ತುಮಕೂರು: ಯಕ್ಷಗಾನದಲ್ಲಿ ವಿದ್ವತ್ತು ಅಪಾರ ಪ್ರಮಾಣದಲ್ಲಿ ಇದೆ. ಅದರ ಮೂಲಕ ಜನಸಾಮಾನ್ಯರನ್ನು ಪರಿಣಾಮಕಾರಿಯಾಗಿ ತಲುಪಲು ಸಾಧ್ಯವಾಗುವುದು ಒಂದು ಅಪೂರ್ವ ವಿದ್ಯಮಾನ ಎಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣದಾಸ್ ಅಭಿಪ್ರಾಯಪಟ್ಟರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ತುಮಕೂರಿನ ಯಕ್ಷದೀವಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಬೆಂಗಳೂರಿನ ಡಿಜಿ ಯಕ್ಷ ಫೌಂಡೇಶನ್ ಸಹಯೋಗದೊಂದಿಗೆ ತುಮಕೂರಿನ ಜಿಲ್ಲಾ ಕನ್ನಡ ಭವನದಲ್ಲಿ ಮೇ 13, 14ರಂದು ನಡೆದ ಎರಡು ದಿನಗಳ ಯಕ್ಷಗಾನ ಬಣ್ಣಗಾರಿಕೆ ಕಮ್ಮಟ, ವೇಷಭೂಷಣ ಪ್ರಾತ್ಯಕ್ಷಿಕೆ ಹಾಗೂ ಯಕ್ಷಗಾನ ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದರು.
ಎರಡು ದಿನಗಳ ಕಾಲ ನಡೆದ ಯಕ್ಷಗಾನ ಬಣ್ಣಗಾರಿಕೆ ಕಮ್ಮಟದಲ್ಲಿ ಸುಮಾರು 40ರಷ್ಟು ಮಕ್ಕಳು ಶಿಬಿರಾರ್ಥಿಗಳಾಗಿ ಭಾಗವಹಿಸಿ, ಸಂಪನ್ಮೂಲ ವ್ಯಕ್ತಿಗಳ ನೆರವಿನೊಂದಿಗೆ ಯಕ್ಷಗಾನದ ಮುಖವರ್ಣಿಕೆ ತಾವೇ ಮಾಡಿಕೊಳ್ಳುವ ಕಲೆಯನ್ನು ಕಲಿತುಕೊಂಡರು. ಮುಖಕ್ಕೆ ಬಣ್ಣಗಳನ್ನು ಹಚ್ಚಿ ಸಂಭ್ರಮಿಸಿದರು.
ನೋವು ಮರೆಸುವ ಕಲೆ ಯಕ್ಷಗಾನತುಮಕೂರು ಕಲಾವಿದರ ಕಣಜ, ಯಕ್ಷಗಾನ ಇದಕ್ಕೆ ಹೊರತೇನಲ್ಲ. ಮುಖವರ್ಣಿಕೆಯಲ್ಲಿ ಯಕ್ಷಗಾನ ತನ್ನದೇ ಆದ ಸ್ಥಾನ ಪಡೆದಿದೆ. ತಪಸ್ಸಿನಿಂದ ಯಕ್ಷ ಕಲೆಯನ್ನು ರೂಢಿಸಿಕೊಳ್ಳಬೇಕು. ಅದನ್ನು ಕಾಣುವುದು ಹವ್ಯಾಸಿ ಕಲಾವಿದರಲ್ಲಿ ಮಾತ್ರ. ಯಾರು ಭಕ್ತಿ-ಶ್ರದ್ಧೆಯಿಂದ ತೊಡಗಿಸಿಕೊಳ್ಳುತ್ತಾರೋ ಅವರು ಯಕ್ಷಗಾನದಲ್ಲಿ ಯಶಸ್ವಿಯಾಗುತ್ತಾರೆ. ಈ ಎರಡು ದಿನಗಳ ಬಣ್ಣಗಾರಿಕೆ ಕಮ್ಮಟದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ಪ್ರಯೋಜನ ಪಡೆದರು ಎಂಬುದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಇಂತಹ ಕಮ್ಮಟಗಳು ಹೆಚ್ಚಾಗಿ ನಡೆಯಬೇಕು ಎಂದು ಲಕ್ಷ್ಮಣದಾಸ್ ಹೇಳಿದರು.
ಎಲ್ಲಾ ನೋವುಗಳನ್ನು ಮರೆಸುವ ಕಲೆ ಇದಾಗಿದೆ. ಇದರಲ್ಲಿ ಪಾತ್ರದ ಆವಾಹನೆ ಆಗಬೇಕು. ಆಗ ಮಾತ್ರ ಆ ಪಾತ್ರಕ್ಕೆ ಜೀವ ದೊರೆತಂತಾಗುತ್ತದೆ ಎಂದು ಅವರು ನುಡಿದರು.
ಯಕ್ಷಗಾನ ಬಣ್ಣಗಾರಿಕೆ ಸ್ವಾವಲಂಬಿ ಬದುಕಿಗೆ ಕೈಗನ್ನಡಿಕೈಗಾರಿಕೋದ್ಯಮಿ ಚಂದ್ರಶೇಖರ್ ಮಾತನಾಡಿ, ವರ್ಣಗಾರಿಕೆ ಯಕ್ಷಗಾನದ ಮೊದಲ ಹೆಜ್ಜೆ. ಕಲಾವಿದರೇ ಬಣ್ಣಗಾರಿಕೆಯನ್ನು ಮಾಡಿಕೊಂಡು ವೇಷಭೂಷಣ ಧರಿಸಿಕೊಂಡು ಕಲೆಯನ್ನು ಪ್ರದರ್ಶಿಸುವುದು ಅವರ ಸ್ವಾವಲಂಬಿ ಬದುಕಿಗೆ ಹಿಡಿದ ಕೈಗನ್ನಡಿಯಾಗಿದೆ. ಯಕ್ಷಗಾನದಲ್ಲಿ ಮೊದಲು ಮಾತುಗಾರಿಕೆಯನ್ನು ಕಲಿಯಬೇಕು. ಅದೇನೂ ರೂಢಿಯ ಮಾತಲ್ಲ. ಬದಲಾಗಿ ಹೊಸತನಕ್ಕೆ ಹೊಂದಿಕೊಂಡಂತೆ ಆಡುವ ಮಾತುಗಳು ಪ್ರದರ್ಶನದಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ. ಅಂತಹ ಮಾತುಗಳನ್ನು ಅನುಭವಿ ಕಲಾವಿದರಿಂದ ಮಾತ್ರ ಕೇಳಲು ಸಾಧ್ಯವಾಗುತ್ತದೆ ಎಂದರು.
ಯಕ್ಷಗಾನ ಕೇವಲ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲಾ ಕಡೆ ತನ್ನ ಚಲನಶೀಲತೆಯಿಂದಾಗಿ ಗುರುತಿಸಿಕೊಂಡಿದೆ. ಆಗ ಯಕ್ಷಗಾನ ಕೇವಲ ಗಂಡು ಕಲೆಯಾಗಿ ನಿರ್ಮಾಣವಾಗಿತ್ತು. ಆದರೆ ಈಗ ಮಹಿಳೆಯರೂ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ಅದು ಕೇವಲ ಗಂಡುಕಲೆಯಾಗಿ ಉಳಿದಿಲ್ಲ. ನಿರಂತರ ಚಲನಶೀಲತೆಯಿಂದಾಗಿ ಯಕ್ಷಗಾನ ಎಲ್ಲೆಡೆ ಪಸರಿಸುತ್ತಿದೆ. ಅದರ ಪ್ರೇಕ್ಷಕರು ಕೂಡ ಹೆಚ್ಚಾಗುತ್ತಿದ್ದಾರೆ. ವಿಶೇಷವಾಗಿ ತುಮಕೂರಿನ ಪ್ರೇಕ್ಷಕರಿಗೆ ಯಕ್ಷಗಾನದ ರಸದೌತಣವನ್ನು ಯಕ್ಷದೀವಿಗೆ ಸಂಸ್ಥೆ ನೀಡುತ್ತಾ ಬಂದಿರುವುದು ಶ್ಲಾಘನೀಯ ವಿಚಾರ ಎಂದರು.
ಯಕ್ಷಗಾನದಿಂದ ಮಕ್ಕಳಲ್ಲಿ ಸಂವಹನ ಕೌಶಲ ವೃದ್ಧಿಸಮಾರೋಪ ಸಮಾರಂಭದ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಇಂಗ್ಲೆಂಡ್‌ನ ಕೌನ್ಸಿಲರ್ ಕುಮಾರ ಕುಂಟಿಕಾನಮಠ ಅವರು, ಇಂತಹ ವರ್ಣಗಾರಿಕೆ - ವೇಷಭೂಷಣ ಪ್ರಾತ್ಯಕ್ಷಿಕೆ ಕಮ್ಮಟಗಳಿಂದ ವಿದ್ಯಾರ್ಥಿಗಳಲ್ಲಿ ಉತ್ತಮ ಸಂವಹನ ಕೌಶಲ ಮತ್ತು ಗುಂಪನ್ನು ನಿರ್ವಹಿಸುವಂತಹ ಕಲೆ ರೂಢಿ ಆಗುತ್ತದೆ. ಮಕ್ಕಳಲ್ಲಿ ಸೃಜನಶೀಲ ಕಲೆ ವೃದ್ಧಿಸಲು ಪೋಷಕರು ಇಂತಹ ಕಮ್ಮಟಗಳಿಗೆ ಹೆಚ್ಚು ಆಸಕ್ತಿ ತೋರಿಸಬೇಕು. ಆ ಮೂಲಕ ಮಕ್ಕಳ ಸವಾಂಗೀಣ ಪ್ರಗತಿಗೆ ಅಡಿಪಾಯ ಹಾಕಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಯಕ್ಷಗಾನದಿಂದ ಸಂಸ್ಕೃತಿ, ಸಂಸ್ಕಾರಸಂಪನ್ಮೂಲ ವ್ಯಕ್ತಿ, ಕಲಾವಿದ ಹಾಗೂ ರಾಮಕುಂಜ ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ಮಾತನಾಡಿ, ಯಕ್ಷಗಾನದ ಚೌಕಿಯಲ್ಲಿ ಪುರಾಣಪ್ರಸಿದ್ಧ ಪಾತ್ರಗಳು ತಯಾರಾಗುತ್ತವೆ. ಇಂತಹ ಕಲೆಗಳನ್ನು ಕಲಿಯಲು ಪೋಷಕರು ಮಕ್ಕಳಿಗೆ ಅವಕಾಶ ಮಾಡಿಕೊಡಬೇಕು ಮತ್ತು ನಿರಂತರವಾಗಿ ಗಮನಿಸುತ್ತಿರಬೇಕು. ನಿರಂತರ ಶ್ರಮ ಹಾಗೂ ಹಠದಿಂದ ಈ ಕಲೆಯನ್ನು ಸಾಧಿಸಿಕೊಳ್ಳಬೇಕಾಗಿದೆ. ಈ ಎರಡು ದಿನದ ಕಮ್ಮಟದಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಇಂತಹ ಆಸಕ್ತಿ ಕಂಡು ಬಂದಿರುವುದು ವಿಶೇಷ ಸಂಗತಿ. ಕಲೆಯ ಪರಿಚಯಕ್ಕೆ ಭಾಷೆ ಒಂದು ತೊಡಕಲ್ಲ. ನಾಟಕದ ಬಣ್ಣ, ಭಾಷೆ, ಭಂಗಿ, ನಿಲುವು, ಪರದೆ, ಬೆಳಕು ಎಲ್ಲವೂ ಭಾಷೆಯಾಗಿದೆ. ಅದನ್ನು ಜಗದಗಲ ಹರಡಲು ಕಲಾಪೋಷಕರು ಶ್ರಮಿಸಬೇಕಿದೆ. ಯಕ್ಷಗಾನ ಕಲಿಕೆಯಿಂದ ಮಕ್ಕಳಲ್ಲಿ ಕಂಠಸಿರಿಯನ್ನು ಅಭಿವೃದ್ಧಿಗೊಳಿಸಿ ಸಂಸ್ಕೃತಿ, ಸಂಸ್ಕಾರ, ಗುರುಭಕ್ತಿ, ಹಿರಿಯರು ಹಾಗೂ ಪರಂಪರೆಯ ಭಕ್ತಿ ಕಲಿಯಲಾಗುತ್ತದೆ ಎಂದು ವಿವರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ ಎಸ್ ಸಿದ್ದಲಿಂಗಪ್ಪ, ಪ್ರಸಾಧನ ಕಲಾವಿದ ದಿವಾಕರ್ ದಾಸ್ ಕಾವಳಕಟ್ಟೆ ಮಾತನಾಡಿದರು. ಡಿಜಿ ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ, ಯಕ್ಷದೀವಿಗೆ ಅಧ್ಯಕ್ಷೆ ಆರತಿ ಪಟ್ರಮೆ, ಕೋಶಾಧಿಕಾರಿ ಸಿಬಂತಿ ಪದ್ಮನಾಭ ಕೆ. ವಿ., ಟ್ರಸ್ಟಿ ಹರಿಪ್ರಸಾದ್ ಟಿಎನ್, ವೆಂಕಟರೆಡ್ಡಿ ರಾಮರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.
ಗಮನ ಸೆಳೆದ ಯಕ್ಷಗಾನ ಪ್ರದರ್ಶನಗಳುಕಾರ್ಯಕ್ರಮದ ಬಳಿಕ ಯಕ್ಷದೀವಿಗೆಯ ವಿದ್ಯಾರ್ಥಿಗಳು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ, ದೇವಿದಾಸ ವಿರಚಿತ 'ಬಬ್ರುವಾಹನ ಕಾಳಗ' ಮತ್ತು ಪಾಂಡೇಶ್ವರ ವೆಂಕಟಕವಿ ವಿರಚಿತ 'ವೀರ ವೃಷಸೇನ' ಯಕ್ಷಗಾನ ಆಖ್ಯಾನಗಳು ಪ್ರದರ್ಶನಗೊಂಡವು. ಹಿಮ್ಮೇಳದಲ್ಲಿ ಭಾಗವತರಾಗಿ ಅರ್ಜುನ್ ಕೊರ್ಡೇಲ್ ಹಾಗೂ ವಿಷ್ಣುಪ್ರಸಾದ ಕಲ್ಲೂರಾಯ, ಮಧೂರು, ಚೆಂಡೆ-ಮದ್ದಳೆಯಲ್ಲಿ ಅವಿನಾಶ್ ಬೈಪಾಡಿತ್ತಾಯ, ಶ್ರೀಶ ರಾವ್ ನಿಡ್ಲೆ ಹಾಗೂ ಶಿಖಿನ್ ಶರ್ಮಾ ಶರವೂರು ಭಾಗವಹಿಸಿದರು. ಪೂರ್ವರಂಗದ ಬಾಲಗೋಪಾಲ ಕುಣಿತವನ್ನು ಅದ್ವೈತ್ ಎಂ. ಹಾಗೂ ಆರ್ಯ ಎಂ. ಪ್ರಸ್ತುತಪಡಿಸಿದರು.
ಬಭ್ರುವಾಹನ ಕಾಳಗದ ಮುಮ್ಮೇಳದಲ್ಲಿ ಯಕ್ಷದೀವಿಗೆ ವಿದ್ಯಾರ್ಥಿಗಳಾದ ಲಹರಿ ಟಿ.ಜೆ. (ಅರ್ಜುನ), ಸಂವೃತ ಶರ್ಮಾ ಎಸ್.ಪಿ. (ವೃಷಕೇತು), ನಿಶಾಂತ್ ಓಂಕಾರ್ (ಪ್ರದ್ಯುಮ್ನ), ಖುಶಿ ಶರ್ಮಾ ಎಸ್.ಪಿ. (ಬಭ್ರುವಾಹನ-1), ಧನುಶ್ ಓಂಕಾರ್ (ಬಭ್ರುವಾಹನ-2), ಇಂಚರ ಎಸ್.ಎಸ್. (ಮಂತ್ರಿ), ಜನ್ಯಾ ಟಿ.ಜೆ. (ಕಟಕಿ), ಮನಸ್ವಿ ಭಟ್ (ಚಿತ್ರಾಂಗದೆ), ಫಾಲ್ಗುಣಿ ಶ್ರೀಧರ್ (ಶ್ರೀಕೃಷ್ಣ) ಅಭಿನಯಿಸಿದರು.
ವೀರ ವೃಷಸೇನ ಮುಮ್ಮೇಳದಲ್ಲಿ ಸಾತ್ವಿಕ್ ನಾರಾಯಣ ಭಟ್ ಕೆ. (ವೃಷಸೇನ), ಜನ್ಯಾ ಟಿ.ಜೆ. (ಸೋಮಪ್ರಭೆ), ಶಶಾಂಕ ಅರ್ನಾಡಿ (ಭೀಮ), ಆರತಿ ಪಟ್ರಮೆ (ಶ್ರೀಕೃಷ್ಣ) ಹಾಗೂ ದಾಮೋದರ ನಾಯಕ್ (ಅರ್ಜುನ) ಪ್ರದರ್ಶನ ನೀಡಿದರು.
ಉದ್ಘಾಟನಾ ಸಮಾರಂಭ: ತುಮಕೂರಿನಲ್ಲಿ ಗಮನ ಸೆಳೆದ ಯಕ್ಷಗಾನ ಬಣ್ಣಗಾರಿಕೆ ಕಮ್ಮಟ: ಸಂಭ್ರಮಿಸಿದ ಚಿಣ್ಣರು
Tags:
ಸುದ್ದಿ