ಡಾ.ರಾಘವ ನಂಬಿಯಾರ್: ಕರ್ಕಿ ಪಿ.ವಿ.ಹಾಸ್ಯಗಾರ ಪ್ರಶಸ್ತಿ ಪುರಸ್ಕೃತ ಬಹುಶ್ರುತ ವಿದ್ವಾಂಸ, ಯಕ್ಷಗಾನ ಸಂಶೋಧಕ


ಯಕ್ಷಗಾನಕ್ಕಾಗಿ, ಕಲೆಯ ಪಾರಂಪರಿಕತೆಯ ಉಳಿವಿಗಾಗಿ ಪ್ರಾಮಾಣಿಕ ಪ್ರಯತ್ನ, ನಿರ್ದೇಶನಗಳನ್ನು ಮಾಡುವ ಇಂದಿನ ಕೆಲವು ಮಹನೀಯರ ಸಾಲಿನಲ್ಲಿ ಡಾ.ಕೆ.ಎಂ. ರಾಘವ ನಂಬಿಯಾರರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ವೃತ್ತಿಯಲ್ಲಿ ಪತ್ರಕರ್ತರಾಗಿ, ಪ್ರವೃತ್ತಿಯಲ್ಲಿ ಉಪನ್ಯಾಸಕ, ರಂಗಕರ್ಮಿ, ಲೇಖಕ, ಯಕ್ಷಗಾನದ ಅರ್ಥಧಾರಿ, ವೇಷಧಾರಿ, ಹಿಮ್ಮೇಳವಾದಕ, ಭಾಗವತ, ಪ್ರಸಂಗಕರ್ತ, ಭಾಷಣಕಾರ, ವಿಮರ್ಶಕ, ನಿರ್ದೇಶಕ, ಸಂಯೋಜಕ, ಕಾರ್ಯಕ್ರಮ ಸಂಘಟಕ- ಹೀಗೆ ವಿವಿಧ ನೆಲೆಗಳಿಂದ ಯಕ್ಷಗಾನ ರಂಗಭೂಮಿಯೊಂದಿಗೆ ಕಳೆದ 60 ವರ್ಷಗಳಿಂದ ನಿಕಟವಾದ ಬಾಂಧವ್ಯವಿರಿಸಿಕೊಂಡಿರುವ ಡಾ. ಕೆ. ಎಂ. ರಾಘವ ನಂಬಿಯಾರರು ಯಕ್ಷಗಾನ ಕ್ಷೇತ್ರಕ್ಕೆ ಹತ್ತು ಹಲವು ಕೊಡುಗೆಗಳನ್ನು ನೀಡಿದವರು. ಯಕ್ಷಗಾನದ ಮಾಹಿತಿಯ ಕಣಜ ಅವರು.

07 ಡಿಸೆಂಬರ್ 1946 ರಲ್ಲಿ ಜನಿಸಿದ ಶ್ರೀ ನಂಬಿಯಾರರ ತಂದೆ ಶ್ರೀಕಂಠ ಪಂಡಿತರು, ತಾಯಿ ಪಾರ್ವತಿ ಅಮ್ಮ. ಕೈಹಿಡಿದ ಮಡದಿ ವತ್ಸಲಾ, ಪುತ್ರ ಮನಮೋಹನ. ರಾಘವರು ಬಿಎಸ್‌ಸಿ ಪದವೀಧರರಾದರೂ, ಸಂಸ್ಕೃತ ಎಂ.ಎ. ಪೂರೈಸಿ, ಯಕ್ಷಗಾನ ಹಿಮ್ಮೇಳ ಎಂಬ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಗಳಿಸಿದವರು. 30 ವರ್ಷಗಳ ದೀರ್ಘಾವಧಿಗೆ ಉದಯವಾಣಿ ಪತ್ರಿಕೆಯ ಸಂಪಾದಕೀಯ ವಿಭಾಗದಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿ ಅನುಭವ ಹೊಂದಿರುವ ನಂಬಿಯಾರರು, ರಾನಂ ಲೇಖನಾಮದಿಂದ ಅನೇಕ ಸೃಜನಶೀಲ ಬರಹಗಳ ಮೂಲಕ ಪತ್ರಿಕೋದ್ಯಮಕ್ಕೆ ವಿಶಿಷ್ಟ ಕೊಡುಗೆಗಳನ್ನು ನೀಡಿದವರು. ಸಂಸ್ಕೃತ ಅಧ್ಯಾಪಕರಾಗಿ ಕೆಲಕಾಲ ಸೇವೆ ಸಲ್ಲಿಸಿರುವ ನಂಬಿಯಾರರು ಕನ್ನಡ, ಸಂಸ್ಕೃತ, ಮಲಯಾಳಂ ಮತ್ತು ಆಂಗ್ಲ ಭಾಷೆಗಳಲ್ಲಿ ಅಪಾರವಾದ ಹಿಡಿತವನ್ನು ಹೊಂದಿದ್ದಾರೆ.

ಪ್ರಸಂಗಕರ್ತರಾಗಿ ಡಾ. ನಂಬಿಯಾರರು ಚಕ್ರೇಶ್ವರ ಪರೀಕ್ಷಿತ, ಉತ್ತಮ ಸೌದಾಮಿನಿ, ಅಮರೇಂದ್ರ ಪದವಿಜಯಿ, ವಜ್ರಧರ ವಿಲಾಸ, ರಘುವಂಶ ಇತ್ಯಾದಿ ಯಕ್ಷಗಾನ ಪ್ರಸಂಗಗಳನ್ನೂ ರಚಿಸಿದ್ದಾರೆ. ಓರ್ವ ಚಿಂತನಶೀಲ, ಪ್ರಯೋಗಶೀಲ ರಂಗಕರ್ಮಿಯಾದ ನಂಬಿಯಾರರು ಯಕ್ಷಗಾನದ ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ಆಸಕ್ತಿ ತಳೆದು, ತಾಳಮದ್ದಳೆಯಲ್ಲಿ ಅರ್ಥಗಾರಿಕೆ, ಹಾಡುಗಾರಿಕೆ, ಹಿಮ್ಮೇಳವಾದನ, ವೇಷಗಾರಿಕೆ ಇತ್ಯಾದಿಗಳನ್ನು ಕಲಿತುಕೊಂಡು ಯಕ್ಷರಂಗದ ಸಮಗ್ರ ಅಧ್ಯಯನವನ್ನು ಮಾಡಿ ಪ್ರಯೋಗಗಳನ್ನೂ ಮಾಡಿದವರು. ಡಾ ನಂಬಿಯಾರರು ಸಂಪನ್ಮೂಲ ವ್ಯಕ್ತಿಯಾಗಿ 1980ರ ದಶಕದಿಂದ ವಿವಿಧ ಯಕ್ಷಗಾನ ಕಮ್ಮಟಗಳಲ್ಲಿ, ಆಕಾಶವಾಣಿಯಲ್ಲಿ ಪ್ರಬಂಧವಾಚನ, ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. 'ಯಕ್ಷಕೌಮುದಿ, ಉಡುಪಿ' ತಂಡವನ್ನು ಕಟ್ಟಿ ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ಪ್ರಾಯೋಗಿಕ ಯಕ್ಷಗಾನ ಆಟದ ಪ್ರದರ್ಶನಗಳನ್ನು ನಿರ್ದೇಶಿಸಿದ್ದಾರೆ. ತೆಂಕು ತಿಟ್ಟಿನಲ್ಲಿ ಮುಖವರ್ಣಿಕೆ, ವೇಷರಚನೆಯಲ್ಲಿ ಕಳೆದುಹೋದ ರೂಪವಿಶೇಷಗಳ ಪುನಾರಚನೆ ಮಾಡಿದ್ದಾರೆ. ಹಸ್ತಾಭಿನಯ ಶಿಬಿರ, ಯಕ್ಷಗಾನ-ಭರತನಾಟ್ಯ ತೌಲನಿಕ ಪ್ರಾತ್ಯಕ್ಷಿಕೆ, ದೀವಟಿಗೆ ಬೆಳಕಿನಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನ, ತೆಂಕುತಿಟ್ಟಿನಲ್ಲಿ ಹಿಮ್ಮೇಳಕ್ಕೆ ಕೊಳಲಿನ ಸೇರ್ಪಡೆ ಪ್ರಯೋಗ, ತೆಂಕುತಿಟ್ಟಿನ ಆಟದಲ್ಲಿ ಹಳೆಯ ರಂಗತಂತ್ರ, ಹಿಮ್ಮೇಳದವರ ನಿಲುವುಗಳ ಪುನರುಜ್ಜೀವನ ಇತ್ಯಾದಿಗಳಿಂದ ಕಲಾಭಿಮಾನಿಗಳ ಗಮನ ಸೆಳೆದಿದ್ದಾರೆ.

ಮದ್ದಳೆಯ ಮಾಯಾಲೋಕ, ತಿಳಿನೋಟ, ಚಿನ್ನದ ತಾಳ, ಮುಂದಲೆ, ಯಕ್ಷಸೇಚನ, ಆಶುವೈಖರಿ, ವಿಲೋಕನ, ದೀವಟಿಗೆ, ಹಿಮ್ಮೇಳ, ಯಾಜಿ ಭಾಗವತರು, ಹಾಡು-ಆಡು ಕಾವ್ಯ, ರಂಗಸ್ಥಳದ ಬೆಳಕು ಕೋಳ್ಯೂರು ರಾಮಚಂದ್ರ ರಾವ್, ದ್ರಾವಿಡ ನಾಡು ನುಡಿ ಮುಂತಾದ ಕೃತಿಗಳನ್ನು, ನೂರಾರು ಬಿಡಿಬರಹಗಳನ್ನು ರಚಿಸಿರುವ ಡಾ. ನಂಬಿಯಾರರು ವಸ್ತುನಿಷ್ಠರು. ಅವರಿಗೆ ಒಲಿದು ಬಂದ ಪ್ರಶಸ್ತಿ, ಸಂಮಾನಗಳು ಅನೇಕ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಆಕಾಡೆಮಿಯ ಡಾ. ಜೀಶಂಪ ಪ್ರಶಸ್ತಿ ಮತ್ತು ಪುಸ್ತಕ ಪ್ರಶಸ್ತಿ, ಸೀತಾನದಿ ಪ್ರಶಸ್ತಿ, ಕೆರೆಮನೆ ಅಮೃತೋತ್ಸವ ಸಂಮಾನ, ವಿಂಶಸತಿತಮ ವಿದ್ವತ್ ಪ್ರಶಸ್ತಿ, ಸದಾನಂದ ಪ್ರಶಸ್ತಿ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ, ಕಟೀಲು ಸದಾನಂದ ಆಸ್ರಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ, ಸಮ್ಮಾನಗಳು ಡಾ. ನಂಬಿಯಾರರ ಮುಡಿಗೇರಿವೆ.

ತೆಂಕು ಮತ್ತು ನಡು ಬಡಗು ತಿಟ್ಟುಗಳಲ್ಲಿ ಆಳವಾದ ಅಧ್ಯಯನ ಮತ್ತು ಸಂಶೋಧನೆ ಮಾಡಿರುವ ರಾಘವ ನಂಬಿಯಾರರು ತಮ್ಮ ಇಳಿವಯಸ್ಸಿನಲ್ಲಿ ಉತ್ತರ ಕನ್ನಡದ ಸಭಾಹಿತ ಮಟ್ಟಿನ (ಬಡಾಬಡಗು) ಅಧ್ಯಯನ ಮತ್ತು ದಾಖಲೀಕರಣದಲ್ಲಿ ತೊಡಗಿದ್ದು, ಮೂರೂ ತಿಟ್ಟುಗಳಲ್ಲಿ ಅಧ್ಯಯನ ನಡೆಸಿದ ಏಕೈಕ ವಿದ್ವಾಂಸ ಎನ್ನುವ ನೆಗಳ್ತೆಗೆ ಪಾತ್ರರಾಗಿದ್ದಾರೆ. ವ್ಯಕ್ತಿಯಾಗಿ ಸರಳ, ನಿಗರ್ವಿ ಮತ್ತು ಸೌಮ್ಯ ಸ್ವಭಾವದ ನಂಬಿಯಾರರು ತಾವು ನಂಬಿರುವ ತತ್ವಗಳ, ಮೌಲ್ಯಗಳ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವವರಲ್ಲ. ಸರಸ್ವತಿಯ ವರಪುತ್ರ, ಮಹಾನ್ ಸಾಧಕ ಡಾ. ನಂಬಿಯಾರರಿಗೆ ಕರ್ಕಿ ಮೇಳದ ಶ್ರೇಷ್ಠ ಕಲಾವಿದ ಮತ್ತು ತಮ್ಮ ಪರಂಪರೆಗೆ ನಿಷ್ಠರಾಗಿದ್ದ ದಿ.ಪಿ.ವಿ. ಹಾಸ್ಯಗಾರರ ಸ್ಮರಣಾರ್ಥ ನೀಡುವ ಈ ವರ್ಷ (2022) ಪ್ರಶಸ್ತಿ ಒಲಿದು ಬಂದಿದೆ.

(ಮಾಹಿತಿ ಕೃಪೆ: ಕರ್ಕಿ ಹಾಸ್ಯಗಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ)


ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು