ಬೈಪಾಡಿತ್ತಾಯ, ಕುರಿಯ, ಹೊಳ್ಳ, ಅಮ್ಮಣ್ಣಾಯ, ಧಾರೇಶ್ವರ, ಪದ್ಯಾಣ, ಅರುವ ಸಹಿತ 15 ಮಂದಿ ಹಿರಿಯ ಕಲಾವಿದರಿಗೆ ದಶಮಾನೋತ್ಸವ ಪ್ರಶಸ್ತಿ ಪ್ರದಾನ, ಯಕ್ಷ ಮಂಗಳ ಪ್ರಶಸ್ತಿ ಪ್ರದಾನ ಸಮಾರಂಭ, ಯಕ್ಷಮಂಗಳ ಪ್ರಶಸ್ತಿ ಪ್ರದಾನ, ಕೃತಿಗಳ ಲೋಕಾರ್ಪಣೆ, ರಂಗಸ್ಥಳ ಶಿಲಾನ್ಯಾಸ ಹಾಗೂ ಮಂಗಳೂರು ವಿವಿ ಸಾಂಸ್ಕೃತಿಕ ನೀತಿ ಬಿಡುಗಡೆ ಕಾರ್ಯಕ್ರಮವು ಶನಿವಾರ (ಮಾ.18) ನಡೆಯಲಿದೆ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ.
ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಬೆಳಿಗ್ಗೆ 10ರಿಂದ ಕಾರ್ಯಕ್ರಮ ನಡೆಯಲಿದ್ದು, ಎಡನೀರು ಮಠಾಧೀಶ ಶ್ರೀಶ್ರೀಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಾಯೋಜಕರಾದ ಡಾ.ಪಿ.ದಯಾನಂದ ಪೈ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಪತಿಗಳಾದ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸುವರು. ಆಳ್ವಾಸ್ ಪ್ರತಿಷ್ಠಾನದ ಡಾ.ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ, ಅರ್ಥಧಾರಿ ಗಣರಾಜ ಕುಂಬ್ಳೆ, ನಿವೃತ್ತ ಪ್ರಾಂಶುಪಾಲ ಡಾ.ಪಾದೆಕಲ್ಲು ವಿಷ್ಣು ಭಟ್ ಅಭಿನಂದನ ನುಡಿಗಳನ್ನಾಡುವರು.
ಪ್ರಶಸ್ತಿ ಪುರಸ್ಕೃತರು:
ಪುಂಡರೀಕಾಕ್ಷ ಉಪಾಧ್ಯಯ, ದಯಾನಂದ ನಾಗೂರು ಅವರಿಗೆ ಯಕ್ಷ ಮಂಗಳ ಪ್ರಶಸ್ತಿ ನೀಡಲಾಗುತ್ತಿದ್ದು, ಡಾ.ಡಿ.ಸದಾಶಿವ ಭಟ್ಟರಿಗೆ ಕೃತಿ ಪ್ರಶಸ್ತಿ ನೀಡಲಾಗುತ್ತಿದೆ. ತೆಂಕು, ಬಡಗು ತಿಟ್ಟಿನ ಹಿಮ್ಮೇಳ ಹಾಗೂ ಮುಮ್ಮೇಳ ಸೇರಿದಂತೆ ಹದಿನೈದು ಮಂದಿ 'ದಶಮಾನೋತ್ಸವ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.
ಹಿಮ್ಮೇಳ ಸಾಧಕರಾದ ಕುರಿಯ ಗಣಪತಿ ಶಾಸ್ತ್ರಿ, ಹರಿನಾರಾಯಣ ಬೈಪಾಡಿತ್ತಾಯ, ಪದ್ಯಾಣ ಶಂಕರನಾರಾಯಣ ಭಟ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ್ ಅಮ್ಮಣ್ಣಾಯ, ಸುಬ್ರಹ್ಮಣ್ಯ ಧಾರೇಶ್ವರ,
ಮುಮ್ಮೇಳದ ಸಾಧಕರಾದ ಅರುವ ಕೊರಗಪ್ಪ ಶೆಟ್ಟಿ, ಶಿವರಾಮ ಜೋಗಿ, ಕುಂಬ್ಳೆ ಶ್ರೀಧರ ರಾವ್, ಆರ್ಗೋಡು ಮೋಹನದಾಸ ಶೆಣೈ, ಪೇತ್ರಿ ಮಾಧವ ನಾಯ್ಕ್, ಬಳ್ಕೂರು ಕೃಷ್ಣ ಯಾಜಿ, ಮುಖ್ಯಪ್ರಾಣ ಕಿನ್ನಿಗೋಳಿ, ಉಬರಡ್ಕ ಉಮೇಶ್ ಶೆಟ್ಟಿ ಹಾಗೂ ಪೂಕಳ ಲಕ್ಷ್ಮೀನಾರಾಯಣ ಭಟ್ ಅವರಿಗೆ ದಶಮಾನೋತ್ಸವ ಪ್ರಶಸ್ತಿ. ಯಕ್ಷಗಾನ ಸಾಹಿತ್ಯ ಕೃತಿಗಳನ್ನು ರಚಿಸಿರುವ ಡಾ.ಉಪ್ಪಂಗಳ ಶಂಕರನಾರಾಯಣ ಭಟ್ ಹಾಗೂ ಡಾ.ಚಂದ್ರಶೇಖರ್ ದಾಮ್ಲೆ ಅವರಿಗೂ ದಶಮಾನೋತ್ಸವದ 'ಕೃತಿ ಪ್ರಶಸ್ತಿ' ಪ್ರದಾನ ಮಾಡಲಾಗುತ್ತದೆ.
ಕಾರ್ಯಕ್ರಮಗಳು
ಬೆಳಿಗ್ಗೆ 10 ಗಂಟೆಯಿಂದ ಯಕ್ಷಗಾನ ಪೂರ್ವರಂಗ, ಪೀಠಿಕೆ ಪ್ರದರ್ಶನವಿದ್ದು, ನಂತರ ಸಭಾ ಸಮಾರಂಭ ನಡೆಯಲಿದೆ. ಬಳಿಕ ಮಧ್ಯಾಹ್ನ 2 ಗಂಟೆಯಿಂದ ಯಕ್ಷಮಂಗಳ ತಂಡದ ಹಿರಿಯ ಮತ್ತು ಕಿರಿಯ ಕಲಾವಿದರಿಂದ, ದೀವಿತ್ ಎಸ್.ಕೆ.ಪೆರಾಡಿ ಸಂಯೋಜನೆಯಲ್ಲಿ 'ಮಹಿಷ ವಧೆ' ಯಕ್ಷಗಾನ ಪ್ರದರ್ಶನಗೊಳ್ಳಲಿದೆ.
ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ
ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಪರಿಪೂರ್ಣ ರಂಗಭೂಮಿಯಾದ ಯಕ್ಷಗಾನದ ಅಧ್ಯಯನ, ಪ್ರಕಟಣೆ, ಸಂವರ್ಧನೆ ಮತ್ತು ಸಂರಕ್ಷಣೆಗಾಗಿ ಮಂಗಳೂರು ವಿವಿಯಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಯಕ್ಷಗಾನದ ಕುರಿತ ಅಧ್ಯಯನ ಮತ್ತು ಸಂಗ್ರಹ, ವಿಚಾರಸಂಕಿರಣ, ಪ್ರಚಾರೋಪನ್ಯಾಸ, ದಾಖಲಾತಿ, ಯಕ್ಷ ತರಬೇತಿ, ಪ್ರಾತ್ಯಕ್ಷಿಕೆ, ಯಕ್ಷಮಂಗಳ ಪ್ರಶಸ್ತಿ ಮುಂತಾದ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದೆ.
ಕಲಾವಿದರಿಗೆ, ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಮುಖ್ಯ ಆಕರವಾಗಬಲ್ಲ ಸುಸಜ್ಜಿತ ಗ್ರಂಥಾಲಯ, ಅನನ್ಯವಾದ ವಸ್ತುಸಂಗ್ರಹಾಲಯ ನಿರ್ಮಾಣ, ಸಹಯೋಗದ ಕಾರ್ಯಕ್ರಮಗಳೇ ಮೊದಲಾದ ಬಹುಮುಖೀ ಉದ್ದೇಶ, ಕಾರ್ಯಯೋಜನೆಗಳೊಂದಿಗೆ ಮುನ್ನಡೆಯುತ್ತಿರುವ ಕೇಂದ್ರವು ದಶಮಾನೋತ್ಸವಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ.
Tags:
ಸುದ್ದಿ