್ರಸಂಗದಲ್ಲಿ ಮುಮ್ಮೇಳದಲ್ಲಿ ಉಜಿರೆ ಅಶೋಕ್ ಭಟ್, ಗಣರಾಜ ಕುಂಬ್ಳೆ, ಶಶಾಂಕ ಅರ್ನಾಡಿ, ಸುಧನ್ವ ದೇರಾಜೆ, ಮೇ 20ರಂದು ಸುಧನ್ವ ಮೋಕ್ಷ ಪ್ರಸಂಗದಲ್ಲಿ ಉಜಿರೆ ಅಶೋಕ ಭಟ್, ಗಣರಾಜ್ ಕುಂಬ್ಳೆ ಮತ್ತು ಅಜಿತ್ ಕಾರಂತ ಬೆಂಗಳೂರು ಹಾಗೂ 21ರ ಶನಿವಾರ ಭೀಷ್ಮ ಸೇನಾಧಿಪತ್ಯ ಪ್ರಸಂಗದಲ್ಲಿ ಉಜಿರೆ ಅಶೋಕ ಭಟ್, ವಿ.ಸಂಕದಗುಂಡಿ ಗಣಪತಿ ಭಟ್, ಶಶಾಂಕ ಅರ್ನಾಡಿ, ಕೆ.ವಿ.ಸಿಬಂತಿ ಪದ್ಮನಾಭ ಪ್ರೌಢಿಮೆ ತೋರಲಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳಿಗೆ ಪ್ರವೇಶ ಉಚಿತವಾಗಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಕ್ಷಗಾನದ ಪ್ರಚಾರ-ಪ್ರಸಾರಕ್ಕೆ ಪ್ರೋತ್ಸಾಹಿಸಬೇಕಿದೆ.