
ತುಮಕೂರಿನಲ್ಲಿ ಕುರಿಯ ರಜತ ವರ್ಷದ ಸಂಭ್ರಮಾಚರಣೆಯ ಸರಣಿ ತಾಳಮದ್ದಲೆಗಳ ಅಂಗವಾಗಿ ನಡೆದ ಯಶಸ್ವೀ ಯಕ್ಷಗಾನ ತಾಳಮದ್ದಳೆ ಸಪ್ತಾಹದ ನಂತರ ಈಗ ಬೆಂಗಳೂರಿನಲ್ಲಿ ಯಕ್ಷಗಾನ ಪರ್ವದೊಂದಿಗೆ ರಾಜಧಾನಿಯ ಯಕ್ಷಾಸಕ್ತರಿಗೆ ವಾಚಿಕಾಭಿನಯದ ರುಚಿಯನ್ನು ಉಣಿಸಲಿದ್ದಾರೆ ಸಂಘಟಕ, ಕಲಾವಿದ ಉಜಿರೆ ಅಶೋಕ ಭಟ್ಟರು.
ತೆಂಕುತಿಟ್ಟಿನ ಯಕ್ಷಗಾನಕ್ಕೆ ವರ್ಚಸ್ಸನ್ನೂ, ರಂಗವೈವಿಧ್ಯತೆಯನ್ನೂ ತಂದವರಲ್ಲಿ ಕುರಿಯ ವಿಠಲ ಶಾಸ್ತ್ರಿಗಳು ಮೊದಲೆಣಿಕೆಯಲ್ಲಿ ಬರುತ್ತಾರೆ. ಕುರಿಯ ಹೆಸರನ್ನು ಯಕ್ಷಗಾನ ಇರುವ ತನಕವೂ ಅವಿಸ್ಮರಣಿಯಾಗಿಸಿದ ಮಹನೀಯರು ಕುರಿಯ ವಿಠಲ ಶಾಸ್ತ್ರಿಗಳು. ಅದನ್ನು ಮತ್ತಷ್ಟು ಸ್ಮರಣೀಯವಾಗಿಸುವಲ್ಲಿ ನಿರಂತರತೆಯನ್ನು ಕಾದುಕೊಂಡವರು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನವನ್ನು ಸ್ಥಾಪಿಸಿ ಸಂಚಾಲಕರಾಗಿ ಮುನ್ನಡೆಸುತ್ತಿರುವ ಉಜಿರೆ ಅಶೋಕ ಭಟ್ಟರು. ಕುರಿಯ ವಿಠಲ ಶಾಸ್ತ್ರಿ ಸಾಂಸೃತಿಕ ಪ್ರತಿಷ್ಠಾನದ ರಜತ ವರ್ಷದ ಸಂಭ್ರಮವನ್ನು ರಾಜ್ಯದ ವಿವಿಧೆಡೆಗಳಲ್ಲಿ ಕಲಾಭಿಮಾನಿಗಳ ಸಹಕಾರದೊಂದಿಗೆ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಇನ್ನಷ್ಟು ಸಂಗತವಾಗಿಸಿದ್ದಾರೆ. ಈ ಮೂಲಕ ಪ್ರಪಂಚದ ಸರ್ವ ಶ್ರೇಷ್ಠ ಕಲಾಪ್ರಕಾರವೊಂದರ ಸಾಂಸ್ಕೃತಿಕ ಪ್ರಸರಣದ ಗುರುತರವಾದ ಕೆಲಸವೊಂದನ್ನು ಮಾಡುತ್ತಿದ್ದಾರೆ. ಈ ಕಾರಣಕ್ಕೆ ಅಶೋಕ ಭಟ್ಟರು ಅಭಿನಂದನಾರ್ಹರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಅಶೋಕ ಭಟ್ಟರದ್ದು ಬಹುಮುಖಿ ಪ್ರತಿಭೆ. ಆಕಾಶವಾಣಿಯಲ್ಲಿ "ಎ" ಶ್ರೇಣಿಯ ಕಲಾವಿದ, ತೆಂಕು ಬಡಗು ತಿಟ್ಟುಗಳ ಸವ್ಯಸಾಚಿ ಕಲಾವಿದ, ಮೇಳವೊಂದರ ಯಶಸ್ವೀ ವ್ಯವಸ್ಥಾಪಕ ಮತ್ತು ವೇಷಧಾರಿಯಾಗಿ ಸೇವೆ ಸಲ್ಲಿಸಿದವರು. ಯಕ್ಷಗಾನ ಕಲಾವಿದನಾಗಿ 40 ವರ್ಷ ಮತ್ತು ತಾಳಮದ್ದಳೆ ಅರ್ಥಧಾರಿಯಾಗಿ 35 ವರ್ಷ ಸೇವೆ ಸಲ್ಲಿಸಿದವರು. ಸಂಘಟಕರಾಗಿ 35 ವರ್ಷದ ಅನುಭವ. ಅತ್ಯುತ್ತಮ ಭಾಷಣಕಾರ, ಧಾರ್ಮಿಕ ಉಪನ್ಯಾಸಕಾರ ಮತ್ತು ಪ್ರವಚನಕಾರರಾಗಿಯೂ ಪ್ರಸಿದ್ಧರು. ಆದುದರಿಂದಲೇ ಅವರ ಕಾರ್ಯಕ್ರಮಗಳಲ್ಲಿ ಶಿಸ್ತಿದೆ, ಬದ್ಧತೆಯಿದೆ, ಅನುಭವದ ಸಿದ್ಧಿಯಿದೆ.
ಈ ನಿಟ್ಟಿನಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಸಮೀಪದ ಕೋಲಾರವೂ ಸೇರಿದಂತೆ ವಿವಿಧ ಸ್ಥಳಗಳಲ್ಲಿ 9 ದಿನಗಳಲ್ಲಿ 12 ತಾಳಮದ್ದಲೆಗಳನ್ನು ಅವರು ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮಗಳ ಕುರಿತ ಸ್ಥೂಲ ಮಾಹಿತಿ ಇಲ್ಲಿದೆ:
18-06-22 ರಂದು ಶನಿವಾರ ಸಂಜೆ 4.00 ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ. ಪಾರ್ಥ ಸಾರಥ್ಯ (ಕೃಷ್ಣ ಸಾರಥ್ಯ. ಕವಿ: ದೇವಿದಾಸ).
ಉದ್ದಟತನದ, ಅಹಂಕಾರಿಯಾದ ಕೌರವ ಮತ್ತು ಮಾತಿನ ಕೌಶಲದಲ್ಲಿ ಕೌರವನನ್ನು ದಾರಿತಪ್ಪಿಸುವ ಕೃಷ್ಣ, ಈ ಮೂಲಕ ಧರ್ಮ ಸಂಸ್ಥಾಪನೆಗೆ ಅಡಿಗಲ್ಲು ಹಾಕುವ ಕಥಾ ಹಂದರವನ್ನು ಹೊಂದಿದ ಪ್ರಸಂಗ.
19-06-22 ರಂದು ಭಾನುವಾರ ಬೆಳಗ್ಗೆ 10.00 ಘಂಟೆಗೆ 'ತರಂಗಿಣಿ' ಕಸವನಹಳ್ಳಿಯಲ್ಲಿ ಪ್ರಸಂಗ -ಭ್ರಾತೃ ಪ್ರೇಮ (ಪಾದುಕಾ ಪ್ರಧಾನ. ಕವಿ: ಕುಂಬಳೆ ಪಾರ್ತಿಸುಬ್ಬ ).
ಭಾವ ಪ್ರಧಾನವೂ ಆದರ್ಶ ಭ್ರಾತೃ ಪ್ರೇಮದ, ತೀವ್ರ ವೈಚಾರಿಕ ತೊಳಲಾಟದ, ರಾಮನ ನಡೆಯನ್ನು ಲೋಕಮುಖಕ್ಕೆ ಸರಿಯಾದದ್ದು ಎಂಬುದನ್ನು ಪ್ರಸ್ತುತಪಡಿಸುವ ಕಥಾಭಾಗ.
ಅದೇ ದಿನ ಸಂಜೆ 4-45 ಘಂಟೆಗೆ 'ಶಬರಿಗಿರಿ' ಕರಿಹೋಬನಹಳ್ಳಿ - ರಾಮಾಶ್ವಮೇಧ ಪ್ರಸಂಗ (ವೀರಮಣಿ ಕಾಳಗ. ಕವಿ: ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ.)
ಶಿವ ಶಕ್ತಿ ಮತ್ತು ವೈಷ್ಣವ ಶಕ್ತಿಯ ಹೆಚ್ಚುಗಾರಿಕೆಯನ್ನು ಪ್ರಬಲವಾಗಿ ಪ್ರತಿಪಾದಿಸುತ್ತಾ, ಮುಖಾಮುಖಿಯಾಗುತ್ತಾ ಸಮನ್ವಯತೆಯನ್ನು ಸಾಧಿಸುವ ಕಥಾಭಾಗ.
20-06-22 ರಂದು ಸೋಮವಾರ ಸಂಜೆ 4 -45 ಘಂಟೆಗೆ ಪುತ್ತಿಗೆ ಮಠ, ಬಸವನಗುಡಿ - ಪ್ರಸಂಗ: ಕೃಷ್ಣಸ್ತು ಭಗವಾನ್ ಸ್ವಯಂ (ಕೃಷ್ಣ ಪರಂಧಾಮ. ಕವಿ: ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ).
ಅವತಾರಗಳಲ್ಲಿ ಪೂರ್ಣಾವತಾರವಾದ, ಕೃಷ್ಣಾವತಾರವನ್ನು ಸಮಾಪ್ತಗೊಳಿಸಿ, ಯುಗಧರ್ಮಕ್ಕನುಗುಣವಾಗಿ ಕಲಿಯುಗದ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಬೇಕಿತ್ತು. ಕಾರ್ಯ ಮುಗಿದ ಮೇಲೆ ಮೂಲಸ್ಥಾನ ಸೇರಬೇಕಾದ್ದು ಕರ್ತವ್ಯವೂ ಹೌದು, ಧರ್ಮವೂ ಹೌದು ಎಂಬ ಚಿತ್ರಣದ ಕಥಾಭಾಗ.
21-06-22 ರಂದು ಮಂಗಳವಾರ ಸಂಜೆ 4 -45 ಘಂಟೆಗೆ ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ - ಪ್ರಸಂಗ: ವಿಷ್ಣು ಲೀಲೆ. (ಸುದರ್ಶನ ವಿಜಯ. ಕವಿ: ಮಧುಕುಮಾರ್ ಬೋಳೂರು).
ಅಹಂಕಾರ ಅವನತಿಯ ದಾರಿಯನ್ನು ತೋರಿಸುತ್ತದೆ ಎಂಬುದನ್ನು ಧ್ವನಿಸುವ ಕಥಾಭಾಗ.
22-06-22 ರಂದು ಬುಧವಾರ ಬೆಳಗ್ಗೆ 10.00 ಘಂಟೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ - ಪ್ರಸಂಗ: ರಾಧೇಯ (ಕರ್ಣ ಪರ್ವ. ಕವಿ: ಗೇರುಸೊಪ್ಪೆ ಶಾಂತಪ್ಪಯ್ಯ).
ಅತ್ಯಂತ ಜನಪ್ರಿಯ ಪ್ರಬಲ ಮಾತಿನ ಸ್ಪರ್ಧೆಯ, ಕರ್ಣನ ಅಂತರಂಗವನ್ನು ತೆರೆದಿಡುವ ಪ್ರಸಂಗ.
ಅದೇ ದಿನ (ಬುಧವಾರ) ಸಂಜೆ 4 -45 ಘಂಟೆಗೆ ಶ್ರೀ ಸುಬ್ರಹ್ಮಣ್ಯ ಮಠ, ಬಸವನಗುಡಿ - ಪ್ರಸಂಗ: ಮೃತ ಸಂಜೀವಿನಿ (ಕಚ ದೇವಯಾನಿ. ಕವಿ: ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ.
ವೈಚಾರಿಕ ತಾಕಲಾಟದ, ಕುಟುಂಬ ವ್ಯವಸ್ಥೆಯಲ್ಲಿ ಪ್ರೀತಿ, ಪ್ರೇಮದ ವಿವಿಧ ಮಗ್ಗುಲುಗಳಿಂದಾಗುವ ಪರಿಣಾಮವನ್ನು ಅನಾವರಣಗೊಳಿಸುವ ಸಂಕೀರ್ಣ ಕಥಾನಕ.
23-06-22 ರಂದು ಗುರುವಾರ ಬೆಳಗ್ಗೆ 10.00 ಘಂಟೆಗೆ ಸೌತ್ ಈಸ್ಟ್ ಏಶಿಯನ್ ಕಾಲೇಜ್, ಕೃಷ್ಣರಾಜಪುರಂ - ಪ್ರಸಂಗ ಗುರುದಕ್ಷಿಣೆ (ಏಕಲವ್ಯ+ದ್ರುಪದ. ಕವಿ: ಕೊರ್ಗಿ ಸೂರ್ಯನಾರಾಯಣ ಉಪಾಧ್ಯಾಯ).
ಕಲಿಕೆಗೆ ಶ್ರದ್ಧೆ ಮತ್ತು ಏಕಾಗ್ರತೆ ಮುಖ್ಯ ಎಂಬುದರೊಂದಿಗೆ ವೈಚಾರಿಕ ಸಂಘರ್ಷವನ್ನೂ ಹೊಂದಿರುವ ಪ್ರಸಂಗ ಹಾಗೂ ವಿದ್ಯೆ ವಿನಯವನ್ನು ಕೊಡಬೇಕು ಎಂಬುದನ್ನೂ ಸಾರುವ ಪ್ರಸಂಗ.
ಅದೇ ದಿನ (ಗುರುವಾರ) ಸಂಜೆ 4 -45 ಘಂಟೆಗೆ ಪಲಿಮಾರು ಮಠ, ಮಲ್ಲೇಶ್ವರ - ಪ್ರಸಂಗ: ಅನಭಿಷಿಕ್ತ ದೊರೆ ( ಗದಾಯುದ್ಧ -ಅಜ್ಞಾತ ಕವಿ).
ಛಲವೇ ನೆಚ್ಚಿದ ಸಿದ್ದಾಂತ, ಕೊನೆತನಕ ಅದನ್ನು ಬಿಡಲಾರೆ ಎನ್ನುವ ಆಶಯದೊಂದಿಗೆ, ಕುರುಕ್ಷೇತ್ರದ ಅವಲೋಕನವನ್ನೂ ಮಾಡಬಹುದಾದ ಕೌರವನ ಆತ್ಮಾವಲೋಕನದ ಕಥಾನಕ.
24-06-22 ರಂದು ಶುಕ್ರವಾರ ಸಂಜೆ 4 -45 ಘಂಟೆಗೆ ಉಚ್ಚ ನ್ಯಾಯಾಲಯ ಸಭಾಂಗಣ, ಬೆಂಗಳೂರು -ಪ್ರಸಂಗ: ಶ್ರೀಕೃಷ್ಣ ಸಂಧಾನ. ಕವಿ ದೇವಿದಾಸ.
ಅತ್ಯಂತ ಜನಪ್ರಿಯ ಪರಸ್ಪರ ವೈಚಾರಿಕ ಸಂಘರ್ಷದ ನಿರ್ಣಾಯಕವಾದ ಪರಸ್ಪರ ವೈರುಧ್ಯದ ಪಾತ್ರಗಳು ಎದುರಾಗುತ್ತಾ ಧರ್ಮ ಸಂಸ್ಥಾಪನೆಗೆ ನಾಂದಿಯನ್ನು ಹಾಕುವ ಪ್ರಸಂಗ.
25-06-22 ರಂದು ಶನಿವಾರ ಸಂಜೆ 4-45 ಘಂಟೆಗೆ ಚಿತ್ಪಾವನ ಸುವರ್ಣ ಭವನ, ರಾಜಾಜಿನಗರ - ಪ್ರಸಂಗ: ಭಕ್ತ ಸಂಗ್ರಾಮ (ರಾಮಾಂಜನೇಯ. ಕವಿ:ಕಡಂದಲೆ.ಬಿ.ರಾಮ ರಾವ್).
ಭಕ್ತಿಯ ಪರಾಕಾಷ್ಠೆಯಲ್ಲಿ ಭಕ್ತ ಮತ್ತು ದೇವರ ಸಂಘರ್ಷದ ಪ್ರಸಂಗ.
26-06-22 ರಂದು ಭಾನುವಾರ ಸಂಜೆ 4 -45 ಘಂಟೆಗೆ ಗಾನ ಸೌರಭ ಕಲಾ ಶಾಲೆ, ವಿಜಯನಗರ - ಪ್ರಸಂಗ: ವೀರ ವೈಷ್ಣವ (ಸುಧನ್ವ ಮೋಕ್ಷ. ಕವಿ: ಮೂಲಿಕೆ ರಾಮಕೃಷ್ಣಯ್ಯ).
ಪರಮ ಭಕ್ತರ ಪರಸ್ಪರ ಸಂಘರ್ಷದ ವೈಚಾರಿಕ ನೆಲೆಘಟ್ಟಿನ ಪ್ರಸಂಗ.
ಕಲಾವಿದರ ವಿವರ ಸಹಿತವಾದ ಆಮಂತ್ರಣ ಪತ್ರಿಕೆ ಜೊತೆಯಲ್ಲಿದೆ.
ರಾಜಧಾನಿಯ ಯಕ್ಷಾಸಕ್ತರೆಲ್ಲರೂ ಬನ್ನಿ, ಪ್ರೋತ್ಸಾಹಿಸಿ.
✍️ ಕುಮಾರ ಸುಬ್ರಹ್ಮಣ್ಯ ಮುಳಿಯಾಲ