
ಬ್ಯಾಂಕ್ ಅಧಿಕಾರಿಯಾಗಿದ್ದುಕೊಂಡು, ಯಕ್ಷಗಾನದ ಮದ್ದಳೆವಾದನದಲ್ಲಿ ಪ್ರಖ್ಯಾತಿ ಗಳಿಸಿರುವ ಕೃಷ್ಣ ಪ್ರಕಾಶ್ ಉಳಿತ್ತಾಯರು ತಮ್ಮ 'ಸುಘಾತ' ಸರಣಿಯಲ್ಲಿ ಹಿರಿಯ ಮದ್ದಳೆವಾದಕ, ಗುರು ಹರಿನಾರಾಯಣ ಬೈಪಾಡಿತ್ತಾಯರ ನುಡಿಸಾಣಿಕೆಯ ಮೇಲೆ ಬೆಳಕು ಚೆಲ್ಲಿದ್ದಾರೆ.
ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳದ ಆಚಾರ್ಯ ಸ್ಥಾನದಲ್ಲಿ ಇದ್ದು ಮುಂದಿನ ತಲೆಮಾರಿಗೆ ಕಲೆಯನ್ನು ದಾಟಿಸುವ ಮಹತ್ವದ ಕಾರ್ಯವನ್ನು ಮಾಡುತ್ತಿದ್ದಾರೆ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯರು. ದಕ್ಷಿಣಕನ್ನಡ ಜಿಲ್ಲೆ ಕಂಡ ಬಹು ದೊಡ್ಡ ಯಕ್ಷಗಾನ ಗುರುಗಳಿವರು. ಮೂರು ತಲೆಮಾರಿನ ತೆಂಕುತಿಟ್ಟು ಯಕ್ಷಗಾನದ ಇತಿ ವೃತ್ತಾಂತಕ್ಕೆ ಸಾಕ್ಷಿಯಾದವರು.
ದಿ.ಬಳ್ಪ ನಾರಾಯಣ ಅಮ್ಮಣ್ಣಾಯರ (ಭಾಗವತರಾದ ಶ್ರೀ ದಿನೇಶ ಅಮ್ಮಣ್ಣಾಯರ ತಂದೆ) ಆದೇಶದಂತೆ ಯಕ್ಷಗಾನವೆಂದರೆ ಅತೀ ಪವಿತ್ರವಾದ ದೇವತಾಕಾರ್ಯವೆಂದು ಭಾವಿಸುತ್ತಿದ್ದ ಕಡಬ ಸಮೀಪದ ದಿ.ಪುರುಷಯ್ಯ ಆಚಾರ್ಯರ ಬಳಿ ಪ್ರಾಥಮಿಕ ಮದ್ದಳೆವಾದನ ಕಲಿತರು. ಮುಂದೆ ದಿ.ಕಾಂಚನ ವಿ.ಮೂರ್ತಿಯವರ (ಕೆ.ವಿ.ಮೂರ್ತಿ) ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೃದಂಗ ವಾದನವನ್ನು ಅಭ್ಯಸಿಸಿದರು. ಮಾತ್ರವಲ್ಲದೆ ಸಂಗೀತ ಕಛೇರಿಗೂ ಮೃದಂಗವಾದನವನ್ನು ಮಾಡಿದ್ದಾರೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಮುಂದೆ ಕುಂಡಾವು ಮೇಳದ ತಿರುಗಾಟದಲ್ಲಿ ರಂಗ ನಡೆಗಳ ಅಭ್ಯಾಸ ಪಡೆದದ್ದು ಮದ್ದಳೆಗಾರರಾದ ಕಾಸರಗೋಡು ವೆಂಕಟರಮಣನವರಿಂದ. ಆಗಾಗ ಮೇಳಕ್ಕೆ ಬದಲಿ ಕಲಾವಿದರಾಗಿ ಬರುತ್ತಿದ್ದ ಚೆಂಡೆ-ಮದ್ದಳೆ ವಾದನದ ದಂತಕತೆಯಾದ ದಿ.ಕುದುರೆಕೋಡ್ಲು ರಾಮ ಭಟ್ಟರ(ಹಿರಿಯ) ಮಾರ್ಗದರ್ಶನ, ಮಾತ್ರವಲ್ಲದೆ ರಾಮ ಭಟ್ಟರ ಸೌಂದರ್ಯಾತಿಶಯದ ವಾದನ ಕೌಶಲವನ್ನೂ ಕುತೂಹಲ ದೃಷ್ಟಿಯಿಂದ ಕಾಣುವ-ಅನುಭವಿಸುವ ಅವಕಾಶ ಪಡೆದರು. ವಿದ್ವಾನ್ ದಿ.ದಾಮೋದರ ಮಂಡೆಚ್ಚರೊಡನೆ ಅನುಭವ, ದಿ.ಅಗರಿ ಶ್ರೀನಿವಾಸ ಭಾಗವತರೊಡಗಿನ ಅನುಭವ, ದಿ.ಕೆಮ್ಮಣ್ಣು ನಾರ್ಣಪ್ಪನವರೊಡಗಿನ ಒಡನಾಟ, ದಿ.ನೆಡ್ಲೆ ನರಸಿಂಹ ಭಟ್ಟರಿಂದ ದೊರಕಿದ ಮಾರ್ಗದರ್ಶನ ಇವೆಲ್ಲವೂ ಶ್ರೀ ಹರಿನಾರಾಯಣ ಬೈಪಾಡಿತ್ತಾಯರು ಸಮರ್ಥ ಮದ್ದಳೆಗಾರರಾಗಿ ರೂಪುಗೊಳ್ಳಲು ಕಾರಣವಾಯಿತು. ಧರ್ಮಸ್ಥಳ ಮೇಳದಲ್ಲಿರುವಾಗ ದಿ.ನೆಡ್ಲೆ ನರಸಿಂಹ ಭಟ್ಟರಿಂದ ಚೆಂಡೆವಾದನದ ಸೂಕ್ಷ್ಮಗಳನ್ನು ಮನದಟ್ಟು ಮಾಡಿಕೊಂಡಿದ್ದರು. ಮೇಳದಲ್ಲಿ ಹಗಲು ಹೊತ್ತು ತುಸು ವಿಶ್ರಾಂತಿಯಾದೊಡನೆ ಕಲಿಕೆಯ ಅವಧಿಯಾಗಿತ್ತು. ಶ್ರದ್ಧೆಯಿಂದ ಕಲಿಸಿಕೊಡುತ್ತಿದ್ದರಂತೆ ನೆಡ್ಲೆಯವರು.
ಇಷ್ಟು ಹಿನ್ನೆಲೆ ಇವರ ವಿದ್ಯೆಯ ಮೇಲ್ಮೆಯನ್ನು ನೋಡಲು ಬೇಕು. ಇವರ ಮದ್ದಳೆವಾದನ ಅತ್ಯಂತ ವ್ಯವಸ್ಥಿತದ ಕ್ರಮ. ಯಾವುದೇ ರೀತಿಯ ಗೊಂದಲಗಳಿಲ್ಲದೆ ಸರಳವಾಗಿ ಚಲಿಸುವ ಗಂಭೀರ ನಡಿಗೆಯಂತೆ. ಪ್ರತಿ ಎರಡಾವರ್ತ ಅಥವಾ ನಾಲ್ಕನೆಯ ಆವರ್ತಕ್ಕೊಮ್ಮೆಯಂತೆ ಕೊಡಬೇಕಾದ ಚಾಪು ಅಥವಾ ಘಾತವನ್ನು ತೋರಿಸುವ ಕ್ರಮವನ್ನು ಮದ್ದಳೆವಾದನದಲ್ಲಿ ಕಾಣಿಸುತ್ತಾ ಸಾಗುವ ಕ್ರಮ ಕಿರಿಯರಿಗೆಲ್ಲ ಪಥ ಬೋಧಕ. ಮೃದಂಗಾಭ್ಯಾಸವನ್ನೂ ಮಾಡಿರುವುದರಿಂದ ಒಂದಾವರ್ತದಲ್ಲಿ ಮದ್ದಳೆಯ ಸಂಪ್ರದಾಯದ ಪಾಟಾಕ್ಷರಗಳನ್ನು ನುಡಿಸಿ ಎರಡನೆಯ ಆವರ್ತಕ್ಕಾಗುವಾಗ ಪದ್ಯದ ಓಘವನ್ನು ಗಮನಿಸಿ ಅದಕ್ಕೊಪ್ಪುವ ಮೃದಂಗದ ಸಾಹಿತ್ಯಗಳನ್ನು ಬಳಕೆ ಮಾಡುತ್ತಾರೆ. ಮತ್ತೆ ಪುನಃ ಮದ್ದಳೆಯ ಪಾಟಾಕ್ಷರಗಳಿಂದಲೇ ಆವರ್ತಾಂತ್ಯ. ಎಂದಿಗೂ ಮದ್ದಳೆಯ ಆವರಣವನ್ನು ಮೀರದೆ ವಾದನ ಸಾಗುತ್ತಿರುತ್ತದೆ.
ಹಿಮ್ಮೇಳ ಗುರುಗಳಾಗಿ ಅವರು ಬಹಳ ಮಹತ್ತನ್ನು ಸಾಧಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಕಟೀಲು, ಮೂಡುಬಿದಿರೆ, ಮಂಗಳೂರು, ಕಾರ್ಕಳ ಮುಂತಾದೆಡೆಗಳಲ್ಲಿ ಹಿಮ್ಮೇಳ ಗುರುಗಳಾಗಿ ಸೇವೆ ಸಲ್ಲಿಸಿದ ಬೈಪಾಡಿತ್ತಾಯ ದಂಪತಿಗಳು ಅನೇಕ ಪ್ರಖ್ಯಾತ ಶಿಷ್ಯ ಗಡಣವನ್ನು ಹೊಂದಿದ್ದಾರೆ. ಅಧ್ಯಾಪನವನ್ನು ಇಂದಿಗೂ ಮುಂದುವರಿಸುತ್ತಿದ್ದಾರೆ. ಶಿಷ್ಯ ವಾತ್ಸಲ್ಯ, ಕಿರಿಯ ಕಲಾವಿದರ ಮೇಲಿನ ಪ್ರೀತಿ ಇವೆಲ್ಲವೂ ಇವರನ್ನು ಮುಖ್ತರನ್ನಾಗಿಸುತ್ತದೆ. ತಮ್ಮ ಮಗನಾದ ಶ್ರೀ ಅವಿನಾಶ್ (ಬೆಂಗಳೂರಿನಲ್ಲಿ ಪತ್ರಕರ್ತರಾಗಿ ವೃತ್ತಿ ನಿರತರು) ಕೂಡ ಉತ್ತಮ ಹಿಮ್ಮೇಳ ವಾದಕರಾಗಿ ಪ್ರವರ್ಧಮಾನಕ್ಕೆ ಬಂದಿದ್ದಾರೆ.
ದಿ.ಕುದುರೆಕೋಡ್ಲು ರಾಮಭಟ್ಟರ ನೆನಪು
ಕುಂಡಾವು ಮೇಳದಲ್ಲಿದ್ದಾಗ ಬರುತ್ತಿದ್ದ ದಿ. ಕುದುರೆಕೋಡ್ಲು ರಾಮಭಟ್ಟರ ಚೆಂಡೆ-ಮದ್ದಳೆ ವಾದನದ ಕುರಿತಾಗಿ ಬೈಪಾಡಿತ್ತಾಯರು ಹೇಳುವ ಮಾತು ದಾಖಲಾರ್ಹ. ರಾಮ ಭಟ್ಟರ ಚೆಂಡೆವಾದನ ಅತ್ಯಂತ ಸೌಮ್ಯವಾಗಿ ಇತ್ತು. ಪದ ಹಾಡುವಾಗ ಮೆಲ್ಲನೆ ನುಡಿಸುತ್ತಿದ್ದರಂತೆ. ಮದ್ದಳೆ ನುಡಿಸುವಾಗ ಚಾಪು ಅತ್ಯಂತ ಶುದ್ದವಾಗಿರುತ್ತಿತ್ತಂತೆ ಮತ್ತು ಮೆಲ್ನುಡಿಯುತ್ತಿತ್ತು. ಅಂತಹಾ ಚಾಪು ಅನ್ಯತ್ರ ಅಲಭ್ಯ. ನೀಳವಾದ ಕೈಬೆರಳುಗಳು. ಅವು ಹೊರಡಿಸುವ ನಾದ ಶುದ್ಧತೆ ಇವೆಲ್ಲವನ್ನೂ ಅಚ್ಚರಿಯಿಂದ ನೋಡಿದ್ದರು ಬೈಪಾಡಿತ್ತಾಯರು. ಮದ್ದಳೆಯ ಎಡ ಭಾಗದ ನುಡಿತಗಳು ಬಹಳ ಸೌಂದರ್ಯದಿಂದ ಕೂಡಿತ್ತೆಂದು ಬೈಪಾಡಿತ್ತಾಯರೆನ್ನುತ್ತಾರೆ. ಧಿಂ ಕಾರ ನುಡಿಸುವಾಗ ಎಡ ಬೆರಳುಗಳಲ್ಲಿ ಕೇವಲ ಮೂರು ಬೆರಳುಗಳನ್ನು ಮಾತ್ರ ಉಪಯೋಗಿಸುತ್ತಿದ್ದರು (ಮಧ್ಯ, ಅನಾಮಿಕ, ಕಿರು). ಗುಮ್ಕಿ ನುಡಿಸುವಾಗಲೂ ಸಂಪ್ರದಾಯದ ಎಡಕೈಯ ಬೆರಳುಗಳನ್ನು ಅರ್ಧಚಂದ್ರಾಕೃತಿಯಲ್ಲಿ ಬಾಗಿಸಿ ನುಡಿಸುತ್ತಾ ಇದ್ದುದಲ್ಲ. ಬದಲಾಗಿ, ಮೂರು ಬೆರಳುಗಳನ್ನು ನೇರವಾಗಿರಿಸಿಯೇ ಮದ್ದಳೆಯ ಜೀವ ಕವಳ (ಚರ್ಮ) ಕ್ಕೆ ಜಾರಿಸಿ ಜಾರಿಸಿ ಗುsssssಮ್ ಎಂಬ ನಾದವನ್ನು ಹೊರಡಿಸುತ್ತಿದ್ದರಂತೆ. ಇದು ತಾಂತ್ರಿಕವಾಗಿಯೂ ಸಿದ್ಧಿಸಿದರೆ ಅತ್ಯಂತ ಸುಲಭ ಮಾತ್ರವಲ್ಲ ಬೇರೆ ಬೇರೆ ವಾದನ ವ್ಯಂಜನವನ್ನು ಪೋಣಿಸುವುದಕ್ಕೂ ಅನುಕೂಲಕರ.
ಮಡದಿ ಶ್ರೀಮತಿ ಲೀಲಾವತೀ ಬೈಪಾಡಿತ್ತಾಯರಿಗೆ ಗುರುವಾಗಿಯೂ ಯಕ್ಷಗಾನ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟಿದ್ದಾರೆ. ಮದ್ದಳೆ- ಭಾಗವತಿಕೆ ಎಂಬುದು ಗಂಡ ಹೆಂಡತಿಯಂತೆ ಜತೆಯ ದಾಂಪತ್ಯ. ಇವರದ್ದು ನಿಜಾರ್ಥದ ಯಕ್ಷ- ದಾಂಪತ್ಯ. ಬೈಪಾಡಿತ್ತಾಯರ ಮದ್ದಳೆ ವಾದನ, ಲೀಲಮ್ಮನ ಗಾನದ ಪ್ರಾಣ. ಲೀಲಮ್ಮನ ಗಾನ ಬೈಪಾಡಿತ್ತಾಯರ ವಾದನದ ಆತ್ಮ. ಆತ್ಮದ ಸುತ್ತ ಪ್ರಾಣದ ಸುತ್ತಾಟ. ಹೀಗೆ ಬೆಳೆದಿದೆ ದಾಂಪತ್ಯ. ಶಿವಾನಂದ ಲಹರಿಯ ಮಾತಿನಂತೆ ಶಿವ-ಪಾರ್ವತಿಯರು ಪರಸ್ಪರರ ತಪಸ್ಸಿನ ಫಲಸ್ವರೂಪರಂತೆ. ಅಂತೆಯೇ ಲೀಲಾವತೀ - ಹರಿನಾರಾಯಣ ಬೈಪಾಡಿತ್ತಾಯ ದಂಪತಿಗಳು ಕೂಡ.
ಜಗದ ಮಾತಾಪಿತರಾದ ಶ್ರತಿ-ಲಯ ಸ್ವರೂಪರೂ ಆದ ಶಿವ-ಶಕ್ತಿಯರ ಕಟಾಕ್ಷ ಅವರ ಮೇಲಿರಲಿ.
-ಕೃಷ್ಣಪ್ರಕಾಶ ಉಳಿತ್ತಾಯ
ಈಶಾವಾಸ್ಯ
ಸದಾಶಿವ ದೇವಸ್ಥಾನದ ಬಳಿ
ಪೆರ್ಮಂಕಿ, ಉಳಾಯಿಬೆಟ್ಟು ಗ್ರಾಮ
ಮಂಗಳೂರು