ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೆಂಗಳೂರಿನ ಡಿಜಿ ಯಕ್ಷ ಫೌಂಡೇಶನ್ (ರಿ) ಸಹಯೋಗದಲ್ಲಿ ನಡೆಯುವ ಯಕ್ಷಗಾನ ಬಣ್ಣಗಾರಿಕೆ ಕಮ್ಮಟದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ಲೇಖಕ ಹಾಗೂ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಗಣರಾಜ ಕುಂಬ್ಳೆ ಮತ್ತು ದ.ಕ.ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತ ಪ್ರಸಾಧನ ಕಲಾವಿದ ದಿವಾಕರ ದಾಸ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಉದ್ಘಾಟನೆ:
ಮೇ 13ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಉದ್ಘಾಟಿಸಲಿದ್ದಾರೆ. ರಂಗನಿರ್ದೇಶಕ ನಾಟಕಮನೆ ಮಹಾಲಿಂಗು, ಡಮರುಗ ರಂಗ ಸಂಪನ್ಮೂಲ ಕೇಂದ್ರದ ಮೆಳೇಹಳ್ಳಿ ದೇವರಾಜು ವಿಶೇಷ ಆಹ್ವಾನಿತರಾಗಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ ಕೆ.ವಿ. ಅವರು ಈ ಕಮ್ಮಟದ ಸಂಚಾಲಕರು. ಬೆಳಿಗ್ಗೆ 10.45ರಿಂದ 5.15ರವರೆಗೆ ಮತ್ತು ಮೇ 14ರಂದು 10.45ರಿಂದ ಸಂಜೆ 5.15ರವರೆಗೆ ಯಕ್ಷಗಾನ ಬಣ್ಣಗಾರಿಕೆ ತರಬೇತಿ ನಡೆಯಲಿದೆ.
ಸಮಾರೋಪ:
ಮೇ 14ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಯಕ್ಷದೀವಿಗೆ ವಾರ್ಷಿಕ ಗೌರವವನ್ನು ಯಕ್ಷಗಾನ ಹಿಮ್ಮೇಳದ ಹಿರಿಯ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ನೀಡಿ ಪುರಸ್ಕರಿಸಲಾಗುತ್ತದೆ. ಉದ್ಯಮಿ ಹೆಚ್.ಜಿ.ಚಂದ್ರಶೇಖರ್, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಲಕ್ಷ್ಮಣದಾಸ್, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಯ್ಯ, ಇಂಗ್ಲೆಂಡ್‌ನ ಫ್ಲೀಟ್ ಟೌನ್ ಕೌನ್ಸಿಲ್‌ನ ಕೌನ್ಸಿಲರ್ ಕುಮಾರ ಕುಂಟಿಕಾನಮಠ, ತುಮಕೂರು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ವಿ-ಟೆಕ್ ಸೊಲ್ಯೂಶನ್ಸ್‌ನ ಪ್ರಿಯಾ ಪ್ರದೀಪ್ ಭಾಗವಹಿಸಲಿದ್ದಾರೆ.
ಮೇ 14ರ ಸಂಜೆ 4.30ರಿಂದ ಯಕ್ಷಗಾನದ ಪೂರ್ವರಂಗವನ್ನು, ಅದ್ವೈತ್ ಎಂ. ಹಾಗೂ ಆರ್ಯ ಎಂ. ಬಾಲಗೋಪಾಲ ಕುಣಿತದ ಮೂಲಕ ಪರಿಚಯಿಸುವರು.
ಸಂಜೆ 4.40ರಿಂದ ಯಕ್ಷದೀವಿಗೆಯ ವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ, ದೇವಿದಾಸ ವಿರಚಿತ 'ಬಬ್ರುವಾಹನ ಕಾಳಗ' ಮತ್ತು 'ವೀರ ವೃಷಸೇನ' ಯಕ್ಷಗಾನ ಆಖ್ಯಾನಗಳು ಪ್ರದರ್ಶನಗೊಳ್ಳಲಿವೆ. ಹಿಮ್ಮೇಳದಲ್ಲಿ ಭಾಗವತರಾಗಿ ಅರ್ಜುನ್ ಕೊರ್ಡೇಲ್, ಚೆಂಡೆ-ಮದ್ದಳೆಯಲ್ಲಿ ಅವಿನಾಶ್ ಬೈಪಾಡಿತ್ತಾಯ, ಶ್ರೀಶ ರಾವ್ ನಿಡ್ಲೆ ಹಾಗೂ ಶಿಖಿನ್ ಶರ್ಮಾ ಶರವೂರು ಭಾಗವಹಿಸಲಿದ್ದಾರೆ.
ಬಭ್ರುವಾಹನ ಕಾಳಗದ ಮುಮ್ಮೇಳದಲ್ಲಿ ಯಕ್ಷದೀವಿಗೆ ವಿದ್ಯಾರ್ಥಿಗಳಾದ ಲಹರಿ ಟಿ.ಜೆ. (ಅರ್ಜುನ), ಸಂವೃತ ಶರ್ಮಾ ಎಸ್.ಪಿ. (ವೃಷಕೇತು), ನಿಶಾಂತ್ ಓಂಕಾರ್ (ಪ್ರದ್ಯುಮ್ನ), ಖುಶಿ ಶರ್ಮಾ ಎಸ್.ಪಿ. (ಬಭ್ರುವಾಹನ-1), ಧನುಶ್ ಓಂಕಾರ್ (ಬಭ್ರುವಾಹನ-2), ಇಂಚರ ಎಸ್.ಎಸ್. (ಮಂತ್ರಿ), ಜನ್ಯಾ ಟಿ.ಜೆ. (ಕಟಕಿ), ಮನಸ್ವಿ ಭಟ್ (ಚಿತ್ರಾಂಗದೆ), ಫಾಲ್ಗುಣಿ ಶ್ರೀಧರ್ (ಶ್ರೀಕೃಷ್ಣ) ಅಭಿನಯಿಸಲಿದ್ದಾರೆ.
ಪಾಂಡೇಶ್ವರ ವೆಂಕಟಕವಿ ವಿರಚಿತ ವೀರ ವೃಷಸೇನ ಯಕ್ಷಗಾನದಲ್ಲಿ ಭಾಗವತರಾಗಿ ವಿಷ್ಣುಪ್ರಸಾದ್ ಕಲ್ಲೂರಾಯ, ಮಧೂರು ಹಾಗೂ ಚೆಂಡೆ-ಮದ್ದಳೆಯಲ್ಲಿ ಅವಿನಾಶ್ ಬೈಪಾಡಿತ್ತಾಯ, ಶ್ರೀಶ ರಾವ್ ನಿಡ್ಲೆ ಹಾಗೂ ಶಿಖಿನ್ ಶರ್ಮಾ ಶರವೂರು ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ, ಸಾತ್ವಿಕ್ ನಾರಾಯಣ ಭಟ್ ಕೆ. (ವೃಷಸೇನ), ಜನ್ಯಾ ಟಿ.ಜೆ. (ಸೋಮಪ್ರಭೆ), ಶಶಾಂಕ ಅರ್ನಾಡಿ (ಭೀಮ), ಆರತಿ ಪಟ್ರಮೆ (ಶ್ರೀಕೃಷ್ಣ) ಹಾಗೂ ದಾಮೋದರ ನಾಯಕ್ (ಅರ್ಜುನ) ಪ್ರದರ್ಶನ ನೀಡಲಿದ್ದಾರೆ.
ಯಕ್ಷದೀವಿಗೆ ಅಧ್ಯಕ್ಷೆ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯೆ ಆರತಿ ಪಟ್ರಮೆ ಅವರ ನಿರ್ದೇಶನದಲ್ಲಿ ಯಕ್ಷಗಾನ ಆಖ್ಯಾನಗಳು ಪ್ರಸ್ತುತಗೊಳ್ಳಲಿದ್ದು, ಶರಣ್ಯಾ ರಾವ್ ಶರವೂರು ನೆರವು ನೀಡಿದ್ದಾರೆ. ಅರ್ಜುನ ಕೊರ್ಡೇಲ್ ಮತ್ತು ಬಳಗ ವೇಷಭೂಷಣಕ್ಕೆ ನೆರವು ನೀಡಿದೆ.
Tags:
ಸುದ್ದಿ