ರಂಗಸ್ಥಳದಲ್ಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ, ಪ್ರಸಂಗಕರ್ತ ಗುರುವಪ್ಪ ಬಾಯಾರು

ಬದಿಯಲ್ಲಿ ನಿಂತಿದ್ದ ಶಿಶುಪಾಲ ಪಾತ್ರಧಾರಿ ಗುರುವಪ್ಪ ಬಾಯಾರು ರಂಗಸ್ಥಳದಲ್ಲೇ ಕುಸಿದ ದೃಶ್ಯ. ರಂಗದಲ್ಲಿದ್ದ ಇತರ ಕಲಾವಿದರು ಆಘಾತಗೊಂಡು ಅತ್ತ ಧಾವಿಸಿದ ದೃಶ್ಯ. (ವಿಡಿಯೊ ಕೆಳಗಿದೆ).

ಕಟೀಲು: ಕಟೀಲು ನಾಲ್ಕನೇ ಮೇಳದ ಹಿರಿಯ, ಜನಪ್ರಿಯ, ಅನುಭವಿ ಯಕ್ಷಗಾನ ಕಲಾವಿದ, ಪ್ರಸಂಗಕರ್ತ ಗುರುವಪ್ಪ ಬಾಯಾರು (61) ಅವರು ಗುರುವಾರ ರಾತ್ರಿ ರಂಗಸ್ಥಳದಲ್ಲಿರುವಾಗಲೇ ಹೃದಯಾಘಾತದಿಂದ ಕಲಾಲೀನರಾದರು.

ಪ್ರಸಿದ್ಧ ಪ್ರತಿನಾಯಕ ಪಾತ್ರಧಾರಿಯಾಗಿ ಜನಾನುರಾಗಿಯಾಗಿದ್ದ ಗುರುವಪ್ಪ ಬಾಯಾರು, ಗುರುವಾರ ರಾತ್ರಿ ಕಟೀಲು ಸರಸ್ವತಿ ಸದನದಲ್ಲಿ ನಡೆಯುತ್ತಿದ್ದ ಯಕ್ಷಗಾನ ಸೇವೆಯಾಟ ಸಂದರ್ಭ ಹೃದಯಾಘಾತಕ್ಕೀಡಾದರು. ತ್ರಿಜನ್ಮ ಮೋಕ್ಷ ಪ್ರಸಂಗದ ಕೊನೆಯ ಭಾಗ 'ಅಗ್ರಪೂಜೆ' ಪ್ರದರ್ಶನವಾಗುತ್ತಿದ್ದ ಸಂದರ್ಭ ಮಧ್ಯರಾತ್ರಿ 12.15 ರ ಸುಮಾರಿಗೆ ಈ ದುರಂತ ಸಂಭವಿಸಿತು.


ಅಬ್ಬರದ ಪ್ರವೇಶದ ಬಳಿಕವೂ ಅಗ್ರಪೂಜೆಯ ಸನ್ನಿವೇಶದಲ್ಲಿ ಎರಡು ಪದಗಳಿಗೆ ಚೆನ್ನಾಗಿಯೇ ನಿರ್ವಹಿಸಿದ್ದರು. ಮೂಲಗಳ ಪ್ರಕಾರ, ಮುಂದಿನ ಎರಡು ಪದ್ಯಗಳಿಗೆ ದಂತವಕ್ತ್ರ ವೇಷಧಾರಿಗೆ ಸೂಚನೆ ನೀಡಿ, ನನಗೆ ಸುಸ್ತಾಗುತ್ತಿದೆ, ನೀವು ನಿಭಾಯಿಸಿ ಎಂದು ಬದಿಯಲ್ಲಿ ನಿಂತಿದ್ದರಂತೆ. ಭೀಮನ ಪದ್ಯ ಬಂದಾಗ ಭೀಮ ಪಾತ್ರಧಾರಿ ಕುಣಿಯುತ್ತಿದ್ದರು. ರಂಗದ ಬದಿಯಲ್ಲಿ ನಿಂತಿದ್ದ ಗುರುವಪ್ಪ ಅವರು ಹಠಾತ್ತನೆ ಕುಸಿದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಫಲಕಾರಿಯಾಗಲಿಲ್ಲ.


ಪ್ರಸಂಗಕರ್ತರೂ ಆಗಿದ್ದ ಗುರುವಪ್ಪ ಬಾಯಾರು ಅವರು ಹಲವು ಮೇಳಗಳಲ್ಲಿ ತಿರುಗಾಟ ನಡೆಸಿ 2013ರಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಮೇಳ ಸೇರಿದ್ದರು. ಪ್ರಸ್ತುತ ಕಟೀಲಿನ ನಾಲ್ಕನೇ ಮೇಳದ ವೇಷಧಾರಿಯಾಗಿದ್ದ ಅವರು ಖಳ ಪಾತ್ರಗಳಿಗೆ ಜೀವ ತುಂಬಿದ್ದರು.

ಕಾಸರಗೋಡು ತಾಲೂಕಿನ ಬಾಯಾರು ಗ್ರಾಮದ ಕರಿಯ ದೇವಾಡಿಗ, ಲಕ್ಷ್ಮೀ (ಸರಸ್ವತೀ) ದಂಪತಿಯ ಪುತ್ರರಾಗಿದ್ದ ಗುರುವಪ್ಪ ಬಾಯಾರು 1961ರಲ್ಲಿ ಜನಿಸಿದವರು. ಪೈವಳಿಕೆ ಸರಕಾರೀ ಹೈಸ್ಕೂಲ್‌ನಲ್ಲಿ ಮೆಟ್ರಿಕ್ ವಿದ್ಯಾಭ್ಯಾಸ ಪೂರೈಸಿದ ನಂತರ ಉದ್ಯೋಗ ಹುಡುಕಾಡುತ್ತಿದ್ದರಾದರೂ ಯಕ್ಷಗಾನ ಅವರನ್ನು ಸೆಳೆಯಿತು. ಅಂದಿನ ಜನಪ್ರಿಯ ಸ್ತ್ರೀಪಾತ್ರಧಾರಿ ಕಾವೂರು ಕೇಶವ ಅವರಿಂದ ನಾಟ್ಯಾಭ್ಯಾಸ ಮಾಡಿ, ಹವ್ಯಾಸಿ ಕಲಾವಿದನಾಗಿ ಶ್ರೀ ವೀರಾಂಜನೇಯ ಯಕ್ಷಗಾನ ಸಂಘದ ಮೂಲಕ ರಂಗ ಪ್ರವೇಶ ಮಾಡಿದವರು.

ಸೂಪರ್ ಹಿಟ್ ಪ್ರಸಂಗಗಳ ಕರ್ತೃ
ಸಣ್ಣಪುಟ್ಟ ಪಾತ್ರಗಳ ನಿರ್ವಹಿಸುತ್ತಿದ್ದ ಅವರಿಗೆ ಪ್ರಸಂಗ ರಚನೆಯ ಆಸೆ ಮೂಡಿದ್ದೇ ತಡ, ಪ್ರಖ್ಯಾತ ಛಾಂದಸ ಶಿಮಂತೂರು ನಾರಾಯಣ ಶೆಟ್ಟಿ ಅವರಲ್ಲಿ ಯಕ್ಷಗಾನ ಪ್ರಸಂಗ ರಚನೆಗೆ ಬೇಕಾದ ಅಗತ್ಯ ಛಂದಸ್ಸುಗಳ ಬಗ್ಗೆ ಕಲಿತು, ಚೊಚ್ಚಲ ಪ್ರಸಂಗ ವಜ್ರ ಕೋಗಿಲೆ ರಚಿಸಿದರು. ಕುಂಬಳೆ ಮೇಳದಲ್ಲಿ ಇದು ಪ್ರಖ್ಯಾತಿ ಗಳಿಸಿತು. ಮುಂದೆ ಕೀರ್ತಿಚಂದ್ರಿಕೆ, ಘಟ್ಟದ ಗರುಡೆ, ಗಂಧರ್ವ ನರ್ತಕಿ, ಕುಡ್ಲದ ಕುರಾಲ್, ಕಡಲ ಕೇಸರಿ, ಚಂದ್ರ ಮಲ್ಲಿಗೆ ಸೂರ್ಯ ಕಾಂತಿ, ನಾಗಮಂಡಲ, ಅಷ್ಟ ಮಂಗಲ, ಸ್ವರ್ಣಮಲ್ಲಿ, ಪರಕಾಯ ಪಾರಮ್ಯ ಮುಂತಾದ ಪ್ರಸಂಗಗಳನ್ನು ಬರೆದರು. ಪೂಜೆದ ಪುಣ್ಣಮೆ, ಮಾಸ್ತಿ ಮಲ್ಲಮ್ಮ, ಸರ್ಪ ಸಂಕ್ರಾಂತಿ, ಸೀಮೆದ ಸಿರಿಗಂಧ, ಸತ್ಯೊದ ಸಿರಿಗಿಂಡೆ ಪ್ರಸಂಗಗಳನ್ನೂ ರಚಿಸಿದ್ದರು. 

ತೆಂಕು ತಿಟ್ಟಿನ ಕುಂಬಳೆ, ಕದ್ರಿ, ಮಂಗಳಾದೇವಿ ಹಾಗೂ ಪುತ್ತೂರು ಮೇಳಗಳಲ್ಲಿ ಇವುಗಳಲ್ಲಿ ಹಲವು ಪ್ರಸಂಗಗಳು ಜಯಭೇರಿ ಬಾರಿಸಿದ್ದವು.

ಸ್ವತಃ ಅವರು ಗಣೇಶಪುರ, ಸಸಿಹಿತ್ಲು, ಬಪ್ಪನಾಡು ಮೇಳಗಳಲ್ಲಿ ತಿರುಗಾಟ ಮಾಡುತ್ತಲೇ ಕಿರೀಟ ವೇಷಧಾರಿಯಾಗಿ ಗುರುತಿಸಿಕೊಳ್ಳಲಾರಂಭಿಸಿದರು. 2013ರಲ್ಲಿ ಕಟೀಲಿನ 6ನೇ ಮೇಳ ಆರಂಭವಾದಾಗ ಒಳ್ಳೆಯ ಅವಕಾಶ ದೊರೆತು ಸೇರ್ಪಡೆಯಾದರು. ಶ್ರೀ ದೇವೀ ಮಹಾತ್ಮೆ ಯ ಮಧು-ಕೈಟಭ, ದೇವೇಂದ್ರ, ವಿದ್ಯುನ್ಮಾಲಿ, ಉಳಿದಂತೆ ವೀರಮಣಿ ಕಾಳಗದ ಶತ್ರುಘ್ನ ಮತ್ತಿತರ ಪಾತ್ರಗಳು, ನಾಟಕೀಯ ಪಾತ್ರಗಳೂ ಅವರಿಗೆ ಪ್ರಸಿದ್ಧಿ ತಂದುಕೊಟ್ಟಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು