ಫೆ.11, 12: ಉಡುಪಿಯಲ್ಲಿ ರಾಜ್ಯ ಮಟ್ಟದ ಯಕ್ಷಗಾನ ಸಾಹಿತ್ಯ ಸಮ್ಮೇಳನ: ಏನೇನಿವೆ?

  • ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮದಂಡಿಯಾದ ಸಮ್ಮೇಳನ
  • ಯಕ್ಷಗಾನ ಸಂಬಂಧಿತ ಗೋಷ್ಠಿಗಳು, ಯಕ್ಷಗಾನದ ಎಲ್ಲ ಪ್ರಭೇದಗಳ ಪ್ರದರ್ಶನ
  • ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಪುಸ್ತಕ ಮಾರಾಟ, ಬಡ ಕಲಾವಿದರಿಗೆ ಸನ್ಮಾನ
  • ಬಣ್ಣ ಹಚ್ಚಿ ವೇಷ ಕಟ್ಟಿ ಸಂಭ್ರಮಿಸುವವರಿಗೆ ಅಪರೂಪದ ಅವಕಾಶ
ಬೆಂಗಳೂರು: ಸಾಹಿತ್ಯದ ಮುಖ್ಯವಾಹಿನಿಯಿಂದ ಇದುವರೆಗೆ ದೂರವೇ ಉಳಿದಿದ್ದ ಯಕ್ಷಗಾನ ಸಾಹಿತ್ಯಕ್ಕೆ ಯಕ್ಷಗಾನ ಕಲಾವಿದರು, ಕಲಾ ಪೋಷಕರು, ಅಭಿಮಾನಿಗಳ ಪ್ರಯತ್ನದ ಫಲವಾಗಿ ಇತ್ತೀಚಿನ ದಿನಗಳಲ್ಲಿ ಮನ್ನಣೆ ದೊರೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ, ಸಮಗ್ರ ಯಕ್ಷಗಾನ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಕರ್ನಾಟಕ ಸರಕಾರ ಹೊರಟಿದೆ. ಫೆ.11, 12ರಂದು ಉಡುಪಿಯಲ್ಲಿ ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಆಯೋಜಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.

ಮುಂಬಯಿಯಲ್ಲಿ ಹೆಚ್.ಬಿ.ಎಲ್.ರಾಯರು
ಸಂಘಟಿಸಿದ್ದ ಯಕ್ಷಗಾನ ಸಮ್ಮೇಳನಗಳ ಪಟ್ಟಿ

ಈ ಹಿಂದೆ ಮುಂಬಯಿಯಲ್ಲಿ ಕಲಾಭಿಮಾನಿ, ಕಲಾಪೋಷಕ ಹೆಚ್.ಬಿ.ಎಲ್.ರಾವ್ ಅವರು ಪ್ರತಿವರ್ಷವೂ ಯಕ್ಷಗಾನ ಸಾಹಿತ್ಯ ಸಮ್ಮೇಳನ ಸಂಘಟಿಸುತ್ತಿದ್ದರು. ಅದೇ ರೀತಿ, ಕರ್ನಾಟಕದಲ್ಲಿಯೂ ಹವ್ಯಾಸಿ ಕಲಾವಿದ, ಕಲಾಪೋಷಕ ಸೂರ್ಯನಾರಾಯಣ ಪಂಜಾಜೆ ಅವರು ಯಕ್ಷಗಾನ ಸಾಹಿತ್ಯ ಸಮ್ಮೇಳನಗಳನ್ನು ನಡೆಸುತ್ತಿದ್ದರು. ಆದರೆ ಸರಕಾರವೊಂದು ತನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಯಕ್ಷಗಾನ ಸಾಹಿತ್ಯ ಸಮ್ಮೇಳನಕ್ಕೆ ಮುಂದಾಗಿರುವುದು ಇದೇ ಮೊದಲು.

ಈ ಕುರಿತು, ಇಂಧನ ಸಚಿವರೂ ಆಗಿರುವ ವಿ. ಸುನಿಲ್ ಕುಮಾರ್ ಕಾರ್ಕಳ ಅವರು ಮಾಹಿತಿ ನೀಡಿದ್ದು, ಯಕ್ಷಲೋಕದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಫೆಬ್ರವರಿ 11,12 ರಂದು ಉಡುಪಿಯಲ್ಲಿ ರಾಜ್ಯಮಟ್ಟದ ಯಕ್ಷಗಾನ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಗುಣಮಟ್ಟಕ್ಕೆ ಸರಿ ಸಮನಾಗಿ ಈ ಸಮ್ಮೇಳನವನ್ನು ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.

ಯಕ್ಷಗಾನ ರಂಗದ ಘನ ವಿದ್ವಾಂಸರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗುವುದು. ಯಕ್ಷಗಾನದ ಸಮಸ್ಯೆ ಮತ್ತು ಸಾಧನೆಗಳ ಬಗ್ಗೆ ಗೋಷ್ಠಿಗಳು ಹಾಗೂ ತೆಂಕು, ಬಡಗು, ಮೂಡಲಪಾಯ ಸೇರಿದಂತೆ ಯಕ್ಷಗಾನದ ಎಲ್ಲಾ ಪ್ರಭೇದಗಳ ಅಹೋರಾತ್ರಿ ಯಕ್ಷಗಾನ ಪ್ರದರ್ಶನ, ತಾಳಮದ್ದಳೆ, ಪುಸ್ತಕ ಮಾರಾಟ ಎಲ್ಲವನ್ನೂ ಸಹ ಅಚ್ಚುಕಟ್ಟಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.


ಈ ಸಮ್ಮೇಳನದ ಭಾಗವಾಗಿ ಯಕ್ಷಪ್ರಿಯರಿಗೆ "ನಿಮ್ಮ ಮುಖಕ್ಕೆ ಬಣ್ಣ ಬೇಕೆ..?" ಎಂಬ ವರ್ಣ ವೈಭವವನ್ನು ಆಯೋಜಿಸಲಾಗಿದ್ದು, ಆಸಕ್ತರಿಗೆ ತೆಂಕು, ಬಡಗು ಶೈಲಿಯಲ್ಲಿ ಬಣ್ಣ ಹಚ್ಚಿ, ವೇಷ ಕಟ್ಟಲು ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಈ ಸಮಗ್ರ ಸಾಹಿತ್ಯ ಯಕ್ಷಗಾನ ಸಮ್ಮೇಳನ, ಕರ್ನಾಟಕದ ಯಕ್ಷ ಇತಿಹಾಸದಲ್ಲಿಯೇ ಒಂದು ಹೊಸ ಅಧ್ಯಾಯ ಆರಂಭಿಸಲಿದೆ ಎಂದವರು ಹೇಳಿದ್ದಾರೆ.

ಸಚಿವ ಸುನಿಲ್ ಕುಮಾರ್ ಹಾಗೂ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿ.ಎಲ್.ಹೆಗಡೆ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ.

ಕರ್ನಾಟಕದ ಅಸ್ಮಿತೆಯಾದ ಯಕ್ಷಗಾನದ ಸಮಸ್ಯೆ, ಭವಿಷ್ಯ ಹಾಗೂ ಸಮಕಾಲೀನ ಸ್ಥಿತಿಗತಿಗಳ ಅವಲೋಕನ ನಡೆಯಲಿದ್ದು, ಮುಂದಿನ ಪೀಳಿಗೆಗೆ ಯಕ್ಷಗಾನದ ಸಮಗ್ರ ಪರಿಚಯ ಮಾಡಿಕೊಡುವ ಮತ್ತು ಕಲೆಯನ್ನು ಉಳಿಸುವ, ಬೆಳೆಸುವ ಉದ್ದೇಶದ ಸಮ್ಮೇಳನ ಇದಾಗಿದೆ. ಅಹೋರಾತ್ರಿ ಯಕ್ಷಗಾನ ಪ್ರದರ್ಶನ, ಗೋಷ್ಠಿ, ತಾಳಮದ್ದಳೆ ಮುಂತಾದವುಗಳು ನಡೆಯಲಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು