ಸುಳ್ಯ: ಯಕ್ಷಗಾನ ಲೋಕದಲ್ಲಿ ಗಾನ ಗಂಧರ್ವರೆಂದೇ ಖ್ಯಾತರಾಗಿ ಅಭಿಮಾನಿಗಳ ಪ್ರೀತಿಯ 'ಗಣಪ್ಪಣ್ಣ'ನಾಗಿ ಮೆರೆದು, ಹಠಾತ್ತನೆ ಅಗಲಿದ ಭಾಗವತ ಪದ್ಯಾಣ ಗಣಪತಿ ಭಟ್ ಅವರ ಸಂಸ್ಮರಣೆ ಕಾರ್ಯಕ್ರಮವು 2022 ಜುಲೈ 9ರ ಶನಿವಾರ ಸುಳ್ಯದ ಚೊಕ್ಕಾಡಿ ಶ್ರೀರಾಮ ದೇವಾಲಯದ ವಠಾರದಲ್ಲಿ ಜರುಗಲಿದೆ.
ಬೆಳಿಗ್ಗೆ 7.30ರಿಂದಲೇ ಮರುದಿನ ಬೆಳಿಗ್ಗೆವರೆಗೆ ಯಕ್ಷಗಾನ ಕಾರ್ಯಕ್ರಮಗಳು ದೇರಾಜೆ ಸೀತಾರಾಮಯ್ಯ ಸಭಾಭವನದ ಶೇಣಿ ಗೋಪಾಲಕೃಷ್ಣ ಭಟ್ ವೇದಿಕೆಯಲ್ಲಿ ನಡೆಯಲಿದೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಗಾನಾರ್ಚನೆ
ಬೆಳಿಗ್ಗೆ 7.30ರಿಂದ ಪದ್ಯಾಣ ಗಣಪತಿ ಭಟ್ ಅವರ ಶಿಷ್ಯವೃಂದದವರಿಂದ ಗಾನಾರ್ಚನೆ ನಡೆಯಲಿದೆ. ಶ್ರೀಹರಿ ನೆಕ್ಕರೆಮೂಲೆ, ಹೇಮಸ್ವಾತಿ ಕುರಿಯಾಜೆ, ಶರಣ್ಯ ಕೆರೆಮೂಲೆ, ಸುರಭಿ ಚೂಂತಾರು, ರಚನಾ ಚಿದ್ಗಲ್ ಹಾಗೂ ಅಭಿಜ್ಞಾ ನಾಟಿಕೇರಿ ಅವರಿಂದ ಹಾಡುಗಾರಿಕೆಗೆ ಕೇಶವ ದೀಕ್ಷಿತ್ ಮುಂಡುಗಾರು ಮತ್ತು ಅಂಬಾತನಯ ಅರ್ನಾಡಿ ಅವರು ಚೆಂಡೆ-ಮದ್ದಳೆಯಲ್ಲಿ ಸಹಯೋಗ ನೀಡಲಿದ್ದಾರೆ.
ಉದ್ಘಾಟನೆ
ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿ ಅಧ್ಯಕ್ಷತೆಯಲ್ಲಿ, ಖ್ಯಾತ ಅರ್ಥಧಾರಿ ಉಡುವೆಕೋಡಿ ಸುಬ್ಬಪ್ಪಯ್ಯ ಅವರು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಆನೆಕ್ಕಾರು ಗಣಪಯ್ಯ ಭಾಗವಹಿಸಲಿದ್ದಾರ. ಕಲಾವಿದರಾದ ಗಣರಾಜ ಕುಂಬ್ಳೆ ಅವರು ಪದ್ಯಾಣ ಸಂಸ್ಮರಣೆ ಮಾಡಲಿದ್ದು, ಚೊಕ್ಕಾಡಿ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಮಹೇಶ್ ಚೂಂತಾರು ಉಪಸ್ಥಿತರಿರುವರು.
ಭೃಗುಶಾಪ
ಬಳಿಕ 9.45ರಿಂದ 12.30ರವರೆಗೆ ಯಕ್ಷಗಾನ ಬಯಲಾಟ ಭೃಗುಶಾಪ ಪ್ರಸ್ತುತಿಗೊಳ್ಳಲಿದೆ. ರವಿಚಂದ್ರ ಕನ್ನಡಿಕಟ್ಟೆ ಹಾಗೂ ಚಿನ್ಮಯ್ ಭಟ್ ಕಲ್ಲಡ್ಕ ಭಾಗವತಿಕೆ, ಪದ್ಮನಾಭ ಉಪಾಧ್ಯಾಯ, ಚೈತನ್ಯಕೃಷ್ಣ ಪದ್ಯಾಣ ಮತ್ತು ಅಕ್ಷಯ ರಾವ್ ವಿಟ್ಲ ಚೆಂಡೆಮದ್ದಳೆಯಲ್ಲಿ, ವಸಂತ ವಾಮದಪದವು ಮತ್ತು ಮುರಾರಿಭಟ್ ಚಕ್ರತಾಳದಲ್ಲಿ ಸಹಕರಿಸಲಿದ್ದಾರೆ.
ಮುಮ್ಮೇಳದಲ್ಲಿ ಸುಬ್ರಾಯ ಹೊಳ್ಳ ಕಾಸರಗೋಡು, ಸದಾಶಿವ ಕುಲಾಲ್ ವೇಣೂರು, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಸಂತೋಷ್ ಕುಮಾರ್ ಹಿಲಿಯಾಣ, ವಾಸುದೇವ ರಂಗ ಭಟ್, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ಅಜಿತ್ ಪುತ್ತಿಗೆ, ಕಿಶನ್ ಅಗ್ಗಿತ್ತಾಯ, ಹೇಮಸ್ವಾತಿ ಕುರಿಯಾಜೆ, ಶಾಂಭವಿ ದಡ್ಡಲಡ್ಕ, ದುಷ್ಯಂತ ದೇರಾಜೆ, ಪ್ರಸಾದ್ ಸವಣೂರು, ಎ.ಎಸ್.ಭಟ್ ಪೆರುವೋಡಿ ರಂಜಿಸಲಿದ್ದಾರೆ.
ಕೀಚಕ ವಧೆ
ಮಧ್ಯಾಹ್ನ 12.30ರಿಂದ 2.45ರವರೆಗೆ ಕೀಚಕ ವಧೆ ಯಕ್ಷಗಾನ ಪ್ರಸಂಗದಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಪದ್ಯಾಣ ಶಂಕರನಾರಾಯಣ ಭಟ್, ಪದ್ಮನಾಭ ಉಪಾಧ್ಯಾಯ, ಚೈತನ್ಯ ಕೃಷ್ಣ ಪದ್ಯಾಣ ಹಿಮ್ಮೇಳದಲ್ಲಿ, ಸುಣ್ಣಂಬಳ ವಿಶ್ವೇಶ್ವರ ಭಟ್, ಅಂಬಾಪ್ರಸಾದ್ ಪಾತಾಳ, ರವಿರಾಜ ಪನೆಯಾಲ, ಪೆರ್ಲ ಜಗನ್ನಾಥ ಶೆಟ್ಟಿ, ಬಾಲಕೃಷ್ಣ ಮಣಿಯಾಣಿ ಮವ್ವಾರು, ಮಹೇಶ್ ಸಾಣೂರು, ಪ್ರಸಾದ್ ಸವಣೂರು, ಹರಿಪ್ರಸಾದ್, ಸದಾನಂದ ಇರುತ್ತಾರೆ.
ಪಾರಿಜಾತ
2.45ರಿಂದ 4.15ರವರೆಗೆ ಪಾರಿಜಾತ ಪ್ರಸಂಗ ಪ್ರದರ್ಶನಗೊಳ್ಳಲಿದೆ. ದಿನೇಶ್ ಅಮ್ಮಣ್ಣಾಯ, ಕೃಷ್ಣಪ್ರಕಾಶ್ ಉಳಿತ್ತಾಯ, ಚೈತನ್ಯಕೃಷ್ಣ ಪದ್ಯಾಣ, ರಾಜೇಂದ್ರ ಕೃಷ್ಣ ಅವರು ಹಿಮ್ಮೇಳದಲ್ಲೂ, ಎಂ.ಕೆ.ರಮೇಶ್ ಆಚಾರ್ಯ, ಬಂಟ್ವಾಳ ಜಯರಾಮ ಆಚಾರ್ಯ, ಪೆರ್ಲ ಜಗನ್ನಾಥ ಶೆಟ್ಟಿ, ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ, ದಿವಾಕರ ರೈ ಸಂಪಾಜೆ, ಪ್ರಜ್ವಲ್ ಗುರುವಾಯನಕೆರೆ ಮುಮ್ಮೇಳದಲ್ಲಿ ಇರುತ್ತಾರೆ.
ನರಕಾಸುರ ಮೋಕ್ಷ
4.15ರಿಂದ 6.30ರವರೆಗೆ ನರಕಾಸುರ ಮೋಕ್ಷ ಪ್ರಸಂಗವು ಹೊಸಮೂಲೆ ಗಣೇಶ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್ ಹಾಗೂ ಗಣೇಶ ಭಟ್ ಬೆಳ್ಳಾರೆ ಹಿಮ್ಮೇಳದಲ್ಲಿ ಪ್ರಸ್ತುತಗೊಳ್ಳಲಿದೆ. ಸದಾಶಿವ ಶೆಟ್ಟಿಗಾರ್, ನಿಡ್ಲೆ ಗೋವಿಂದ ಭಟ್, ಶಿವರಾಮ ಜೋಗಿ ಬಿ.ಸಿ.ರೋಡ್, ಶಶಿಕಾಂತ ಶೆಟ್ಟಿ ಕಾರ್ಕಳ, ಶಶಿಕಿರಣ ಕಾವು, ಚಂದ್ರಶೇಖರ ಧರ್ಮಸ್ಥಳ, ಶಿವರಾಜ್ ಬಜಕೂಡ್ಲು, ಅಕ್ಷಯ್ ಮೂಡುಬಿದಿರೆ, ಸ್ವಸ್ತಿಕ್ ಶರ್ಮ ಪಳ್ಳತ್ತಡ್ಕ ಮುಮ್ಮೇಳದಲ್ಲಿರುತ್ತಾರೆ.
ಸಭಾ ಕಾರ್ಯಕ್ರಮ
ಬಳಿಕ 9 ಗಂಟೆಯವರೆಗೆ ಸಭಾ ಕಾರ್ಯಕ್ರಮದಲ್ಲಿ ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಷಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ, ಸಂಘಟಕ ಭುಜಬಲಿ ಧರ್ಮಸ್ಥಳ, ಸಾಹಿತಿ ಅರವಿಂದ ಚೊಕ್ಕಾಡಿ ಭಾಗವಹಿಸಲಿದ್ದು, ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಪದ್ಯಾಣ ಸಂಸ್ಮರಣೆ ಮಾಡಲಿದ್ದಾರೆ. ರಂಗಕರ್ಮಿ ಮೂರ್ತಿ ದೇರಾಜೆ ಅವರು ಶೇಣಿ ಸಂಸ್ಮರಣೆ ಮಾಡಲಿದ್ದು, ಯಕ್ಷಗಾನ ಗುರು, ಮದ್ದಳೆಗಾರ ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಅವರನ್ನು ಗೌರವಿಸಲಾಗುತ್ತದೆ. ಗಣರಾಜ ಕುಂಬ್ಳೆ ಅಭಿನಂದನಾ ನುಡಿಗಳನ್ನು ಆಡಲಿದ್ದು, ರವಿಚಂದ್ರ ಕನ್ನಡಿಕಟ್ಟೆ ಅವರಿಗೆ ಶಿಷ್ಯ ಪುರಸ್ಕಾರ ನೀಡಲಾಗುತ್ತದೆ. ವಾಸುದೇವ ರಂಗ ಭಟ್ ಅವರು ಅಭಿನಂದಿಸಲಿದ್ದಾರೆ. ಶೀಲಾ ಜಿ.ಭಟ್ ಪದ್ಯಾಣ ಉಪಸ್ಥಿತರಿರುವರು. ಸುಧನ್ವಾ ದೇರಾಜೆ ಅವರು ಕಾರ್ಯಕ್ರಮ ನಿರೂಪಿಸುವರು.
ತಾಳಮದ್ದಳೆ ವೈನತೇಯ ಸಂಧಾನ
ರಾತ್ರಿ 9.30ರಿಂದ 12.15ರವರಗೆ ವೈನತೇಯ ಸಂಧಾನ ಎಂಬ ತಾಳಮದ್ದಳೆ ಜರುಗಲಿದ್ದು, ದಿನೇಶ ಅಮ್ಮಣ್ಣಾಯ, ಪ್ರಫುಲ್ಲಚಂದ್ರ ನೆಲ್ಯಾಡಿ, ಕೃಷ್ಣಪ್ರಕಾಶ್ ಉಳಿತ್ತಾಯ, ಜಗನ್ನಿವಾಸ ರಾವ್ ಪುತ್ತೂರು, ಮುರಾರಿ ಭಟ್ ಹಿಮ್ಮೇಳದಲ್ಲೂ, ಶಂಭುಶರ್ಮ ವಿಟ್ಲ, ಸರ್ಪಂಗಳ ಈಶ್ವರ ಭಟ್, ಹರಿನಾರಾಯಣದಾಸ ಆಸ್ರಣ್ಣ, ವಾಸುದೇವ ರಂಗ ಭಟ್, ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಹರೀಶ್ ಬೊಳಂತಿಮೊಗರು ಮುಮ್ಮೇಳದಲ್ಲೂ ರಂಜಿಸಲಿದ್ದಾರೆ.
ಮಾರುತಿ ಸಂಧಾನ ತಾಳಮದ್ದಳೆ
ರಾತ್ರಿ 12.15ರಿಂದ 2.45ರವರೆಗೆ ಮಾರುತಿ ಸಂಧಾನ ತಾಳಮದ್ದಳೆಯು ರಮೇಶ್ ಭಟ್ ಪುತ್ತೂರು, ರವಿಚಂದ್ರ ಕನ್ನಡಿಕಟ್ಟೆ, ಪದ್ಮನಾಭ ಉಪಾಧ್ಯಾಯ, ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ, ಗಣೇಶ್ ಭಟ್ ಬೆಳ್ಳಾರೆ, ಅಂಬಾತನಯ ಅರ್ನಾಡಿ ಹಿಮ್ಮೇಳದಲ್ಲಿ, ಉಜಿರೆ ಅಶೋಕ ಭಟ್, ಡಾ.ಎಂ.ಪ್ರಭಾಕರ ಜೋಶಿ, ಗಣರಾಜ ಕುಂಬ್ಳೆ, ಜಿ.ಎಲ್.ಹೆಗಡೆ, ಗಣೇಶ್ ಕನ್ನಡಿಕಟ್ಟೆ ಮುಮ್ಮೇಳದಲ್ಲಿ ಜರುಗಲಿದೆ.
ಕೃಷ್ಣ ಸಂಧಾನ
2.45ರಿಂದ 4.30ರವರೆಗೆ ಕೃಷ್ಣ ಸಂಧಾನ ಯಕ್ಷಗಾನ ತಾಳಮದ್ದಳೆಯು ಕುರಿಯ ಗಣಪತಿ ಶಾಸ್ತ್ರಿ, ಚಿನ್ಮಯ ಭಟ್ ಕಲ್ಲಡ್ಕ, ಪದ್ಯಾಣ ಶಂಕರನಾರಾಯಣ ಭಟ್, ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ, ಜಗನ್ನಿವಾಸ ರಾವ್ ಪುತ್ತೂರು ಹಿಮ್ಮೇಳದೊಂದಿಗೆ, ಸಂಕದಗುಂಡಿ ಗಣಪತಿ ಭಟ್, ರಾಧಾಕೃಷ್ಣ ಕಲ್ಚಾರ್ ವಿಟ್ಲ ಹಾಗೂ ವಾದಿರಾಜ ಕಲ್ಲೂರಾಯರ ಮುಮ್ಮೇಳದೊಂದಿಗೆ ಜರುಗಲಿದೆ.
ಗದಾಪರ್ವ
ನಸುಕು ಹರಿಯುವ ಮುನ್ನ 4.30ರಿಂದ ಪುತ್ತಿಗೆ ರಘುರಾಮ ಹೊಳ್ಳ, ದೇಲಂತಮಜಲು, ಚೈತನ್ಯಕೃಷ್ಣ ಪದ್ಯಾಣರ ಹಿಮ್ಮೇಳದಲ್ಲಿ ಗದಾಪರ್ವ ತಾಳಮದ್ದಳೆ ಜರುಗಲಿದೆ. ಕೆ.ಗೋವಿಂದ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ರವಿರಾಜ ಪನೆಯಾಲ, ಪಕಳಕುಂಜ ಶ್ಯಾಮ ಭಟ್, ಕೆ.ರಾಮ ಜೋಯಿಸ ಬೆಳ್ಳಾರೆ, ಶಶಾಂಕ ಅರ್ನಾಡಿ, ಸುಧನ್ವಾ ದೇರಾಜೆ ಅವರು ಮುಮ್ಮೇಳದಲ್ಲಿರುತ್ತಾರೆ.
ದೇರಾಜೆ ಸೀತಾರಾಮಯ್ಯ ಸಾಂಸ್ಕೃತಿಕ ಕೇಂದ್ರ ಚೊಕ್ಕಾಡಿ, ಶ್ರೀರಾಮ ಸೇವಾ ಸಮಿತಿ ಚೊಕ್ಕಾಡಿ ಮತ್ತು ಸುಳ್ಯ ತಾಲೂಕಿನ ಪದ್ಯಾಣ ಗಣಪ್ಪಣ್ಣ ಅಭಿಮಾನಿಗಳ ಬಳಗವು ಈ ಇಪ್ಪತ್ತನಾಲ್ಕು ಗಂಟೆಗಳ ಸಂಸ್ಮರಣಾ ಕಾರ್ಯಕ್ರಮ ಏರ್ಪಡಿಸಿದ್ದು, ಯಕ್ಷಗಾನ ಪ್ರಿಯರಿಗೆ ಹಬ್ಬವಾಗಿದೆ. ಆಟ-ಕೂಟಗಳಲ್ಲಿ ಸಿದ್ಧಿ-ಪ್ರಸಿದ್ಧಿ ಪಡೆದ ಭಾಗವತ ಗಣಪ್ಪಣ್ಣನವರಿಗೆ ಸಂಸ್ಮರಣಾ ಗೌರವವೂ ಇದಾಗಿದೆ.
Tags:
ಸುದ್ದಿ