
ಮಂಗಳೂರು: ಉಡುಪಿಯಲ್ಲಿ ಫೆಬ್ರವರಿ 11 ಮತ್ತು 12ರಂದು ನಡೆಯುವ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ-2023ರಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ 18 ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುತ್ತದೆ ಎಂದು ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಡಾ.ಜಿ.ಎಲ್. ಹೆಗಡೆ ಕುಮಟಾ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಡಾ.ಪಾದೆಕಲ್ಲು ವಿಷ್ಣು ಭಟ್ಟ ಅವರ ‘ಇಂಟ್ರೊಡಕ್ಷನ್ ಟು ಯಕ್ಷಗಾನ‘, ಡಾ. ಕೆ.ಎಂ.ರಾಘವ ನಂಬಿಯಾರ್ ಅವರ ‘ಬೇರು - ಹೀರು’ , ಡಾ. ಎಂ. ಪ್ರಭಾಕರ ಜೋಶಿ ಅವರ ‘ವೀರಗಾಸೆ’, ‘ಡಾ. ಮನೋರಮಾ ಬಿ.ಎನ್. ಅವರ ‘ಯಕ್ಷಾಂಗನಾ’, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಅವರ ‘ಪ್ರಸಂಗಾವಧಾನ’, ಚಿಕ್ಕ ಯಣ್ಣೆಕಟ್ಟೆ ಅವರ ‘ಮೂಡಲಪಾಯ ಯಕ್ಷಗಾನ ಸ್ವರೂಪ’, ಅಂಬಾತನಯ ಮುದ್ರಾಡಿ ಅವರ ‘ಯಕ್ಷಗಾನ ಮತ್ತು ಹರಿಕಥೆ - ಒಂದು ತೌಲನಿಕ ಅಧ್ಯಯನ’, ಕದ್ರಿ ನವನೀತ ಶೆಟ್ಟಿ ಸಂಪಾದಿಸಿರುವ ‘ಕೆಲಿಂಜ ಪುರ್ಸಂಗ ಜೊಂಕಿಲ್–ಕೆಲಿಂಜ ಸೀತಾರಾಮ ಆಳ್ವರ ಪ್ರಸಂಗಗಳು’, ಎಂ.ನಾ. ಚಂಬಲ್ತಿಮಾರ್ ಅವರ ‘ಭುಜಕೀರ್ತಿ’, ಪ್ರೊ. ಹೇರಂಜೆ ಕೃಷ್ಣ ಭಟ್ಟ ಅವರ ‘ಯಕ್ಷಗಾನ ಪದವಿನ್ಯಾಸ‘, ಕಡತೋಕ ಗೋಪಾಲಕೃಷ್ಣ ಭಾಗವತ ಅವರ ‘ಲಾಲಿಸೆಮ್ಮ ಮಾತ’, ಸುರೇಂದ್ರ ಪಣಿಯೂರು ಅವರ ‘ಯಕ್ಷಗಾನ ಅಂದು-ಇಂದು’, ದಿ. ಸೀತಾನದಿ ಗಣಪಯ್ಯ ಶೆಟ್ಟಿ ಅವರ ‘ಕುಂತಿ ಸ್ವಯಂವರ, ವೀರ ವಜ್ರಾಂಗ’, ಬೇಳೂರು ವಿಷ್ಣುಮೂರ್ತಿ ನಾಯಕ ಅವರ ‘ಸುಮುಖೋದ್ಭವ – ಯಕ್ಷಗಾನ ಪ್ರಸಂಗ’, ನಾ. ಕಾರಂತ ಪೆರಾಜೆ ಅವರ ‘ದೊಂದಿ’, ಎಸ್. ಕಾರ್ತಿಕ್ ಅವರ ‘ಯಕ್ಷಗಾನ ಹಸ್ತಪ್ರತಿಗಳ ಸೂಚೀಸಂಚಯ’, ಡಾ. ಜಿ.ಎನ್. ಉಪಾಧ್ಯ ಮತ್ತು ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಸಂಪಾದನೆಯ ‘ಯಕ್ಷಗಾನ ರಂಗಭೂಮಿಗೆ ಮುಂಬೈ ಕೊಡುಗೆ’ ಹಾಗೂ ಕದ್ರಿ ನವನೀತ ಶೆಟ್ಟಿ ಸಂಪಾದಿಸಿರುವ ‘ಕರ್ನಾಟಕ ಯಕ್ಷ ಸಂಗಮ 2003– ಉಡುಪಿ ಸ್ಮರಣ ಸಂಚಿಕೆ’ ಕೃತಿಗಳು ಸಮ್ಮೇಳನದಲ್ಲಿ ಲೋಕಾರ್ಪಣೆ ಆಗಲಿವೆ’ ಎಂದರು.
ಯಕ್ಷಗಾನ.ಇನ್ ಅಪ್ಡೇಟ್ಸ್ ಪಡೆಯಲು ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ.
ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ ಫಾಲೋ ಮಾಡಿ.
‘ಮೈಸೂರು, ಮಂಡ್ಯ, ಚಿತ್ರದುರ್ಗ ಮೊದಲಾದ ಜಿಲ್ಲೆಗಳಲ್ಲಿ ಪ್ರದರ್ಶನಗೊಳ್ಳುವ ಮೂಡಲಪಾಯ, ಗಟ್ಟದಕೋರೆ, ಕೇಳಿಕೆ ಮೊದಲಾದವುಗಳೂ ಯಕ್ಷಗಾನದ್ದೇ ಬೇರೆ ಬೇರೆ ಸ್ವರೂಪಗಳು. ಪಾರ್ತಿಸುಬ್ಬನ ಕೃತಿಗಳನ್ನೇ ಇವುಗಳಲ್ಲೂ ಬಳಸಲಾಗುತ್ತದೆ. ಇಂತಹ ಕಲೆಗಳ ಪ್ರದರ್ಶನವನ್ನೂ ಸಮ್ಮೇಳನದಲ್ಲಿ ಏರ್ಪಡಿಸಿದ್ದೇವೆ. ದುಬೈ ಹಾಗೂ ಮುಂಬೈನ ಕಲಾತಂಡಗಳೂ ಯಕ್ಷಗಾನ ಪ್ರದರ್ಶನ ನೀಡಲಿವೆ’ ಎಂದರು. ಜೊತೆಗೆ, ‘ತುಳು ಯಕ್ಷಗಾನ ಪ್ರದರ್ಶನವೂ ಇರಲಿದೆ’ ಎಂದು ಸರಪಾಡಿ ಅಶೋಕ ಶೆಟ್ಟಿ ತಿಳಿಸಿದರು. ಭಾಗವತ ಪಟ್ಲ ಸತೀಶ್ ಶೆಟ್ಟಿ ಹಾಗೂ ಕದ್ರಿ ನವನೀತ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.
Tags:
ಸುದ್ದಿ