ಫೆ.3ರಿಂದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ, ಪ್ರಶಸ್ತಿ ಪ್ರದಾನ, ಸಮ್ಮಾನ


ಹೊನ್ನಾವರ: ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವವು ಗುಣವಂತೆಯ ಯಕ್ಷಾಂಗಣದಲ್ಲಿ ಫೆ.3ರಿಂದ 7ರವರೆಗೆ ನಡೆಯಲಿದೆ. ಕೆರೆಮನೆಯ ಇಡಗುಂಜಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಂದು ನಿರ್ದೇಶಕ, ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಈ ಕುರಿತು ಮಾಹಿತಿ ನೀಡಿದ ಅವರು, ಚಿತ್ರಾಪುರ ಸಂಸ್ಥಾನದ ಮಠಾಧೀಶ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಉಪಸ್ಥಿತಿಯಲ್ಲಿ ಫೆ.3ರಂದು ಸಂಜೆ 4.30ಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರು ಕಾರ್ಯಕ್ರಮ ಉದ್ಘಾಟಿಸುವರು ಎಂದರು. ನಟ ಅನಂತ ನಾಗ್ ಅವರಿಗೆ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸನ್ಮಾನ ನಡೆಯಲಿದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.


ಆ ದಿನ ಸಂಜೆ ಗುಣವಂತೆಯ ಭಂಡಾರಿ ಮಿತ್ರವೃಂದದಿಂದ ಮಂಗಳವಾದ್ಯ, ಪಾರ್ಶ್ವನಾಥ ಉಪಾಧ್ಯೆ ಮತ್ತು ಕೆರೆಮನೆ ಶ್ರೀಧರ ಹೆಗಡೆ ಜುಗಲ್‌ಬಂದಿಯಲ್ಲಿ ‘ಮನ್ಮಥ ರಥಿ’ ಯಕ್ಷಗಾನ-ಭರತನಾಟ್ಯ ರೂಪಕ ಹಾಗೂ ಕೇರಳದ ಕಲಾಮಂಡಲಂ ಸುಕುಮಾರನ್ ತಂಡದಿಂದ ಕಿರಾತಾರ್ಜುನೀಯಂ ಪ್ರಸಂಗದ ಕಥಕ್ಕಳಿ ಪ್ರದರ್ಶನ ನಡೆಯಲಿದೆ.

ಫೆ.4ರಂದು ಸಂಜೆ 4.30ಕ್ಕೆ ಯಕ್ಷಗಾನ ಕಲಾವಿದ ತಿಮ್ಮಪ್ಪ ಹೆಗಡೆ ಶಿರಳಗಿ ಅವರಿಗೆ ‘ಕೆರೆಮನೆ ಗಜಾನನ ಹೆಗಡೆ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬೆಂಗಳೂರಿನ ಸರಿತಾ ಮಿಶ್ರ ತಂಡದಿಂದ ಒಡಿಸ್ಸೀ ನೃತ್ಯ, ಆನೂರು ಅನಂತ ಕೃಷ್ಣ ಶರ್ಮಾ ಅವರಿಂದ ‘ಲಯ ಲಾವಣ್ಯ’ ತಾಳವಾದ್ಯ ವೈಭವ ಕಾರ್ಯಕ್ರಮ ನಡೆಯಲಿದೆ.

ಫೆ.5ರಂದು ಬೆಳಿಗ್ಗೆ 11.30ಕ್ಕೆ ಮಂಗಳೂರಿನ ಸರಯೂ ಬಾಲ ಯಕ್ಷವೃಂದದ ಕಲಾವಿದರಿಂದ ‘ಶ್ರೀಕೃಷ್ಣ ಕಾರುಣ್ಯ’ ಯಕ್ಷಗಾನ ಪ್ರದರ್ಶನ, ಸಂಜೆ 6.30ಕ್ಕೆ ಬೆಂಗಳೂರಿನ ಅನೇಕ ರಂಗತಂಡದಿಂದ ‘ನವಿಲು ಪುರಾಣ’ ನಾಟಕ ಪ್ರದರ್ಶನ, ಮುಂಬೈಯ ದೀಪಕ ಮರಾಠೆ ತಂಡದಿಂದ ಗಝಲ್ ಗಾಯನ ಇದೆ.

ಫೆಬ್ರವರಿ 6ರಂದು ಬೆಳಿಗ್ಗೆ 11.30ಕ್ಕೆ ‘ಪಂಚವಟಿಯ ಮಾಯಾಮುಖಗಳು’ ನಾಟಕ ಪ್ರದರ್ಶನ, ಸಂಜೆ 6.30ಕ್ಕೆ ದೆಹಲಿಯ ಪ್ರತಿಭಾ ಪ್ರಹ್ಲಾದ್ ರೆಪರ್ಟರಿಯಿಂದ ವಿವಿಧ ನಾಟ್ಯ ಪ್ರಕಾರಗಳ ರೂಪಕ, ಭಾರತಿ ಪ್ರತಾಪ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮವಿದೆ.

ಫೆ.7ರಂದು ಮಧ್ಯಾಹ್ನ 4.30ಕ್ಕೆ ಸಮಾರೋಪ ಸಮಾರಂಭ ನಡೆಯುವುದು. ಸಂಜೆ 6.30ಕ್ಕೆ ಕೊಳಲು ವಾದಕ ಪ್ರವೀಣ ಗೋಡ್ಖಿಂಡಿ ಅವರಿಂದ ಬಾನ್ಸುರಿ ವಾದನ, ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯಿಂದ ‘ಹಿರಣ್ಯಾಕ್ಷ ವಧೆ’ ಯಕ್ಷಗಾನ ಪ್ರರ್ಶಿಸಲಾಗುತ್ತದೆ.

ನಾಟ್ಯೋತ್ಸವ ಸಮ್ಮಾನ ವಿಜೇತರು
ನಾಟ್ಯೋತ್ಸವದಲ್ಲಿ ಯಕ್ಷರಂಗ ಮಾಸಪತ್ರಿಕೆಯ ಕಡತೋಕ ಗೋಪಾಲಕೃಷ್ಣ ಭಾಗವತ, ರಂಗಭೂಮಿ ತಜ್ಞ ಜೆ.ಶ್ರೀನಿವಾಸಮೂರ್ತಿ, ಯಕ್ಷಗಾನ ಕಲಾವಿದರಾದ ಉಜಿರೆ ಅಶೋಕ ಭಟ್, ಕೃಷ್ಣ ನಾಯ್ಕ ಹಳ್ಳಾಡಿ, ಕೊಗ್ಗ ಆಚಾರಿ, ಚಪ್ಪರಮನೆ ಶ್ರೀಧರ ಹೆಗಡೆ, ಯಕ್ಷಗಾನ ಸಂಶೋಧಕ ಡಾ.ಜಿ.ಎಲ್.ಹೆಗಡೆ, ಚಲನಚಿತ್ರ ಕಲಾವಿದ ನೀರ್ನಳ್ಳಿ ಗಣಪತಿ, ಚಿಂತಕ ಮಹಾಬಲಮೂರ್ತಿ ಕೊಡ್ಲಕೆರೆ, ವಿದ್ವಾಂಸ ಉಮಾಕಾಂತ ಭಟ್ಟ ಕೆರೆಕೈ, ಪತ್ರಕರ್ತ ಮೋಹನ ಹೆಗಡೆ, ಚಿಂತಕ ಗುರುರಾಜ ಮಾರ್ಪಳ್ಳಿ ಅವರಿಗೆ ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ’ ಪ್ರದಾನ ಮಾಡಲಾಗುವುದು’ ಎಂದು ಕೆರೆಮನೆ ಶಿವಾನಂದ ಹೆಗಡೆ ಮಾಹಿತಿ ನೀಡಿದರು.

ಸಮಿತಿಯ ಕಾರ್ಯಾಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ, ಕೆ.ಜಿ.ಹೆಗಡೆ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು