ಜೂ.11: ಅದ್ಧೂರಿಯ ದುಬೈ ಯಕ್ಷೋತ್ಸವ, ಯಕ್ಷ ರಕ್ಷಾ ಪ್ರಶಸ್ತಿ ಪ್ರದಾನ: ಸಂಭ್ರಮದಲ್ಲಿ ದುಬೈ ಕನ್ನಡಿಗರು


ದುಬೈ: ದುಬೈ ಯಕ್ಷಗಾನ ಅಭ್ಯಾಸ ತರಗತಿ (DYAT) ವತಿಯಿಂದ ಅದ್ಧೂರಿಯಾದ ದುಬೈ ಯಕ್ಷೋತ್ಸವ 2022ಕ್ಕೆ ಭರದಿಂದ ಸಿದ್ಧತೆಗಳು ನಡೆಯುತ್ತಿದ್ದು, ಯಕ್ಷಗಾನ 'ಲಲಿತೋಪಾಖ್ಯಾನ' ಪ್ರದರ್ಶನ ದುಬೈ ಕನ್ನಡಿಗರು ಮತ್ತು ಸ್ಥಳೀಯರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ದುಬೈ ಅಭ್ಯಾಸ ತರಗತಿಯ ಕಲಾವಿದರಲ್ಲದೆ, ಕರಾವಳಿಯ ಹೆಸರಾಂತ ಕಲಾವಿದರು ಕೂಡ ಭಾಗವಹಿಸುತ್ತಿದ್ದಾರೆ.

2022 ಜೂ.11ರ ಶನಿವಾರ ದುಬೈಯ ಇಂಡಿಯನ್ ಹೈಸ್ಕೂಲ್‌ನ ಶೇಖ್ ರಶೀದ್ ಆಡಿಟೋರಿಯಂನಲ್ಲಿ ಸಂಜೆ 4ರಿಂದ ಯಕ್ಷಗಾನದ ಹಬ್ಬವು ಆರಂಭವಾಗಲಿದೆ.

ಕರಾವಳಿಯ ಯಕ್ಷಗಾನದ ನಾಡಿನಿಂದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಗಾಯನ ಸಾರಥ್ಯದಲ್ಲಿ ಯಕ್ಷಗುರು ಶೇಖರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ ಅವರ ನಿರ್ದೇಶನದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈಗಾಗಲೇ ಯುವ ಮಹಿಳಾ ಭಾಗವತರಾದ ಅಮೃತಾ ಅಡಿಗ, ಮದ್ದಳೆಗಾರರಾದ ಕೌಶಿಕ್ ರಾವ್ ಪುತ್ತಿಗೆ, ಸವಿನಯ ನೆಲ್ಲಿತೀರ್ಥ, ಪ್ರಮುಖ ವೇಷಧಾರಿ ದೀಪಕ್ ರಾವ್ ಪೇಜಾವರ, ವಸ್ತ್ರಾಲಂಕಾರದ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ವರ್ಣಾಲಂಕಾರದ ನಿತಿನ್ ಕುಂಪಲ ಮುಂತಾದವರು ಪೂರ್ವತಯಾರಿಗಾಗಿ ದುಬೈ ತಲುಪಿದ್ದಾರೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ದಾಖಲೆಯ ಒಟ್ಟು 49 ಮಂದಿ ಕಲಾವಿದರು ಸಂಚಾಲಕ ಕೊಟ್ಟಿಂಜ ದಿನೇಶ ಶೆಟ್ಟಿ ನೇತೃತ್ವದಲ್ಲಿ ಸಂಯೋಜನೆಗೊಂಡು ವಿಶೇಷ ಪ್ರದರ್ಶನಕ್ಕೆ ಸಿದ್ಧರಾಗಿದ್ದಾರೆ. ತಂಡದ ಗುರು ಶೇಖರ್ ಡಿ. ಶೆಟ್ಟಿಗಾರ್‌ ಅವರ ನಿರ್ದೇಶನದಲ್ಲಿ, ನಾಟ್ಯಗುರು ಶರತ್ ಕುಡ್ಲರ ಮಾರ್ಗದರ್ಶನದಲ್ಲಿ ಸಿದ್ಧಗೊಂಡ ಸರ್ವ ಕಲಾವಿದರು ಸರಿಸುಮಾರು 72 ಪಾತ್ರಗಳನ್ನು ಕಲಾಭಿಮಾನಿಗಳ ಮುಂದೆ ಪ್ರದರ್ಶಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದೇ ಸಂದರ್ಭದಲ್ಲಿ, ಸ್ವಯಂಸೇವಕರ ತಂಡವು ರಂಗಸ್ಥಳ, ವೇಷಭೂಷಣ, ಆಸನ ವ್ಯವಸ್ಥೆ, ಅಲಂಕಾರ ಮುಂತಾದ ಸಿದ್ಧತೆ - ಸಡಗರಗಳಲ್ಲಿ ತೊಡಗಿಸಿಕೊಂಡಿದೆ. ದುಬೈ ಯಕ್ಷಗಾನ ಅಭ್ಯಾಸ ತರಗತಿ ಪ್ರಾಯೋಜಿತ ಚೊಚ್ಚಲ "ಯಕ್ಷರಕ್ಷಾ ವಿಶೇಷ ವಾರ್ಷಿಕ ಪ್ರಶಸ್ತಿ"ಯನ್ನು ಯಕ್ಷಗಾನ ಕಲಾವಿದ - ಸಂಘಟಕ ಪ್ರಭಾಕರ ಡಿ. ಸುವರ್ಣ ಅವರಿಗೆ ಗಣ್ಯರ ಸಮಕ್ಷ ಪ್ರದಾನ ಮಾಡಲಾಗುವುದು.

ಜೂನ್ 11ರ ಸಂಜೆ 3.30ಕ್ಕೆ ಆಡಿಟೋರಿಯಂ ಗೇಟುಗಳು ತೆರೆಯಲಿವೆ. ಸಂಜೆ 4 ಗಂಟೆಗೆ ಸರಿಯಾಗಿ ಚೌಕಿಪೂಜೆ, 4.30ಕ್ಕೆ ಪೂರ್ವರಂಗ, ಚೆಂಡೆ ಜುಗಲ್ಬಂದಿ, 5ಕ್ಕೆ ಸರಿಯಾಗಿ ಕಥಾರಂಭವಾಗಲಿದೆ. ರಾತ್ರಿ 9 ಗಂಟೆಗೆ ಮಹಾದಾನಿಗಳ ನೆರವಿನಿಂದ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಲಿದೆ ಎಂದು ದುಬೈ ಯಕ್ಷಗಾನ ಅಭ್ಯಾಸ ತರಗತಿಯ ಮುದ್ರಣ- ಮಾಧ್ಯಮ- ಪ್ರಸಾರಗಳ ನೇತೃತ್ವ ವಹಿಸಿರುವ ಗಿರೀಶ್ ನಾರಾಯಣ್ ಕಾಟಿಪಳ್ಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು