ಶ್ರೀ ದೇವಿ ಮಹಾತ್ಮೆ ಆಟ: ವೇಷಗಳ ಬಗ್ಗೆ ಕುತೂಹಲ, ಜಿಜ್ಞಾಸೆ, ಉತ್ತರ ಇಲ್ಲಿದೆ

ಹನುಮಗಿರಿ ಮೇಳದ ದೇವಿ ಮಹಾತ್ಮೆಯಲ್ಲಿ ಕಿರೀಟ ವೇಷದಲ್ಲಿ ಕಾಣಿಸಿಕೊಂಡ ಚಂಡ-ಮುಂಡರಾಗಿ ಉಬರಡ್ಕ ಉಮೇಶ್ ಶೆಟ್ಟಿ ಹಾಗೂ ಜಗದಾಭಿರಾಮ ಪಡುಬಿದ್ರಿ. ವೀಣೆಯ ಪಿಡಿದ ವಾಣಿಯಾಗಿ (ಕೌಶಿಕೆ) ರಕ್ಷಿತ್ ಶೆಟ್ಟಿ
ಎಪ್ಪತ್ತು ವರ್ಷಗಳ ಕಾಲ ಯಕ್ಷಗಾನ ವೃತ್ತಿ ತಿರುಗಾಟ ಮಾಡಿದ ಮತ್ತು ಶ್ರೀ ದೇವಿ ಮಹಾತ್ಮೆ ಪ್ರಸಂಗದ ಎಲ್ಲ ಪಾತ್ರಗಳನ್ನೂ ನಿರ್ವಹಿಸಿದ್ದ ಯಕ್ಷ ದಶಾವತಾರಿ ಶ್ರೀ ಸೂರಿಕುಮೇರು ಕೆ. ಗೋವಿಂದ ಭಟ್ಟರು ಆ ಕಾಲದಲ್ಲಿ ದೇವಿ ಮಹಾತ್ಮೆ ಪ್ರಸಂಗ ಪ್ರದರ್ಶನಗೊಳ್ಳುತ್ತಿದ್ದ ಬಗೆಗೆ ಬೆಳಕು ಚೆಲ್ಲಿದ್ದಾರೆ. ತಮ್ಮ ಮಾತುಗಳಲ್ಲಿ ಅವರು ದೇವಿ ಮಹಾತ್ಮೆ ಪ್ರಸಂಗದ ಎಲ್ಲ ವೇಷಗಳು, ಆಡಿಸುತ್ತಿದ್ದ ಬಗೆಯ ಮೇಲಿನ ಇತಿಹಾಸಕ್ಕೆ ಬೆಳಕು ಚೆಲ್ಲಿದ್ದಾರೆ. ಅದನ್ನು ಅಕ್ಷರ ರೂಪಕ್ಕೆ ಇಳಿಸಿದವರು ಬೆಂಗಳೂರಿನ ಗಣೇಶ್ ಭಟ್ ಬಾಯಾರು.
ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರಸಂಗದ ಬಗೆಗೆ ಕೆಲವು ದಶಕಗಳ ಹಿಂದೆ ಈಗಿರುವಷ್ಟು ಆಕರ್ಷಣೆ (ಕ್ರೇಜ್) ಇರಲಿಲ್ಲ ಎಂಬುದು ಸರ್ವ ವೇದ್ಯವಾದ ವಿಚಾರ. ಆಗೆಲ್ಲಾ ದೇವಿ ಮಹಾತ್ಮೆ ಆಟ ಆಡಿಸಬೇಕಾದರೆ ಹೆಚ್ಚು ಖರ್ಚು ತಗಲುತ್ತಿತ್ತು. ಇದಕ್ಕೆ ಪ್ರಮುಖ ಕಾರಣವೆಂದರೆ, ಆ ಕಾಲದಲ್ಲಿದ್ದ ಶ್ರದ್ಧೆ, ನಂಬಿಕೆಗಳು. ಆಟ ಆಡಿಸುವ ದಿನದಂದು ವಿಶೇಷವಾಗಿ ದುರ್ಗಾ ನಮಸ್ಕಾರ ಪೂಜೆ ನಡೆಯಬೇಕಿತ್ತು (ಕೆಲವೆಡೆ ಈಗಲೂ ನಡೆಯುತ್ತದೆ ಎಂಬ ಮಾಹಿತಿ ಇದೆ). ಅಲ್ಲದೆ ಸಂಜೆಯೇ ರಂಗಸ್ಥಳಕ್ಕೆ ಕುರುದಿ ನೀರು ಹಾಕಿ ಶುದ್ಧಗೊಳಿಸಬೇಕಿತ್ತು, ನಂತರ ಪ್ರದರ್ಶನದ ವೇಳೆ ಪ್ರತಿಯೊಬ್ಬ ರಾಕ್ಷಸನ ವಧೆ ಆದಾಗಲೂ ಕಡ್ಡಾಯವಾಗಿ ಕುಂಬಳಕಾಯಿ ಕಡಿಯಬೇಕಿತ್ತು.
ಅಲ್ಲದೆ, ಶ್ರೀದೇವಿ ಪಾತ್ರಧಾರಿಯು ಒಪ್ಪೊತ್ತು ಉಪವಾಸ ಮಾಡಿ ಶ್ರೀ ಲಲಿತಾ ಸಹಸ್ರನಾಮ, ಸಪ್ತಶತೀ ಪಾರಾಯಣವೇ ಮೊದಲಾದವನ್ನು ಪಠಿಸುತ್ತಿದ್ದರು, ಅದಕ್ಕೆ ಸಂಬಂಧಿಸಿದ ಕ್ರಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. ಮಹಿಷಾಸುರ ಪಾತ್ರಧಾರಿಯೂ ಸಸ್ಯಾಹಾರ ಮಾತ್ರ ಸೇವಿಸುತ್ತಿದ್ದರು ಎಂಬುದು ಐತಿಹ್ಯ. 1950ಕ್ಕೂ ಕೆಲ ವರ್ಷಗಳ ಮೊದಲು ಕಾಸರಗೋಡು ಬಳಿಯ ಕೊರಕ್ಕೋಡು ಮೇಳದ ಮೂರು ದಿನದ ದೇವಿ ಮಹಾತ್ಮೆ ಆಟದಲ್ಲಿ ಮಹಿಷಾಸುರ ವೇಷಧಾರಿಯು ದೇವಸ್ಥಾನದ ದ್ವಾರದ ಕಲ್ಲಿಗೆ ತಲೆ ಹೊಡೆದುಕೊಂಡು ಅಸುನೀಗಿದ್ದರ ಬಗ್ಗೆ ಕೇಳಿದ್ದೆ.  1950ರ ಮೊದಲು ಮೂರು ದಿನ, ಐದು ದಿನ, ಏಳು ದಿನ, ಒಂಬತ್ತು ದಿನಗಳ ಪರ್ಯಂತ ದೇವಿ ಮಹಾತ್ಮೆ ಪ್ರಸಂಗದ ಕಥಾನಕವು ಸುದೀರ್ಘವಾಗಿ ಪ್ರದರ್ಶನಗೊಳ್ಳುತ್ತಿತ್ತು.

ಮೊನ್ನೆ ತಾನೇ ನಮ್ಮನ್ನು ಅಗಲಿದ ಶ್ರೀ ಬಲಿಪ ನಾರಾಯಣ ಭಾಗವತರೂ ಐದು ದಿನದ ದೇವಿ ಮಹಾತ್ಮೆ ಆಟವನ್ನು ಆಡಿಸಿದ್ದರು. ಅದನ್ನು ವಿಶೇಷವಾಗಿ ಕೂಡ್ಲು ಮೇಳ, ಇಚ್ಲಂಪಾಡಿ ಮೇಳ, ಕೊರಕ್ಕೋಡು ಮೇಳದವರು ಆಡುತ್ತಿದ್ದರು. ಅಲ್ಲದೆ 18 ದಿನಗಳ ಮಹಾಭಾರತ ಆಟವೂ ಒಂದೇ ಸ್ಥಳದಲ್ಲಿ ನಡೆಯುತ್ತಿದ್ದುದು ಸತ್ಯವಾದ ವಿಚಾರ.

ಆಮೇಲೆ ಸುಮಾರು 80ರ ದಶಕದಲ್ಲಿ ಹರಕೆಯಾಟ ಆಡಿಸುವ ಸೇವಾಕರ್ತರ ಸಂಖ್ಯೆ ಬಹಳ ಕಡಿಮೆಯಾಗಿತ್ತು. ಆ ಕಾಲದಲ್ಲಿ ಹರಕೆ ಮೇಳ ನಡೆಸುವುದು ಕಷ್ಟವಾದಾಗ ಇರಾ ಸೋಮನಾಥೇಶ್ವರ ಮೇಳ (ಕುಂಡಾವು ಮೇಳ)ವು ಟೆಂಟಿನ ಮೇಳವಾಗಿ ಬದಲಾಗಿತ್ತು. ಅದೇ ಸಮಯಕ್ಕೆ ಈಗಿನ ಕೈರಂಗಳ ರಾಜಾರಾಮ ಭಟ್ಟರ ತಂದೆ ತೆಕ್ಕುಂಜ ಗಣಪತಿ ಭಟ್ಟರು ಕಟೀಲು ಮೇಳವನ್ನು ಟೆಂಟಿನ ಮೇಳವಾಗಿ ಮೂರು ವರ್ಷ ನಡೆಸಿ ಕೊನೆಗೆ ಮೇಳ ನಡೆಸಲಾಗದೆ ತನ್ನ ಭೂಮಿಯನ್ನು ಮಾರಿ ಮೇಳ ನಿಲ್ಲಿಸಿದರೆಂದು ಕೇಳಿದ್ದೆ. ಆ ಮೇಲೆ ಒಂದು ವರ್ಷ ಮುಚ್ಚೂರು ರೈಗಳು ಒಂದು ವರುಷವೂ ಪೂರ್ಣ ನಡೆಸಲಾಗದೆ ಮೇಳವನ್ನು ಬಿಟ್ಟು, ಅವರ ನಂತರ ಆ ವರ್ಷ ಶ್ರೀ ಕಟೀಲಿನ ಆಸ್ರಣ್ಣ ಬಂಧುಗಳು ಮೇಳವನ್ನು ನಡೆಸಿ ಕಲಾಸೇವೆ ಮುಂದುವರಿಸಿದರು. ನಂತರದ ವರ್ಷ ಕಲ್ಲಾಡಿ ವಿಠಲ ಶೆಟ್ಟರ ತಂದೆ ಕೊರಗ ಶೆಟ್ಟರು ಕಟೀಲು ಮೇಳವನ್ನು (ಆಗ ಒಂದೇ ಮೇಳ ಇತ್ತು) ನಡೆಸುವ ಹೊಣೆ ಹೊತ್ತರು. ನಂತರದ ದಿನಗಳಲ್ಲಿ ಕಟೀಲು ಮೇಳವು ಬೆಳೆದು ಎರಡು, ಮೂರಾಗಿ ಬೆಳೆದು ಈಗ ಆರು ಮೇಳಗಳಾಗಿವೆ.

ಆ ಕಾಲಕ್ಕೆ ತೆಂಕು ತಿಟ್ಟಿನ ಕಟೀಲಿನ ಮೂರು ಮೇಳಗಳು ಸೇರಿ ಒಂದು ತಿರುಗಾಟಕ್ಕೆ ಹತ್ತಿಪ್ಪತ್ತು ದೇವಿ ಮಹಾತ್ಮೆ ಆಟಗಳು ಆದರೆ ಹೆಚ್ಚು. ಉಳಿದಂತೆ 1950ರ ನಂತರದ ದಿನಗಳಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ವರ್ಷಕ್ಕೆ ಒಂದೋ ಎರಡೋ ದೇವಿ ಮಹಾತ್ಮೆ ಆಗುತ್ತಿತ್ತು. ಇತರ ಮೇಳಗಳಲ್ಲಿ ದೇವಿ ಮಹಾತ್ಮೆ ತೀರಾ ವಿರಳ ಎನ್ನಬಹುದು ಎಂದು ಹಿರಿಯರು ಹೇಳಿದ ನೆನಪು. ಇತರ ಮೇಳಗಳು ಮತ್ತು ಹವ್ಯಾಸೀ ಸಂಘಗಳ ಆಟಗಳು ಅಲ್ಲೋ ಇಲ್ಲೋ ಆಗುತ್ತಿದ್ದವು ಮತ್ತು ಅದರಲ್ಲಿ ನಾನೂ ವೇಷಮಾಡಿದ ನೆನಪಿದೆ. ಆ ಕಾಲದಲ್ಲಿ ಬಡಗುತಿಟ್ಟಿನಲ್ಲಂತೂ ಬೆರಳೆಣಿಕೆಯ ದೇವಿ ಮಹಾತ್ಮೆ ಆಡುತ್ತಿದ್ದರೇನೋ...

ವರ್ಷಕ್ಕೆ ಸಾವಿರಕ್ಕೂ ಹೆಚ್ಚು ದೇವಿ ಮಹಾತ್ಮೆ ಪ್ರದರ್ಶನ
ಈಗ ಶ್ರೀ ಕಲ್ಲಾಡಿ ದೇವಿಪ್ರಸಾದ್ ಶೆಟ್ಟರ ಯಾಜಮಾನ್ಯದಲ್ಲಿ ಮೇಳವು ಆರಾಗಿ, ಒಂದೊಂದು ಮೇಳಗಳು ಪ್ರತೀ ವರ್ಷ ತಲಾ ನೂರಕ್ಕೂ ಮಿಕ್ಕಿ ಅಂದರೆ ವರ್ಷಕ್ಕೆ ಸುಮಾರು ಆರುನೂರಕ್ಕೂ ಮಿಕ್ಕಿ ದೇವಿ ಮಹಾತ್ಮೆ ಹರಕೆ ಆಟ ನಡೆಯುವ ಮಟ್ಟಿಗೆ ತಲುಪಿದೆ. ಅಂತೆಯೇ ನೂರಕ್ಕೂ ಮಿಕ್ಕಿ ದೇವಿ ಮಹಾತ್ಮೆ ಆಟವು ಶ್ರೀ ಯಕ್ಷಧ್ರುವಪಟ್ಲ ಸತೀಶ್ ಶೆಟ್ಟರ ನೇತೃತ್ವದ ಶ್ರೀ ಪಾವಂಜೆ ಮೇಳ ಆಡಿದರೆ, ಸುಮಾರು ಐವತ್ತಕ್ಕೂ ಮಿಕ್ಕಿ ದೇವಿ ಮಹಾತ್ಮೆ ಪ್ರಸಂಗಗಳನ್ನು ಧರ್ಮಸ್ಥಳ, ಹನುಮಗಿರಿ, ಬಪ್ಪನಾಡು, ಸಸಿಹಿತ್ಲು, ಸುಂಕದಕಟ್ಟೆ, ಮಂಗಳಾದೇವಿ ಮತ್ತು ಇತರ ಮೇಳಗಳು ಆಡಿ ತೋರಿಸುತ್ತವೆ. ಜೊತೆಗೆ ಬಡಗುತಿಟ್ಟಿನ ಶ್ರೀ ಮಂದಾರ್ತಿಯ ಐದೂ ಮೇಳಗಳು, ಸೌಕೂರು, ಕಮಲಶಿಲೆ, ಮಾರಣಕಟ್ಟೆ ಮುಂತಾಗಿ ವರ್ಷ ಪೂರ್ತಿ ಸುಮಾರು ಐನೂರಕ್ಕೂ ಮಿಕ್ಕಿ ದೇವಿ ಮಹಾತ್ಮೆ ಆಡುವ ಮಟ್ಟಿಗೆ ಈ ಪ್ರಸಂಗ ಭಕ್ತಿ ಪ್ರಧಾನ ಪ್ರಸಂಗವಾಗಿದೆ ಎಂದರೆ ಅತಿಶಯೋಕ್ತಿ ಅಲ್ಲ.

ಎಲ್ಲ ಪಾತ್ರಗಳನ್ನೂ ನಿರ್ವಹಿಸಿದ ಗೋವಿಂದಜ್ಜ
ಎಪ್ಪತ್ತು ವರ್ಷಗಳ ಯಕ್ಷಗಾನ ಮೇಳಗಳ ವೃತ್ತಿ ತಿರುಗಾಟ ಮಾಡಿದ ಮತ್ತು ಶ್ರೀ ದೇವಿ ಮಹಾತ್ಮೆ ಪ್ರಸಂಗದ ಎಲ್ಲಾ ಪಾತ್ರಗಳನ್ನೂ ಮಾಡಿದ ಯಕ್ಷ ದಶಾವತಾರಿ ಶ್ರೀ ಸೂರಿಕುಮೇರು ಕೆ.ಗೋವಿಂದ ಭಟ್ಟರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದಿಮಾಯೆ, ಬ್ರಹ್ಮ-ವಿಷ್ಣು, ಈಶ್ವರ, ಮಧು- ಕೈಟಭ, ದೇವೇಂದ್ರ, ಬಲಗಳು, ವಿದ್ಯುನ್ಮಾಲಿ, ದಿತಿ, ಮಾಲಿನಿ, ಹಾಸ್ಯ ಪಾತ್ರ ಮಾಲಿನಿ ದೂತ, ಯಕ್ಷ, ಮಹಿಷಾಸುರ, ಶಂಖ- ದುರ್ಗರು, ದೇವಿ, ಶುಂಭ- ನಿಶುಂಭ, ದೇವೇಂದ್ರ, ಚಂಡ- ಮುಂಡ, ಸುಗ್ರೀವ, ಧೂಮ್ರಾಕ್ಷ, ರಕ್ತಬೀಜ, ಕಾಳಿ, ರಕ್ತೇಶ್ವರೀ ಸಹಿತ ಎಲ್ಲಾ ಪಾತ್ರಗಳನ್ನೂ ನಿರ್ವಹಿಸಿದವರು ಯಕ್ಷಗಾನ ರಂಗದ ಭೀಷ್ಮ, ಗೋವಿಂದ ಭಟ್ಟರು.

ಶ್ರೀಯುತರೇ ಹೇಳಿದ ಹಾಗೆ, ಈಗಿನ ಹಾಗೆ ಆಗ ಇಪ್ಪತ್ತು ಮೂವತ್ತು ಕಲಾವಿದರು ಮೇಳದಲ್ಲಿರಲಿಲ್ಲ. ಸ್ತ್ರೀ ವೇಷದವ ಆದಿಮಾಯೆ, ಮಾಲಿನಿ ಮಾಡಿ ದೇವಿ ಪಾತ್ರ ನಿರ್ವಹಿಸುತ್ತಿದ್ದರೆ, ಬ್ರಹ್ಮ-ವಿಷ್ಣು ಮಾಡಿದವರು ಚಂಡ ಮುಂಡ ಪಾತ್ರ, ಮಧು-ಕೈಟಭ ಮಾಡಿದವರು ಶಂಖ-ದುರ್ಗರಾಗಿಯೂ, ಧೂಮ್ರಾಕ್ಷ-ರಕ್ತಬೀಜರಾಗಿಯೂ, ಮಹಿಷಾಸುರ ಮಾಡಿದವರು ಕಾಳಿ, ರಕ್ತೇಶ್ವರಿ ಪಾತ್ರಗಳನ್ನೂ ನಿಭಾಯಿಸುತ್ತಿದ್ದರು. ಹೀಗೆ ರಾತ್ರಿ ಬೆಳಗಿನವರೆಗೂ ಕಸುಬುದಾರಿಕೆ ಇತ್ತು. ಅದೇ ರೀತಿ, ಹಿಮ್ಮೇಳದವರೂ (ಚೆಂಡೆ ಮದ್ದಳೆ ಭಾಗವತಿಕೆ) ಒಬ್ಬೊಬ್ಬರೇ. ಸಂಗೀತಗಾರ ರಾತ್ರಿಯಿಂದ ಬೆಳಗಿನವರೆಗೆ ಚಕ್ರತಾಳ ಹಿಡಿಯುತ್ತಿದ್ದ. ಇವೆಲ್ಲ ನೆನೆದರೆ ಈಗಲೂ ರೋಮಾಂಚನ ಆಗುತ್ತಿದೆ.

ಚಂಡ-ಮುಂಡರು, ಮಧು ಕೈಟಭರ ವೇಷ
ಕಲಾವಿದರ ಅಭಿನಯ ಮತ್ತು ಕುಣಿತಕ್ಕೆ ಮೆರುಗು ನೀಡಲು ಶ್ರೀ ಅಗರಿ ಶ್ರೀನಿವಾಸ ಭಾಗವತರು ಈಗ ಬಳಕೆಯಾದ ಅದ್ಭುತ ಪದ್ಯಗಳನ್ನು ರಚನೆ ಮಾಡಿ ಕೊಡುಗೆಯಾಗಿ ನೀಡಿದ್ದಾರೆ. ಆ ಕಾಲದಲ್ಲಿ, ಮಧು ಕೈಟಭರು ಹುಟ್ಟಿದಾಗ ಕೇವಲ ಕಪ್ಪು ನಿಲುವಂಗಿ ಹಾಕಿ (ಈಗ ಹಾಸ್ಯ ಅಥವಾ ಸುಗ್ರೀವನಿಗೆ ಹಾಕುವ ಉದ್ದ ಕೈ ಅಂಗಿ ಅದಕ್ಕೆ ಡಾಬು ಕಟ್ಟಿ) ಆ ಮೇಲೆ ನಾಟಕೀಯ ವೇಷದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಚಂಡ ಮುಂಡರು ಈಗಿನ ಹಾಗೆಯೇ ಪುಂಡು ವೇಷ ಇತ್ತು. ಆದರೆ ಕೂಡ್ಲು ಮೇಳದಲ್ಲಿ ಮೊದಲ ಬಾರಿಗೆ ಎರಡನೇ ಚಂಡ-ಮುಂಡರು ಕಿರೀಟ ವೇಷದಲ್ಲಿ ಬರುತ್ತಿದ್ದರು. ಮಾಣಂಗಾಯಿ ಕೃಷ್ಣ ಭಟ್ಟರು ಮತ್ತು ಮಧೂರು ನಾರಾಯಣ ಹಾಸ್ಯಗಾರರು ಇದನ್ನು ಮಾಡಿ ತೋರಿಸಿದ್ದರು. ಅಂದರೆ, ಮೊದಲಿನ ದಿಗ್ವಿಜಯದ ಚಂಡ ಮುಂಡರು ಪುಂಡು ವೇಷದಲ್ಲಿ, ಸ್ವಲ್ಪ ಸಮಯದ ನಂತರ ಎರಡನೇ ಜೊತೆವೇಷಗಳು ಕಿರೀಟ ವೇಷದಲ್ಲಿ ಬರುತ್ತಿದ್ದವು. ಆದರೆ, ನಂತರದ ದಿನಗಳಲ್ಲಿ ಒಂದೇ ಜೊತೆ ಚಂಡ ಮುಂಡರು ಕಾಣಿಸಿಕೊಳ್ಳತೊಡಗಿದರು. ಪುಂಡು ವೇಷವೇ ಮುಂದುವರಿಯಿತು. ಆಮೇಲೆ ಮೊದಲ ಬಾರಿಗೆ ಮಧು ಕೈಟಭರನ್ನು ಕಿರೀಟ ವೇಷ ಮಾಡಿ ಬದಲಾವಣೆ ಮಾಡಿದ ಕೀರ್ತಿ ಧರ್ಮಸ್ಥಳ ಮೇಳಕ್ಕೆ ಸಲ್ಲುತ್ತದೆ. ಕಾಲಾನಂತರ ಕಟೀಲು ಮೇಳದವರೂ ಅದನ್ನೇ ಅನುಸರಿಸುತ್ತಿದ್ದು, ಈಗ ಹೆಚ್ಚಿನ ಮೇಳಗಳಲ್ಲಿ ನಾಟಕೀಯದ ಬದಲು ಕಿರೀಟ ವೇಷವೇ ಮುಂದುವರಿದಿದೆ. ಮತ್ತೆ ಈಗ ಮಾಡುವ ಯಾವುದೇ ವೇಷಗಳೂ ವಿಮರ್ಶೆಗಲ್ಲ. ಯಾಕೆಂದರೆ ಮಧು ಕೈಟಭರು ಕೇಸರಿ ತಟ್ಟೆಯಲ್ಲೂ, ಭೀಮನ ಮುಡಿಯಲ್ಲೂ ಮಾಡಿದ್ದಾರೆ, ಚಂಡಮುಂಡರು ಕಿರೀಟದಲ್ಲಿ ಮಾಡಿದರೆ ಖಂಡಿತಾ ತಪ್ಪೇನಲ್ಲ ಎಂದು ವಿವರಿಸಿದರು 86ರ ಹರೆಯದ ಗೋವಿಂದಜ್ಜ.

ಹೆಚ್ಚಿನ ಮೇಳಗಳಲ್ಲಿ ಆ ಅಸಂಬದ್ಧ ಮಾಲಿನಿ ಮದುವೆ ಭಾಗವನ್ನು ಬಿಟ್ಟಿರುವುದು ಬಹಳ ಒಳ್ಳೆಯ ಕೆಲಸ ಎಂದೂ ಗೋವಿಂದಜ್ಜ ಖುಷಿಪಟ್ಟರು. 

ಹೆಚ್ಚಿನ ದಿನಗಳಲ್ಲಿ ರಕ್ತೇಶ್ವರಿಯನ್ನು ಭೂತದಂತೆ ಅಣಿ ಕಟ್ಟಿ ಮಾಡುವ ಕ್ರಮವನ್ನು, ಬ್ರಹ್ಮ ವಿಷ್ಣು ಚರ್ಚೆ ಇಂತಹ ವಿಷಯಗಳನ್ನು ಕಾಲಮಿತಿಗಾಗಿ ಕೈ ಬಿಟ್ಟಿದ್ದಾರೆ. ಮುಂದೆ ಏನೇನು ಬದಲಾವಣೆಗಳು ಯಕ್ಷರಂಗದಲ್ಲಿ ಆಗಲಿದೆಯೋ ಕಾಲವೇ ಉತ್ತರಿಸಬೇಕು!

ಕಾಲಾಯ ತಸ್ಮೈ ನಮಃ
✍🏻ಗಣೇಶ್ ಭಟ್ ಬಾಯಾರು ಬೆಂಗಳೂರು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು