ಐರೋಡಿ ಮಂಜುನಾಥ್ ಕುಲಾಲ್‌ಗೆ ಯಕ್ಷಧ್ರುವ ಪ್ರತಿಷ್ಠಾನದಿಂದ ಮನೆ: ಪಟ್ಲ ಸತೀಶ್ ಶೆಟ್ಟಿ ಭರವಸೆ


ಮಂಗಳೂರು: ಯಕ್ಷಗಾನದ ತೆಂಕು ತಿಟ್ಟು ಹಾಗೂ ಬಡಗು ತಿಟ್ಟುಗಳ ನಡುವೆ ಈ ಹಿಂದೆ ಇದ್ದಂತಹ ಕಂದಕ ಈಗಿಲ್ಲ. ಯಕ್ಷಗಾನದ ಏಳಿಗೆಯ ದೃಷ್ಟಿಯಿಂದ ಎರಡೂ ತಿಟ್ಟುಗಳ ಕಲಾವಿದರು ಒಗ್ಗಟ್ಟಿನಿಂದ ಇರಬೇಕು ಎಂದು ಯಕ್ಷಧ್ರುವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ, ಭಾಗವತ ಪಟ್ಲ ಸತೀಶ ಶೆಟ್ಟಿ ಅಭಿಪ್ರಾಯಪಟ್ಟರು.

ಮಂಗಳೂರಿನ ಯಕ್ಷಾಭಿನಯ ಬಳಗವು ಪುರಭವನದಲ್ಲಿ ಭಾನುವಾರ (ಜನವರಿ 8, 2023) ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯಕ್ಷಗುರು ಐರೋಡಿ ಮಂಜುನಾಥ ಕುಲಾಲ್‌ ಯಡ್ತಾಡಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದಲ್ಲಿ ಯಕ್ಷಗಾನ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ತೆಂಕು ಹಾಗೂ ಬಡಗು ತಿಟ್ಟುಗಳೆರಡರ ಅಭಿವೃದ್ಧಿಗೂ ಇದು ನೆರವಾಗಲಿದೆ ಎಂದು ತಿಳಿಸಿದರು.


ಬಡಗುತಿಟ್ಟಿನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್‌ ಮಾತನಾಡಿ, ಹೆಚ್ಚು ಹೆಚ್ಚು ಜನರು ಯಕ್ಷಗಾನವನ್ನು ಕಲಿಯವುದು ಕಲೆಯ ಬೆಳವಣಿಗೆ ದೃಷ್ಟಿಯಿಂದ ಅನುಕೂಲ. ಕಲಿತವರೆಲ್ಲರೂ ವೃತ್ತಿಪರ ಕಲಾವಿದರಾಗುತ್ತಾರೆ ಎಂದಲ್ಲ. ಅವರು ಯಕ್ಷಗಾನವನ್ನು ಆಸ್ವಾದಿಸುವ ಪ್ರೇಕ್ಷಕರಾಗುವುದರಲ್ಲಿ ಸಂದೇಹವಿಲ್ಲ. ಪ್ರಜಾವಂತ ಪ್ಷೇಕ್ಷಕರಿಂದಲೇ ಈ ಕಲೆ ಮತ್ತಷ್ಟು ಉತ್ತುಂಗಕ್ಕೆ ಬೆಳೆಯುತ್ತದೆ ಎಂದರಲ್ಲದೆ, ಆರ್ಥಿಕ ಸಂಕಷ್ಟದ ಬಗ್ಗೆ ತಲೆಕೆಡಿಸಿಕೊಳ್ಳದೇ ನೂರಾರು ಮಂದಿಗೆ ಯಕ್ಷಗಾನ ಕಲಿಸುತ್ತಿರುವ ಐರೋಡಿ ಮಂಜುನಾಥ ಕುಲಾಲ್‌ ಯಡ್ತಾಡಿ ಅವರ ಕಲಾ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಜುನಾಥ ಕುಲಾಲ್‌ ಅವರಿಗೆ ಯಕ್ಷ–ಧ್ರುವ ಪ್ರತಿಷ್ಠಾನದ ವತಿಯಿಂದ ಮನೆ ನಿರ್ಮಿಸಿಕೊಡುವುದಾಗಿ ಪಟ್ಲ ಸತೀಶ್ ಶೆಟ್ಟಿ ಭರವಸೆ ನೀಡಿದರು.

ಯಕ್ಷಧ್ರುವ ಪ್ರತಿಷ್ಠಾನದ ಮಂಗಳೂರು ಘಟಕದ ಅಧ್ಯಕ್ಷ ಕೃಷ್ಣಯ್ಯ ಶೆಟ್ಟಿ ತಾರೆಮಾರ್‌, ಕರ್ಣಾಟಕ ಬ್ಯಾಂಕಿನ ಮಣ್ಣಗುಡ್ಡೆ ಶಾಖೆಯ ವ್ಯವಸ್ಥಾಪಕಿ ಉಷಾ ಎನ್‌.ಹೆಬ್ಬಾರ್‌, ‘ಪುಟ್ಟಣ್ಣ ಕುಲಾಲ್‌’ ಪ್ರತಿಷ್ಠಾನದ ಮಮತಾ ಕುಲಾಲ್‌ ಹಾಗೂ ಕಾಪಿಕಾಡು ಶಾಲೆಯ ಮುಖ್ಯಶಿಕ್ಷಕಿ ಲೀಲಾವತಿ ಎಸ್‌.ಎನ್‌.ಕೈರನ್‌, ಬಳಗದ ಅಧ್ಯಕ್ಷ ಪ್ರಶಾಂತ್‌ ಕುಮಾರ್‌ ಶೆಟ್ಟಿ ಬಿ., ಕಾರ್ಯದರ್ಶಿ ಸಂತೋಷ್‌ ಶೆಟ್ಟಿ, ಖಜಾಂಚಿ ರಾಂಘವೇಂದ್ರ ನೆಲ್ಲಿಕಟ್ಟೆ ಇದ್ದರು. ಕರುಣಾಕರ ಬಳ್ಕೂರು ಕಾರ್ಯಕ್ರಮದ ನಿರೂಪಿಸಿದರು.

ಯಕ್ಷಾಭಿನಯ ಬಳಗದ ಹವ್ಯಾಸಿ ಕಲಾವಿದರು ‘ತಾಮ್ರಧ್ವಜ ಕಾಳಗ’ ಹಾಗೂ ‘ಮೀನಾಕ್ಷಿ ಕಲ್ಯಾಣ’ ಬಡಗುತಿಟ್ಟು ಪ್ರಸಂಗಗಳನ್ನು ಐರೋಡಿ ಮಂಜುನಾಥ ಕುಲಾಲ್‌ ಮಾರ್ಗದರ್ಶನದಲ್ಲಿ ಪ್ರಸ್ತುತಪಡಿಸಿದರು.

ಜನ್ಸಾಲೆ ರಾಘವೇಂದ್ರ ಆಚಾರ್ಯ ಹಾಗೂ ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು ಭಾಗವತಿಕೆಯ ದ್ವಂದ್ವ ಪ್ರಮುಖ ಆಕರ್ಷಣೆಯಾಗಿತ್ತು. ಭಾಗವತ ಚಂದ್ರಯ್ಯ ಆಚಾರ್ಯ, ಮದ್ದಲೆಗಾರ ಭರತ್‌ಚಂದನ್‌ ಕೋಟೇಶ್ವರ, ಚಂಡೆವಾದಕ ಶ್ರೀಕಾಂತ ಶೆಟ್ಟಿ ಯಡ್ತಾಡಿ ಹಿಮ್ಮೇಳದಲ್ಲಿ ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು