ಪಾತ್ರ, ಸನ್ನಿವೇಶ ಬಿಡುತ್ತಾ ಹೋದರೆ, ಸ್ಟಾರ್‌ಗಳಷ್ಟೇ ಮೇಳ ಪ್ರವೇಶಿಸುವಂತಾಗುತ್ತದೆ: ವಾಸುದೇವ ರಂಗ ಭಟ್


ಯಕ್ಷಗಾನ ಕಲಾರಂಗ (ರಿ) ಉಡುಪಿ ಇದರ ವತಿಯಿಂದ ಇತ್ತೀಚೆಗೆ ನಡೆದ ವೃತ್ತಿ ನಿರತ ಯಕ್ಷಗಾನ ಕಲಾವಿದರ 24ನೇ ಸಮಾವೇಶದಲ್ಲಿ ಹನುಮಗಿರಿ ಮೇಳದ ಕಲಾವಿದ ವಾಸುದೇವ ರಂಗ ಭಟ್ ಅವರು ಯಕ್ಷಗಾನ ವಿಮರ್ಶೆ, ಕಾಲಮಿತಿಯ ಅನಿವಾರ್ಯತೆಗಳ ಕುರಿತಾಗಿ ಆಡಿದ ಅರ್ಥಪೂರ್ಣ ಮಾತುಗಳು ಇಲ್ಲಿವೆ.
ಸಂಬಂಧಿತ ವ್ಯಕ್ತಿಯಿಲ್ಲದೆ ವಿವೇಚನೆ
ಯಕ್ಷಗಾನದ ವಿವೇಚನೆ ಇತ್ತೀಚಿನ ದಿನಗಳಲ್ಲಿ ಹೀಗಾಗುವುದಕ್ಕೆ ತೊಡಗಿದೆ ಎಂಬುದು ನನ್ನ ಅನಿಸಿಕೆ. ತಪ್ಪಿದ್ದರೆ ಹಿರಿಯರು ತಿಳಿಹೇಳಬೇಕು. ಯಾರಿಗೆ ಸಂಬಂಧಿಸಿ ವಿವೇಚನೆ ಆಗುತ್ತದೆಯೋ ಆ ವೇದಿಕೆಯಲ್ಲಿ ಅವರು ಇರುವುದಿಲ್ಲ, ಉಳಿದವರೆಲ್ಲ ಇರುತ್ತಾರೆ. ಕಲಾವಿದರು, ಹಿಮ್ಮೇಳದವರ ಬಗ್ಗೆ ಚಿಂತನೆ ನಡೆಸುವಾಗ ಅದಕ್ಕೆ ಸಂಬಂಧಿಸಿದವರು ಅಲ್ಲಿ ಇರಬೇಕು ಎನ್ನುತ್ತಾ ವಾಸುದೇವ ರಂಗ ಭಟ್ಟರು ಮಾತು ಆರಂಭಿಸಿದರು.

ಯಾವುದೇ ಸನ್ನಿವೇಶದಲ್ಲಿ ಕುಣಿಯಬೇಕು, ಆದರೆ ಪ್ರಮಾಣದ ಅರಿವಿರಬೇಕು
ಯಕ್ಷಗಾನದಲ್ಲಿ ಕಲೆಯ ವ್ಯಾಕರಣವನ್ನು ನಾವು ಗ್ರಹಿಸುವಲ್ಲಿ ಎಡವುತ್ತಿದ್ದೇವೆ ಅನಿಸಿದೆ. ನಿರ್ದಿಷ್ಟ ಸನ್ನಿವೇಶದಲ್ಲಿ ಪಾತ್ರವು ಕುಣಿಯಬಹುದೇ ಎಂಬ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಯೇ ಅಸಂಗತ ಅನಿಸುತ್ತದೆ. ಅಂಥ ಸನ್ನಿವೇಶದಲ್ಲಿ ಕುಣಿಯಬಾರದೆಂದರೆ, ಪದ್ಯವನ್ನೂ ಹೇಳಬಾರದು ಅಂತ ಅರ್ಥವಾಗುವುದಿಲ್ಲವೇ? ಕುಣಿತ ಮತ್ತು ಪದ್ಯ ಎಂಬುದು ಯಕ್ಷಗಾನದ ವ್ಯಾಕರಣದಲ್ಲಿ ಇದೆ ಎಂದಾದರೆ, ಎಲ್ಲ ಸನ್ನಿವೇಶದಲ್ಲಿಯೂ ಕುಣಿಯಬಹುದು ಮತ್ತು ಎಲ್ಲ ಸನ್ನಿವೇಶದಲ್ಲಿಯೂ ಪದ್ಯವನ್ನು ಹೇಳಬಹುದು. ಆದರೆ, ಪ್ರಮಾಣ ವಿವೇಚನೆಯೇ ಬೇರೆ. ಯಾವ ಭಾವಕ್ಕೆ ಯಾವ ಸನ್ನಿವೇಶಕ್ಕೆ ಕುಣಿತ ಯಾವ ಪ್ರಮಾಣದಲ್ಲಿರಬೇಕು, ಅಭಿನಯ ಯಾವ ಪ್ರಮಾಣದಲ್ಲಿರಬೇಕು, ಪದ್ಯ ಯಾವ ವಿಧಾನದಲ್ಲಿರಬೇಕು ಎಂಬುದು ವಿವೇಚನೆಯ ವಿಷಯ. ಆದರೆ ಅಲ್ಲಿ ಕುಣಿಯಲೇಬಾರದು ಎನ್ನುವುದಾದರೆ, ಅದೇ ವಿವೇಚನೆಯ ಕಕ್ಷೆಯೊಳಗೆ ಸಾಕಷ್ಟು ವಿಷಯಗಳನ್ನು ಸೇರಿಸಬೇಕಾಗಬಹುದು. ವೇಷಭೂಷಣವನ್ನೇ ತೆಗೆದುಕೊಂಡರೆ, ರಾಜವೇಷ, ಪುಂಡು ವೇಷವೆಂದು ನಾವು ಮಾನಿಸುವಂತೆ ಅದರ ಕಲಾ ಸ್ವರೂಪ ಇರುವಂತೆ, ಯಥಾರ್ಥ ಜೀವನದಲ್ಲಿ ಅವನ್ನೆಲ್ಲ ಧರಿಸಿ, ಆ ಸ್ವರೂಪದಲ್ಲಿ ವ್ಯವಹರಿಸುವುದು ಸಾಧ್ಯವೇ ಎಂದು ಪ್ರಶ್ನಿಸಿದರು ರಂಗಣ್ಣ. 

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಹೀಗಾಗಿ, ಎಲ್ಲದರ ಮಧ್ಯದಲ್ಲಿ ವಾಸ್ತವಿಕ ಜಗತ್ತನ್ನು ತಂದು ನಿಲ್ಲಿಸಿ, ಕಲಾ ವ್ಯಾಪಾರದ ವ್ಯಾಕರಣವನ್ನು ತಿಳಿಯದೆಯೇ ವಿವೇಚನೆ ಅಥವಾ ವಿಮರ್ಶೆ ಮಾಡುತ್ತಿದ್ದೇವೆಯೋ ಅಂತ ಅನಿಸುತ್ತಿದೆ. ಆದುದರಿಂದ, ಕುಣಿತ, ಹಾಡುಗಳು, ವೇಷಭೂಷಣ, ಆಹಾರ್ಯವೇ ಮೊದಲಾದ ಯಕ್ಷಗಾನದ ಅಂಗಗಳೇ ಆಗಿದ್ದಂಥವು ಯಕ್ಷಗಾನದ ಯಾವುದೇ ಸನ್ನಿವೇಶಕ್ಕೂ ಬಾಧೆಯಲ್ಲ ಅಂತ ನನ್ನ ಅನಿಸಿಕೆ ಎಂದ ವಾಸುದೇವ ರಂಗ ಭಟ್ಟರು, ಕೆರೆಮನೆ ಶಂಭು ಹೆಗಡೆಯವರು ಹೇಳಿದ ಮಲಯಾಳಂನ "ಊರು ಭಂಗ" ನೃತ್ಯ ರೂಪಕವೊಂದರ ಘಟನೆಯನ್ನು ನೆನಪಿಸಿಕೊಂಡರು.

ಅಂದು ಆಯ್ದುಕೊಂಡ ಪ್ರಸಂಗದಲ್ಲಿ, ದುರ್ಯೋಧನ ತೊಡೆ ಮುರಿದು ಬಿದ್ದ ಬಳಿಕದ ಕಥಾಭಾಗದ ಪ್ರಾರಂಭದ ಘಟನೆಯನ್ನು ಆ ನೃತ್ಯ ರೂಪಕದಲ್ಲಿ ತೋರಿಸಬೇಕಿತ್ತು. ಅದರಲ್ಲಿ ದುರ್ಯೋಧನ ಕುಣಿಯುತ್ತಾ ಬರುತ್ತಾನೆ. ನಂತರ ತಜ್ಞರು, ದೇಶೀಯರು, ವಿದೇಶೀಯರು ಇರುವಂತೆಯೇ ವಿವೇಚನೆ ನಡೆಯಿತು. ವಿಮರ್ಶೆಯ ಸಂದರ್ಭದಲ್ಲಿ, ತೊಡೆ ಮುರಿದ ದುರ್ಯೋಧನ ಕುಣಿಯಬಹುದಾ ಎಂಬ ಪ್ರಶ್ನೆ ಎದುರಾಯಿತು. ಆದರೆ ಈ ಕಲಾ ಪ್ರಕಾರದಲ್ಲಿ ಕುಣಿಯಬಹುದು ಎಂಬ ಉತ್ತರವೇ ದೊರೆಯಿತು. ವಾಸ್ತವಿಕ ಪರಿಕಲ್ಪನೆಯನ್ನು ಇಲ್ಲಿ ಅಳವಡಿಸಿದರೆ, ತೊಡೆ ಮುರಿದವ ಕುಣಿಯುವುದು ಅಸಾಧ್ಯ. ಆ ಕಥೆ ಪ್ರಾರಂಭವಾಗುವುದೇ ಅಲ್ಲಿಂದ. ಯಾಕೆ ಕುಣಿಯಬೇಕೆಂದರೆ, ಅದು ನೃತ್ಯ ರೂಪಕ. ಆದುದರಿಂದ ಕುಣಿಯಬೇಕು. ಅಂದರೆ, ಆ ವೇಷ ಕುಣಿಯುತ್ತದೆ ಎಂಬ ಕಾರಣಕ್ಕಾಗಿ ಅಲ್ಲ, ಆದರೆ, ಆ ಪ್ರಕಾರವು ಇದನ್ನೇ ಬಯಸುತ್ತದೆ ಎಂಬ ಕಾರಣಕ್ಕೆ ಕುಣಿಯುವುದು. ಈ ವ್ಯಾಕರಣವನ್ನು ನಾವು ವಿವೇಚಿಸಿ ಸ್ವೀಕರಿಸಬೇಕು. ಈ ವ್ಯಾಕರಣದ ಕುರಿತಾಗಿ, ಅದರ ಸ್ವರೂಪದ ಕುರಿತಾಗಿ ಕಲಾವಿದರು ಹೆಚ್ಚು ಪ್ರಜ್ಞಾವಂತರಾಗಿ ಯೋಚಿಸಬೇಕು ಅಂತ ನನ್ನ ಅನಿಸಿಕೆ. ಇದೇ ಕೊನೆಯ ನಿರ್ಣಯವಲ್ಲ ಎಂದೂ ರಂಗ ಭಟ್ಟರು ಹೇಳಿದರು.

ಕಲೆ ಪ್ರದರ್ಶನವಾದ ಮೇಲೆ ಅದು ಪ್ರೇಕ್ಷಕರಿಗೆ ಬಿಟ್ಟ ವಿಷಯ
ಕಲಾವಿದರ ವಲಯದೊಳಗೆ ವಿಮರ್ಶೆಯನ್ನು ಸ್ವೀಕರಿಸುವಲ್ಲಿ ಇತ್ತೀಚೆಗೆ ಒಂದು ಧೋರಣೆ ಕಾಣುತ್ತೇವೆ. ವಿಮರ್ಶೆಯನ್ನು ವ್ಯಕ್ತಿಗತವಾಗಿ ಹೇಳುವ ಬದಲು ಸಮಷ್ಟಿಯಲ್ಲಿ ಹೇಳುವುದು ಯಾಕೆ ಎಂಬ ಪ್ರಶ್ನೆ. ನನ್ನನ್ನೂ ಸೇರಿಕೊಂಡಂತೆ, ನೆರೆದ ಎಲ್ಲರಿಗೂ ನಾವು ಆ ಪ್ರದರ್ಶನವನ್ನು ಒಪ್ಪಿಸಿದ ಮೇಲೆ, ನಮ್ಮ ಪ್ರದರ್ಶನದ ಕುರಿತಾಗಿ ಅವರ ಮನಸ್ಸಲ್ಲಿ ಯಾವ ಭಾವ ಹೊಂದುತ್ತಾರೆ ಎಂದು ನಾವು ಹೇಗೆ ನಿರ್ದೇಶಿಸುವುದಕ್ಕೆ ಆಗುವುದಿಲ್ಲವೋ, ಅವರು ಹೇಳುವ ಅಭಿಪ್ರಾಯವನ್ನು ನಿಯಂತ್ರಿಸುವ ಅಧಿಕಾರವೂ ನಮಗಿರುವುದಿಲ್ಲ. ಅವರು ಎಲ್ಲೂ ಏನನ್ನೂ ಹೇಳಬಹುದು. ಇಲ್ಲವಾದಲ್ಲಿ, ಅವರ ವಿಮರ್ಶೆಯನ್ನು ಸ್ವೀಕರಿಸುವಲ್ಲಿ ನಾವು ಸ್ವತಂತ್ರರು. ಅವರು ಅಭಿಪ್ರಾಯವನ್ನೇ ಹೇಳದಂತೆ ಕಲಾವಿದರು ನಿರ್ದೇಶಿಸಲಾಗದು ಎಂದು ಅವರು ನುಡಿದರು.

ಹಿಂದೆ ಮಂಟಪ ಉಪಾಧ್ಯಾಯರು ಆರ್.ಗಣೇಶ್ ಅವರೊಂದಿಗೆ ಎಂಜಿಎಂ ಕಾಲೇಜಿನಲ್ಲಿ ಏಕವ್ಯಕ್ತಿ ಪ್ರದರ್ಶನ ಕೊಟ್ಟ ಸಂದರ್ಭದಲ್ಲಿನ ಒಂದು ಘಟನೆಯನ್ನೂ ನೆನಪಿಸಿಕೊಂಡರು. ಆ ಸಂದರ್ಭದಲ್ಲಿ ವಿರುದ್ಧ ಅಭಿಪ್ರಾಯಗಳು ಬಂದಾಗ ಮಂಟಪರು ಸ್ವಲ್ಪ ಕ್ಷೋಭೆಗೊಂಡಿದ್ದರು. ಆಗ ಸಭೆಯಲ್ಲಿದ್ದ ಹಿರಿಯರೊಬ್ಬರು "ಮಂಟಪ ಉಪಾಧ್ಯಾಯರೇ ಕ್ಷಮಿಸಿ. ಕಾರ್ಯಕ್ರಮ ಕೊಡುವಲ್ಲಿವರೆಗೆ ಅದು ನಿಮ್ಮ ಸ್ವತ್ತು, ನೀವು ಕೊಟ್ಟ ಮೇಲೆ ನಿಮಗೆ ಅದರ ಮೇಲೆ ಅಧಿಕಾರ ಇಲ್ಲ, ಅದು ಪ್ರೇಕ್ಷಕರಾದ ನಮ್ಮ ಸ್ವತ್ತು" ಎಂದರು. ಹೀಗಾಗಿ, ಅವರ ಸ್ವತ್ತಿನ ಬಗ್ಗೆ ಅವರು ವಿವೇಚನೆ ಮಾಡುತ್ತಿರುವಾಗ ನಾವು ಅದರ ಬಗ್ಗೆ ಮಾತನಾಡಲಿಕ್ಕಿಲ್ಲ ಎಂದರು ವಾಸುದೇವ ರಂಗ ಭಟ್ಟರು.

ವಿಮರ್ಶೆ ನೇಪಥ್ಯದಿಂದಲೇ ಶುರುವಾಗಲಿ
ಇನ್ನು, ಸಮೂಹ ಮಾಧ್ಯಮಗಳಲ್ಲಿ ಬರುವ ಎಲ್ಲ ಬರಹಗಳನ್ನು, ಅಭಿಪ್ರಾಯಗಳನ್ನು ನಾವು ವಿಮರ್ಶೆ ಅಂತ ನೋಡಬೇಕಾದ್ದಿಲ್ಲ, ಸ್ವೀಕರಿಸಬೇಕಾಗಿಯೂ ಇಲ್ಲ. ಅವೆಲ್ಲವೂ ವಿಮರ್ಶೆ ಎಂಬಂಥದ್ದೊಂದು ಭ್ರಮೆಗೆ ನಾವು ಒಳಗಾಗಿದ್ದೇವೆ. ನೇಪಥ್ಯದಿಂದ ತೊಡಗಿ ಮುಗಿದ ಮೇಲಿನ ಸನ್ನಿವೇಶದ ತನಕ ಪ್ರತಿಯೊಂದು ಅಂಶವನ್ನೂ ಸಮಗ್ರವಾಗಿ ವಿವೇಚನೆ ಮಾಡಿ ಒಂದು ಕಲೋಚಿತವಾದ ಅಭಿಪ್ರಾಯ ಮಂಡಿಸುವುದನ್ನು ವಿಮರ್ಶೆ ಅಂತ ಸ್ವೀಕರಿಸುವುದು ಸೂಕ್ತ. ಆಂಶಿಕವಾದ ಪ್ರದರ್ಶನವನ್ನು ಅಥವಾ ಕೇವಲ ರಂಗದ ಮೇಲಿನ ಪ್ರದರ್ಶನವನ್ನಷ್ಟೇ ನೋಡಿ ವಿಮರ್ಶಿಸುವುದು ಸಮಗ್ರ ಆಗುವುದಕ್ಕಿಲ್ಲ. ಹೀಗಾಗಿ, ನೇಪಥ್ಯದಿಂದ ತೊಡಗಿ ಮತ್ತೆ ನೇಪಥ್ಯಕ್ಕೆ ಸರಿಯುವವರೆಗೆ ಎಲ್ಲವನ್ನೂ ಗಮನಿಸಿದ ಮೇಲೆ, ಸಮಗ್ರವಾಗಿ ಒಂದು ಅಭಿಪ್ರಾಯ ರೂಪುಗೊಂಡರೆ, ಅದಕ್ಕಷ್ಟೇ ವಿಮರ್ಶೆಯ ಮಾನ್ಯತೆ ನೀಡಬಹುದು. ಉಳಿದವೆಲ್ಲವನ್ನೂ ಅನಿಸಿಕೆ ಅಂತ ಸ್ವೀಕರಿಸಬಹುದು ಎಂದರು.

ಸ್ಟಾರ್‌ಗಳು ಮಾತ್ರವೇ ಮೇಳ ಪ್ರವೇಶಿಸುವಂತಾಗಬೇಕೇ?
ಮೇಳಗಳಲ್ಲಿ ಹೇಳುವುದಾದರೆ, ಸಣ್ಣ ಪುಟ್ಟ ಘಟನೆಗಳು, ಸಣ್ಣ ಪುಟ್ಟ ವೇಷಗಳು ಲುಪ್ತವಾಗುತ್ತಾ ಇರುವುದನ್ನು ನಾವು ಗಮನಿಸಬೇಕು. ತೆಂಕಲ್ಲೂ, ಬಡಗಲ್ಲೂ ಹೀಗೆಯೇ ಆಗುತ್ತಿದೆ. ಒಂದು ಕಥೆ ಸಮಗ್ರವಾಗಿ ಹೋಗುತ್ತಿರುವಾಗ, ಆ ಪಾತ್ರ ಅಗತ್ಯವಿಲ್ಲ, ಅದನ್ನು ಬಿಡಬಹುದು ಎಂಬ ಮಾತು ಕೇಳಿಬರುತ್ತದೆ. ಇದರ ಪರಿಣಾಮ ಏನಾಗುತ್ತದೆಯೆಂದರೆ, ಸ್ಟಾರ್‌ಗಳು ಮಾತ್ರ ಮೇಳವನ್ನು ಪ್ರವೇಶಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತಾ ಇದೆ.

ಸಣ್ಣಪುಟ್ಟ ವೇಷಗಳು, ಮೂರ್ನಾಲ್ಕು ಪದ್ಯಗಳಿಗೋಸ್ಕರ ವೇಷ ಮಾಡಿ, ಬಾಕಿ ಉಳಿದದ್ದನ್ನು ಕೇಳಿ ತಿಳಿಯುವ ಹಂಬಲವುಳ್ಳವರಿಗೆ, ಹಾಗೆ ಬೆಳೆಯಬೇಕಾದ ಉಪಕ್ರಮವೇ ಸರಿ ಅಂತ ಹೇಳುವವರಿಗೆ, ಇಂಥ ಸಣ್ಣ ಪುಟ್ಟ ವೇಷಗಳು, ಪಾತ್ರಗಳನ್ನು ಅನಗತ್ಯ ಎಂದು ಬಿಡುತ್ತಾ ಹೋದರೆ, ಶೂನ್ಯದಿಂದ ಸೃಷ್ಟಿಯಾಗುವುದು ಹೇಗೆ ಸಾಧ್ಯ? ಏನೂ (ಅನುಭವ) ಇಲ್ಲದೆ ಹೊಸತು ಸೃಷ್ಟಿಯಾಗಬೇಕು, ಹೊಸ ಕಲಾವಿದರು ಬರಬೇಕು ಎಂದರೆ ಕಷ್ಟ ಎಂಬುದು ಅವರ ಖಚಿತ ಅಭಿಪ್ರಾಯ.


ಕಾಲದ ಅನಿವಾರ್ಯತೆಯೇ ಕಾಲಮಿತಿ ಯಕ್ಷಗಾನ
ಕಾಲಮಿತಿಯ ಯಕ್ಷಗಾನ ಏರುಗತಿಯಲ್ಲಿರುವ ಕಾಲವಿದು. ಕಲೆಯನ್ನೂ, ಕಲಾವಿದರನ್ನೂ ವಿಮರ್ಶಿಸುವವರು ಗಮನಿಸಬೇಕು. ಹಿಂದೆ ಯಕ್ಷಗಾನದ ಸ್ವರೂಪಕ್ಕೆ ಅನಿವಾರ್ಯ, ಇದು ಬೇಕೇ ಬೇಕು ಅಂತೆಲ್ಲ ಒಂದು ಸಮಗ್ರ ಸ್ವರೂಪ ನಿರ್ಮಾಣವಾಗಿದ್ದು ಇಡೀ ರಾತ್ರಿಯ ಪ್ರದರ್ಶನದಲ್ಲಿ. ಕಾಲಮಿತಿ ಅನಿವಾರ್ಯ ಅಂತ ನಾವು ಗ್ರಹಿಸುತ್ತಾ, ಲೋಕಕ್ಕೆ ಈ ಕಲೆಯನ್ನು ಒಗ್ಗಿಸಲು ಪ್ರಯತ್ನಿಸುತ್ತಿರುವ ಈ ಸಂದರ್ಭದಲ್ಲಿ ನಾವು ನಿರ್ದಾಕ್ಷಿಣ್ಯವಾಗಿ ಆ ಸಮಗ್ರ ಘಟಕದ ಅಂಗಗಳನ್ನು ಕತ್ತರಿಸಿದ್ದೇವೆ ಅಂತ ಹೇಳದಿದ್ದರೂ, ಕಿರಿದಾಗಿಸಿದ್ದೇವೆ, ಕೆಲವು ಅಂಗಗಳು ಕಾಣದಂತೆ ಮುಚ್ಚಿಬಿಟ್ಟಿದ್ದೇವೆ. ಯಾಕೆಂದರೆ ಕಾಲಮಿತಿಗೆ ಅದು ಅಪೇಕ್ಷಿತವಲ್ಲ, ಸಾಧ್ಯವಿಲ್ಲ ಎಂಬ ಕಾರಣ.

ಕಾಲಮಿತಿಗೆ ಒಗ್ಗಿಕೊಂಡ ಕಲೆಯಲ್ಲಿ ಅದು ಬೇಕು, ಇದು ಬೇಕು ಅಂತ ಹೇಳುವಾಗ ತುಂಬ ಎಚ್ಚರಿಕೆ ಬೇಕು. ಯಾಕೆಂದರೆ, ಎಲ್ಲವನ್ನೂ ಬಿಟ್ಟದ್ದಾಗಲೀ, ಸೇರಿಸಿದ್ದಾಗಲೀ, ಕಾರಣವೆಂದರೆ ಈ ಕಾಲಕ್ಕೆ ಅದು ಬೇಕು ಅಂತಲೇ. ಕಾಲಮಿತಿಯ ಪ್ರದರ್ಶನಕ್ಕೆ ಬೇಕೂಂತ ಅಲ್ಲ, ಈ ಕಾಲಕ್ಕೆ ಬೇಕೂಂತ. ಕಾಲಮಿತಿಯೂ ಕಾಲದ ಕರೆಗೆ ಕಲೆ ಓಗೊಟ್ಟದ್ದರಿಂದ ಆದ ಸೃಷ್ಟಿಯ ಸ್ವರೂಪ. ಕಾಲವನ್ನು ಗಮನಿಸುತ್ತಲೇ ಪರಿವರ್ತನೆಯೋ ಅಥವಾ ಉಳಿಸುವಿಕೆಯೋ... ಇದನ್ನು ಕಲೆಯೂ, ಕಲಾವಿದರೂ, ಕಲೆಯ ಹಿತೈಷಿಗಳೂ ಯೋಚಿಸಬೇಕಾಗಿದೆ ಎನ್ನುತ್ತಾ ವಾಸುದೇವ ರಂಗಾ ಭಟ್ಟರು ಮಾತು ಮುಗಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು