ಯಕ್ಷಗಾನ ವಿದ್ವಾಂಸ ಡಾ.ರಾಘವ ನಂಬಿಯಾರ್‌ಗೆ ಪಿ.ವಿ. ಹಾಸ್ಯಗಾರ ಪ್ರಶಸ್ತಿ, ಡಿ.31ರಂದು ಪ್ರದಾನ

ಕುಮಟಾ (ಉತ್ತರ ಕನ್ನಡ ಜಿಲ್ಲೆ): ಕುಮಟಾ ಯಕ್ಷಗಾನ ಸಂಶೋಧನಾ ಕೇಂದ್ರ (ರಿ) ವತಿಯಿಂದ ನೀಡುವ 2022 ನೇ ಸಾಲಿನ ದಿವಂಗತ ಕರ್ಕಿ ಪಿ.ವಿ.ಹಾಸ್ಯಗಾರ ಪ್ರಶಸ್ತಿಗೆ ಯಕ್ಷಗಾನದ ಹಿರಿಯ ವಿದ್ವಾಂಸ, ಸಂಶೋಧಕ ಹಾಗೂ ಕಲಾವಿದ ಉಡುಪಿಯ ಡಾ.ಕೆ.ಎಂ.ರಾಘವ ನಂಬಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು ₹50,001 ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಡಿ.31ರಂದು ಮಧ್ಯಾಹ್ನ 4 ಗಂಟೆಗೆ ಹೊನ್ನಾವರ ತಾಲ್ಲೂಕಿನ ಕರ್ಕಿ ಹವ್ಯಕ ಸಭಾಭವನದಲ್ಲಿ ನಡೆಯುವ ಪಿ.ವಿ. ಹಾಸ್ಯಗಾರ ಸಂಸ್ಮರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ, ಸಂಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಬಲಿಪ ನಾರಾಯಣ ಭಾಗವತ ವಿರಚಿತ ಪ್ರಸಂಗ ಆಧಾರಿತ 'ನರಕಾಸುರ ವಧೆ ಮತ್ತು ಗರುಡ ಗರ್ವಭಂಗ' ಎಂಬ ಯಕ್ಷಗಾನ ಪ್ರದರ್ಶನಗಳೂ ಇದೆ.

ಇದೇ ಸಂದರ್ಭದಲ್ಲಿ, ಕಡತೋಕ ಕೃಷ್ಣ ಭಾಗವತ, ಪಿ.ವಿ.ಹಾಸ್ಯಗಾರ, ಧರ್ಮಶಾಲಾ ಮಹಾಬಲೇಶ್ವರ ಭಟ್ ಸಂಸ್ಮರಣಾ ವೇದಿಕೆ, ಹೆಬ್ಬೇಕೇರಿ, ಕಡತೋಕ ಇದರ ವತಿಯಿಂದ ಹಿರಿಯ ಕಲಾವಿದರಾದ ಕವಾಳೆ ಗಣಪತಿ ಭಾಗವತ, ಶ್ರೀಧರ ಹೆಗಡೆ ನಕ್ಷೆ ಹಾಗೂ ಹಣಜಿಬೈಲ್ ಪ್ರಭಾಕರ ಹೆಗಡೆ ಅವರನ್ನು ಸನ್ಮಾನಿಸಲಾಗುತ್ತದೆ.


ಯಕ್ಷರಂಗ ಪತ್ರಿಕೆಯ ಸಂಪಾದಕ ಕಡತೋಕಾ ಕೃಷ್ಣ ಭಾಗವತ ಹಾಗೂ ಹೆಬ್ಳೆಕೇರಿ ಪಿ.ವಿ. ಹಾಸ್ಯಗಾರ ಸಂಸ್ಮರಣಾ ವೇದಿಕೆ, ಹಳದಿಪುರದ ಯಕ್ಷರಂಗ ಪತ್ರಿಕಾ ಬಳಗ, ಬೆಂಗಳೂರಿನ ಸಿರಿಕಲಾ ಮೇಳ ಹಾಗೂ ಕರ್ಕಿಯ ಪಿ.ವಿ.ಹಾಸ್ಯಗಾರ ಕುಟುಂಬ ಸದಸ್ಯರ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದೆ.

ಬೆಂಗಳೂರಿನ ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ.ನಿರಂಜನ ವಾನಳ್ಳಿ, ಬರಹಗಾರ ಡಾ. ಪ್ರಕಾಶ ಭಟ್ಟ, ಹಿರಿಯರಾದ ಡಾ.ಜಿ.ಎಲ್. ಹೆಗಡೆ, ಡಾ.ಜಿ.ಕೆ. ಹೆಗಡೆ ಹರಿಕೇರಿ, ಕಡತೋಕಾ ಗೋಪಾಲಕೃಷ್ಣ ಭಟ್ಟ ಪಾಲ್ಗೊಳ್ಳಲಿದ್ದಾರೆ ಎಂದು ಯಕ್ಷಗಾನ ಸಂಶೋಧನಾ ಕೇಂದ್ರದ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು